ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬ / ಪ್ರಸ್ತುತ

ಇದೊಂದು ಬಗೆಯ ಒಳಸ್ಫೋಟ, implosion ಎನ್ನಬಹುದು. ಇದೊಂದು “ಯಕ್ಷಗಾನೀಯ ಪರಿಷ್ಕಾರ, ಕ್ರಾಂತಿ.
ಯಕ್ಷಗಾನದ ಸ್ತ್ರೀವೇಷದ ಬಗೆಗೆ ಪ್ರತ್ಯೇಕ ಅಧ್ಯಯನ ಆಗಬೇಕಾದ ಅಗತ್ಯವಿದೆ, ಇಂತಹ ಒಂದು ಒಳ್ಳೆಯ ಮಾರ್ಗದರ್ಶಿ ಯತ್ನವನ್ನು ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಬಹಳ ಹಿಂದೆಯೇ ಮಾಡಿದ್ದಾರೆ. (ನೋಡಿ: ಯಕ್ಷಗಾನ ಮಕರಂದ ಗ್ರಂಥದಲ್ಲಿ ಮರುಮುದ್ರಣಗೊಂಡ ಸೇಡಿಯಾಪು ಅವರ ಲೇಖನ.) ಯಕ್ಷಗಾನದ ಸದ್ಯದ ರೂಪವು, ಯಕ್ಷಗಾನ ರಂಗದ ಒಟ್ಟು ಸ್ವಭಾವಕ್ಕೂ, ಬೇರೆ ಪಾತ್ರಗಳ ವೇಷ, ವರ್ಣಿಕೆಗಳಿಗೂ ಹೊಂದಿಕೆಯಾಗಿಲ್ಲ. ಈ ವಿಷಯ ಹಲವೆಡೆ ಪ್ರಸ್ತಾವಿತವಾಗಿದೆ. ಸ್ತ್ರೀವೇಷವು ಆಧುನಿಕ ಸ್ತ್ರೀಯಂತೆಯೂ, ಇತರ ವೇಷಗಳು ತೀರ ಪ್ರಾಚೀನತೆಯನ್ನು ಬಿಂಬಿಸುವ ಕಾಲ್ಪನಿಕ ಚಿತ್ರಗಳಂತೆಯೂ ಇದ್ದು, ದೊಡ್ಡ ವಿಸಂಗತಿಗೆ ಕಾರಣವಾಗಿರುವುದು ಪ್ರತ್ಯಕ್ಷವಷ್ಟೆ?
ಸ್ತ್ರೀವೇಷದ ರೂಪವು ಹಿಂದಕ್ಕಾದರೂ, ಆ ಆ ಕಾಲದ ಸಾಮಾಜಿಕ ಸ್ತ್ರೀಯರ ರೂಪದಂತೆಯೇ ಇದ್ದುದು ಎಂದು ಹೇಳುವುದನ್ನು ಕೇಳುತ್ತೇವೆ. ಅದು ಹಾಗಲ್ಲ, ಸ್ತ್ರೀವೇಷಕ್ಕೂ, ಕಾಲ್ಪನಿಕ ವೇಷ ವಿಧಾನವೇ ಇತ್ತು ಎಂದೂ ಹೇಳುವವರುಂಟು. ಅದೆಂತಿದ್ದರೂ, ಈ ಶತಮಾನದ ಮೂರನೆಯ ದಶಕದ ವರೆಗೂ, ಸ್ತ್ರೀ ವೇಷಕ್ಕೆ ಒಂದು ನಿಶ್ಚಿತ ವೇಷ ವ್ಯವಸ್ಥೆಯಿತ್ತು ಎಂಬುದು ಖಚಿತ. ಓಲೆ, ಕೊರಳಿನ ಆಭರಣಗಳು, ಜಡೆಗೊಂಡೆ, ಜಡೆಹೂ, ಕೈಕಟ್ಟು, ತೋಳಂದಿ - ಮುಂತಾದ ಆಭರಣಗಳಿದ್ದುವು, ನಂತರ ಅದು ಮರೆಯಾಗಿ, ಇತ್ತೀಚೆಗಿನವರೆಗೆ, (ಅಂದರೆ ಸದ್ಯದ ಮರು ವ್ಯವಸ್ಥೆಗಳಿಗಿಂತ ಮೊದಲಿನವರೆಗೆ) ಸ್ತ್ರೀವೇಷವು ತೀರ ಸಮಕಾಲೀನ ಬಿಂಬವಾಗಿ ಹೋಗಿತ್ತು.
ಡಾ| ಶಿವರಾಮ ಕಾರಂತರು, ಕಲಾವಿದ ಕೆ. ಕೆ. ಹೆಬ್ಬಾರರ ನೆರವಿನಿಂದ ಸ್ತ್ರೀವೇಷಕ್ಕೆ ಹೊಸ ಮಾದರಿಯೊಂದನ್ನು ರೂಪಿಸಿದರು. ಇದು ವ್ಯಾಪಕವಾಗಿ ತೆಂಕು ಬಡಗುತಿಟ್ಟುಗಳೆರಡರಲ್ಲೂ ಅಂಗೀಕೃತವಾಯಿತು. ಹೀಗೆ ಅದು ಕೂಡಲೇ ಅಂಗೀಕಾರ ಗಳಿಸಲು ಕಾರಣ, ಬರಿಯ ನಾವೀನ್ಯವಲ್ಲ, ಬದಲು ಅದರ ಸೈದ್ದಾಂತಿಕ ಗಟ್ಟಿತನವೇ ಕಾರಣ. ಆ ಮಾದರಿಯು, ಯಕ್ಷಗಾನದ ಇತರ ವೇಷ ವಿಧಾನಕ್ಕೆ ಸಂಗತವಾಗಿ ರಚಿತವಾಗಿದೆ. ಅದನ್ನು ಇನ್ನಷ್ಟು ಪರಿಷ್ಕಾರಗೊಳಿಸಲೂ ಸಾಧ್ಯವುಂಟು.
ಸ್ತ್ರೀವೇಷದ ಬಿಂಬಸೃಷ್ಟಿಯನ್ನು ಸುವ್ಯವಸ್ಥೆಗೊಳಿಸಲು ಬೇರೆ ಕೆಲವು ಯತ್ನಗಳೂ ನಡೆದುವು. ವೇಷಧಾರಿಗಳು, ಸ್ವಂತ ನೆಲೆಯಲ್ಲಿ ಕೆಲವು ವೇಷ ಸಾಮಗ್ರಿಗಳನ್ನು ಬಳಕೆಗೆ ತಂದರು, (ಉದಾ, ಪಾತಾಳ ವೆಂಕಟರಮಣ ಭಟ್ಟರು ಶಿಲ್ಪದ ಮಾದರಿಗಳಿಂದ, ಕೊಳ್ಳೂರು ರಾಮಚಂದ್ರರಾಯರು ಕರ್ಕಿ ಸಂಪ್ರದಾಯದ ಅನುಸರಣೆಯಿಂದ) ಇವು ಶ್ಲಾಘ್ಯ ಪ್ರಯತ್ನಗಳಾದರೂ, ಬಿಡಿ ಬಿಡಿಯಾದುರಿಂದ ಏಕರೂಪತೆ ಸಾಧ್ಯವಾಗಲಿಲ್ಲ.