ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮ / ಪ್ರಸ್ತುತ

ಸುಂದರವಾಗಿದ್ದ ಒಡವೆಗಳೇ ಮರೆಯಾಗಿ, ತೀರ ಸಾಮಾನ್ಯವೆನಿಸುವ ಒಂದು ರೂಪವು ಸ್ಥಾಪನೆಗೊಂಡಿತು. ಶೈಲಿ ಸೌಂದಯ್ಯದ ವಿನಾಶಕ್ಕೆ ಕಾರಣವಾದ ಇಂತಹ ಆಯ್ಕೆಗಳನ್ನು ನಾವು ಮರು ಪರಿಶೀಲಿಸಲೇಬೇಕಾಗಿದೆ. ವಿಕಾರವನ್ನು ವೈಭವವೆಂದಾಗಲಿ, ಸಹಜವೆಂದಾಗಲಿ ಸ್ವೀಕರಿಸುವುದು, ಕಲಾ ವಿಮರ್ಶೆಯಲ್ಲಿ ನೆಲೆಯಿಲ್ಲದ ನಿಲುಮೆಯಾಗುತ್ತದೆ.
ನಮ್ಮ ಹರಕೆ ಬಯಲಾಟಗಳಲ್ಲೂ, ಡೇರೆ ಆಟಗಳಲ್ಲೂ ಬಳಸುವ ರಂಗಸ್ಥಳದ ಸಂದರ್ಭದಲ್ಲೂ ಈ ದ್ವಂದ್ವ ಸ್ಪಷ್ಟವಾಗುತ್ತದೆ. ಯಕ್ಷಗಾನದ ರಂಗಭೂಮಿಗೆ ಸೂಕ್ತವಾದ, ರಂಗಕ್ರಿಯೆಯನ್ನು ಸ್ಪುಟಗೊಳಿಸುವ, ವ್ಯವಸ್ಥಿತವಾದ ಒಂದು ರಂಗಸ್ಥಳ ಇನ್ನೂ ನಿರ್ಮಿತವಾಗಿಲ್ಲವೇಕೆ? ಕಾರಣವಿಷ್ಟೆ, ಆಧುನಿಕವಾಗಿ ಅಂಗೀಕರಿಸಿದ ರಂಗಸ್ಥಳ ರಚನೆಗೆ, ಪ್ರೇರಕವಾಗಿರುವುದು ಆಧುನಿಕ ಕಲ್ಯಾಣ ಮಂಟಪಗಳ ವಿವಾಹ ಮಂಟಪಗಳು ಮತ್ತು ಸಾಮಾಜಿಕ ಸಮಾರಂಭ ವೇದಿಕೆಗಳು, ಹೊರತು, ರಂಗಸಿದ್ದಾಂತದ ಮೇಲಿಂದ ಮೂಡಿದ ರಚನೆಗಳಲ್ಲ. ಅರ್ಥಾತ್, ನಮ್ಮ ರಂಗಭೂಮಿಯ ಆವಶ್ಯಕತೆ ಮತ್ತು ಸ್ವರೂಪಕ್ಕೆ ಸಂಬಂಧವೇ ಇಲ್ಲದ ಸಂದರ್ಭಗಳಿಂದ ನಾವು 'ಪ್ರೇರಣೆ' ಪಡೆದಿದ್ದೇವೆ. ಇಂತಹ ಸೃಷ್ಟಿಗಳನ್ನು ಬಳಸಿದಾಗ, ವಿಸಂಗತಿಗಳು ಉಂಟಾಗಿ, ಬದಲಾವಣೆಯೆಂಬುದು ಬರಿಯ ಭ್ರಮೆಯಾಗುತ್ತದೆ. ಕತೆ, ಕಥಾವಸ್ತು, ಪ್ರಸಂಗ ರಚನೆ, ಅದರ ನಿರ್ವಹಣೆಗೂ ಇದೇ ಸಿದ್ದಾಂತವನ್ನು ಅಳವಡಿಸಿ ಪರಿಶೀಲಿಸಬಹುದು.
ಸ್ವೀಕರಣ ಮತ್ತು ರಚನೆ, ಪುನಾರಚನೆಗಳು ಸಾರ್ಥಕವೂ, ಸುಂದರವೂ ಆಗಬೇಕಾದರೆ, ಕಲಾರಂಗಕ್ಕೆ, ಎಂದರೆ, ಸ್ಪಷ್ಟವಾಗಿ ಹೇಳುವುದಾದರೆ, ಯಕ್ಷಗಾನ ಮೇಳ (ತಂಡಕ್ಕೆ ಒಂದು ಸಮಗ್ರ ಧೋರಣೆಯೂ, ಸಿದ್ದಾಂತವೂ ಇರಬೇಕಾದುದಗತ್ಯ. ಈ ವಿಷಯದಲ್ಲಿ ನಮ್ಮ ವ್ಯವಸಾಯಿ ರಂಗ ಭೂಮಿಯಲ್ಲಿ, ಆರ್ವಾಚೀನ ಕಾಲದಲ್ಲಿ, ಶ್ರೀ ಕೆರೆಮನೆ ಶಂಭು ಹೆಗಡೆ ಅವರ ಇಡಗುಂಜಿ ಯಕ್ಷಗಾನ ಮಂಡಳಿಯೊಂದೇ, ವಿಭಿನ್ನವಾದ, ಖಚಿತವಾದ ಧೋರಣೆಯ ಸೈದ್ಧಾಂತಿಕ ನಿಲುಮೆಯನ್ನು ತಾಳಿ ಮುನ್ನಡೆದ ತಂಡವಾಗಿದೆ. ಅವರ ಧೋರಣೆಯ ಮಿತಿಗಳಾಗಲಿ, ವ್ಯಾವಸಾಯಿಕ ಸಾಫಲ್ಯ, ವೈಫಲ್ಯಗಳಾಗಲಿ ಏನೇ ಇದ್ದರೂ, ಆ ಮಾರ್ಗವು ನಮ್ಮ ಮಂಡಳಿಗಳು ತಮ್ಮದಾದ ರೀತಿಯಲ್ಲಿ ಅನುಸರಿಸಬೇಕಾದ ದಾರಿಯನ್ನು ತೋರಿಸಿದೆ.
ನಮ್ಮ ಮೇಳಗಳು ಇಂತಹ ಸ್ಪಷ್ಟ ಕಲಾ ಧೋರಣೆಯನ್ನು ರೂಪಿಸಿದಾಗ ಮಾತ್ರ, ಆಧುನಿಕತೆಯ ಸ್ವೀಕಾರವಾಗಲಿ, ಪರಂಪರೆಯ ಉಳಿವಾಗಲಿ, ಪರಂಪರೆಯ ಶುದ್ದೀಕರಣವಾಗಲಿ_ ಸ್ಪಷ್ಟರೂಪವನ್ನು ತಾಳ ಬಲ್ಲುದು.
——