ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಉತ್ತರ ಕನ್ನಡ ಯಕ್ಷಗಾನ ಪರಂಪರೆ / ೫೩

ಪ್ರಧಾನ ಕ್ಷೇತ್ರವಾದ ದಕ್ಷಿಣ ಕನ್ನಡದಲ್ಲಿ, ಸಾಕಷ್ಟು ಮಂದಿ ಹೊಸ ಪೀಳಿಗೆಯ ಅರ್ಥದಾರಿಗಳು ಕಾಣಿಸಿಕೊಳ್ಳದಿರುವ ಈ ಕಾಲದಲ್ಲಿ ಉ. ಕನ್ನಡದಲ್ಲಿ ಒಳ್ಳೆಯ ಕಲಾವಿದರು ಹೊಸತಾಗಿ ರೂಪುಗೊಂಡಿರುವುದು ಒಂದು ವಿಶೇಷ.

ಉತ್ತರ ಕನ್ನಡದ ಆಟಗಳ ರಂಗಸ್ಥಳದ ವಿಧಾನ ಪದ್ಯಗಳ ಕೆಲಸ' ಎಂದು ಪಾರಿಭಾಷಿಕವಾಗಿ ಕರೆಯಲಾಗುವ - ಕುಣಿತ, ಅಭಿನಯಗಳ ವಿಧಾನ, ಹೆಚ್ಚು ವಿವರ ಣಾತ್ಮಕವಾದದ್ದು, (ಅಂದರೆ ಮಾತಿನ ಮೂಲಕ ಅಲ್ಲ, ನೃತ್ಯ ಮೂಲಕ.) ಇದರ ನಿಧಾನ ಗತಿಗೂ, ಈ ಜಿಲ್ಲೆಯ ಹೆಚ್ಚು ವಿರಾಮಶೀಲವಾದ, ನಿಧಾನ ಜೀವನಗತಿಗೂ ಸಂಬಂಧವಿರಬಹುದೆ? ಎಂದು ಅನಿಸುತ್ತದೆ. `ಕರ್ಕಿಮೇಳದ ಝಂಪೆತಾಳ' ಎಂಬುದೇ ಒಂದು ನುಡಿಕಟ್ಟು, ಬಹಳ ಮೆಲ್ಲಗೆ ನಡೆಯುವ ಕ್ರಿಯೆ ಎಂಬ ಅರ್ಥ, ಝಂಪೆ ತಾಳವೇ ನಿಧಾನಗತಿಯ ಒಂದು ಉದಾಹರಣೆ, ಅದರಲ್ಲೂ ಕರ್ಕಿ ಮೇಳದ್ದು ಮತ್ತೂ ವಿಲಂಬಿತ ಗತಿ. ಇದು ಪ್ರಾತಿನಿಧಿಕವಾದ ಉತ್ತರ ಕನ್ನಡದ ಹಳೆಯ ಕ್ರಮದಿಂದ, ಮೂಡಿದ ವಾಗ್ರೂಢಿ, ಜತೆಗೆ, ಹಿಂದಿನ ಕ್ರಮದಲ್ಲಿ ಇಲ್ಲಿ ಕುಣಿತವಿದ್ದಾಗ. ಹಸ್ತ ಭಾವ ಕಡಿಮೆ, ಹಸ್ತಾಭಿನಯ ತೋರಿಸುವಾಗ ಹೆಜ್ಜೆಗಾರಿಕೆ, ಕುಣಿತ ಕಡಿಮೆ. ಹೀಗಿ ತ್ತಂತೆ. ಇದರಲ್ಲಿ ಸ್ವಲ್ಪ ಪರಿರ್ವತನೆಯನ್ನು ತಂದು, ಹೊಸ ಸಮನ್ವಯವನ್ನು ಸಾಧಿ ಸಿದವರು ಕೆರೆಮನೆ ಶಿವರಾಮ ಹೆಗ್ಡೆಯವರು ಎಂದು ತೋರುತ್ತದೆ. ಇವರು ಕುಂದಾ ಪುರಿ ಬಡಗುತಿಟ್ಟಿನ ಚುರುಕುತನ ಮತ್ತು ಉತ್ತರ ಕನ್ನಡದ ನೃತ್ಯಾಭಿನಯ ವಿಧಾನ ಗಳನ್ನು ಸಮನ್ವಯಗೊಳಿಸಿ, ಹೆಜ್ಜೆ, ಅಭಿನಯಗಳಲ್ಲಿ ಒಂದು ನಿರಂತರತೆಯನ್ನು ಸಾಧಿಸಿದರು. ಕೆರೆಮನೆಯ ಮುಂದಿನ ತಲೆಮಾರಿನಲ್ಲಿ ಈ ವಿಧಾನ ಬೆಳೆದು ಬಂದು ಅದೊಂದು ಘರಾಣೆಯಾಯಿತೆನ್ನಬಹುದು.
ಕರ್ಕಿ ಮನೆತನದಲ್ಲಿ, ಹಿಂದಣ ಪದ್ಧತಿ ಉಳಿದುಕೊಂಡಿತು. ಕರ್ಕಿ ಮೇಳ ಯಕ್ಷಗಾನದ ಪ್ರಚಾರ, ಪ್ರಸಾರದ ಆಧುನಿಕ ಯುಗದಲ್ಲಿ ಏಕೆ ಹಿಂದೆ ಉಳಿಯಿತು? ಎಂಬುದು ಪರಿಶೀಲನಾರ್ಹ, ಕರ್ಕಿ ಮೇಳವು ವ್ಯಾವಸಾಯಿಕವಾಗಿ ವೃತ್ತಿಪರವಾಗಿ ಮುಂಬರಿಯಲಿಲ್ಲ. ಕಲೆಯಲ್ಲಿ ವಾಣಿಜ್ಯಕರಣ (Commercialisation) ದಿಂದ ದುಷ್ಪರಿಣಾಮಗಳಿರಬಹುದು. ಅದು ಬೇರೆ ವಿಷಯ. ಆದರೆ, ಕಲೆ ಉಳಿದು ಬೆಳೆಯ ಬೇಕಾದರೆ ವೃತ್ತಿಪರತೆ ಅತೀ ಅವಶ್ಯ, ಕರ್ಕಿಮೇಳ ಆಧುನಿಕ ವಾಣಿಜ್ಯ ಪರಮೇಳಕ್ಕೆ ಬೇಕಾದ ಬಂಡವಾಳವನ್ನು ಹೊಂದಿರಲಿಲ್ಲ. ಇಷ್ಟೆ ಅಲ್ಲ, ಕರ್ಕಿ ಹಾಸ್ಯಗಾರ ಮನೆ ತನದ ಬದುಕಿನ ರೀತಿಯೂ ವೃತ್ತಿಪರ ಮೇಳಕ್ಕೆ ಹೊಂದಿದ್ದಲ್ಲ. ಮನೆತನದ ಪೂರ್ವಾಚಾರ, ಪೂಜೆ, ಪುನಸ್ಕಾರಗಳ 'ಬ್ರಾಹ್ಮಣ್ಯ'ವನ್ನು ಬಿಟ್ಟು, ತಿರುಗಾಟದ ಕಲಾವಿದನಿಗಿರಬೇಕಾದ 'ಶೂದ್ರತ್ವಕ್ಕೆ ಬರಲು ಅವರಿಂದಾಗಲಿಲ್ಲವೇನೋ. ಅಂತೂ, ಬದಲಾದ ಪರಿಸ್ಥಿತಿ, ಬದಲಾದ ಅಭಿರುಚಿ, ವೃತ್ತಿಪರತೆಯ ಅಭಾವಗಳಿಂದಾಗಿ ಕರ್ಕಿ ಸಂಪ್ರದಾಯ ವ್ಯವಸ್ಥಿತವಾಗಿ ಬೆಳೆಯದೆ ಹೋಯಿತು.