ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೫೫

ಆದರ್ಶ ಪುರುಷನಲ್ಲದಿದ್ದರೂ ರಾಜಕಾರಣದಲ್ಲಿ ಯಶಸ್ಸು ಪಡೆಯಬಹುದು. ಒಬ್ಬ ನ್ಯಾಯವಾದಿ ವಾದ ಸಾಮರ್ಥ್ಯದಲ್ಲಿ ಅದ್ವಿತೀಯನಾಗಿ, ನ್ಯಾಯಶಾಸ್ತ್ರ ಪಾರಂಗತನಿದ್ದರೂ ಇತರ ವಿಷಯಗಳು ಏನೂ ತಿಳಿಯದೆ ಇರಬಹುದು. ಆಧುನಿಕ ಯುಗದ ನಿಜವಾದ ಪ್ರತಿನಿಧಿಯಾದ ವಿಜ್ಞಾನಿಯು ಸಹ ತನ್ನ ಅಧ್ಯಯನ ಮಂದಿರ ಅಥವ ಪ್ರಯೋಗ ಶಾಲೆಯಿಂದ ಹೊರಗೆ ಹೋದ ವೇಳೆ ಅನೇಕ ಬಾರಿ ವಿಜ್ಞಾನಮಾರ್ಗ ಮತ್ತು ದೃಷ್ಟಿಯನ್ನು ಮರೆಯುತ್ತಾನೆ.
ನಮ್ಮ ನಿತ್ಯ ಜೀವನದ ಮೇಲೆ ವಾಸ್ತವಿಕ ರೀತಿಯಲ್ಲಿ ಪರಿಣಾಮಮಾಡತಕ್ಕ ಸಮಸ್ಯೆಗಳ ವಿಷಯವೂ ಹೀಗೆಯೆ, ದರ್ಶನ ಮತ್ತು ತತ್ವಶಾಸ್ತ್ರಗಳಲ್ಲಿ ಈ ಸಮಸ್ಯೆಗಳು ಬಹುದೂರ ಇವೆ ; ಸ್ವಲ್ಪ ಸ್ಥಿರವೆಂದು ಕಾಣುತ್ತವೆ. ಅಲ್ಲದೆ ನಮ್ಮ ನಿತ್ಯ ಜೀವನಕ್ಕೆ ಸಂಬಂಧವೂ ಕಡಮೆ. ಕಠಿಣ ನಿಯಮ ಬದ್ದ ಜೀವನ ಮತ್ತು ಮಾನಸಿಕ ಶಿಕ್ಷಣವಿಲ್ಲದೆ ನಮ್ಮಲ್ಲಿ ಅನೇಕರಿಗೆ ಅದು ಅವರ ಅರಿವಿನ ಮಟ್ಟ ವನ್ನು ಮೀರಿದ್ದು. ಆದರೂ ನಮ್ಮಲ್ಲಿ ಪ್ರತಿಯೊಬ್ಬನಿಗೂ ತಿಳಿದೋ, ತಿಳಿಯದೆಯೋ ಒಂದು ಜೀವನ ದರ್ಶನವಿದೆ. ನಾವಾಗಿ ಯೋಚನೆ ಮಾಡಿ ಒಪ್ಪದೆ ಇದ್ದುದಾದರೆ ಅನುವಂಶೀಯವಾಗಿ ಬಂದದ್ದು, ಅಥವ ಪರರ ಉಪದೇಶವನ್ನು ಅವಲಂಬಿಸಿ ಸ್ವಯಂಸಿದ್ದವೆಂದು ಭಾವಿಸಿದ್ದು, ಅಥವ ಈ ಯೋಚನಾ ಪರಂಪರೆಯ ತೊಡಕಿನಿಂದ ತಪ್ಪಿಸಿಕೊಳ್ಳ ಬೇಕೆಂದರೆ ಯಾವುದೋ ಒಂದು ಮತದಲ್ಲಿ, ಸಿದ್ಧಾಂತದಲ್ಲಿ, ಅಥವ ರಾಷ್ಟ್ರೀಯ ಭವಿಷ್ಯದಲ್ಲಿ ಅಥವ ಮನಸ್ಸಿಗೊಂದು ಶಾಂತಿ ಕೊಡುವ ಯಾವುದೋ ಅಸ್ಪಷ್ಟ ಮಾನವ ಸೇವಾಕಾರದಲ್ಲಿ ನಿರತರಾಗಿ ಶಾಂತರಾಗಬಹುದು. ಅನೇಕ ಸಂದರ್ಭಗಳಲ್ಲಿ ಇವೆಲ್ಲ ಮತ್ತು ಇನ್ನೂ ಅನೇಕ ಮಾರ್ಗಗಳು ಒಂದೊಂದಕ್ಕೂ ಯಾವ ಸಂಬಂಧವೂ ಇಲ್ಲದಿದ್ದರೂ, ಒಂದೇ ಬಾರಿ ನಮ್ಮೆದುರು ನಿಲ್ಲುತ್ತವೆ. ನಮಗೆ ಅನೇಕ ಜೀವನ ಮುಖಗಳಿವೆ ; ಪ್ರತಿಯೊಂದು ಜೀವನ ಮುಖವೂ ಒಂದೊಂದು ಪ್ರತ್ಯೇಕ ವಿಭಾಗವಾಗಿಯೇ ಇರುತ್ತದೆ.
ಅತ್ಯುನ್ನತ ಜೀವನದ ಕೆಲವು ಆದರ್ಶವ್ಯಕ್ತಿಗಳನ್ನು ಬಿಟ್ಟರೆ, ಪ್ರಾಚೀನಕಾಲದ ಮಾನವನ ವ್ಯಕ್ತಿತ್ವ ಇಂದಿನ ವ್ಯಕ್ತಿತ್ವಕ್ಕಿಂತ ಕೆಳಮಟ್ಟದಲ್ಲಿದ್ದರೂ ಪ್ರಾಯಶಃ ಮಾನವ ಜೀವನದಲ್ಲಿ ಹೆಚ್ಚು ಒಗ್ಗಟ್ಟು ಮತ್ತು ಸಮರಸತೆ ಇತ್ತು. ಮಾನವ ಕುಲವು ಅನುಭವಿಸುತ್ತಿರುವ ಈ ದೀರ್ಘಸಂಕ್ರಾಂತಿ ಕಾಲದಲ್ಲಿ ಆ ಒಗ್ಗಟ್ಟನ್ನು ನಾವು ಮುರಿದಿದ್ದೇವೆ. ಇನ್ನೂ ಹೊಸ ಸಂಬಂಧ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೂ ಅದೇ ಮತಧರ್ಮದ ಮಾರ್ಗವನ್ನೇ ಅನುಸರಿಸುತ್ತಿದೇವೆ; ಜೀರ್ಣ ಸಂಪ್ರದಾಯಗಳು ಮತ್ತು ಮೂಢ ನಂಬಿಕೆಗಳಿಗೆ ಅಂಟಿಕೊಂಡಿದ್ದೇವೆ ; ಆದರೂ ವಿಜ್ಞಾನ ಮಾರ್ಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಜೀವಿಸುತ್ತಿದೇವೆ ಎಂದು ಹರಟುತ್ತೇವೆ, ಆತ್ಮವಂಚನೆಮಾಡಿಕೊಳ್ಳುತ್ತೇವೆ. ಪ್ರಾಯಶಃ ವಿಜ್ಞಾನ ಮಾರ್ಗದ ಜೀವನ ದೃಷ್ಟಿ ಯು ಬಹಳ ಸಂಕುಚಿತವಿರಬಹುದು ಜೀವನದ ಅನೇಕ ಸತ್ಯ ವೈಶಿಷ್ಟ್ಯವನ್ನು ಅಲಕ್ಷ ಮಾಡಿರಬಹುದು ; ಆ ಕಾರಣದಿಂದ ಐಕ್ಯತೆ ಮತ್ತು ಸಮರಸತಗೆ ಸರಿಯಾದ ಉಗಮ ಮೂಲ ದೊರೆಯದಿರಬಹುದು. ಮೊದಲಿಗಿಂತ ಹೆಚ್ಚು ಔನ್ನ ತ್ಯದ ಮಾನವ ವ್ಯಕ್ತಿತ್ವಕ್ಕೆ ಒಂದು ಹೊಸ ಸಮರಸತೆಯನ್ನು ನಾವು ಪಡೆಯಲು ಸಾಧ್ಯವಾಗಬಹುದು.
ಆದರೆ ಸಮಸ್ಯೆಯು ಈಗ ಅತಿ ಕಷ್ಟವೂ ಜಟಿಲವೂ ಆಗಿದೆ. ಏಕೆಂದರೆ ಅದು ಈಗ ಮಾನವ ವ್ಯಕ್ತಿತ್ವದ ಮೇರೆಯನ್ನು ದಾಟಿದೆ. ಪ್ರಾಚೀನ ಕಾಲದ ಮತ್ತು ಮಧ್ಯಯುಗದ ಕ್ಷೇತ್ರ ಮಿತಿಯಲ್ಲಿ ಒಂದು ವಿಧವಾದ ಸಮರಸ ವ್ಯಕ್ತಿತ್ವವನ್ನು ಬೆಳಸುವುದು ಸುಲಭಸಾಧ್ಯವಿತ್ತು. ನಗರ ಮತ್ತು ಗ್ರಾಮಗಳ ಸಣ್ಣ ಪ್ರಪಂಚದಲ್ಲಿ ನಿಯಮಬದ್ಧ ಸಾಮಾಜಿಕ ರಚನೆ ಮತ್ತು ಆಚರಣೆಯ ಭಾವನೆ ಗಳಿಂದ ವ್ಯಕ್ತಿ ಮತ್ತು ಸಮಾಜಗಳೆರಡೂ ಪರಧಾಳಿಯನ್ನೆದುರಿಸಿ ಸುರಕ್ಷಿತವಾಗಿ ಸ್ವಸಂತೃಪ್ತ ಜೀವನ ವನ್ನು ನಡೆಸಿದವು. ಈಗ ಒಬ್ಬ ವ್ಯಕ್ತಿಯ ಕಾರ್ಯಕ್ಷೇತ್ರವು ವಿಶ್ವವನ್ನೇ ಆವರಿಸಿದೆ. ವಿವಿಧ ಭಾವನೆಯ ಸಾಮಾಜಿಕ ರಚನೆಗಳಿಗೆ ಒಂದಕ್ಕೊಂದಕ್ಕೆ ಘರ್ಷಣೆಯಾಗುತ್ತಿದೆ; ಮತ್ತು ಅವೆಲ್ಲದರ ಹಿಂದೆ ಭಿನ್ನ ಭಿನ್ನ ಜೀವನದರ್ಶನಗಳಿವೆ. ಎಲ್ಲಿಯೋ ಹುಟ್ಟಿದ ಚಂಡಮಾರುತವು ಇನ್ನೊಂದು ಕಡೆ ಸುಂಟರಗಾಳಿಯನ್ನು ಎಬ್ಬಿಸುತ್ತದೆ. ಬೇರೊಂದು ಕಡೆ ಅಪಭ್ರಮಣಮಾರುತವನ್ನೆಬ್ಬಿಸುತ್ತದೆ.