ಪುಟ:ಭಾರತ ದರ್ಶನ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ಭಾರತ ದರ್ಶನ

ನಂಬಿಕೆ ಅದರ ಮುಖ್ಯ ವಸ್ತುವಲ್ಲ. ಆದರೆ ಅಂತಹ ವ್ಯಕ್ತಿ ಸಹ ದೇವರಲ್ಲಿನ ನಂಬಿಕೆಯಿಂದ ಮತ್ತು ಆತನ ಮೇಲಿನ ಭಕ್ತಿಯಿಂದ ಏಕಾಗ್ರ ಚಿತ್ತತೆಯನ್ನು ಪಡೆಯಲು ಸುಲಭವಾದ್ದರಿಂದ ಉಪಯುಕ್ತ.
ಯೋಗದ ಮುಂದಿನ ಹಂತಗಳಲ್ಲಿ ಯಾವುದೇ ಬಗೆಯ ಅಂತರ್ಜಾತೀಯ ದರ್ಶನವಾಗುತ್ತದೆ ಅಥವ ಭಕ್ತರು ಹೇಳುವ ಯಾವುದೋ ಒಂದು ಅಪೂರ್ವ ಅನುಭವವು ದೊರೆಯುತ್ತದೆ. ಅದು ಹೆಚ್ಚಿನ ಜ್ಞಾನಸಾಧನೆಗೆ ದಾರಿತೋರಿಸುವ ಮನಸ್ಸಿನ ಒಂದು ಉನ್ನತ ಸ್ಥಿತಿಯೋ ಅಥವ ಒಂದು ಬಗೆಯ ಆತ್ಮ ಒಂದು ಬಗೆಯ ಸುಷುಪ್ತಿಯೋ ನಾನರಿಯೆ, ಹೆಚ್ಚಿನ ಜ್ಞಾನ ಸಾಧನೆಗೆ ಮಾರ್ಗವಿದಾದರೂ ಆತ್ಮ ನಿದ್ರೆಯೂ ಖಂಡಿತ ಅನಿವಾರ್ಯ. ಅವ್ಯವಸ್ಥಿತ ಯೋಗಾಭ್ಯಾಸದಿಂದ ಅಭ್ಯಾಸಿಯ ಮನಸ್ಸಿನ ಮೇಲೆ ಅನಿಷ್ಟ ಪರಿಣಾಮಗಳಾಗಿರುವ ನಿದರ್ಶನಗಳು ಅನೇಕ ಇವೆ.
ಆದರೆ ಈ ಧ್ಯಾನ ಮತ್ತು ಚಿಂತನಗಳ ಸ್ಥಿತಿಯನ್ನು ಮುಟ್ಟುವ ಮೊದಲು ದೇಹ ಮತ್ತು ಮನಸ್ಸು ಎರಡನ್ನೂ ನಿಗ್ರಹಿಸಬೇಕು. ದೇಹವು ಯೋಗ್ಯವೂ ಆರೋಗ್ಯ ಪೂರ್ಣವೂ ಇರಬೇಕು, ನಶ್ಯವೂ ಮನೋಹರವೂ ಇರಬೇಕು. ವಜ್ರಕಾಯನಾಗಿ ಬಲಶಾಲಿ ಯಾಗಿರಬೇಕು. ಶರೀರವನ್ನು ಸಂಪೂರ್ಣ ಅಧೀನದಲ್ಲಿ ಇಟ್ಟು ಕೊಳ್ಳುವುದಕ್ಕೂ ಸರ್ವೆ ಸಾಧಾರಣ ವಾಗಿ ದೀರ್ಘವೂ ಆಳವೂ ಆದ ಶ್ವಾಸೋಚ್ಛಾಸಗಳನ್ನು ತೆಗೆದುಕೊಳ್ಳುವುದಕ್ಕೂ ಸುಲಭವಾಗುವಂತೆ ಅನೇಕ ಶರೀರ ಸಾಧನೆಗಳನ್ನೂ ಪ್ರಾಣಾಯಾಮ ವ್ಯಾಯಾಮಗಳನ್ನೂ ವಿಧಿಸಲಾಗಿದೆ. ವ್ಯಾಯಾಮ ಎಂದು ಹೇಳುವುದು ಉಚಿತವಲ್ಲ. ಏಕೆಂದರೆ ಹೆಚ್ಚು ಶರೀರ ಶ್ರಮವು ಬೇಕಾಗಿಲ್ಲ. ಅವೆಲ್ಲ ವಿವಿಧ ಆಸನಗಳು, ಸರಿಯಾಗಿ ಮಾಡಿದರೆ ದೇಹವನ್ನು ಹಗುರವಾಡಿ, ಒ೦ದು ಕಾಂತಿಯನ್ನು ಕೊಡುತ್ತವೆ ಮತ್ತು ಆಯಾಸ ಮಾಡುವುದಿಲ್ಲ. ಶರೀರ ಲವಲವಿಕೆಯನ್ನು ಕಾಪಾಡುವ ಈ ಸುಲಭವೂ, ಪೂರ್ಣ ಭಾರತೀಯವೂ ಆದ ಈ ಪದ್ದತಿಯನ್ನು, ಉಸಿರು ಕಟ್ಟುವಂತೆ ಆ ಯಾಸ ಮಾಡುವ ನುಗ್ಗಿ ಓಡುವುದು, ಕುಪ್ಪಳಿಸುವುದು, ಅಂಗಾಂಗಗಳನ್ನು ರೂಡಿಸವುದು, ನೆಗೆಯುವುದು ಮುಂತಾದ ಸರ್ವಸಾಮಾನ್ಯ ವ್ಯಾಯಾಮ ಪದ್ಧತಿಗಳೊಂದಿಗೆ ಹೋಲಿಸುವುದು ಉಚಿತ ವಲ್ಲ. ಈ ವ್ಯಾಯಾಮ ಪದ್ದತಿಗಳು, ಈಜುವುದು, ಕುದುರೆಸವಾರಿ, ಕತ್ತಿವರಸೆ, ಬಿಲ್ಲುಗಾರಿಕೆ, ಗದಾಯುದ್ಧ, ಮಲ್ಲಯುದ್ಧ ಮುಂತಾದ ಅನೇಕ ಆಟಪಾಟಗಳು ಸಹ ಭಾರತೀಯರಲ್ಲಿ ಸಾಮಾನ್ಯ ವಿದ್ದವು. ಆದರೆ ಸನಾತನ ಯೋಗಾಸನ ಪದ್ಧತಿಯು ಭಾರತದ ಒಂದು ವೈಶಿಷ್ಟ, ಅದು ಭಾರ ತೀಯ ದಾರ್ಶನಿಕ ದೃಷ್ಟಿಗೆ ಅನುಗುಣವಾಗಿದೆ. ಅದರಲ್ಲಿ ಒಂದು ಬಗೆಯ ನಿಲುವಿನ ಸೊಬಗು ಇದೆ. ಶರೀರ ವ್ಯಾಯಾಮ ಮಾಡುವಾಗ ಸಹ ಒಂದು ಬಗೆಯ ಪ್ರಶಾಂತ ಮುದ್ರೆ ಇದೆ. ಶಕ್ತಿ ವ್ಯಯವಿಲ್ಲದೆ, ಮನಸ್ಸಿನಉದ್ರೇಕವಿಲ್ಲದೆ ಶರೀರಬಲವೂ, ಲವಲವಿಕೆಯೂ ಉಂಟಾಗುತ್ತವೆ. ಈ ಕಾರಣದಿಂದ ಯಾವ ವಯಸ್ಸಿನವರಾದರೂ ಆಸನಗಳನ್ನು ಹಾಕಬಹುದು, ವೃದ್ದರು ಸಹ ಕೆಲವು ಆಸನಗಳನ್ನು ಹಾಕಬಹುದು.
ಈ ಆಸನಗಳು ಅಸಂಖ್ಯಾತ ಇವೆ. ಈಗ ಅನೇಕ ವರ್ಷಗಳಿಂದ ನನಗೆ ಸಮಯ ದೊರೆತಾಗ ನಾನೂ ಕೆಲವು ಆಸನಗಳನ್ನು ಹಾಕುತ್ತಿದ್ದೇನೆ. ದೈಹಿಕ ಮತ್ತು ಮಾನಸಿಕ ಶಾಂತಿ ಇಲ್ಲದೆ ಇದ್ದರೂ ಈ ಆಸನಗಳಿಂದ ನಾನು ಬಹಳ ಪ್ರಯೋಜನ ಪಡೆದಿದ್ದೇನೆ. ಈ ಕೆಲವು ಆಸನಗಳು ಮತ್ತು ಸ್ವಲ್ಪ ಪ್ರಾಣಾಯಾಮ ಮಾತ್ರ ಯೋಗಶಾಸ್ತ್ರದ ಶರೀರಸಾಧನೆಗಳಲ್ಲಿ ನನಗೆ ಪರಿಚಯವಿರು ವುದು. ಶರೀರ ಶಾಸ್ತ್ರದ ಪ್ರಾಥಮಿಕ ಹೆಜ್ಜೆಗಳನ್ನು ಬಿಟ್ಟು ನಾನು ಮುಂದೆ ಹೋಗಿಲ್ಲ. ನನ್ನ ಮನಸ್ಸು ಅಡ್ಡ ದಾರಿ ಹಿಡಿಯುತ್ತ ಹತೋಟಿಗೆ ಸಿಕ್ಕದೆ ಇದೆ.
ಶರೀರ ಸಾಧನೆಯಲ್ಲಿ ಯೋಗ್ಯ ಆಹಾರ ಮತ್ತು ಪಾನೀಯಗಳ ಸೇವನೆಯೂ ಸೇರಿದೆ ಮತ್ತು ಅಭಕ್ಷ್ಯಭೋಜನ, ಅಪೇಯ ಪಾನ ನಿಷಿದ್ಧ. ಅಲ್ಲದೆ ಯೋಗಸಾಧನೆಗೆ ನೈತಿಕ ಸಿದ್ದತೆಯ ಅವಶ್ಯಕ ಅಹಿಂಸೆ, ಸತ್ಯ ಮತ್ತು ಇಂದ್ರಿಯ ನಿಗ್ರಹವೇ ಆ ಮಾರ್ಗಗಳು. ಅಹಿಂಸೆ ಎಂದರೆ ಹಿಂಸೆಯ ತ್ಯಾಜ್ಯ ಮಾತ್ರವಲ್ಲ, ದ್ವೇಷ ಮತ್ತು ಅಸೂಯೆಗಳೂ ಇರಕೂಡದು.