ಪುಟ:ಭಾರತ ದರ್ಶನ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೪

ಭಾರತ ದರ್ಶನ

ಅಜಾದರ ಶೈಲಿ ಗಡಸಾಗಿಯೂ, ಶಕ್ತಿ ಪೂರ್ಣವೂ ಇದ್ದು, ಪಾರಸಿ ಹಿನ್ನೆಲೆ ಇದ್ದುದರಿಂದ ಸ್ವಲ್ಪ ಕಠಿನವೂ ಇತ್ತು. ಹೊಸ ಭಾವನೆಗಳಿಗೆ ಹೊಸ ಪದ ಸಮುಚ್ಚಯವನ್ನೂ ಉಪಯೋಗ ಮಾಡಿದರು. ಮತ್ತು ಇಂದಿನ ಉರ್ದು ಭಾಷೆಗೆ ಹೊಸ ರೂಪು ಕೊಡುವುದರಲ್ಲಿ ಪರಿಣಾಮಕಾರಿ ಯತ್ನ ಮಾಡಿದವರೂ ಅವರೇ, ಹಳೆಯ ಮಂದಪಕ್ಷದ ಮುಸಲ್ಮಾನ ನಾಯಕರಿಗೆ ಇದೆಲ್ಲ ಸರಿಬೀಳದೆ ಅಜಾದರ ಅಭಿಪ್ರಾಯಗಳನ್ನೂ, ನಿಲುವನ್ನೂ ಖಂಡಿಸಿದರು. ಆದರೆ ಅವರಲ್ಲಿ ಯಾವ ಪಂಡಿತನಿಗೂ ಧಾರ್ಮಿಕ ವಿಷಯಗಳಲ್ಲಿ ಇಸ್ಲಾಂ ಸಂಪ್ರದಾಯದಲ್ಲಿ ಅಜಾದರ ಎದುರು ನಿಂತು ನಾದಮಾಡಲು, ಚರ್ಚೆಮಾಡಲು ದೈರ್ಯವಿರಲಿಲ್ಲ. ಅಜಾದರ ಜ್ಞಾನವು ಅವರೆಲ್ಲರ ಜ್ಞಾನಕ್ಕಿಂತ ಅತ್ಯಧಿಕವಿತ್ತು. ಪ್ರಾಚೀನ ಪಾಂಡಿತ್ಯ ಹದಿನೆಂಟನೆಯ ಶತಮಾನದ ತಾರ್ಕಿಕ ಮನೋಭಾವ ಮತ್ತು ಆಧುನಿಕ ದೃಷ್ಟಿ ಎಲ್ಲವೂ ಅವರಲ್ಲಿ ಸಮರಸಗೊಂಡಿತ್ತು.

ಹಳಬರಲ್ಲಿ ಅಜಾದರ ಲೇಖನಗಳನ್ನು ಮೆಚ್ಚಿದವರೂ ಕೆಲವರಿದ್ದರು. ಮೌಲಾನ ಕೊಬ್ಬಿನುಮಾನಿ ಅವರಲ್ಲಿ ಒಬ್ಬ, ಆತನು ಸ್ವತಃ ತುರ್ಕಿಯನ್ನು ನೋಡಿ ಬಂದಿದ್ದ ಮತ್ತು ಸರ್ ಸೈಯದ್ ಅಹಮದ್ ಖಾನ್‌ರೊಂದಿಗೆ ಅಲಿಘಡ ಕಾಲೇಜನ್ನು ಸ್ಥಾಪಿಸಿದವರಲ್ಲಿ ಒಬ್ಬನಾಗಿದ್ದ. ಆದರೆ ಅಲಿಘಡ ಕಾಲೇಜಿನ ಸಂಪ್ರದಾಯವೇ ಬೇರೆ ಇತ್ತು. ಅಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ಪ್ರತಿಗಾಮಿ ಮನೋಭಾವವಿತ್ತು. ಅದರ ಪೋಷಕ ವರ್ಗವೆಲ್ಲ ನವಾಬರುಗಳು, ದೊಡ್ಡ ಜಮೀನುದಾರರುಗಳು, ಆದರ್ಶ ಶ್ರೀಮಂತಿಕೆಯ ಪ್ರತಿನಿಧಿಗಳು, ಸರಕಾರದ ಅಧಿಕಾರವರ್ಗದೊಡನೆ ಸಮೀಪ ಸಂಪರ್ಕವುಳ್ಳ ಇಂಗ್ಲಿಷ್ ಪ್ರಾಧ್ಯಾಪಕರ ನೇತೃತ್ವದಲ್ಲಿ ಪ್ರತ್ಯೇಕ ಮನೋಭಾವನೆ ಬೆಳೆಸಿಕೊಂಡು ರಾಷ್ಟ್ರೀಯ ವಿರುದ್ಧ, ಕಾಂಗ್ರೆಸ್ ವಿರುದ್ದ ಆದ ಭಾವನೆ ತಾಳಿದರು. ಕೆಳದರ್ಜೆಯ ಅಧಿಕಾರದ ಸರಕಾರಿ ನೌಕರಿಯ ಪ್ರವೇ ಶವೇ ಅದರ ವಿದ್ಯಾರ್ಥಿಗಳ ಆದರ್ಶವಾಗಿತ್ತು. ಆದ್ದರಿಂದ ಸರಕಾರಕ್ಕೆ ಬೆಂಬಲಕೊಡಬೇಕಾದ್ದು ಅವಶ್ಯ ವಾಯಿತು. ರಾಷ್ಟ್ರೀಯ ಭಾವನೆಗೂ, ಸರಕಾರ ವಿರೋಧಕ್ಕೂ ಎಡೆಯೇ ಇರಲಿಲ್ಲ. ಅಲಿಘಡ ಕಾಲೇಜ್ ವರ್ಗವು ನೂತನ ಮುಸ್ಲಿಂ ವಿದ್ಯಾವಂತ ಪಂಗಡದ ನಾಯಕತ್ವ ವಹಿಸಿತು. ಕೆಲವು ವೇಳೆ ಪ್ರತ್ಯಕ್ಷವಾಗಿ ಇನ್ನೂ ಕೆಲವು ವೇಳೆ ಹಿಂದೆ ನಿಂತು ಪ್ರತಿಯೊಂದು ಮುಸ್ಲಿಂ ಚಳವಳಿಗೂ ಪ್ರೇರಕವಾಯಿತು. ಮುಸ್ಲಿಂ ಲೀಗ್ ಜನ್ಮ ಬಹುಮಟ್ಟಿಗೆ ಅವರ ಪ್ರಯತ್ನದ ಫಲ.

ರಾಷ್ಟ್ರೀಯ ವಿರುದ್ದ ಭಾವನೆಯ ಮತ್ತು ಪ್ರತಿಗಾಮಿ ಪಕ್ಷದ ಈ ಭದ್ರವಾದ ಕೋಟೆಯನ್ನು ಅಬುಲ್ ಕಲಾಂ ಅಜಾದರು ನೇರ ಎದುರು ಬೀಳದೆ ತಮ್ಮ ಹೊಸ ಭಾವನೆಗಳಿಂದ ಲೇಖನಗಳಿಂದ ಉರುಳಿಸಲು ಯತ್ನ ಮಾಡಿದರು. ಇದರಿಂದ ಅಲಿಘಡದ ಭಾವನೆಯು ಸಡಿಲಿತು. ಈ ಯುವಕ ಲೇಖಕ ಮತ್ತು ಪತ್ರಿಕೋದ್ಯಮಿ ಮುಸ್ಲಿಮ್ ವಿದ್ಯಾವಂತವರ್ಗದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದ. ಹಿರಿಯರು ಆತನ ಮೇಲೆ ರೊಚ್ಚಿಗೆದ್ದರೂ ಯುವಜನರ ಮನಸ್ಸಿನಲ್ಲಿ ಒಂದು ತಳಮಳವೆದ್ದಿತು. “ತುರ್ಕಿ, ಈಜಿಪ್ಟ್ ಮತ್ತು ಇರಾಣಗಳಲ್ಲಿನ ಘಟನೆಗಳಿಂದ ಮತ್ತು ಭಾರತದ ರಾಷ್ಟ್ರೀಯ ಚಳವಳಿಯಿಂದ ಈ ತಳಮಳ ಆಗಲೇ ಆರಂಭವಾಗಿತ್ತು. ಆದರೆ ಇಸ್ಲಾಂ ಧರ್ಮ ಮತ್ತು ಇಸ್ಲಾಂ ದೇಶಗಳ ಮೇಲಿನ ಸಹಾನುಭೂತಿಗೂ ಭಾರತದ ರಾಷ್ಟ್ರೀಯ ಚಳವಳಿಗೂ ವಿರೋಧವಿಲ್ಲವೆಂದು ತೋರಿಸಿಕೊಟ್ಟು ಅಜಾದ್ ಅದಕ್ಕೊಂದು ಹೊಸ ರೂಪು ಕೊಟ್ಟರು. ಇದರಿಂದ ಮುಸ್ಲಿಂ ಲೀಗಿಗೂ ಕಾಂಗ್ರೆಸ್ಸಿಗೂ ಇದ್ದ ಅಂತರವು ಕಡಮೆಯಾಯಿತು. ಇನ್ನೂ ಹುಡುಗರಿದ್ದಾಗಲೇ ೧೯೦೬ನೆ ಇಸವಿಯ ಮೊದಲನೆಯ ಅಧಿವೇಶನದಲ್ಲೇ ಅಜಾದ್ ಸ್ವತಃ ಲೀಗನ್ನು ಸೇರಿದ್ದರು.

ಬ್ರಿಟಿಷ್ ಸರಕಾರದ ಪ್ರತಿನಿಧಿಗಳಿಗೆ 'ಅಲ್-ಹಿಲಾಲ್' ಮೆಚ್ಚುಗೆಯಾಗಲಿಲ್ಲ. ವೃತ್ತ ಪತ್ರಿಕಾ ಶಾಸನ ವಿಧಿಯಂತೆ ಠೇವಣಿ ಕೇಳಿದ್ದರಿಂದ ಕೊನೆಗೆ ೧೯೧೪ರಲ್ಲಿ ಅದು ನಿಲ್ಲಬೇಕಾಯಿತು. ಈ ರೀತಿ ಎರಡುವರ್ಷ ಕಾಲ ಮಾತ್ರ ಬಾಳಿ ಅಲ್-ಹಿಲಾಲ್' ಪರವಸಾನ ಹೊಂದಿತು. ಅಜಾದ್ ಅಲ್ಬಲಾಗ್ ಎಂಬ ಇನ್ನೊಂದು ವಾರಪತ್ರಿಕೆ ಹೊರಡಿಸಿದರು. ೧೯೧೬ರಲ್ಲಿ ಇದರ ಕಥೆಯೂ ಮುಗಿದು ಅಜಾದ್ ಬ್ರಿಟಿಷ್ ಸರಕಾರದ ಬಂದಿಗಳಾಗಿ, ನಾಲ್ಕು ವರ್ಷ ಸೆರೆಮನೆ ಅನುಭವಿಸಬೇಕಾಯಿತು. ಬಂಧನದಿಂದ ಹೊರಗೆ ಬಂದೊಡನೆ ರಾಷ್ಟ್ರೀಯ ಮಹಾಸಭೆಯ ನಾಯಕವರ್ಗದಲ್ಲಿ ಒಂದು ಚಿರಸ್ಥಾನ