ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೦
ಭಾರತ ದರ್ಶನ

ಈಗ ಸ್ಪಷ್ಟವಾಯಿತು. ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಕೆಲಸಮಾಡಲು ಅಶಕ್ತರಾದರು, ಜನರ ಸಹಕಾರ ಮತ್ತು ಪ್ರೇಮಗಳಿಸಲು ಸಾಧ್ಯವಿಲ್ಲದೆ ಜನರಿಗೆ ಹೆದರಿ ಅವರನ್ನು ಅವಹೇಳನಮಾಡುತ್ತಿದ್ದರು. ಸಾಮಾಜಿಕ ಪ್ರಗತಿಯ ಬೃಹತ್ಕಲ್ಪನೆ, ತೀವ್ರ ಕಾರ್ಯಗತಿಯ ಯೋಜನೆಗಳ ಜ್ಞಾನವೇ ಅವರಿಗೆ ಇರಲಿಲ್ಲ. ತಮ್ಮ ಸಂಕುಚಿತ ದೃಷ್ಟಿ ಮತ್ತು ಅಧಿಕಾರ ದರ್ಪದಿಂದ ಆತಂಕಪಡಿಸುವುದು ಮಾತ್ರ ಅವರಿಗೆ ಸಾಧ್ಯವಿತ್ತು. ಕೆಲವು ವ್ಯಕ್ತಿಗಳನ್ನು ಬಿಟ್ಟರೆ ಉನ್ನತ ಅಧಿಕಾರಿಗಳಲ್ಲಿ ಬ್ರಿಟಿಷರಲ್ಲಿ ಭಾರತೀಯರಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ತಮ್ಮ ಎದುರಿನ ಹೊಸ ಕಾರ್ಯಗಳ ನಿರ್ವಹಣೆಗೆ ಅವರು ಇಷ್ಟು ಅಯೋಗ್ಯರಿದ್ದುದನ್ನು ಕಂಡು ಆಶ್ಚರ್ಯವಾಯಿತು.

ಜನನಾಯಕರ ಕಾರ್ಯದಕ್ಷತೆ ಮತ್ತು ಕಾರ್ಯಪಟುತ್ವಗಳಲ್ಲಿ ಬೇಕಾದಷ್ಟು ನ್ಯೂನತೆಗಳಿದ್ದುವು. ಆದರೆ ಅವರಲ್ಲಿ ಅಪಾರವಾದ ಉತ್ಸಾಹವೂ ಶಕ್ತಿಯೂ ಇದ್ದು ವು; ಜನತೆಯ ಸಮೀಪ ಸಂಪರ್ಕವಿತ್ತು; ಮತ್ತು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕಲಿಯಬೇಕೆಂಬ ಆಸೆ ಇತ್ತು. ಅವರ ಕಾರ್ಯಶಕ್ತಿ, ಹೊಸ ಬಾಳಿನ ಉತ್ಸಾಹ, ಆವೇಶಪೂರಿತ ಹುಮ್ಮಸ್ಸು, ಹಿಡಿದ ಕೆಲಸವನ್ನು ಪೂರೈಸಬೇಕೆಂಬ ದೃಢಸಂಕಲ್ಪ ಇವೆಲ್ಲ ಸಂಪ್ರದಾಯ ಶರಣರೂ, ಸೋಮಾರಿಗಳೂ ಆದ ಬ್ರಿಟಿಷ್ ಆಡಳಿತಗಾರರಿಗೆ ಮತ್ತು ಅವರ ಹಿಂಬಾಲಕರಿಗೆ ತೀರ ಹೊಸದಾಗಿ ಕಂಡವು. ಸಂಪ್ರದಾಯ ಶರಣ ಭಾರತದಲ್ಲಿ ಈ ರೀತಿ ಒಂದು ವಿಚಿತ್ರ ವ್ಯಾಪಾರ ಆರಂಭವಾಯಿತು. ಈ ರೀತಿ ಒಂದು ಕಾರ್ಯಾಸಕ್ತ ಸಮಾಜದ ಪ್ರತಿನಿಧಿಗಳಾಗಿ ಬಂದ ಬ್ರಿಟಿಷರು ಸ್ತಬ್ದ ಪಾಚಿಗಟ್ಟಿದ ಸಂಪ್ರದಾಯದ ಮುಖ್ಯ ಬೆಂಬಲಿಗರಾಗಿ ನಿಂತರು. ಭಾರತೀಯರಲ್ಲಿ ಅನೇಕರು ಈ ನವ ಚೈತನ್ಯದ ಪ್ರೋತ್ಸಾಹಕರಾಗಿದ್ದರು. ರಾಜಕೀಯ ಕ್ರಾಂತಿಯು ಮಾತ್ರವಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯೂ ಅವರಿಗೆ ಸ್ವಾಗತವಿತ್ತು. ತಮ್ಮ ಹಿಂದೆ ಅನೇಕ ಹೊಸ ಪ್ರಬಲ ಶಕ್ತಿಗಳು ಉದ್ಭವಿಸಿವೆ ಎಂಬ ಅರಿವು ಸಹ ಅವರಿಗೆ ಅನೇಕರಿಗೆ ಇರಲಿಲ್ಲ. ಬ್ರಿಟಿಷರು ಮೊದಲು ಭಾರತದಲ್ಲಿ ಯಾವುದಾದರೂ ರಚನಾತ್ಮಕ ಪ್ರಗತಿ ಪರ ಪಾತ್ ವಹಿಸಿದ್ದರೂ ಈಗ ಆ ಪಾತ್ರನಿರ್ವಹಣೆಯಲ್ಲಿ ವಿಮುಖರಾಗಿದ್ದಾರೆಂದೂ, ಎಲ್ಲ ಪ್ರಗತಿಗೂ ವಿರೋಧಿಗಳೆಂದೂ ಅವರ ಈ ವ್ಯತ್ಯಾಸದಿಂದ ಸ್ಪಷ್ಟವಾಯಿತು. ಅವರ ಅಧಿಕಾರ ಜೀವನದ ಕಳೆಯೇ ಕುಂದಿತ್ತು. ಭಾರತದ ಯಾವ ಮುಖ್ಯ ಸಮಸ್ಯೆ ಬಿಡಿಸುವುದಕ್ಕೂ ಅವರಿಗೆ ಶಕ್ತಿ ಇರಲಿಲ್ಲ. ಆರಂಭದಲ್ಲಿ ಅರ್ಥಗರ್ಭಿತವೂ ಸ್ಪಷ್ಟವೂ ಆಗಿದ್ದ ಅವರ ಭಾಷೆ ಸಹ ಅಸ್ಪಷ್ಟವೂ, ಅರ್ಥ ಶೂನ್ಯವೂ, ಕೃತಕವೂ ಆಗುತ್ತ ಬಂದಿತು.

ಅತಿ ಕಷ್ಟತಮವೂ ಜಟಿಲವೂ ಆದ ಪ್ರಜಾಪ್ರಭುತ್ವದ ಕಲೆಯನ್ನು ತನ್ನ ಉನ್ನತ ಅಧಿಕಾರಿಗಳ ಮೂಲಕ ನಮಗೆ ಕಲಿಸುತ್ತಿರುವುದಾಗಿ ಬ್ರಿಟಿಷ್ ಆಳರಸರು ಬಹು ದಿನಗಳಿಂದ ಕಥೆ ಹೇಳುತ್ತಿದ್ದಾರೆ. ಬ್ರಿಟಿಷರು ಬಂದು ತಮ್ಮ ಶಿಕ್ಷಣದ ಅನುಭವ ನಮಗೆ ಒದಗಿಸುವ ಮುಂಚೆ ಸಾವಿರಾರು ವರ್ಷಗಳಿಂದ ನಾವು ಬಾಳಿ ಬದುಕಿದ್ದೆವು; ಉತ್ತಮ ಬಾಳನ್ನೇ ಬಾಳಿದೆವು. ಅತ್ಯವಶ್ಯ ಕೆಲವು ಗುಣಗಳು ನಮ್ಮಲ್ಲಿ ಇಲ್ಲದೆ ಇರಬಹುದು. ಕೆಲವರು ಈ ಕೊರತೆಯು ಬ್ರಿಟಿಷರ ಆಡಳಿತಕಾಲದಲ್ಲಿ ಹೆಚ್ಚಿದೆ ಎಂದೂ ಹೇಳುತ್ತಾರೆ. ಆದರೆ ನಮ್ಮ ಕೊರತೆ ಏನೇ ಇರಲಿ ಈ ಅಧಿಕಾರವರ್ಗವು ಭಾರತದ ಪ್ರಗತಿ ಸಾಧನೆಗೆ ಸ್ವಲ್ಪವೂ ಸಹಾಯವಾಗುವುದಿಲ್ಲವೆಂಬುದು ನಮಗೆ ಸ್ಪಷ್ಟವಾಯಿತು. ಅವರ ದುರ್ಗುಣಗಳೇ ಅವರಿಗೆ ಅಡ್ಡಿಯಾದವು. ಅವರಲ್ಲಿದ್ದ ಗುಣಗಳೆಲ್ಲ ಪೊಲೀಸ್ ರಾಜ್ಯಕ್ಕೆ ಬೇಕಾದ ಗುಣಗಳು, ಪ್ರಗತಿಪರ ಪ್ರಜಾಪ್ರಭುತ್ವಕ್ಕೆ ಅವಶ್ಯವಾದ ಗುಣಗಳಿಗಿಂತ ತೀರ ಭಿನ್ನವಾದವುಗಳು. ಇತರರಿಗೆ ಶಿಕ್ಷಣ ಕೊಡುವ ಮುಂಚೆ ಅವರಲ್ಲಿದ್ದ ದುರ್ಗುಣ ಕಳೆದುಕೊಳ್ಳಲು ಪಾಪನಾಶನಿಯ ಸ್ನಾನ ಅವರಿಗೆ ಅಗತ್ಯವಿತ್ತು.

ಪ್ರಾಂತಗಳಲ್ಲಿ ಪ್ರಜಾರಾಜ್ಯವೂ ಕೇಂದ್ರದಲ್ಲಿ ನಿರಂಕುಶ ಆಡಳಿತವೂ ಒಂದು ಇಷ್ಟೂಡಿಯಾಗಿ ಅನೇಕ ವಿಚಿತ್ರ ವೈಪರೀತ್ಯಗಳು ಕಂಡವು. ಕಾಂಗ್ರೆಸ್ ಸರಕಾರಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ತರ ಬೆಲೆಕೊಟ್ಟು ಗುಪ್ತ ಪೋಲಿಸ್ ದಳದವರ ಚಟುವಟಿಕೆಗಳನ್ನು ಮೊಟಕುಮಾಡಿದರು. ರಾಜಕಾರಣಿಗಳನ್ನೂ ಸರಕಾರಕ್ಕೆ ವಿರುದ್ಧ ಅಭಿಪ್ರಾಯ ಉಳ್ಳವರೆಂದು ಅನುಮಾನ ಕಂಡವರನ್ನೂ ಹಿಂಬಾಲಿಸಿ