ಪುಟ:ಭಾರತ ದರ್ಶನ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೪೧

ಅವರಮೇಲೆ ಗುಪ್ತ ವರದಿಗಳನ್ನು ಕಳುಹಿಸುವುದೇ ಅವರ ಕೆಲಸವಾಗಿತ್ತು. ಪ್ರಾಂತೀಯ ಗುಪ್ತ ಪೋಲಿಸರ ಚಟುವಟಕೆ ಕಡಮೆಯಾದರೂ ಸಾಮ್ರಾಜ್ಯ ಸರಕಾರದ ಗುಪ್ತಚಾರರ ಕಾಠ್ಯ ಚಟುವಟಿಕೆ ಇಮ್ಮಡಿಯಾಯಿತು. ನಮ್ಮ ಕಾಗದಗಳ ತನಿಖೆ ಹಾಗಿರಲಿ, ಮಂತ್ರಿಗಳ ಕಾಗದ ಪತ್ರಗಳನ್ನೂ ಸಹ ಒಡೆದು ನೋಡುತ್ತಿದ್ದರು. ಕಳೆದ ಇಪ್ಪತ್ತೈದು ವರ್ಷಗಳಿಂದ ಭಾರತದ ಹೊರಗಡೆಯಾಗಲಿ, ಒಳಗಡೆಯಾಗಲಿ ನಾನು ಬರೆದ ಕಾಗದಗಳಲ್ಲಿ ಒಂದಾದರೂ ಈ ಗುಪ್ತ ಪೊಲೀಸರ ಕಣ್ಣಿಗೆ ಬೀಳದೆ ಪ್ರತಿ ಮಾಡಲ್ಪಡದೆ ಹೋಗಿದೆ ಎಂದು ನಾನು ಹೇಳಲಾರೆ. ಗುಪ್ತವಾಗಿ ಕೇಳದ ಟೆಲಿರ್ಪೋ ಸಂಭಾಷಣೆ ಯಾವುದೂ ಇಲ್ಲ. ನನಗೆ ಬಂದ ಪ್ರತಿಯೊಂದು ಕಾಗದವೂ ಈ ಗುಪ್ತ ಶೋಧನೆಗೆ ಒಳಗಾಗಿಯೇ ಬರ ಬೇಕು. ಕೆಲವು ಬಾರಿ ಎಲ್ಲ ಕಾಗದಗಳು ; ಇನ್ನೂ ಕೆಲವು ಬಾರಿ ಮುಖ್ಯವೆನಿಸಿದವು. ಯುದ್ಧ ಕಾಲದಲ್ಲಿ ಎರಡೂ ಕಡೆ ಶೋಧನೆಯಾಗುತ್ತಿತ್ತು.

ಅದೃಷ್ಟವಶಾತ್ ನಮ್ಮ ಚಟುವಟಿಕೆ ಎಲ್ಲವೂ ಬಹಿರಂಗವಾಗಿಯೇ ನಡೆದಿದೆ, ಮುಚ್ಚು ಮರೆ ಮಾಡ ಬೇಕಾದ್ದು ಯಾವುದೂ ಇರಲಿಲ್ಲ. ಆದರೂ, ಸದಾ ಈ ಶೋಧನೆ, ಮಾತುಗಳನ್ನು, ಸಂಭಾಷಣೆಗಳನ್ನು ಕದ್ದು ಕೇಳುತ್ತಾರೆಂಬ ಭಾವನೆ ಒಳ್ಳೆಯದಲ್ಲ. ಕೋಪೋದ್ರೇಕಕ್ಕೂ, ಅಸಮಾಧಾನಕ್ಕೂ ಎಡೆಗೊಟ್ಟು ವ್ಯಕ್ತಿ ಬಾಂಧವ್ಯಕ್ಕೆ ಸಹ ಕುಂದನ್ನು ತರುತ್ತದೆ. ಇಣಿಕಿ ನೋಡುವವನೊಬ್ಬನಿದ್ದಾನೆಂಬ ಭಾವನೆಯುಂಟಾದರೆ ಮನಬಿಚ್ಚಿ ಬರೆಯಲು ಸಹ ಸಾಧ್ಯವಿಲ್ಲ.

ಮಂತ್ರಿಗಳು ಅನೇಕರು ಶಕ್ತಿಮೀರಿ ಕೆಲಸಮಾಡಿ ಜೀವಶವಗಳಾದರು. ಅನಾರೋಗ್ಯದಿಂದ ಅವರ ಹೊಸ ಹುರುಪು ಮಾಸಿತು; ತುಂಬ ಆಯಾಸಗೊಂಡವರಂತೆ ಕಂಡರು. ಆದರೂ ಗುರಿ ಸಾಧಿಸ ಬೇಕೆಂಬ ಸಂಕಲ್ಪವಿದ್ದು ದರಿಂದ ತಾವು ಶಕ್ತಿಮೀರಿ ಕೆಲಸಮಾಡಿದ್ದಲ್ಲದೆ ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿಗಳಿಂದಲೂ ಅವರ ನೌಕರರಿಂದಲೂ ಹೆಚ್ಚು ಕೆಲಸ ತೆಗೆದುಕೊಂಡರು. ೧೯೩೯ನೇ ನವಂಬರ್ ತಿಂಗಳಲ್ಲಿ ಕಾಂಗ್ರೆಸ್ ಸರಕಾರಗಳು ರಾಜೀನಾಮೆ ಕೊಟ್ಟಾಗ ಅನೇಕರು ಬದುಕಿದೆವೆಂದು ಬಿಸಿಯುಸಿರು ಬಿಟ್ಟರು. ಮೊದಲಿನಂತೆ ಕಚೇರಿಗಳೆಲ್ಲ ನಾಲ್ಕು ಗಂಟೆಗೇ ಮುಗಿಯಲಾರಂಭಿಸಿದವು. ಜನರ ಓಡಾಟಕ್ಕೆ ಅವಕಾಶ ಕಡಮೆಯಾಗಿ, ಮಡಿವಂತಿಕೆಯ ಶಾಂತವಾತಾವರಣ ಮತ್ತೆ ಆರಂಭವಾಯಿತು. ಹಳೆಯ ಕಂದಾಚಾರ ಪದ್ಧತಿ, ಆಲಸ್ಯ ಭಾವನೆ ಪುನಃ ತಲೆದೋರಿದವು, ಮಧ್ಯಾನ್ಹದ ನಂತರ ಕಾಲವೆಲ್ಲ ಪೋಲೋ ಆಟಕ್ಕೊ ಅಥವ ಕ್ರೀಡಾ ಮಂದಿರದಲ್ಲಿ ಟೆನ್ನಿಸ್ ಅಥವ ಬ್ರಿಜ್ ಆಟಕ್ಕೊ ಮೀಸಲಾಯಿತು. ಕೆಟ್ಟ ಕನಸು ಮರೆತು ಪುನಃ ಮೊದಲಿನಂತೆ ಕೆಲಸದೊಂದಿಗೆ ವಿನೋದವನ್ನೂ ಸೇರಿಸಲು ಅವಕಾಶ ದೊರೆಯಿತು. ಯುದ್ದವೇನೋ ಆರಂಭವಾಗಿತ್ತು. ಆದರೆ ಅದು ಇನ್ನೂ ಯೂರೋಪಿನಲ್ಲೇ ಇತ್ತು ; ಹಿಟ್ಲರನ ಸೈನ್ಯಗಳು ಪೋಲೆಂಡನ್ನು ಆಕ್ರಮಣ ಮಾಡಿದ್ದವು. ಸೈನಿಕರು ಹೋರಾಡಿ ತಮ್ಮ ಕರ್ತವ್ಯ ನಿರ್ವಹಣೆಗೆ ಯುದ್ಧದಲ್ಲಿ ಮಡಿದರೆ ಬಿಳಿಯ ಅಧಿಕಾರಿ ತನಗೆ ಇಲ್ಲಿಯೂ ಒಂದು ಕರ್ತವ್ಯವಿದೆ ಎಂದು ಭಾವಿಸಿದ್ದನು. ದರ್ಪದಿಂದ, ಯೋಗ್ಯರೀತಿಯಿಂದ ಬಿಳಿ ಜನರ ಹೊರೆ ಹೊರುವುದೇ ಆ ಕರ್ತವ್ಯ ಎಂದು ಭಾವಿಸಿದ್ದನು.

ಕಾಂಗ್ರೆಸ್ ಸರಕಾರಗಳು ಅಧಿಕಾರ ನಡೆಸಿದ ಅಲ್ಪಾವಧಿಯಲ್ಲಿ ಭಾರತದ ಪ್ರಗತಿಗೆ ಪ್ರಬಲವಾದ ತೊಂದರೆ ಎಂದರೆ ಬ್ರಿಟಿಷರು ನಮ್ಮ ಮೇಲೆ ಹೇರಿ ಇದ್ದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯೇ ಮುಖ್ಯ ಕಾರಣವೆಂದು ನಮಗೆ ಸ್ಪಷ್ಟವಾಯಿತು. ಅನೇಕ ಪುರಾತನ ಪದ್ದತಿಗಳೂ ಸಮಾಜದ ಸಂಪ್ರದಾಯ ಮತ್ತು ರೀತಿನೀತಿಗಳೂ ಅಡ್ಡಿಯಾಗಿವೆ ಎಂದೂ, ಅವುಗಳನ್ನು ಕಿತ್ತೊಗೆಯುವುದು ಅವಶ್ಯವೆಂದೂ ನಮಗೆ ತಿಳಿದಿತ್ತು. ಆದರೆ ಭಾರತದ ಆರ್ಥಿಕ ನೀತಿಯ ವಿಕಾಸಕ್ಕೆ ಬೇಕಾದ ಸ್ವಯಂ ಶಕ್ತಿಗೆ ಅಡ್ಡ ಬಂದುದು ಈ ಸಂಪ್ರದಾಯಗಳಿಗಿಂತ ಹೆಚ್ಚಾಗಿ ಬ್ರಿಟಿಷರ ರಾಜಕೀಯ ಮತ್ತು ಆರ್ಥಿಕ ಬಂಧನವೇ ಮುಖ್ಯ ಕಾರಣವಾಗಿತ್ತು. ಆ ಉಕ್ಕಿನ ಚೌಕಟ್ಟು ಒಂದು ನಾಶವಾದರೆ ಆತ್ಮವಿಕಾಸವು ಶತಸ್ಸಿದ್ದವಿತ್ತು. ಅದರ ಹಿಂದೆಯೇ ಅನೇಕ ಸಾಮಾಜಿಕ ಪರಿವರ್ತನೆಗಳಾಗಿ ಅರ್ಥಶೂನ್ಯ ಕಂದಾಚಾರ ಪದ್ಧತಿಗಳೂ, ಆಡಂಬರದ ರೀತಿಯೂ ಮಾಯವಾಗುತ್ತಿತ್ತು. ಆದ್ದರಿಂದ ಆ ಚೌಕಟ್ಟನ್ನು ಒಡೆಯುವುದು