ಅನಿವಾರ್ಯವೆನಿಸಿತು. ಉಳಿದ ಎಲ್ಲ ಪ್ರಯತ್ನವೂ ಹೊಳೆಯಲ್ಲಿ ಹುಣಿಸೆಹಣ್ಣು ಕದಡಿದಂತೆ ನಿಪ್ಪಲ ತೋರಿತು. ಈ ಚೌಕಟ್ಟಿನ ಮುಖ್ಯ ಆಧಾರವೆಂದರೆ ಹಳೆಯ ಪಾಳೆಯಗಾರಿಕೆಯ ಜಮೀನುದಾರಿ ಪದ್ಧತಿ, ಭಾರತದಲ್ಲಿ ಯಾವ ಪ್ರಜಾಪ್ರಭುತ್ವ ಬಂದರೂ ಬ್ರಿಟಿಷರ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯೊಂದಿಗೆ ಹೊಂದಿ ಕೊಳ್ಳಲು ಅಸಾಧ್ಯವಿತ್ತು ಮತ್ತು ಎರಡರ ಮಧ್ಯೆ ತಿಕ್ಕಾಟ ಅನಿವಾದ್ಯವಿತ್ತು. ಆದ್ದರಿಂದ ೧೯೩೭-೩೯ ರ ಅರೆಬರೆಯ ಪ್ರಜಾಪ್ರಭುತ್ವದಲ್ಲಿ ಹೋರಾಟವು ಸದಾ ಸಿದ್ದವಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಎಡೆ ಇಲ್ಲವೆಂಬ ಬ್ರಿಟಿಷರ ಅಭಿಪ್ರಾಯಕ್ಕೂ ಇದೇ ಕಾರಣವಾಯಿತು. ತಾವೆ ಕಟ್ಟಿ ಬೆಳಸಿದ ಸಂಸ್ಥೆಗಳನ್ನು, ಹಕ್ಕುದಾರಿಗಳನ್ನು, ಕೊಟ್ಟ ಬೆಲೆಯನ್ನು ಉಳಿಸಿಕೊಳ್ಳುವುದು ಒಂದೇ ಅವರ ಗುರಿಯಾಯಿತು. ಅವರು ಒಪ್ಪಿದ ಮೃದುಸ್ವಭಾವದ ಪ್ರಜಾಪ್ರಭುತ್ವವನ್ನು ನಾವು ಒಪ್ಪದೆ, ಕ್ರಾಂತಿಕಾರಕ ಬದಲಾವಣೆಗೇ ನಾವು ಪ್ರಯತ್ನ ಪಟ್ಟ ಕಾರಣ ಪ್ರಜಾಪ್ರಭುತ್ವದ ನಾಟಕವನ್ನು ಮುಕ್ತಾಯಮಾಡಿ - ಶುದ್ದ ಕೇಂದ್ರೀಕೃತ ನಿರಂಕುಶಾಧಿಕಾರ ನಡೆಸುವುದೊಂದೇ ಬ್ರಿಟಿಷ್ ಆಳರಸರಿಗೆ ಉಳಿದ ಮಾರ್ಗವಾಯಿತು. ಈ ದೃಷ್ಟಿಯ ಬೆಳೆವಣಿಗೆಗೂ, ಯೂರೋಪಿನಲ್ಲಿ ಫಾಸಿಸಂನ ಹುಟ್ಟು ಮತ್ತು ಬೆಳವಣಿಗೆಗೂ ಬಹಳ ಸಮೀಪ ಸಾಮ್ಯವಿದೆ. ಭಾರತದಲ್ಲಿ ಬ್ರಿಟಿಷರ ಹೆಮ್ಮೆಯಾಗಿದ್ದ ಶಾಸನ ಸಮ್ಮತ ಅಧಿಕಾರಕ್ಕೆ ಸಹ ಲೋಪ ಬಂದು ಯುದ್ದ ಕಾಲದ ವಿಶೇಷ ಶಾಸನಗಳ ಆಡಳಿತ ಆರಂಭವಾಯಿತು.
೫. ಅಲ್ಪಸಂಖ್ಯಾತರ ಪ್ರಶ್ನೆ : ಮುಸ್ಲಿಂ ಲೀಗ್-ಜನಾಬ್ ಜಿನ್ನಾ
ಕಳೆದು ಏಳುವರ್ಷಗಳ ಮುಸ್ಲಿಂ ಲೀಗಿನ ಬೆಳವಣಿಗೆ ಮತ್ತು ಪ್ರಭಾವ ಅತ್ಯದ್ಭುತವಾಗಿವೆ. ವಿದ್ಯಾವಂತ ಮುಸ್ಲಿಮರನ್ನು ಕಾಂಗ್ರೆಸ್ಸಿನಿಂದ ದೂರವಿರಿಸಲೆಂದು ಬ್ರಿಟಿಷರ ಪ್ರೋತ್ಸಾಹದಿಂದಲೇ ೧೯೦೬ರಲ್ಲಿ ಲೀಗಿನ ಜನನವಾಯಿತು. ಅದರ ಆಡಳಿತವೆಲ್ಲ ಉತ್ತಮ ವರ್ಗದ ಶ್ರೀಮಂತರ ಕೈಯಲ್ಲಿ. ಮುಸ್ಲಿಂ ಜನಸಾಮಾನ್ಯರ ಮೇಲೆ ಅದರ ಪ್ರಭಾವ ಏನೂ ಇರಲಿಲ್ಲ. ಅವರಿಗೆ ಅದರ ರಚನೆಯಂತೆ ಆಡಳಿತವೆಲ್ಲ ಒಂದು ಸಣ್ಣ ಗುಂಪಿನ ಕೈಯಲ್ಲಿ ನಾಯಕಪಟ್ಟವೂ ಅದೇ ಗುಂಪಿಗೆ ಶಾಶ್ವತವಾಯಿತು. ಆದರೂ ದೇಶದ ಪರಿಸ್ಥಿತಿ ಮತ್ತು ಪ್ರಬಲಗೊಳ್ಳುತ್ತಿದ್ದ ಮುಸ್ಲಿಂ ಮಧ್ಯಮ ವರ್ಗ ಲೀಗನ್ನು ಕಾಂಗ್ರೆಸ್ಸಿನ ಕಡೆಗೇ ಒಲಿಸಿದವು. ಮೊದಲನೆಯ ಪ್ರಪಂಚಯದ್ದ, ತುರ್ಕಿಯ ಖಲೀಫನ ಪದಚ್ಯುತಿ, ಮುಸ್ಲಿಮರ ಯಾತ್ರಾಸ್ಥಳಗಳ ಪ್ರಶ್ನೆ ಎಲ್ಲವೂ ಭಾರತದ ಮುಸ್ಲಿಮರ ಮೇಲೆ ದೊಡ್ಡ ಪರಿಣಾಮ ಮಾಡಿ ಅವರಲ್ಲಿ ಬ್ರಿಟಿಷರ ಮೇಲೆ ವಿರೋಧ ಭಾವನೆಗೆ ಪುಟಕೊಟ್ಟವು. ಎಚ್ಚತ್ತ ಈ ಮುಸ್ಲಿಂ ಜನತೆಯ ಉತ್ಸಾಹಕ್ಕೆ ಪ್ರತಿಗಾಮಿ ಮನೋಭಾವನೆಯ ಲೀಗಿನಿಂದ ಯಾವ ಮಾರ್ಗದರ್ಶಿತ್ವವೂ ದೊರೆಯಲಿಲ್ಲ. ಲೀಗಿನಲ್ಲಿ ನರಗಳ ದೌರ್ಬಲ್ಯ ಒದಗಿದಂತಾಗಿ ಸಾಯುವುದರಲ್ಲಿತ್ತು. ಕಾಂಗ್ರೆಸ್ಸಿಗೆ ಸಮೀಪವರ್ತಿಯಾಗಿ ಖಿಲಾಫತ್ ಸಮಿತಿ ಎಂಬ ಹೊಸ ಮುಸ್ಲಿಂ ಸಂಸ್ಥೆಯೊಂದು ಹುಟ್ಟಿತು. ಮುಸ್ಲಿಮರು ಬಹು ಸಂಖ್ಯಾತರಾಗಿ ಕಾಂಗ್ರೆಸ್ಸಿಗೆ ಸೇರಿ ದುಡಿದರು. ೧೯೨೧-೨೩ ರ ಮೊದಲನೆಯ ಅಸಹಕಾರ ಚಳುವಳಿಯ ನಂತರ ತುರ್ಕಿ ಯಲ್ಲಿ ಖಲೀಫನ ಅಧಿಕಾರಕ್ಕೆ ಚ್ಯುತಿ ಬಂದ ಕಾರಣ, ಖಲೀಫನ ಸಮಿತಿಗೆ ಇದ್ದ ಧೈಯವೂ ಮಾಯವಾಗಿ ಅದೂ ಮುಕ್ತಾಯಗೊಂಡಿತು. ಮುಸ್ಲಿಂ ಜನತೆಯು ರಾಜಕೀಯದಿಂದ ದೂರ ಸರಿಯಿತು. ಆದರೆ ಕೆಲವು ಮಧ್ಯಮ ವರ್ಗದ ಮುಸ್ಲಿಮರು ಮಾತ್ರ ಕಾಂಗ್ರೆಸ್‌ನಲ್ಲೇ ಉಳಿದು ಕೆಲಸ ಮಾಡಿದರು.
ಈ ಕಾಲದಲ್ಲಿ ಅನೇಕ ಸಣ್ಣ ಸಣ್ಣ ಮುಸ್ಲಿಂ ಸಂಸ್ಥೆಗಳು ಹುಟ್ಟಿಕೊಂಡು ಕೆಲವು ವೇಳೆ ತಮ್ಮ ತಮ್ಮಲ್ಲಿ ಕಚ್ಚಾಡುತ್ತಿದ್ದವು. ಅವಕ್ಕೆ ಜನತೆಯ ಬೆಂಬಲವಾಗಲಿ, ಬ್ರಿಟಿಷರು ಕೊಟ್ಟ ಪ್ರಶಸ್ತಿ ಬಿಟ್ಟರೆ ಬೇರೆಯಾವ ರಾಜಕೀಯ ಪ್ರಾಮುಖ್ಯತೆಯಾಗಲಿ ಇರಲಿಲ್ಲ. ಶಾಸನ ಸಭೆಗಳಲ್ಲಿ ಮತ್ತು ಸರಕಾರದ ನೌಕರಿಗಳಲ್ಲಿ ಮುಸ್ಲಿಮರಿಗೆ ವಿಶೇಷ ಪ್ರಾತಿನಿಧ್ಯ ಮತ್ತು ರಕ್ಷಣೆ ಕೇಳುವುದು ಒಂದು ಕೆಲಸವಾಗಿತ್ತು. ಈ ವಿಷಯದಲ್ಲಿ ಮುಸ್ಲಿಮರ ಒಂದು ದೃಷ್ಟಿಯನ್ನೇನೋ ಅವರು ಪ್ರತಿನಿಧಿಸಿದರು. ಏಕೆಂದರೆ ಹಿಂದೂಗಳು ವಿದ್ಯಾಭ್ಯಾಸ, ಅಧಿಕಾರವರ್ಗ, ಕೈಗಾರಿಕೆ ಮತ್ತು ಸಂಖ್ಯಾ ಪ್ರಮಾಣದಲ್ಲಿ ಬಹುಸಂಖ್ಯಾತರಿದ್ದು ಪ್ರಾಬಲ್ಯ ಪಡೆದಿದ್ದ ಕಾರಣ ಕೆಲ ಕೆಲವು ಮುಸ್ಲಿಮರಲ್ಲಿ ಭಯವೂ ಅಸಮಾಧಾನವೂ ಹುಟ್ಟಿತು.