ಯಾರಿಗೂ ಜವಾಬ್ದಾರಿ ಇಲ್ಲದ ನಿರಂಕುಶ ಆಡಳಿತ; ಪ್ರಜೆಗಳು ಆರಿಸಿದುದಲ್ಲ. ಪ್ರಜೆಗಳಿಗಾಗಲಿ, ಪ್ರಾಂತಗಳಿಗಾಗಲಿ ಹೊಣೆಯಲ್ಲ. ಅದು ಬ್ರಿಟಿಷ್ ಸರಕಾರದ ಕೈಗೊಂಬೆ. ಪ್ರಾಂತ ಸರಕಾರಗಳ ಮತ್ತು ಪ್ರಾಂತಶಾಸನ ಸಭೆಗಳ ಅಧಿಕಾರ ಮೊಟಕು ಮಾಡಿ ಕೇಂದ್ರ ಸರಕಾರದ ಅಧಿಕಾರ ಹೆಚ್ಚಿಸುವುದೆಂದರೆ ಪ್ರಜಾಸತ್ತಾತ್ಮಕ ಪ್ರಾಂತ ಸರಕಾರಗಳನ್ನು ಇನ್ನೂ ದುರ್ಬಲಗೊಳಿಸುವಂತೆ, ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿ ಪೆಟ್ಟು ಇಟ್ಟಂತೆ. ಇದರಿಂದ ದೇಶದಲ್ಲಿ ಬಹಳ ಅಸಮಾಧಾನ ಹೆಚ್ಚಿತು. ಕಾಂಗ್ರೆಸ್ ಸರಕಾರಗಳನ್ನು ರಚಿಸುವಾಗ ಕೊಟ್ಟ ವಚನ ಮುರಿಯುವ ಪ್ರಯತ್ನ ಕಂಡಿತು. ಭಾರತದ ಪ್ರತಿನಿಧಿಗಳ ಅಭಿಮತ ಕೇಳದೆ ಭಾರತದ ಮೇಲೆ ಯುದ್ಧದ ಹೊರೆ ಹೊರಸುವ ಪ್ರಯತ್ನವೆಂದು ಸ್ಪಷ್ಟವಾಯಿತು.
ಕಾಂಗ್ರೆಸ್ ಕಾರ್ಯಸಮಿತಿ ಈ ನೀತಿಯನ್ನು ಪ್ರಬಲ ವಿರೋಧಿಸಿತು. ಕಾಂಗ್ರೆಸ್ಸಿನ ಮತ್ತು ಕೇಂದ್ರ ಶಾಸನಸಭೆಯ ಧೋರಣೆಯನ್ನು ಸರಕಾರವು ಕಸಕ್ಕಿಂತ ಕಡಮೆ ಮಾಡುತ್ತಿದೆ ಎಂಬುದು ಸ್ಪಷ್ಟವಾಯಿತು. ಭಾರತದ ಜನತೆಯ ಒಪ್ಪಿಗೆ ಕೈಕೊಂಡ ಈ ಎಲ್ಲ ಪರಿಣಾಮಕಾರಕ ಬಲಾತ್ಕಾರದ ಕಾರ್ಯಾಚರಣೆಗೆ ಭಾರತವು ಒಪ್ಪುವುದಿಲ್ಲವೆಂದು ತಿಳಿಸಿ, ಅದನ್ನು ಪ್ರತಿಭಟಿಸಬೇಕೆಂದು ತೀರ್ಮಾನಿಸಿತು. ಪುನಃ ೧೯೩೯ನೆಯ ಆಗಸ್ಟ್ ತಿಂಗಳಲ್ಲಿ "ಪ್ರಪಂಚದ ಈ ಉತ್ಕಟ ಪರಿಸ್ಥಿತಿಯಲ್ಲಿ ಕಾರ್ಯ ಸಮಿತಿಯ ಸಹಾನುಭೂತಿ ಎಲ್ಲವೂ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಪರವಿರುವ ರಾಷ್ಟ್ರಗಳ ಕಡೆ ಇದೆ; ಕಾಂಗ್ರೆಸ್ಸು ಯೂರೋಪಿನಲ್ಲಿ ಆಫ್ರಿಕದಲ್ಲಿ, ಏಷ್ಯದ ದೂರಪ್ರಾಚ್ಯ ದೇಶಗಳಲ್ಲಿ ಫ್ಯಾಸಿಸ್ಟ್ ಆಕ್ರಮಣ ನೀತಿಯನ್ನೂ ಮತ್ತು ಜೆಕೊಸ್ಲೊವೇಕಿಯ ಮತ್ತು ಸ್ಪೇನ್ ನಲ್ಲಿ ಬ್ರಿಟಿಷ್ ಸಾಮ್ರಾಜ್ಯವು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವನ್ನೂ ತೀವ್ರ ಖಂಡಿಸಿ ಇದೆ” ಎಂದೂ “ಬ್ರಿಟಿಷ್ ಸರಕಾರದ ಹಿಂದಿನ ಮತ್ತು ಇಂದಿನ ನೀತಿಯಿಂದ ಬ್ರಿಟಿಷ್ ಸರಕಾರವು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರದ ಪರ ಇಲ್ಲವೆಂದೂ, ಯಾವ ಕಾಲದಲ್ಲಾದರು ಅವುಗಳನ್ನು ಕೈಬಿಡಲು ಸಿದ್ಧವಿದೆ ಎಂದೂ ಸ್ಪಷ್ಟವಾಗುತ್ತದೆ; ಇಂತಹ ಸರಕಾರದೊಂದಿಗೆ ಸಹಕರಿಸಲು ಭಾರತಕ್ಕೆ ಸಾಧ್ಯವಿಲ್ಲ; ಯಾವ ಸಮಯದಲ್ಲಾದರೂ ಕೈ ಬಿಟ್ಟು ನಮಗಿಲ್ಲದ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವಕ್ಕಾಗಿ ಭಾರತದ ಸರಸ್ವವನ್ನೂ ಬಲಿದಾನ ಮಾಡಿರೆಂದು ಹೇಳಲು ಇಂಡಿಯ ಸರಕಾರಕ್ಕೆ ಹಕ್ಕಿಲ್ಲ:” ಎಂದೂ ಕಾಂಗ್ರೆಸ್ ಕಾರ್ಯಸಮಿತಿಯು ನಿರ್ಣಯಿಸಿತು. ಈ ವಿರೋಧ ಪ್ರದರ್ಶನದ ಮೊದಲನೆಯ ಹಂತವಾಗಿ ಕೇಂದ್ರ ಶಾಸನ ಸಭೆಯ ಕಾಂಗ್ರೆಸ್ ಸದಸ್ಯರು ಯಾರೂ ಶಾಸನ ಸಭೆಗೆ ಹೋಗಲಾಗದೆಂದು ನಿರೂಪ ಕೊಟ್ಟಿತು.
ಈ ನಿರ್ಣಯ ಆದುದು ಯೂರೋಪಿನಲ್ಲಿ ಯುದ್ಧ ಆರಂಭವಾಗುವ ಮೂರು ವಾರಗಳ ಮುಂಚೆ. ದೊಡ್ಡ ವಿಷಯಗಳಲ್ಲಿ ಅಲ್ಲ ವಿಷಯಗಳಲ್ಲಿ ಸಹ ಬ್ರಿಟಿಷ್ ಸರಕಾರವೂ, ಅದರ ಉತ್ಸವ ಮೂರ್ತಿಯಂತಿದ್ದ ಇಂಡಿಯಾ ಸರಕಾರವೂ ಭಾರತದ ಜನಾಭಿಪ್ರಾಯವನ್ನು ಪೂರ್ಣ ಉಪೇಕ್ಷೆ ಮಾಡಲು ನಿರ್ಧರಿಸಿದಂತೆ ಕಂಡಿತು. ಪ್ರಾಂತಗಳ ಗೌರರುಗಳೂ, ಸಿವಿಲ್ ಸರ್ವಿಸ್ ಅಧಿಕಾರಿಗಳೂ ಕಾಂಗ್ರೆಸ್ ಸರಕಾರಗಳೊಡನೆ ಹೆಚ್ಚಿನ ಅಸಹಕಾರ ಭಾವನೆ ತೋರಿದರು. ಕಾಂಗ್ರೆಸ್ ಸರಕಾರಗಳನ್ನು ನಡೆಸುವುದೇ ಬಹಳ ಕಷ್ಟವಾಗುತ್ತ ಬಂದು ಬಹು ಜನರಲ್ಲಿ ಸಂಶಯವೂ ಒಂದು ಬಗೆಯ ಉದ್ವೇಗವೂ ಕಂಡು ಬರುತ್ತಿತ್ತು. ಹಿಂದೆ ೧೯೧೪ ರಲ್ಲಿ ಮಾಡಿದಂತೆ ಪ್ರಾಂತ ಸರಕಾರಗಳನ್ನೂ ಜನಾಭಿಪ್ರಾಯವನ್ನೂ ನಿರ್ಲಕ್ಷಿಸಿ, ಈ ಮಧ್ಯೆ ನಡೆದುದನ್ನೆಲ್ಲ ಮರೆತು ಭಾರತವನ್ನು ಬಲಾತ್ಕಾರದಿಂದ ಯುದ್ಧಕ್ಕೆ ತಳ್ಳಿ ಯುದ್ಧದ ನೆಪದಲ್ಲಿ ಇದ್ದ ಅಲ್ಪ ಸ್ವಲ್ಪ ಸ್ವಾತಂತ್ರವನ್ನೂ ಅಪಹರಿಸಿ ಭಾರತದ ಸಂಪತ್ತನ್ನು ನಿರಾತಂಕವಾಗಿ ಬ್ರಿಟಿಷ್ ಸರಕಾರ ಕೊಳ್ಳೆ ಹೊಡೆಯುತ್ತದೆ ಎಂಬ ಭಯ ಬಲಗೊಂಡಿತು.
ಆದರೆ ಈ ಇಪ್ಪತ್ತೈದು ವರ್ಷಗಳ ಅನೇಕ ಘಟನೆಗಳಿಂದ ಜನರ ಮನಸ್ಸೇ ಬೇರೆಯಾಗಿತ್ತು. ಒಂದು ಮಹಾರಾಷ್ಟ್ರವಾದ ಭಾರತವನ್ನು ತಮ್ಮ ಆಸ್ತಿಯಂತೆ ಕಾಣುವುದೂ, ಭಾರತೀಯರನ್ನೂ ಕಡೆಗಣಿನಿಂದ ನೋಡುವುದೂ ಭಾರತೀಯರಿಗೆ ಅಸಹನೀಯವಾಯಿತು. ಕಳೆದ ಇಪ್ಪತ್ತು ವರ್ಷಗಳ ಹೋರಾಟ ಮತ್ತು ಅನುಭವಿಸಿದ ಸಂಕಟ ಎಲ್ಲವೂ ನಿರರ್ಥಕವೆ? ಈ ಅಸಮಾನ ಅಗೌರವಗಳಿಗೆ ಭಾರತೀಯರು