ಕುರಿಗಳಂತೆ ತಲೆ ತಗ್ಗಿಸಿ ತಮ್ಮ ಮಾತೃಭೂಮಿಗೆ ಅಪಮಾನಮಾಡುವುದೆ? ದೌರ್ಜನ್ಯ ಎದುರಿಸಿ ಅಪಮಾನಕ್ಕೆ ತಲೆ ಬಾಗದಿರುವುದನ್ನು ಅನೇಕರು ಕಲಿತಿದ್ದರು. ಆ ಕೆಚ್ಚೆದೆಯ ಹೋರಾಟದ ಪರಿಣಾಮಗಳನ್ನೆಲ್ಲ ಸಂತೋಷದಿಂದ ಸ್ವಾಗತಿಸಲು ಸಿದ್ಧರಿದ್ದರು.
ಯುವಕರನೇಕರಿಗೆ ರಾಷ್ಟ್ರೀಯ ಚಳವಳಿಯ ಕಷ್ಟ ನಷ್ಟ ಏನೆಂದು ಸ್ವತಃ ಅನುಭವವಿರಲಿಲ್ಲ. ೧೯೨೦ರಿಂದ ೧೯೩೦ರವರೆಗೆ ಮತ್ತು ಅನಂತರ ನಡೆದ ಅಸಹಕಾರ ಚಳುವಳಿಗಳು ಅವರಿಗೆ ಹಿಂದಿನ ಕಥೆಯಾಗಿತ್ತೆ ಹೊರತು ಆಗುಹೋಗುಗಳ ಅರಿವು ಅವರಿಗಿರಲಿಲ್ಲ. ಅನುಭವದ ಕುಲುಮೆಯಲ್ಲಿ ಸಂಕಟದಲ್ಲಿ ಅವರ ಸತ್ವ ಪರೀಕ್ಷೆಯಾಗಿರಲಿಲ್ಲ. ಆದರೂ ಅವರು ಲಘು ಮಾತನಾಡತೊಡಗಿದರು. ಹಿರಿಯರನ್ನು ದುರ್ಬಲರು, ರಾಜಿಮನೋಭಾವದವರು ಎಂದು ಹಳಿಯ ತೊಡಗಿದರು. ಕಾರ್ಯಸಾಧನೆಗಿಂತ ಕಟು ಮಾತಿಗೆ ಹೆಚ್ಚು ಬೆಲೆ ಕೊಡಲಾರಂಭಿಸಿದರು. ವೈಯಕ್ತಿಕ ನಾಯಕತ್ವದ ಪ್ರಶಸ್ತಿಗಾಗಿ, ರಾಜಕೀಯ ಅಥವ ಆರ್ಥಿಕ ತತ್ವಗಳಿಗಾಗಿ ಪರಸ್ಪರ ಜಗಳ ಹೂಡಲಾರಂಭಿಸಿದರು. ಮೂಲ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಪ್ರಪಂಚದ ಸಮಸ್ಯೆಗಳ ಚರ್ಚೆ ಮಾಡುತ್ತಿದ್ದರು. ಅವರ ಭಾವನೆಯಲ್ಲಿ ಪರಿಪಕ್ವತೆ ಇರಲಿಲ್ಲ; ಮಾತಿನಲ್ಲಿ ತೂಕವಿರಲಿಲ್ಲ. ಅವರಲ್ಲಿ ಅನೇಕರು ಉತ್ತಮ ಯೋಧರಿದ್ದರು, ಶ್ರೇಷ್ಠ ಆದರ್ಶಗಳಿಗಾಗಿ ಅವರಲ್ಲಿ ಅನುಪಮ ಉತ್ಸಾಹವಿತ್ತು; ಆದರೂ ಅವರ ಮೇಲಿನ ಒಟ್ಟು ಪರಿಣಾಮ ನಿರಾಶಾದಾಯಕವೂ ಅಧೈರ್ಯಯುತವೂ ಇತ್ತು. ಪ್ರಾಯಶಃ ಇದು ತಾತ್ಕಾಲಿಕವಿದ್ದು ಮುಂದೆ ಸರಿಹೋಗಬಹುದೋ ಏನೋ ಅಥವ ಇತ್ತೀಚಿನ ಕಹಿ ಅನುಭವಗಳಿಂದ ಈಗ ಸರಿಹೋಗಿದ್ದಾರೋ ಏನೋ.
ಬೇರೆ ವಿಷಯದಲ್ಲಿ ಭಿನ್ನಾಭಿಪ್ರಾಯ ಏನೆ ಇರಲಿ ಭಾರತದ ವಿಷಯದಲ್ಲಿದ್ದ ಬ್ರಿಟಿಷರ ನೀತಿಯನ್ನು ರಾಷ್ಟ್ರೀಯ ಭಾವನೆಯ ಈ ಎಲ್ಲ ಪಕ್ಷಗಳೂ ಈ ವಿಷಮ ಪರಿಸ್ಥಿತಿಯಲ್ಲಿ ಏಕಕಂಠದಿಂದ ವಿರೋಧಿಸಿದವು. ಎಲ್ಲರೂ ಸಿಟ್ಟಿಗೆದ್ದು ಕಾಂಗ್ರೆಸ್ಸು ಅದನ್ನು ಪ್ರತಿಭಟಿಸಬೇಕೆಂದರು. ಆತ್ಮ ಗೌರವದಿಂದ ಎಚ್ಚೆತ್ತ ಭಾರ ತೀಯ ರಾಷ್ಟ್ರೀಯತ್ವವು ಈ ಅಪಮಾನಕ್ಕೆ ತಲೆಬಾಗಲು ಒಪ್ಪಲಿಲ್ಲ. ಉಳಿದ ಎಲ್ಲ ವಿಚಾರಗಳೂ ಹಿಂದೆ ಬಿದ್ದವು.
ಯುರೋಪಿನಲ್ಲಿ ಯುದ್ಧ ಘೋಷಣೆಯಾದೊಡನೆ ಭಾರತದ ವೈಸರಾಯ್ ಭಾರತವನ್ನೂ ಯುದ್ಧಕ್ಕೆ ತಳ್ಳಿದನು. ಅಸಹನೀಯ ಸಾಮ್ರಾಜ್ಯ ಪದ್ಧತಿಯ ಪ್ರತಿನಿಧಿಯಾಗಿ ಒಬ್ಬ ಪರದೇಶದ ವ್ಯಕ್ತಿ ಒಂದು ಮಾತು ಸಹ ಕೇಳದೆ ನಲವತ್ತು ಕೋಟಿ ಜನರನ್ನು ಯುದ್ಧಕ್ಕೆ ನೂಕಿದ. ಈ ರೀತಿ ಕೋಟ್ಯಂತರ ಜನರ ಅದೃಷ್ಟ ನಿರ್ಧರಿಸಬಲ್ಲ ಆ ಪದ್ದತಿಯಲ್ಲಿ ಏನೋ ಒಂದು ಅಸ್ಥಿಗತ ರೋಗವಿರಬೇಕು, ಅದು ಕೊಳೆತು ನಾರುತ್ತಿರಬೇಕು. ಇತರ ಡೊಮಿನಿಯನ್‌ಗಳಲ್ಲಿ ಜನರ ಪ್ರತಿನಿಧಿಗಳು ಸಾಧಕ ಬಾಧಕಗಳನ್ನು ಪೂರ್ಣ ಚರ್ಚೆಮಾಡಿ ತಮ್ಮದೇ ಒಂದು ತೀರ್ಮಾನಕ್ಕೆ ಬಂದರು. ಭಾರತದಲ್ಲಿ ಮಾತ್ರ ಅದು ಸಾಧ್ಯವಿರಲಿಲ್ಲ. ಇದರಿಂದ ಭಾರತಕ್ಕೆ ಅಸಹನೀಯ ಸಂಕಟವಾಯಿತು.
೩. ಯುದ್ಧಕ್ಕೆ ವಿರೋಧ
ಯುರೋಪಿನಲ್ಲಿ ಯುದ್ಧ ಆರಂಭವಾದಾಗ ನಾನು ಚುಂಕಿಂಗ್‌ನಲ್ಲಿ ಇದ್ದೆ. ಕಾಂಗ್ರೆಸ್ ಅಧ್ಯಕ್ಷರು ಕೇಬಲ್ ಕಳಿಸಿದ್ದರಿಂದ ಒಡನೆ ನಾನು ಹಿಂದಿರುಗಿದೆ. ನಾನು ಹಿಂದಿರುಗುತ್ತಿರುವಾಗಲೇ ಕಾಂಗ್ರೆಸ್ ಕಾರ್ಯ ಸಮಿತಿಯು ಸಭೆ ಸೇರಿತ್ತು; ಈ ಸಭೆಗೆ ಬರಲು ಜನಾಬ್ ಜಿನ್ನಾಗೆ ಆಹ್ವಾನ ಕೊಟ್ಟೆವು. ಬರಲು ಸಾಧ್ಯವಿಲ್ಲವೆಂದು ತಿಳಿಸಿದನು. ವೈಸರಾಯ್ ಭಾರತವನ್ನು ಯುದ್ಧಕ್ಕೆ ತಳ್ಳಿದ್ದು ಮಾತ್ರವಲ್ಲದೆ ಅನೇಕ ವಿಶೇಷ ಶಾಸನಗಳನ್ನು ಮಾಡಿದ್ದನು; ಮತ್ತು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಇಂಡಿಯಾ ಶಾಸನದ ತಿದ್ದುಪಡಿ ಸಹ ಆಗಿತ್ತು. ಈ ಎಲ್ಲ ಶಾಸನಗಳಿಂದ ಪ್ರಾಂತ ಸರಕಾರಗಳ ಅಧಿಕಾರ ಮತ್ತು ಕಾರ್ಯವಿಸ್ತಾರ ಸಂಕುಚಿತಗೊಂಡಿತು. ಪ್ರಜಾಪ್ರತಿನಿಧಿಗಳ ಅಭಿಪ್ರಾಯ ಪಡೆಯದೆ ಈ ರೀತಿ ವರ್ತಿಸಿದ್ದಕ್ಕೆ ಉಗ್ರ ಪ್ರತಿ ಭಟನೆ ಎದ್ದಿತು. ತಾವೇ ಮೇಲಿಂದ ಮೇಲೆ ಕೆಟ್ಟ ವಾಗ್ದಾನ ಮತ್ತು ಆಶ್ವಾಸನಗಳನ್ನೇ ಪೂರ್ಣ ಅಲಕ್ಷಿಸಿ ಮುರಿದಿದ್ದರು.