ಏನು; ಮತ್ತು ಅವು ಭಾರತಕ್ಕೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತವೆ ; ಮತ್ತು ಈಗ ಮುಂದೆ ಹೇಗೆ ಅವು ಆಚರಣೆಗೆ ಬರುತ್ತವೆ; ಭಾರತದಲ್ಲಿ ಸಾಮ್ರಾಜ್ಯತ್ವ ತೊರೆದು, ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸಿ ಭಾರತದ ಜನರ ಅಭಿಪ್ರಾಯದಂತೆ ತನ್ನ ಕಾರ್ಯನೀತಿ ರೂಪಿಸಿಕೊಳ್ಳಲು ಭಾರತಕ್ಕೆ ಅವಕಾಶ ಇದೆಯೆ? ತಿಳಿಸಬೇಕೆಂದೆವು. ಯಾವ ಘೋಷಣೆಗೇ ಆಗಲಿ ಇಂದಿನ ಅದರ ಉಪಯುಕ್ತತೆಯೇ ಅದರ ನಿಜವಾದ ಒರೆಗಲ್ಲು. ಇಂದಿನ ನೀತಿಯೇ ನಾಳಿನ ಬಾಳಿಗೆ ದಾರಿ, ಈ ಘೋರ ಯುದ್ಧವು ಸಾಮ್ರಾಜ್ಯ ನೀತಿಯ ಭಾವನೆಯಿಂದಲೇ ನಡೆಯುವುದಾದರೆ, ಮತ್ತು ಯಾವ ನೀತಿಯು ಈ ಮಹಾಯುದ್ಧಕ್ಕೆ ಮತ್ತು ಮಾನವ ಜನಾಂಗದ ಪಾಶವೀವೃತ್ತಿಗೆ ಮೂಲ ಕಾರಣವಾಗಿದೆಯೋ ಆ ನೀತಿಯ ಪರಿಪೋಷಣೆಗೇ ನಡೆಯುವುದಾದರೆ ಅದಕ್ಕಿಂತ ಮಹಾದುರಂತ ಮತ್ತೊಂದಿಲ್ಲ.” ಎಂದು ನಿರ್ಣಯಮಾಡಿತು.
ಬಹಳ ದೀರ್ಘಕಾಲ ಚರ್ಚೆಮಾಡಿ ಆಲೋಚಿಸಿ ಹೊರಗೆಡಹಿದ ಈ ನಿರ್ಣಯದಲ್ಲಿ ಇಂಗ್ಲೆಂಡಿಗೂ ಭಾರತಕ್ಕೂ ಮಧ್ಯೆ ಇದ್ದ ಅಡ್ಡಗೋಡೆಗಳನ್ನು ಕಿತ್ತೊಗೆದು, ಕಳೆದ ಒಂದೂವರೆ ಶತಮಾನಗಳ ವಿಷಮಯ ವಾತಾವರಣ ನಾಶಮಾಡಿ, ಸ್ವಾತಂತ್ರ ದಾಹದ ತೀವ್ರಾಸಕ್ತಿ ತೃಪ್ತಿಗೊಳಿಸಿ, ಜನರ ಉತ್ಸಾಹ ಪೂರಿತ ಬೆಂಬಲದಿಂದ ಪ್ರಪಂಚದ ಈ ಹೋರಾಟದಲ್ಲಿ ಭಾಗವಹಿಸಲು ಯಾವುದಾದರೂ ಒಂದು ಸಂಧಾನ ಮಾರ್ಗ ಕಂಡುಹಿಡಿಯಲು ಪ್ರಯತ್ನ ಮಾಡಲಾಗಿತ್ತು. ಭಾರತದ ಸ್ವಾತಂತ್ರದ ಬೇಡಿಕೆಯಲ್ಲಿ ಹೊಸದು ಏನೂ ಇರಲಿಲ್ಲ, ಯುದ್ಧ ಅಥವ ಅಂತರರಾಷ್ಟ್ರೀಯ ಬಿಕ್ಕಟ್ಟಿನಿಂದ ಅದು ಆರಂಭವಾದದ್ದೂ ಅಲ್ಲ. ಅನೇಕ ತಲೆಮಾರುಗಳಿಂದ ಆ ಸ್ವಾತಂತ್ರ್ಯದಾಹ ನಮ್ಮ ಎಲ್ಲ ಕಾರ್ಯನೀತಿ ಮತ್ತು ಭಾವನೆಗಳ ತಳಹದಿಯಾಗಿತ್ತು. ಭಾರತಕ್ಕೆ ಸ್ವಾತಂತ್ರ ಕೊಡುತ್ತೇವೆಂದು ಹೇಳಿ, ಯುದ್ಧದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ತಾತ್ಕಾಲಿಕ ಪರಿಸ್ಥಿತಿಗನುಗುಣವಾಗಿ ಆ ಬೇಡಿಕೆ ಪೂರೈಸಲು ಯಾವ ಕಷ್ಟವೂ ಇರಲಿಲ್ಲ. ಯುದ್ಧದ ಆವಶ್ಯಕತೆಗಳಿಗೇ ಅದು ಅತ್ಯಗತ್ಯವಿತ್ತು. ಭಾರತದ ಸ್ವಾತಂತ್ರ ಒಪ್ಪಲು ಇಂಗ್ಲೆಂಡಿಗೆ ಇಷ್ಟವಿದ್ದು, ಮನಸ್ಸು ಮಾಡಿದ್ದರೆ ದೊಡ್ಡ ತೊಂದರೆ ಯಾವುದೂ ಇರಲಿಲ್ಲ. ಉಳಿದುದೆಲ್ಲ ಪರಸ್ಪರ ಅನು ಸರಣೆಯಿಂದ ಸರಿಗೂಡಿಸಲು ಸಾಧ್ಯವಿತ್ತು. ಪ್ರತಿಯೊಂದು ಪ್ರಾಂತದಲ್ಲೂ ಪ್ರಾಂತ ಸರಕಾರವಿತ್ತು. ಕೇಂದ್ರದಲ್ಲಿ ಯುದ್ಧಕಾಲದ ಒಂದು ಜನತಾ ಸರಕಾರ ರಚನೆಮಾಡಲು ಬಹಳ ಸುಲಭವಿತ್ತು. ಜನರ ಬೆಂಬಲದಿಂದ, ದಕ್ಷತೆಯಿಂದ ಯುದ್ಧ ಸಿದ್ಧತೆಮಾಡಿ, ಸೈನ್ಯ ಪಡೆಗಳೊಂದಿಗೆ ಪೂರ್ಣ ಸಹಕರಿಸಿ ಒಂದು ಕಡೆ ಜನರಿಗೂ ಮತ್ತು ಪ್ರಾಂತ್ರ, ಸರಕಾರಗಳಿಗೂ, ಇನ್ನೊಂದು ಕಡೆ ಬ್ರಿಟಿಷ್ ಸರಕಾರಕ್ಕೂ ಮಧ್ಯವರ್ತಿಯಾಗಿ ನಿಂತು ಕೆಲಸಮಾಡಲು ಕೇಂದ್ರ ಸರಕಾರಕ್ಕೆ ಸಾಧ್ಯವಿತ್ತು. ಇತರ .ಘಟನಾತ್ಮಕ ಸಮಸ್ಯೆಗಳ ತೀರ್ಮಾನ ಮುಂಚೆಯೇ ಅಗತ್ಯವಿದ್ದರೂ ಯುದ್ಧ ಮುಗಿಯುವವರೆಗೆ ಮುಂದೆ ಹಾಕಬಹುದಿತ್ತು ಯುದ್ಧಾನಂತರ ಪ್ರಜೆಗಳಿಂದ ಚುನಾಯಿತರಾದ ಸದಸ್ಯರನ್ನು ಸಭೆಸೇರಿಸಿ ಒಂದು ಶಾಶ್ವತ ಸಂವಿಧಾನ ರಚಿಸಿ ಪರಸ್ಪರ ಹಿತದೃಷ್ಟಿಯಿಂದ ಇಂಗ್ಲೆಂಡಿನೊಡನೆ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಿತ್ತು.
ನಮ್ಮಲ್ಲಿ ಅನೇಕರಿಗೆ ಅಂತರರಾಷ್ಟ್ರೀಯ ಸಮಸ್ಯೆಗಳ ಪರಿಣಾಮ ಏನೆಂದು ಅರ್ಥಮಾಡಿಕೊಳ್ಳಲು ಶಕ್ತಿಯೇ ಇಲ್ಲದಿದ್ದಾಗ, ಇತ್ತೀಚಿನ ಬ್ರಿಟಿಷ್ ನೀತಿಗೆ ಉಗ್ರ ಪ್ರತಿಭಟನೆ ತೋರಿಸುತ್ತಿದ್ದಾಗ ಈ ಸಂಧಾನ ಸೂಚನೆ ಮಾಡುವುದು ಕಾಂಗ್ರೆಸ್ ಕಾರ್ಯಸಮಿತಿಗೆ ಸುಲಭದ ಕೆಲಸವಾಗಿರಲಿಲ್ಲ. ಬಹಳ ದಿನಗಳಿಂದ ಎರಡೂ ಕಡೆ ಬೆಳೆದು ಬಲಿತ ಅಪನಂಬಿಕೆ ಮತ್ತು ಸಂಶಯಗಳನ್ನು ನಿವಾರಿಸಲು ಸುಲಭದ ಮಂತ್ರಶಕ್ತಿ ಯಾವುದೂ ಇಲ್ಲವೆಂದು ನಮಗೆ ತಿಳಿದಿತ್ತು. ಆದರೂ ವಿಷಮ ಪರಿಸ್ಥಿತಿಯ ಒತ್ತಡದಿಂದ ಇಂಗ್ಲೆಂಡಿನ ನಾಯಕರಿಗೆ ಜ್ಞಾನೋದಯವಾಗಿ ತಮ್ಮ ಸಾಮ್ರಾಜ್ಯ ನೀತಿಯ ಡೊಂಕುದಾರಿ ಬಿಟ್ಟು ದೂರಾಲೋಚನೆಯಿಂದ ನಮ್ಮ ಸ್ನೇಹ ಹಸ್ತ ಹಿಡಿದು ಇಂಗ್ಲೆಂಡ್ ಮತ್ತು ಇಂಡಿಯ ಮಧ್ಯೆ ಇದ್ದ ದೀರ್ಘಕಾಲದ ಮನಸ್ತಾಪವನ್ನು ಮುಕ್ತಾಯ ಮಾಡಿ ಭಾರತದ ಉತ್ಸಾಹವನ್ನೂ ಸಂಪತ್ತನ್ನೂ ಯುದ್ಧಕ್ಕಾಗಿ ಅಣಿಗೊಳಿಸಿಕೊಳ್ಳುವರೆಂದು ಆಶಿಸಿದೆವು.
ಆದರೆ ಅದೆಲ್ಲಿ ಸಾಧ್ಯ? ನಾವು ಕೇಳಿದ್ದಕ್ಕೆಲ್ಲ ನಕಾರವೇ ಉತ್ತರವಾಯಿತು. ಸ್ನೇಹಿತರು,