ಪುಟ:ಭಾರತ ದರ್ಶನ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೧೭

ಎಂದು ಭಾವಿಸಬಹುದು. ಈ ವಿಷಯದಲ್ಲಿ ಬೇರೆ ಬೇರೆ ಪಂಗಡಗಳಿಗೂ ಪಕ್ಷಗಳಿಗೂ ಯಾವ ಭಿನ್ನಾಭಿಪ್ರಾಯವೂ ಇರುವುದಿಲ್ಲ. ವ್ಯತ್ಯಾಸವೆಲ್ಲ ಇರುವುದು ಭಾರತದ ಜನತೆ ಮತ್ತು ಬ್ರಿಟಿಷ್ ಸರಕಾರದ ಮಧ್ಯೆ, ಭಾರತೀಯರಲ್ಲಿ ಇರುವ ವ್ಯತ್ಯಾಸವೆಲ್ಲ ಮುಂದೆ ಭಾರತದ ರಾಜಕೀಯ ಭವಿಷ್ಯ ಏನೆಂಬುದರಲ್ಲಿ, ಭಾರತದ ಸಂರಕ್ಷಣೆಯೇ ಮುಖ್ಯವಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಆದಷ್ಟು ಒಮ್ಮತ ಇರಬೇಕೆಂಬ ದೃಷ್ಟಿಯಿಂದ ಆ ಪ್ರಶ್ನೆ ಮುಂದುವರಿಸಲು ನಾವು ಸಿದ್ಧರಿದ್ದೇವೆ. ಭಾರತದಲ್ಲಿ ಒಮ್ಮತ ಇರುವಾಗ ಸಹ ಸ್ವತಂತ್ರ ರಾಷ್ಟ್ರೀಯ ಸರಕಾರ ಸ್ಥಾಪನೆಗೆ ಮತ್ತು ಭಾರತದ ಜನತೆ ಮತ್ತು ಇಂದು ಪ್ರಪಂಚದಲ್ಲಿ ಸಂಕಟ ಮತ್ತು ಸಾವಿನ ದವಡೆಯಲ್ಲಿ ಸಿಕ್ಕಿ ನರಳುತ್ತಿರುವ ಕೋಟ್ಯಂತರ ಜನರ ಸೇವೆಗೆ ಭಾರತಕ್ಕೆ ಅವಕಾಶಕೊಡದೆ ಬ್ರಿಟಿಷ್ ಸರಕಾರ ಅಡ್ಡ ಬಂದರೆ ಅದಕ್ಕಿಂತ ದೊಡ್ಡ ದುರಂತ ಪ್ರಕರಣ ಇನ್ನೊಂದಿಲ್ಲ” ಎಂದು ಬರೆದಿದ್ದರು.

ಕಾಂಗ್ರೆಸ್ ಅಧ್ಯಕ್ಷರು ಬರೆದ ಮತ್ತೊಂದು ಕೊನೆಯ ಪತ್ರದಲ್ಲಿ “ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಆಸೆ ನಮಗೆ ಲೇಶವೂ ಇಲ್ಲ. ಆದರೆ ಭಾರತೀಯರಿಗೆ ಸ್ವಾತಂತ್ರ್ಯ ಮತ್ತು ಅಧಿಕಾರ ಬರಬೇಕೆಂದು ಬಲವತ್ತರ ಆಸೆ ಇದೆ. . . . . ಬ್ರಿಟಿಷ್ ಸರಕಾರ ಮಾತ್ರ ತನ್ನ ವಿಚ್ಛೇದನ ನೀತಿ ಬಿಟ್ಟರೆ ಯಾವ ಪಕ್ಷದವರೇ ಇರಲಿ ನಾವೆಲ್ಲ ಒಟ್ಟಿಗೆ ಕಲೆತು ಒಂದು ಸರ್ವಸಮ್ಮತ ದಾರಿ ಕಂಡು ಹಿಡಿಯಲು ಸಾಧ್ಯವಿದೆ. ಆದರೆ ಈ ಮಹಾ ವಿಪತ್ಕಾಲದಲ್ಲಿ ಸಹ ಸರಕಾರವು ತನ್ನ ಛಿದ್ರೀಕರಣ ನೀತಿ ಬಿಡಲು ಮನಸ್ಸು ಮಾಡದಿರುವುದು ತುಂಬ ವ್ಯಸನಕರ. ಮುನ್ನುಗ್ಗಿ ಭಾರತವನ್ನೇ ಆವರಿಸುತ್ತಿರುವ ಪರಧಾಳಿ ಮತ್ತು ಪರಾಕ್ರಮ ಣವನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗ ಹುಡುಕುವುದಕ್ಕಿಂತ ಆದಷ್ಟು ಕಾಲ ಭಾರತದಲ್ಲಿ ನಮ್ಮ ಎದುರು ತನ್ನ ನಿರಂಕುಶಾಧಿಕಾರ ನಡೆಸುವುದೂ, ಅದಕ್ಕಾಗಿ ಇಲ್ಲಿ ಪರಸ್ಪರ ವೈಷಮ್ಯ ಮತ್ತು ಭಿನ್ನಾಭಿಪ್ರಾಯ ಪ್ರೋತ್ಸಾಹಿಸುವುದೂ ಬಹಳ ಮುಖ್ಯವೆಂದು ಬ್ರಿಟಿಷ್ ಸರಕಾರ ಭಾವಿಸಿರವಂತೆ ತೋರುತ್ತದೆ. ನಮಗೆ ಮತ್ತು ಎಲ್ಲ ಭಾರತೀಯರಿಗೆ ಇಂದಿನ ಮುಖ್ಯ ಪ್ರಶ್ನೆ ಎಂದರೆ ಭಾರತದ ಸಂರಕ್ಷಣೆ ಮತ್ತು ಸುರಕ್ಷತೆ; ಉಳಿದುದೆಲ್ಲವನ್ನೂ ಈ ಒಂದೇ ಒರೆಗಲ್ಲಿನಿಂದ ಪರೀಕ್ಷಿಸುತ್ತೇವೆ.”

ಇದೇ ಪತ್ರದಲ್ಲಿ ಭಾರತದ ಸಂರಕ್ಷಣೆ ವಿಷಯದಲ್ಲಿ ನಮ್ಮ ನಿಲುವನ್ನು ಸಹ ಸ್ಪಷ್ಟ ಪಡಿಸಿದರು. "ಮುಖ್ಯ ಸೈನ್ಯಾಧಿಪತಿಯ ಸಾಮಾನ್ಯ ಅಧಿಕಾರ ಮೊಟಕು ಮಾಡಬೇಕೆಂದು ಯಾರೂ ಸೂಚಿಸಿಲ್ಲ. ಅದಕ್ಕೆ ಪ್ರತಿಯಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆತನನ್ನೇ ಯುದ್ಧ ಮಂತ್ರಿಯಾಗಿ ಮಾಡಿ ಆತನಿಗೆ ಇನ್ನೂ ಹೆಚ್ಚಿನ ಅಧಿಕಾರ ಕೊಡಬೇಕೆಂದು ಸಹ ಸಲಹೆ ಮಾಡಿದೆವು. ಆದರೆ ಸಂರಕ್ಷಣೆ ವಿಷಯದಲ್ಲಿ ನಮ್ಮ ಕಲ್ಪನೆಗೂ, ಬ್ರಿಟಿಷ್ ಸರಕಾರದ ಕಲ್ಪನೆಗೂ ಬಹಳ ವ್ಯತ್ಯಾಸವಿದೆ. ನಮ್ಮ ಕಲ್ಪನೆಯಂತೆ ಅದಕ್ಕೆ ಒಂದು ರಾಷ್ಟ್ರೀಯ ದೃಷ್ಟಿ ಕೊಟ್ಟು, ಭಾರತದ-ಗಂಡಸು ಹೆಂಗಸು- ಪ್ರತಿಯೊಬ್ಬ ಪ್ರಜೆಯನ್ನೂ ಅದರಲ್ಲಿ ಭಾಗವಹಿಸಲು ಕೇಳಬೇಕೆಂದು ಇದೆ. ಅಂದರೆ ಆ ಮಹಾತ್ಯಾಗದಲ್ಲಿ ಜನತೆಯಲ್ಲಿ ವಿಶ್ವಾಸವಿಟ್ಟು, ಅದರ ಪೂರ್ಣ ಸಹಕಾರ ಪಡೆಯಬೇಕೆಂದು. ಬ್ರಿಟಿಷ್ ಸರಕಾರದ ದೃಷ್ಟಿ ಎಲ್ಲ ಭಾರತೀಯರಲ್ಲಿ ಯಾವ ವಿಶ್ವಾಸವನ್ನೂ ಇಡದೆ, ಅವರಿಗೆ ನಿಜವಾದ ಯಾವ ಅಧಿಕಾರವನ್ನೂ ಕೊಡಬಾರದೆಂದು ಇದೆ. ಭಾರತದ ರಕ್ಷಣೆ ಬ್ರಿಟಿಷ್ ಸರಕಾರದ ಪೂರ್ಣ ಕರ್ತವ್ಯ ಮತ್ತು ದೊಡ್ಡ ಹೊಣೆ ಎಂದು ಹೇಳುತ್ತೀರಿ. ಈ ಕರ್ತವ್ಯ ಮತ್ತು ಹೊಣೆ ತಮ್ಮದು ಎಂಬ ಭಾವನೆ ಭಾರತೀಯರಲ್ಲಿ ಬರುವವರೆಗೆ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಮಗೆ ಸಾಧ್ಯವಿಲ್ಲ; ಇತ್ತೀಚಿನ ಘಟನೆಗಳೇ ಅದಕ್ಕೆ ನಿದರ್ಶನ. ಜನತೆಯ ಬೆಂಐಲ ಮತ್ತು ಉತ್ಸಾಹಗಳಿದ್ದರೆ ಮಾತ್ರ ಯುದ್ಧದಲ್ಲಿ ಜಯ ಸಾಧ್ಯ ಎಂಬ ಭಾವನೆ ಇನ್ನೂ ಇಂಡಿಯ ಸರಕಾರಕ್ಕೆ ಬಂದಿಲ್ಲ.” ಎಂದು ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷ ಈ ಪತ್ರ ತಲ್ಪಿದ ಒಡನೆ ಸರ್ ಸ್ಟಾಫಡ್೯ ಕ್ರಿಪ್ಸ್ ಇಂಗ್ಲೆಂಡಿಗೆ ವಿಮಾನದಲ್ಲಿ ಹಿಂತಿರುಗಿದ. ಆದರೆ ಆತನು ಹೊರಡುವ ಮುಂಚೆ ಮತ್ತು ಅನಂತರ ಕೊಟ್ಟ ಕೆಲವು ಸಾರ್ವಜನಿಕ ಹೇಳಿಕೆಗಳು ವಾಸ್ತವ್ಯದಿಂದ ಬಹಳ ದೂರ ಇದ್ದವು; ಭಾರತದಲ್ಲಿ ಕೆಟ್ಟ ಪ್ರತಿಕ್ರಿಯೆಯೂ ಆಯಿತು. ಭಾರತದ ಜವಾಬ್ದಾರಿಯುತ ನಾಯಕರು ಅದನ್ನು ಪ್ರತಿಭಟಿಸಿ ನಿಜಸ್ಥಿತಿ ತಿಳಿಸಿದರೂ ಸರ್ ಸ್ಟಾಫರ್ಡ್ ಮತ್ತು ಆತನ ಸ್ನೇಹಿತರು ಮಾತ್ರ ತಮ್ಮ ಪಲ್ಲವಿಯನ್ನೇ ಹಾಡುತ್ತ ಬಂದರು.

31