ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೧೮
ಭಾರತ ದರ್ಶನ

ಬ್ರಿಟಿಷ್ ಸಲಹೆ ತಿರಸ್ಕರಿಸಿದ್ದು ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಭಾರತದ ಪ್ರತಿಯೊಂದು ಪಕ್ಷವೂ ಪಂಗಡವೂ ಅದನ್ನು ತಿರಸ್ಕರಿಸಿತ್ತು. ನಮ್ಮ ರಾಜಕಾರಣಿಗಳಲ್ಲಿ ತೀರ ಸೌಮ್ಯವಾದಿಗಳೆನಿಸಿಕೊಂಡವರ ಸಹ ಅದನ್ನು ಒಪ್ಪಲಿಲ್ಲ. ಮುಸ್ಲಿಂಲೀಗ್ ಒಂದನ್ನು ಬಿಟ್ಟರೆ ಉಳಿದ ಎಲ್ಲ ಪಕ್ಷಗಳೂ ಅದನ್ನು ತಿರಸ್ಕರಿಸಿದ್ದು ಒಂದೇ ಕಾರಣದಿಂದ ತನ್ನ ನಿತ್ಯ ಪದ್ಧತಿಯಂತೆ ಉಳಿದ ಎಲ್ಲ ಪಕ್ಷಗಳೂ ತಮ್ಮ ಅಭಿಪ್ರಾಯ ಸೂಚಿಸುವವರೆಗೆ ಮುಸ್ಲಿಂ ಲೀಗ್ ಕಾದಿದ್ದು ಆ ಮೇಲೆ ತನ್ನದೇ ಕಾರಣಗಳಿಂದ ಅದೂ ನಿರಾಕರಿಸಿತು.

ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಮತ್ತು ಇತರ ಕಡೆಗಳಲ್ಲಿ ಗಾಂಧಿಜಿಯ ಸಂಧಾನವಿರುದ್ಧ ಮೊಂಡುತನದಿಂದ ಕಾಂಗ್ರೆಸ್ ಈ ಸಲಹೆಯನ್ನು ನಿರಾಕರಿಸಿತು ಎಂದು ಹೇಳಲಾರಂಭಿಸಿದರು. ಇದು ಶುದ್ಧ ಸುಳ್ಳು. ಇತರರಂತೆ ಗಾಂಧೀಜಿ ಸಹ, ಈ ಸಲಹೆಗಳಲ್ಲಿ ಗಡಿಮಿತಿ ಇಲ್ಲದೆ ಅಸಂಖ್ಯಾತ ವಿಭಜನೆಗಳಿಗೆ ಇರುವ ಅವಕಾಶವನ್ನೂ ಮತ್ತು ತಮ್ಮ ಭವಿಷ್ಯದ ವಿಷಯದಲ್ಲಿ ಒಂಭತ್ತು ಕೋಟಿ ದೇಶೀಯ ಸಂಸ್ಥಾನಗಳ ಪ್ರಜೆಗಳನ್ನು ಅಲಕ್ಷಿಸಿರುವುದನ್ನೂ ಕಂಡು ತಮ್ಮ ವಿಶೇಷ ಅಸಮ್ಮತಿ ಸೂಚಿಸಿದ್ದರು. ಆದರೆ ಭವಿಷ್ಯದ ಮಾತು ಬದಿಗಿಟ್ಟು, ಇಂದಿನ ಆಡಳಿತ ವ್ಯವಸ್ಥೆಯ ಬದಲಾವಣೆ ವಿಷಯದಲ್ಲಿ ನಡೆದ ಸಂಭಾಷಣೆಗಳಲ್ಲಿ ಗಾಂಧೀಜಿಗೆ ಯಾವ ಸಂಬಂಧವೂ ಇರಲಿಲ್ಲ. ಕಸ್ತೂರ ಬಾ ಕಾಹಿಲೆ ಇದ್ದುದರಿಂದ ಈ ಸಂಭಾಷಣೆ ಸಮಯದಲ್ಲಿ ದೆಹಲಿಯಲ್ಲಿ ಇರಲಿಲ್ಲ. ಅವರನ್ನು ಬಿಟ್ಟೆ ಅದನ್ನೆಲ್ಲ ನಡೆಸಿದ್ದೆವು. ಅಹಿಂಸೆಯ ವಿಷಯದಲ್ಲಿ ಕಾಂಗ್ರೆಸ್ ಕಾರ್ಯ ಸಮಿತಿಯು ಹಿಂದೆ ಅನೇಕ ಬಾರಿ ಅವರಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತ್ತು; ಮತ್ತು ಯುದ್ಧದಲ್ಲಿ ಸಹಕರಿಸುವುದಕ್ಕೂ, ಮುಖ್ಯ ಭಾರತದ ಸಂರಕ್ಷಣೆಗೆ ರಾಷ್ಟ್ರೀಯ ಸರಕಾರ ಸ್ಥಾಪಿಸುವುದಕ್ಕೂ ಬಹಳ ಕಾತರವಿತ್ತು.

ಜನರ ಮನಸ್ಸಿನಲ್ಲಿ ಯುದ್ಧದ ಪ್ರಶ್ನೆ ಮತ್ತು ಯೋಚನೆಗಳೇ ಕವಿದಿದ್ದವು; ಭಾರತದ ಮುತ್ತಿಗೆ ಅನಿವಾರ್ಯವೆಂದು ಕಂಡಿತು. ಆದರೂ ಒಪ್ಪಂದಕ್ಕೆ ವಿರುದ್ಧ ಬಂದುದು ಯುದ್ಧವಲ್ಲ; ಅದನ್ನು ನಡೆಸುವವರು ನಿಪುಣರು, ಸಾಮಾನ್ಯ ಜನತೆಯಲ್ಲ. ಯುದ್ಧಾಚರಣೆಯ ವಿಷಯದಲ್ಲಿ ಒಂದು ಒಪ್ಪಂದಕ್ಕೆ ಬರಲು ಸುಲಭವಿತ್ತು. ಆದರೆ ನಿಜವಾದ ಮುಖ್ಯ ಸಮಸ್ಯೆ ರಾಷ್ಟ್ರೀಯ ಸರಕಾರಕ್ಕೆ ಅಧಿಕಾರವಹಿಸಿ ಕೊಡುವ ಪ್ರಶ್ನೆ, ಪುನಃ ಭಾರತೀಯ ರಾಷ್ಟ್ರೀಯತ್ವವೆ ಅಥವ ಬ್ರಿಟಿಷ್ ಸಾಮ್ರಾಜ್ಯವಾದವೆ, ಎಂಬ ಅದೇ ಹಳೆಯ ಪ್ರಶ್ನೆ, ಯುದ್ಧವಿರಲಿ ಇಲ್ಲದಿರಲಿ ಈ ವಿಷಯದಲ್ಲಿ ಇಂಗ್ಲೆಂಡಿನ ಮತ್ತು ಇಲ್ಲಿನ ಬ್ರಿಟಿಷ್ ಆಡಳಿತವರ್ಗ ತಮ್ಮ ಕಪಿಮುಷ್ಟಿ ಸಡಿಲಿಸಲು ಒಪ್ಪಲಿಲ್ಲ. ಅದರ ಹಿಂದೆ ನಿಂತ ನಿಲವು ವಿನ್‌ಸ್ಟನ್ ಚರ್ಚಿಲ್‌ನ ಭೀಕರ ಆಕೃತಿಯ ನಿಲುವು.

೯. ಆಶಾಭಂಗ

ಕ್ರಿಪ್ಸ್ ಸಂಧಾನ ಈ ರೀತಿ ಇದ್ದಕ್ಕಿದ್ದಂತೆ ಕೊನೆಗಂಡು ಸರ್ ಸ್ಟಾಫರ್ಡ್ ಏಕಾಏಕಿ ಬಂದ ದಾರಿ ಹಿಡಿದುದನ್ನು ನೋಡಿ ನನಗೆ ಬಹಳ ಆಶ್ಚರ್ಯವಾಯಿತು. ಪದೇ ಪದೇ ಹೇಳಿದ ಹಾಡಿನ ಪಲ್ಲವಿಯನ್ನೇ ಮತ್ತೆ ಹಾಡಿ ಇಂದಿನ ಉತ್ಕಟ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಮುಂದೆ ಈ ಸತ್ವಶೂನ್ಯ ಸಾರರಹಿತ ಸಲಹೆ ಇಡಲು ಬ್ರಿಟನ್ನಿನ ಯುದ್ಧ ಮಂತ್ರಿಮಂಡಲದ ಸದಸ್ಯನೊಬ್ಬನು ಭಾರತಕ್ಕೆ ಪ್ರಯಾಣ ಮಾಡಬೇಕಾಗಿತ್ತೆ, ಅಥವ ಸಂಯುಕ್ತ ಸಂಸ್ಥಾನಗಳ ಜನರಲ್ಲಿ ಅಪಪ್ರಚಾರ ಮಾಡಲು ಈ ನಾಟಕ ಹೂಡಲಾಯಿತೆ ಎಂಬ ಅನುಮಾನ ಹುಟ್ಟಿತು. ಆದರೆ ಪ್ರತಿಕ್ರಿಯೆ ಮಾತ್ರ ಬಹು ಕಹಿಯಾಗಿ, ಅಸಹ ನೀಯವಿತ್ತು. ಬ್ರಿಟನ್ನಿನೊಡನೆ ಒಪ್ಪಂದದ ಆಸೆ ಇನ್ನು ಯಾವುದೂ ಉಳಿಯಲಿಲ್ಲ; ಪರಧಾಳಿಯನ್ನು ಎದುರಿಸಿ ನಮ್ಮ ದೇಶ ಸಂರಕ್ಷಿಸಲು ನಮಗೆ ಅವಕಾಶಕೊಡಿ ಎಂದು ಕೇಳಿದರೂ ಅದಕ್ಕೆ ಅವಕಾಶವಿಲ್ಲ!

ಈ ಮಧ್ಯೆ ಮುತ್ತಿಗೆಯ ಸಂಭವ ಇನ್ನೂ ಸಮೀಪಿಸುತ್ತಿರುವಂತೆ ಕಂಡಿತು; ಭಾರತದ ಪೂರ್ವದ ಗಡಿಯಿಂದ ಹಸಿವಿನ ಬೇಗೆಯಿಂದ ಬೆಂದು ಬೆಂಡಾಗಿದ್ದ ನಿರಾಶ್ರಿತರು ತಂಡೋಪತಂಡ ಬರಲಾರಂಭಿಸಿದರು. ಪೂರ್ವ ಬಂಗಾಲದ ಮುತ್ತಿಗೆ ಅನಿರ್ವಾಯವೆಂಬ ಭಯದಿಂದ ಸಹಸ್ರಗಟ್ಟಲೆ ನದಿ ದೋಣಿಗಳನ್ನು ನಾಶಮಾಡಿದರು. ಅಧಿಕಾರಿಗಳು ಸರಕಾರದ ಆಜ್ಞೆಯನ್ನು ಅಪಾರ್ಥಮಾಡಿ ಈ ರೀತಿ ವರ್ತಿಸಿದರೆಂದು