ಆ ವಿಷಮ ಕಾಲದಲ್ಲಿ ನಿಶ್ಚೇತನರಾಗಿ ಕುಳಿತುಕೊಳ್ಳುವುದೂ, ನಡೆವುದಕ್ಕೆಲ್ಲ ತಲೆಬಾಗುವುದೂ ಅವರಿಗೆ ಅಸಹನೀಯವಾಯಿತು. ಆ ಪರಿಸ್ಥಿತಿ ಎದುರಿಸಿ, ಸ್ವತಂತ್ರ ಭಾರತವು ಇತರ ಮಿತ್ರ ರಾಷ್ಟ್ರಗಳೊಂದಿಗೆ ಸಹಕರಿಸಿ, ಆಕ್ರಮಣವನ್ನೂ ಮುತ್ತಿಗೆಯನ್ನೂ ವಿರೋಧಿಸಲು ಭಾರತದ ಸ್ವಾತಂತ್ರ್ಯಕ್ಕೆ ಮನ್ನಣೆ ದೊರೆಯುವುದು ಒಂದೇ ಮಾರ್ಗವಿತ್ತು. ಈ ಮನ್ನಣೆ ದೊರೆಯದಿದ್ದರೆ ಈಗಿರುವ ಅಧಿಕಾರ ವ್ಯೂಹ ಎದುರಿಸುವುದಕ್ಕೂ ಜನರನ್ನು ನಿಶ್ಚಿತನಗೊಳಿಸಿ, ಎಲ್ಲ ಆಕ್ರಮಣಕ್ಕೂ ಸುಲಭದ ಬೇಟಿ ಮಾಡಿರುವ ಅಲಸಿಕೆಯಿಂದ ಜನತೆಯನ್ನು ಬಡಿದೆಬ್ಬಿಸುವುದಕ್ಕೂ ಏನಾದರೊಂದು ಕಾರ್ಯಕ್ರಮ ತೆಗೆದುಕೊಳ್ಳಲೇ ಬೇಕು ಎಂದು ಅಭಿಪ್ರಾಯ ಪಟ್ಟರು.
ಈ ಬೇಡಿಕೆಯಲ್ಲಿ ಹೊಸ ವಿಷಯ ಏನೂ ಇರಲಿಲ್ಲ; ಇದುವರೆಗೆ ಹೇಳಿದ್ದನ್ನೇ ಪುನಃ ಅದರಲ್ಲಿ ಹೇಳಲಾಗಿತ್ತು; ಆದರೆ ಗಾಂಧಿಜಿಯ ಭಾಷೆ ಮತ್ತು ಬರವಣಿಗೆಗಳಲ್ಲಿ ಒಂದು ಹೊಸ ಆತುರವೂ, ನವೀನ ಕಾರ್ಯಕ್ರಮದ ಸೂಚನೆಯೂ ಇತ್ತು. ಭಾರತದಲ್ಲಿ ಹರಡಿದ್ದ ಅಂದಿನ ಮನೋಭಾವನೆಯನ್ನೇ ಅವರು ಪ್ರತಿನಿಧಿಸಿದರೆಂಬುದಕ್ಕೆ ಯಾವ ಸಂಶಯವೂ ಇಲ್ಲ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಭಾವನೆಗಳ ಹೋರಾಟದಲ್ಲಿ ಅವರ ರಾಷ್ಟ್ರೀಯ ಭಾವನೆಗೆ ಜಯವಾಯಿತು. ಗಾಂಧಿಜಿಯ ಈ ಹೊಸ ಲೇಖನಗಳು ಭಾರತಾದ್ಯಂತ ಒಂದು ಹೊಸ ಚೈತನ್ಯ ತುಂಬಿದವು. ಆದರೂ ಅದರ ಈ ರಾಷ್ಟ್ರೀಯ ಭಾವನೆ ಅಂತರರಾಷ್ಟ್ರೀಯ ಭಾವನೆಗೆ ವಿರುದ್ದವಿರಲಿಲ್ಲ; ಆದರೆ ಈ ರಾಷ್ಟ್ರೀಯ ಭಾವನೆಯ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಗೌರವಯುತವಾಗಿ ನಡೆಸಲು ಅವಕಾಶ ದೊರೆತರೆ ಆ ರಾಷ್ಟ್ರೀಯ ಭಾವನೆಯೇ ಅಂತರರಾಷ್ಟ್ರೀಯ ವಿಶಾಲದೃಷ್ಟಿಗೆ ಹೊಂದಿಕೊಂಡು ಕೆಲಸ ಮಾಡಲು ದಾರಿ ದೊರೆಯುತ್ತಿತ್ತು. ಎರಡಕ್ಕೂ ಯಾವ ಘರ್ಷಣೆಯೂ ಇರಲಿಲ್ಲ. ಯೂರೋಪಿನ ರಾಷ್ಟ್ರಗಳ ಆಕ್ರಮಣ ನೀತಿಯ ರಾಷ್ಟ್ರೀಯ ಭಾವನೆಗಳಂತೆ ನಮಗೆ ಯಾರ ಮೇಲೂ ಆಕ್ರಮಣದ ಆಶೆ ಇರಲಿಲ್ಲ. ಎಲ್ಲರ ಹಿತಕ್ಕಾಗಿ ಅವರೊಡನೆ ಸಹಕರಿಸಲು ಮಾತ್ರ ಬಯಸಿದೆವು. ನಿಜವಾದ ಅಂತರರಾಷ್ಟ್ರೀಯ ಭಾವನೆಗೆ ರಾಷ್ಟ್ರದ ಸ್ವಾತಂತ್ರವೇ ಮುಖ್ಯ ತಳಹದಿ, ಮತ್ತು ದಾರಿ; ಮತ್ತು ನಾಜಿ ಮತ್ತು ಫಾಸಿಸ್ಟ್ ತತ್ವಗಳ ವಿರುದ್ದ ಎಲ್ಲರಂತೆ ನಾವೂ ಸೇರಿ ಕಾದಾಡಲು ಅವಶ್ಯವಾದ ಸಹಕಾರಕ್ಕೆ ನಿಜವಾದ ತಳಪಾಯ. ಈ ಮಧ್ಯೆ ಎಲ್ಲರೂ ಮೆಚ್ಚಿ ಹೊಗಳಿದ್ದ ಅಂತರ ರಾಷ್ಟ್ರೀಯ ಭಾವನೆಯು ಕೃತಕವೇಷದ ಸಾಮ್ರಾಜ್ಯ ಭಾವನೆಯಂತೆ ಕಂಡಿತು. ಏಕೆಂದರೆ ಹಳೆಯ ಸಾಮ್ರಾಜ್ಯ ಶಕ್ತಿಗಳೇ ಕಾಮನ್‌ವೆಲ್ತ್, ಮ್ಯಾಂಡೇಟರಿ ಎಂಬ ಬೇರೆ ಬೇರೆ ಹೆಸರಿನಿಂದ ಇತರರ ಮೇಲೆ ತಮ್ಮ ಅಧಿಕಾರ ಹೇರಲು ಹೊಸ ಉಡುಪಿನಲ್ಲಿ ತಮ್ಮ ಹಳೆಯ ಆಕ್ರಮಣ ನೀತಿಯ ರಾಷ್ಟ್ರೀಯ ಭಾವನೆಯನ್ನು ಮುಂದುವರಿಸುವಂತೆ ಕಂಡವು.
ಈ ಹೊಸ ಸನ್ನಿವೇಶದಿಂದ ನಮ್ಮಲ್ಲಿ ಕೆಲವರು ದಿಗ್ಧಮೆಗೊಂಡು ಹೆದರಿದೆವು. ಯಾವ ಕಾರ್ಯಾಚರಣೆಯಾಗಲಿ ಯಶಸ್ವಿಯಾಗದಿದ್ದರೆ ನಿರರ್ಥಕ. ಭಾರತಕ್ಕೆ ಮುತ್ತಿಗೆಯ ಗಂಡಾಂತರ ಒದಗಿದಾಗ ಯಾವ ಯಶಸ್ವಿ ಪ್ರತಿಭಟನಾ ಕಾರ್ಯಾಚರಣೆ ಎಂದರೂ ಅದು ಯುದ್ಧ ಪ್ರಯತ್ನಕ್ಕೆ ಅಡ್ಡಿ ಬರಲೇಬೇಕು. ಗಾಂಧಿಜಿ ಈ ಪ್ರಯತ್ನದಲ್ಲಿ ಸಾಮಾನ್ಯವಾಗಿ ಕೆಲವು ಮುಖ್ಯ ಅಂತರ ರಾಷ್ಟ್ರೀಯ ವಿಷಯಗಳನ್ನು ಉಪೇ ಕ್ಷಿಸಿದಂತೆಯೂ ಸಂಕುಚಿತ ರಾಷ್ಟ್ರೀಯ ದೃಷ್ಟಿಯ ಆಧಾರದ ಮೇಲೆ ನಿಂತಂತೆಯೂ ಕಂಡಿತು. ಈ ಮೂರು ವರ್ಷ ನಾವು ಯುದ್ದ ಪ್ರಯತ್ನಕ್ಕೆ ಯಾವ ತೊಂದರೆಯನ್ನೂ ಮಾಡಿರಲಿಲ್ಲ. ಏನು ಕಾರ್ಯಾಚರಣೆ ಆದರೂ ಅದು ಸಾಂಕೇತಿಕ ವಿರೋಧವಾಗಿತ್ತು. ೧೯೪೦-೧೯೪೧ ರಲ್ಲಿ ಮೂವತ್ತು ಸಾವಿರ ಪ್ರಮುಖ ಸ್ತ್ರೀ ಪುರುಷರು ಸೆರೆಮನೆ ಸೇರಿದಾಗ ಈ ಸಂಕೇತವು ವಿರಾಟ್ ಸ್ವರೂಪ ತಾಳಿತ್ತು. ಆದರೆ ಸೆರೆಮನೆ ಯಾತ್ರೆ ಸಹ ವೈಯಕ್ತಿಕವಾಗಿತ್ತು. ಜನರ ದಂಗೆಗೆ ಅವಕಾಶ ಕೊಡಲಿಲ್ಲ; ಸರಕಾರದ ಆಡಳಿತ ವ್ಯವಸ್ಥೆಯೊಂದಿಗೆ ಯಾವ ಘರ್ಷಣೆಗೂ ಎಡೆಕೊಡಲಿಲ್ಲ. ಪುನಃ ಅದೇ ಮಾರ್ಗ ಸರಿಕಾಣಲಿಲ್ಲ. ಕಾಠ್ಯಕ್ರಮ ಏನೇ ಇರಲಿ ಅದು ನೂತನವೂ, ಯಶಸ್ವಿಯೂ ಆಗಬೇಕು. ಇದರಿಂದ ಭಾರತದ ಗಡಿಯಲ್ಲಿ ನಡೆಯುತ್ತಿರುವ ಯುದ್ಧ ಕಾರ್ಯಾಚರಣೆಗೆ ಅಡ್ಡಿ ಮಾಡಿ ಶತ್ರುಗಳಿಗೆ ಪ್ರೋತ್ಸಾಹ ಕೊಟ್ಟಂತೆ ಆಗುವುದಿಲ್ಲವೆ? ಎಂಬ ಪ್ರಶ್ನೆ ಎದ್ದಿತು.