ಕಾರ್ಯಾಚರಣೆಗಳು ಇಂದು ಅವುಗಳ ಸರಹದ್ದು ಮೀರಿ ವಿಶ್ವವ್ಯಾಪಕವಾಗಿವೆ. ಯಾವ ಜನಾಂಗವೂ ತನ್ನ ಪಾಡಿಗೆ ತಾನು ಪ್ರತ್ಯೇಕ ಇದ್ದು, ಉಳಿದ ಜನಾಂಗಗಳ ರಾಜಕೀಯ ಮತ್ತು ಆರ್ಥಿಕ ಗತಿಯನ್ನು ಅಲಕ್ಷೆಮಾಡುವಂತೆ ಇಲ್ಲ. ಸಹಕಾರವಿಲ್ಲದಿದ್ದರೆ ಘರ್ಷಣೆ ಮತ್ತು ಅದರ ಪರಿಣಾಮಗಳು ಶತಸ್ಸಿದ್ಧ, ಸಹ ಕಾರವಿರಬೇಕಾದರೆ ಸಮಾನತೆ ಮತ್ತು ಪರಸ್ಪರ ಕ್ಷೇಮಚಿಂತನೆ ತಳಹದಿಯಾಗಬೇಕು. ಹಿಂದುಳಿದ ರಾಷ್ಟ್ರಗಳನ್ನು ಮತ್ತು ಜನಾಂಗಗಳನ್ನು ಸಮಾನ ಆರ್ಥಿಕ ಮತ್ತು ಸಂಸ್ಕೃತಿ ಮಟ್ಟಕ್ಕೆ ತರಬೇಕು. ಜನಾಂಗ ದ್ವೇಷ ಮತ್ತು ಆಕ್ರಮಣ ನೀತಿಯು ಸಂಪೂರ್ಣ ನಾಶವಾಗಬೇಕು. ಈ ತಳಹದಿಯ ಮೇಲೆ ಮಾತ್ರ ಸಹಕಾರ ಸಾಧ್ಯ. ಯಾವ ರಾಷ್ಟ್ರ ಅಥವ ಜನರೇ ಆಗಲಿ ಇನ್ನೊಂದು ರಾಷ್ಟ್ರದ ಮೇಲಿನ ತಮ್ಮ ಅಧಿಕಾರ ಅಥವ ಆಕ್ರಮಣವನ್ನು ಯಾವ ಸವಿಮಾತಿನಿಂದ ಕರೆದರೂ ಸಹಿಸಲು ಸಾಧ್ಯವಿಲ್ಲ. ಪ್ರಪಂಚದ ಇತರ ರಾಷ್ಟ್ರಗಳು ಉಚ್ಛಾಯ ಸ್ಥಿತಿಯಲ್ಲಿರುವಾಗ ತಮ್ಮ ಬಡತನ ಮತ್ತು ಸಂಕಟ ನುಂಗಿಕೊಂಡು ಸುಮ್ಮನೆ ಕುಳಿತಿರಲೂ ಸಾಧ್ಯವಿಲ್ಲ. ಇತರ ದೇಶಗಳ ಪರಿಸ್ಥಿತಿಯ ಪರಿಜ್ಞಾನವಿಲ್ಲದಾಗ ಅದು ಸಾಧ್ಯವಿತ್ತು.
ಇದೆಲ್ಲ ಸ್ಪಷ್ಟವಿದೆ. ಆದರೆ ಹಿಂದಿನ ಘಟನೆಗಳ ಇತಿಹಾಸ ಪರಂಪರೆ ನೋಡಿದರೆ ಮಾನವನ ಮನಸ್ಸು ಆ ಪರಂಪರೆಯ ಹಿಂದೆಯೇ ಉಳಿಯುತ್ತದೆ; ಅವುಗಳಿಗೆ ಹೊಂದಿಕೊಳ್ಳುವುದು ಬಹು ನಿಧಾನ. ಮುಂದೆ ವಿನಾಶದಿಂದ ತಪ್ಪಿಸಿಕೊಳ್ಳಬೇಕಾದರೆ ತನ್ನ ಸ್ವಾರ್ಥ ದೃಷ್ಟಿಯಿಂದಲೇ ಪ್ರತಿಯೊಂದು ಜನಾಂಗವೂ ಈ ವಿಶಾಲ ದೃಷ್ಟಿಯ ಸಹಕಾರದ ಕಡೆ ಗಮನ ಕೊಡಬೇಕು ಮತ್ತು ಇತರ ಜನಾಂಗಗಳ ಸ್ವಾತಂತ್ರ್ಯದ ಆಧಾರದ ಮೇಲೆ ತನ್ನ ಸ್ವತಂತ್ರ ಜೀವನ ನಡೆಸಬೇಕು. ಆದರೆ ವಾಸ್ತವವಾದಿಯ ಸ್ವಾರ್ಥವು ಹಳೆಯ ಕಲ್ಪನೆ ಮತ್ತು ತತ್ವಗಳಿಂದ ಬಹಳ ಸಂಕುಚಿತವಾಗಿದೆ; ಯಾವುದೋ ಒಂದು ಕಾಲಕ್ಕೆ ಸರಿತೋರಿದ ಭಾವನೆಗಳು ಮತ್ತು ಸಮಾಜ ರೀತಿಗಳು ಎಲ್ಲ ಕಾಲದ ಮಾನವ ಸಮಾಜ ಮತ್ತು ಸ್ವಭಾವಕ್ಕೆ ಸ್ಥಿರವಾದವು, ಪರಿವರ್ತಿಸಲಾಗದವು ಎಂದು ಭಾವಿಸುತ್ತಾನೆ. ಮಾನವ ಸ್ವಭಾವ ಮತ್ತು ಸಮಾಜ ಪರಿವರ್ತನೆ ಹೊಂದುವಷ್ಟು ಬೇರೆವಸ್ತುಗಳು, ಹೊಂದುವುದಿಲ್ಲ ಎಂದು ಮರೆಯುತ್ತಾನೆ. ಧರ್ಮ ಸ್ವರೂಪ ಮತ್ತು ಭಾವನೆಗಳು ಶಾಶ್ವತರೂಪ ತಾಳುತ್ತವೆ; ಸಮಾಜ ಸಂಸ್ಥೆಗಳು ಕಠಿಣವಾಗುತ್ತವೆ; ಯುದ್ಧ ಜೀವಶಾಸ್ತ್ರ ತತ್ವದಂತೆ ಒಂದು ಅವಶ್ಯಕತೆ ಎಂಬ ಭಾವನೆ ಹುಟ್ಟುತ್ತದೆ; ಸಾಮ್ರಾಜ್ಯ ಮತ್ತು ರಾಜ್ಯ ವಿಸ್ತಾರ ಕಾರ್ಯಾಸಕ್ತ ಪ್ರಗತಿಪರ ಜನತೆಯ ಹಕ್ಕು ಎಂಬ ಭಾವನೆ ಬೇರೂರುತ್ತದೆ; ಮನವ ವ್ಯವಹಾರದಲ್ಲಿ ಲಾಭದೃಷ್ಟಿಗೇ ಅಗ್ರಪೂಜೆ ಸಲ್ಲುತ್ತದೆ. ಕುಲಮದ, ತಮ್ಮ ಜನಾಂಗ ಸಮಾನ ಇಲ್ಲ ಎಂಬ ಮದಾಂಧತೆ ಒಂದು ಜೀವನ ತತ್ವವಾಗುತ್ತದೆ. ಆ ರೀತಿ ಹೇಳದಿದ್ದರೂ ಆ ಆಧಾರದ ಮೇಲೆ ಎಲ್ಲ ಕೆಲಸ ನಡೆಯುತ್ತವೆ, ಈ ಕೆಲವು ಭಾವನೆಗಳು ಪೌರ್ವಾತ್ಯ ಪಾಶ್ಚಿಮಾತ್ಯ ನಾಗರಿಕತೆಗಳೆರಡಕ್ಕೂ ಸಾಮಾನ್ಯವಾದವು. ಇವುಗಳಲ್ಲಿ ಅನೇಕ ಗುಣಗಳು ಘಾಸಿಸಂ ಮತ್ತು ನಾಜಿಸಂಗೆ ಜನ್ಮಕೊಟ್ಟ ಪಾಶ್ಚಾತ್ಯ ಸಂಸ್ಕೃತಿಯ ವೈಶಿಷ್ಟಗಳಾಗಿವೆ. ಫಾಸಿಸ್ಟ್ ತತ್ವವು ಮಾನವ ಜೀವನ ಮತ್ತು ಮಾನವೀಯತೆಯನ್ನು ತೃಣೀಕರಿಸುವುದರಲ್ಲಿ ಎಲ್ಲವನ್ನೂ ಮೀರಿಸಿದರೂ ನೈತಿಕ ದೃಷ್ಟಿಯಿಂದ ಘಾಸಿಸ್ಟ್ ತತ್ವಕ್ಕೂ ಈ ಭಾವನೆಗಳಿಗೂ ಬಹಳ ವ್ಯತ್ಯಾಸವಿಲ್ಲ. ಬಹುಕಾಲ ಯೂರೋಪಿನ ದೃಷ್ಟಿಯಲ್ಲಿ ಪ್ರಧಾನ ಗುಣವಾಗಿದ್ದ ಮಾನವೀಯತೆಯು ಈಗ ಅಲ್ಲಿ ಮಾಯವಾಗುತ್ತಿದೆ. ಪಾಶ್ಚಾತ್ಯದ ರಾಜಕೀಯ ಮತ್ತು ಆರ್ಥಿಕ ರಚನೆಯಲ್ಲೇ ಫಾಸಿಸ್ಟ್ ತತ್ವದ ಬೀಜಗಳಿದ್ದವು. ಈ ಹಳೆಯ ಭಾವನೆ ನಾಶವಾಗುವವರೆಗೆ ಯುದ್ಧದ ಗೆಲುವಿನಿಂದ ಯಾವ ಪರಿವರ್ತನೆಯೂ ಆಗುವುದಿಲ್ಲ. ಹಳೆಯ ಕಲ್ಪನೆಗಳು ಮತ್ತು ಭಾವನೆಗಳು ಹಾಗೇ ಉಳಿದು ಪುನಃ ಅದೇ ಪೈಶಾಚಿಕ ಶಕ್ತಿಗಳಿಗೆ ಬಲಿಯಾಗಿ ಅದೇ ಚಕ್ರವ್ಯೂಹದಲ್ಲಿ ತೊಳಲುತ್ತೇವೆ.
ಯುದ್ಧದಿಂದ ಸ್ಪಷ್ಟ ಕಾಣುವ ಎರಡು ಪ್ರಾಮುಖ್ಯ ವಿಷಯಗಳೆಂದರೆ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಮತ್ತು ಸೋವಿಯಟ್ ರಷ್ಯದ ಶಕ್ತಿಯಲ್ಲಿ ಮತ್ತು ವಾಸ್ತವಿಕ ಮತ್ತು ಸಂಭವನೀಯ ಸಂಪತ್ಸಮೃದ್ಧಿಯಲ್ಲಿ ಅದ್ಭುತ ಪ್ರಗತಿ. ಯುದ್ಧದಲ್ಲಿ ಅನುಭವಿಸಿದ ಅಪಾರ ನಷ್ಟದಿಂದ ಸೊವಿಯಟ್ ರಷ್ಯಕ್ಕೆ ಯುದ್ಧ ಪೂರ್ವಕ್ಕಿಂತ ಪ್ರಾಯಶಃ ಈಗ ಹೆಚ್ಚು ಬಡತನ ಒದಗಿರಬಹುದು. ಆದರೆ ಅದರ ಅಂತಶ್ಯಕ್ತಿ