ಪುಟ:ಭಾರತ ದರ್ಶನ.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೯೪

ಭಾರತ ದರ್ಶನ

ಬ್ರಿಟನ್ನಿಗೆ ಸಹ ಭಾರತದಲ್ಲಿ ಕೈಗಾರಿಕಾಭಿವೃದ್ಧಿ ಮಾಡಬೇಕೆಂದು ಈಗ ಜ್ಞಾನೋದಯವಾಗುತ್ತಿದೆ. ಬಂಗಾಲ ಕ್ಷಾಮದಿಂದ ಅನೇಕರು ಆ ಕಡೆ ಯೋಚಿಸತೊಡಗಿದರು. ಆದರೆ ಭಾರತದಲ್ಲಿ ಏನು ಕೈಗಾರಿಕಾ ಪ್ರಗತಿಯಾದರೂ ಅದು ಬ್ರಿಟಿಷರ ಅಧೀನ ಇರಬೇಕು. ಬ್ರಿಟಿಷ್ ಕೈಗಾರಿಕೆಗೆ ಅಡಿಯಾಳಾಗಿರಬೇಕೆಂದೇ ಬ್ರಿಟಿಷರ ನೀತಿ, ಏಷ್ಯದ ಇತರ ರಾಷ್ಟ್ರಗಳಂತೆ ಭಾರತದಲ್ಲಿ ಸಹ ಕೈಗಾರಿಕಾ ಪ್ರಗತಿಯಾಗುವುದು ನಿಶ್ಚಯ, ಆದರೆ ಎಷ್ಟು ಬೇಗ ಎಂಬುದೇ ಮುಖ್ಯ ಪ್ರಶ್ನೆ. ಅಲ್ಲದೆ ಬೇರೊಂದು ಸಾಮ್ರಾಜ್ಯ ನೀತಿ ಅಥವ ವಿದೇಶೀಯರ ಅಧಿಕಾರಕ್ಕೆ ಅಡಿಯಾಳಾಗಿರಲು ಸಾಧ್ಯವೇ ಎಂಬುದು ಅನುಮಾನ.

ಬ್ರಿಟಿಷ್ ಸಾಮ್ರಾಜ್ಯ ಈಗಿರುವಂತೆ ಒಂದು ಭೌಗೋಲಿಕ ಪ್ರದೇಶವಲ್ಲ; ಆರ್ಥಿಕ ಅಥವ ಸೈನ್ಯ ದೃಷ್ಟಿಯಿಂದ ಒಂದು ಪ್ರದೇಶವೂ ಅಲ್ಲ. ಅದು ಕೇವಲ ಅಭಿಮಾನದಿಂದ ಮುಂದುವರಿಯುತ್ತಿರುವ ಐತಿಹಾಸಿಕ, ಆಕಸ್ಮಿಕ ಅಭಿಮಾನ ಮತ್ತು ಹಳೆಯ ಬಾಂಧವ್ಯಗಳಿಗೆ ಇನ್ನೂ ಅದರಲ್ಲಿ ಬೆಲೆ ಇದೆ; ಆದರೆ ಕ್ರಮೇಣ ಇನ್ನೂ ಮುಖ್ಯ ವಿಷಯ ಮರೆಮಾಚುವಂತೆ ಇಲ್ಲ. ಈ ಭಾವನೆ ಸಹ ಬ್ರಿಟಿಷರ ರಕ್ತ ಸಂಬಂಧ ವಿರುವ ಜನ ವಾಸಿಸುವ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ; ಭಾರತ ಮತ್ತು ಇತರ ಅಧೀನ ರಾಷ್ಟ್ರಗಳಿಗೆ ಖಂಡಿತ ಅನ್ವಯಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ವಿರೋಧವೇ ಹೆಚ್ಚು. ದಕ್ಷಿಣ ಆಫ್ರಿಕ ಬೋಅರ್ ಗಳಿಗೂ ಅದು ಅನ್ವಯಿಸುವುದಿಲ್ಲ. ದೊಡ್ಡ ದೊಡ್ಡ ಡೊಮಿನಿಯನ್‌ಗಳಲ್ಲಿ ಸಹ ಅಸಾಧ್ಯ ಪರಿವರ್ತನೆಗಳಾಗಿ ಬ್ರಿಟನ್ ಜೊತೆಗೆ ಇದ್ದ ಸಾಂಪ್ರದಾಯಿಕ ಬಾಂಧವ್ಯ ಸಡಿಲುವಂತೆ ಇದೆ ಯುದ್ಧ ಸಮಯದಲ್ಲಿ ಕೈಗಾರಿಕೋದ್ಯಮದಲ್ಲಿ ಉನ್ನತ ಪ್ರಗತಿ ಸಾಧಿಸಿ ಪ್ರಬಲ ರಾಷ್ಟವಾದ ಕೆನಡ ದೇಶದ ಭವಿಷ್ಯವು ಅಮೆರಿಕದ ಸಂಯುಕ್ತ ಸಂಸ್ಥಾನಗಳನ್ನು ಅವಲಂಬಿಸಿದೆ. ಸರ್ವತೋಮುಖ ಬೆಳೆಯುತ್ತಿರುವ ಅದರ ಆರ್ಥಿಕ ರಚನೆಯಿಂದ ಅನೇಕ ವಿಷಯಗಳಲ್ಲಿ ಬ್ರಿಟಿಷ್ ಕೈಗಾರಿಕೆಗೆ ಪ್ರತಿಸ್ಪರ್ಧಿ ಬರಬಹುದು. ಅದೇ ರೀತಿ ಪ್ರಗತಿಪರ ಆರ್ಥಿಕ ನೀತಿಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಮ್ಮ ಸ್ಥಾನ ಬ್ರಿಟನ್ ಇರುವ ಯೂರೋಪಿನ ವಲಯದಲ್ಲಿಲ್ಲ, ಸಂಯುಕ್ತ ಸಂಸ್ಥಾನಗಳ ಮುಖ್ಯ ಕಾರ್ಯರಂಗವಾದ ಶಾಂತಿ ಸಾಗರದ ಏಷ್ಯ ಮತ್ತು ಅಮೆರಿಕೆಗಳ ವಲಯದಲ್ಲಿ ಎಂದು ಅರಿತುಕೊಳ್ಳುತ್ತಿವೆ. ಸಂಸ್ಕೃತಿ ದೃಷ್ಟಿಯಿಂದ ಸಹ ಕೆನಡ ಮತ್ತು ಆಸ್ಟ್ರೇಲಿಯ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಕಡೆಗೇ ನೋಡುತ್ತಿವೆ.

ಇಂದಿನ ಬ್ರಿಟಿಷರ ಅಧೀನರಾಷ್ಟ್ರ ನೀತಿಗೂ ಅಮೆರಿಕನರ ನೀತಿ ಮತ್ತು ವಿಶ್ವ ವ್ಯಾಪಕತೆಯ ಮನೋಭಾವಕ್ಕೂ ಪರಸ್ಪರ ವಿರುದ್ಧವಿದೆ. ತಮ್ಮ ರಫ್ತು ಸಾಮಾನುಗಳಿಗೆ ತೆರೆದ ಪೇಟೆ ಬೇಕೆಂದು ಅಮೆರಿಕದ ಸಂಯುಕ್ತ ಸಂಸ್ಥಾನದ ನೀತಿ, ಇತರ ರಾಷ್ಟ್ರಗಳ ಯಾವ ಮಿತಿ ಅಥವ ಹತೋಟಿಯನ್ನೂ ಅದು ಸಹಿಸ ಲಾರದು. ಏಷ್ಯದ ಕೋಟ್ಯಂತರ ಜನ ಕೈಗಾರಿಕೆಯಲ್ಲಿ ಮುಂದುವರಿದು ಅವರ ಜೀವನಮಟ್ಟ ಹೆಚ್ಚಬೇಕೆಂಬ ಅವರ ಅಭಿಪ್ರಾಯ ಉದಾರ ದೃಷ್ಟಿಯಿಂದ ಬಂದುದಲ್ಲ; ಆದರೆ ತಮ್ಮ ಹೆಚ್ಚುವರಿ ಸಾಮಾನುಗಳು ಮಾರಾಟವಾಗಲೆಂದು; ಅಮೆರಿಕ ಮತ್ತು ಬ್ರಿಟನ್ನುಗಳ ರಫ್ತು ಮತ್ತು ಹಡಗಿನ ವ್ಯಾಪಾರಕ್ಕೆ ಘರ್ಷಣೆ ಅನಿವಾರ್ಯವೆಂದು ತೋರುತ್ತದೆ. ವಿಶೇಷ ಅನುಕೂಲ ಇರುವುದರಿಂದ ಪ್ರಪಂಚದ ಎಲ್ಲ ರಾಷ್ಟ್ರಗಳ ವಿಮಾನ ಬಲ ಉತ್ತಮಗೊಳ್ಳಲೆಂಬ ಅಮೆರಿಕದ ಇಷ್ಟಕ್ಕೆ ಇಂಗ್ಲೆಂಡಿನ ವಿರೋಧವಿದೆ. ಅಮೆರಿಕ ತಾಯ್ ಲ್ಯಾಂಡ್ ಸ್ವತಂತ್ರವಾಗಲಿ ಎಂದರೆ ಇಂಗ್ಲೆಂಡಿಗೆ ಅದು ಅಧೀನ ರಾಷ್ಟ್ರವಾಗಿರಬೇಕು. ಅವರವರ ಆರ್ಥಿಕ ನೀತಿಯ ಸ್ವಭಾವಕ್ಕೆ ಸಹಜವಾಗಿ ಈ ವಿರೋಧ ಪ್ರಕೃತಿಗಳು ಎಲ್ಲ ಅಧೀನ ರಾಷ್ಟ್ರಗಳಲ್ಲೂ ಕಾಣುತ್ತಿವೆ.

ಇಂದಿನ ವಿಶೇಷ ಕಠಿನ ಪರಿಸ್ಥಿತಿಯಲ್ಲಿ ಕಾಮನ್ ವೆಲ್ತ್ ಮತ್ತು ಇತರ ಸಾಮ್ರಾಜ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಐಕಮತ್ಯ ಸಾಧಿಸಬೇಕೆಂಬ ಬ್ರಿಟಿಷ್ ನೀತಿ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಅದಕ್ಕೆ ಪ್ರತಿ ವಿರೋಧ ಹುಟ್ಟುವುದೂ ವಾಸ್ತವಿಕ ಸತ್ಯ. ಪ್ರಪಂಚದಗತಿ, ಅಧೀನ ರಾಷ್ಟ್ರಗಳ ರಾಷ್ಟ್ರೀಯ ಚಳವಳಿ ಮತ್ತು ಅವುಗಳ ಶೈಥಿಲ್ಯ ಆಗಲೇ ಎದುರು ನಿಂತಿವೆ. ಹಳೆಯ ತಳಹದಿಯ ಮೇಲೆ, ಗತಕಾಲದ ಭಾವನೆಗಳನ್ನೇ ನಂಬಿ, ಸಾಮ್ರಾಜ್ಯದ ಕನಸಿನ ಭ್ರಮೆಯಲ್ಲೇ ಮಾತನಾಡುತ್ತ ಪ್ರಪಂಚದ ವ್ಯಾಪಾರದ ಹತೋಟಿಯನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಳ್ಳುತ್ತೇನೆಂದು - ಬೇರೆ ರಾಷ್ಟ್ರಗಳ ಮಾತು ಹಾಗಿರಲಿ-ಬ್ರಿಟನ್ ಯೋಚಿಸುವುದು ಶುದ್ಧ ಮೂರ್ಖತನದ ಸಂಕುಚಿತ ನೀತಿ ; ಏಕೆಂದರೆ ರಾಜಕೀಯ, ಆರ್ಥಿಕ ಕೈಗಾರಿಕಾ