ಪ್ರಗತಿ ಸಾಧಿಸಿ ಪ್ರಪಂಚದ ಪ್ರಮುಖ ರಾಷ್ಟ್ರವಾಗಲು ಯಾವ ಕಾರಣಗಳಿದ್ದವೋ ಅವೆಲ್ಲ ಇಂದು ಮಾಯವಾಗಿ ಇವೆ. ಆದರೂ ಬ್ರಿಟನ್ನಿಗೆ ಹಿಂದೆ ಇದ್ದ ಕೆಲವು ಅದ್ಭುತ ಶಕ್ತಿಗಳೂ ಅಪ್ರತಿಹತ ಧೈರ್ಯ, ಒಮ್ಮತದ ಕಾರ್ಯಶಕ್ತಿ, ವೈಜ್ಞಾನಿಕ ಮತ್ತು ರಚನಾತ್ಮಕ ಬಲ ಮತ್ತು ಸಮಯೋಚಿತ ವ್ಯವಹಾರ ನೀತಿ -ಈಗಲೂ ಅದಕ್ಕೆ ಇವೆ. ಈ ಗುಣಗಳು ಮತ್ತು ಅದರ ಇತರ ವೈಶಿಷ್ಟ್ಯಗಳು ಇದ್ದರೆ ಯಾವ ರಾಷ್ಟ್ರನಾದರೂ ಮಹಾರಾಷ್ಟ್ರವಾಗಬಲ್ಲುದು; ಯಾವ ಸಂಕಟ ಮತ್ತು ಅಪಾಯ ಒದಗಿದರೂ ಎದುರಿಸಬಲ್ಲುದು. ಬೇರೊಂದು ಸಮತೂಕದ ಆರ್ಥಿಕ ರಚನೆ ಅವಲಂಬಿಸಿ ತನ್ನ ಇಂದಿನ ಪ್ರಮುಖ ಸಮಸ್ಯೆ ನಿವಾರಿಸಿಕೊಳ್ಳಬಹುದು. ಆದರೆ ಮುಂದೆಯೂ ಸಾಮ್ರಾಜ್ಯವನ್ನೇ ನೆಟ್ಟ ಅದರ ಬಲದಿಂದಲೇ ಮುಂದುವರಿಯುತ್ತ ನೆಂದರೆ ಯಶಸ್ವಿಯಾಗುವುದು ಅಸಂಭವ.
ಆದರೂ ಅಮೆರಿಕ ಮತ್ತು ಸೋವಿಯಟ್ ನೀತಿಗಳಿಗೆ ಇರುವ ಮೈತ್ರಿ ಅಥವ ವಿರೋಧ ಮತ್ತು ಆ ದೇಶಗಳಿಗೂ ಬ್ರಿಟನ್ನಿಗೂ ಇರುವ ಸಂಬಂಧ ಇವುಗಳನ್ನೆ ಇದೆಲ್ಲ ಅವಲಂಬಿಸಿದೆ. ಪ್ರಪಂಚ ಶಾಂತಿ ಮತ್ತು ಸಹಕಾರ ದೃಷ್ಟಿಯಿಂದ ಮೂರೂ ಮಹಾರಾಷ್ಟ್ರಗಳ ಒಮ್ಮತದ ಕಾರ್ಯಾಚರಣೆ ಅವಶ್ಯವೆಂದು ಎಲ್ಲರೂ ಕೂಗುತ್ತಿದ್ದಾರೆ. ಆದರೆ ಯುದ್ಧ ನಡೆಯುತ್ತಿರುವಾಗ ಸಹ ಪ್ರತಿಯೊಂದು ಹೆಜ್ಜೆಗೂ ಒಡಕು ಮತ್ತು ಭಿನ್ನಾಭಿಪ್ರಾಯಗಳೇ ಎದ್ದು ನಿಲ್ಲುತ್ತಿವೆ. ಭವಿಶ್ಯ ಏನೇ ಇರಲಿ ಯುದ್ಧದ ನಂತರ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಆರ್ಥಿಕ ನೀತಿಯು ವಿಸ್ತೃತವೂ, ಪರಿಣಾಮದಲ್ಲಿ ಸ್ಫೋಟಕವೂ ಆಗುತ್ತದೆ. ಇದರಿಂದ ಹೊಸ ಬಗೆಯ ಸಾಮ್ರಾಜ್ಯವೇನಾದರೂ ಜನ್ಮತಾಳುತ್ತದೆಯೆ? ಪ್ರಪಂಚದ ಭವಿಷ್ಯದ ಗತಿ ನಿರ್ಧಾರಕ ಶಕ್ತಿ ಅಮೆರಿಕೆಗೆ ಇರುವುದರಿಂದ ಆ ನೂತನ ಸಾಮ್ರಾಜ್ಯವೇನಾದರೂ ಜನ್ಮತಾಳಿದರೆ ಅದು ಇನ್ನೊಂದು ಪ್ರಪಂಚ ದುರಂತವೇ ಸರಿ.
ಸೋವಿಯಟ್ ಸಂಯುಕ್ತ ರಾಷ್ಟ್ರದ ಭಾಗೀನೀತಿ ಇನ್ನೂ ಗುಪ್ತವೇ ಇದೆ; ಆದರೂ ತೆರೆಮರೆಯ ಕಿರು ನೋಟ ಒಮ್ಮೊಮ್ಮೆ ದೊರಕುತ್ತದೆ. ತನ್ನ ಗಡಿಯ ಸುತ್ತಮುತ್ತ ಆದಷ್ಟು ಅಧೀನವೋ ಅಥವ ಅರೆಬರೆಯ ಸ್ವಾತಂತ್ರ್ಯದವೋ ಆದ ಮಿತ್ರರಾಷ್ಟಗಳ ವ್ಯೂಹ ಕಟ್ಟಿಕೊಳ್ಳಬೇಕೆಂಬುದೇ ಅದರ ಗುರಿ. ಇತರ ರಾಷ್ಟ್ರ ಗಳೊಂದಿಗೆ ಸಹಕರಿಸಿ ಒಂದು ಪ್ರಪಂಚ ಸಂಸ್ಥೆಯ ರಚನೆ ಬೆಂಬಲಕೊಡುತ್ತಿದ್ದರೂ ತನ್ನ ಅಜೇಯ ಅಂತಃ ಶಕ್ತಿಯ ಆಧಾರದಮೇಲೆ ಸ್ವಶಕ್ತಿಯನ್ನು ವೃದ್ಧಿಗೊಳಿಸುವುದರಲ್ಲೇ ಅದಕ್ಕೆ ವಿಶ್ವಾಸ ಹೆಚ್ಚು. ಇತರ ರಾಷ್ಟ್ರ ಗಳದೃಷ್ಟಿಯೂ ಸಾಧ್ಯವಾದಷ್ಟು ಅದೇ ಇರುವಂತೆ ಇದೆ. ಪ್ರಪಂಚದ ಸೌಹಾರ್ದಕ್ಕೆ ಇದು ಶುಭಸೂಚನೆಯಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಬ್ರಿಟನ್ನಿಗೆ ಇರುವ ರಫ್ತು ವ್ಯಾಪಾರ ಪೈಪೋಟಿ ಸೋವಿಯಟ್ ರಾಷ್ಟ್ರಕ್ಕೂ ಮತ್ತು ಇತರ ದೇಶಗಳಿಗೂ ಇಲ್ಲ. ಆದರೆ ಅಭಿಪ್ರಾಯ ಭೇದದ ಆಳ ಅಪಾರವಿದೆ. ಅವರ ದೃಷ್ಟಿಕೋಣವೇ ಬೇರೆ ಬೇರೆ. ಯುದ್ಧ ಕಾಲದ ಏಕೀ ಭಾವನೆಯ ಹೋರಾಟದ ಮೈತ್ರಿಯಿಂದ ಸಹ ಪರಸ್ಪರ ಸಂಶಯ ನಾಶವಾಗಿಲ್ಲ. ಈ ಭಿನ್ನಾಭಿಪ್ರಾಯ ಪ್ರಬಲವಾದರೆ ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಬ್ರಿಟನ್ ಒಂದು ಕಡೆ ಸೇರಿ ಸೋವಿಯಟ್ ರಾಷ್ಟ್ರದ ವಿರುದ್ಧ ನಿಲ್ಲುವುದು ನಿಶ್ಚಯ.
ಈ ಚಿತ್ರದಲ್ಲಿ ಏಷ್ಯ ಮತ್ತು ಆಫ್ರಿಕದ ಕೋಟ್ಯಾನುಕೋಟಿ ಜನರ ಸ್ಥಾನ ಏನು? ಅವರ ಆತ್ಮ ಪ್ರಜ್ಞೆ ಈಗ ಹೆಚ್ಚುತ್ತಿದೆ. ತಮ್ಮ ಭವಿಷ್ಯದಲ್ಲಿ ಅವರಿಗೆ ಹೆಚ್ಚು ವಿಶ್ವಾಸವಿದೆ; ವಿಶ್ವದೃಷ್ಟಿಯೂ ಅವರಲ್ಲಿದೆ. ಅವರಲ್ಲನೇಕರು ಪ್ರಪಂಚ ಘಟನೆಗಳನ್ನು ಅತಿ ಕುತೂಹಲದಿಂದ ಅಭ್ಯಾಸಮಾಡುತ್ತಿದಾರೆ. ಪ್ರತಿಯೊಂದು ಘಟನೆಯನ್ನೂ ಅವರು ತಮ್ಮ ಸ್ವಾತಂತ್ರ್ಯಕ್ಕೆ ಅದರಿಂದ ಸಹಾಯವಾಗುತ್ತದೆಯೆ, ತಮ್ಮ ರಾಷ್ಟ್ರದ ಮೇಲಿನ ಪರರಾಷ್ಟ್ರದ ಸ್ವಾಮ್ಯ ಮುಕ್ತಾಯವಾಗುತ್ತದೆಯೆ, ಇತರರೊಂದಿಗೆ ಸಹಕರಿಸಿ ತಮಗೆ ಇಷ್ಟಬಂದ ಜೀವನ ನಡೆಸಲು ಸ್ವಾತಂತ್ರ್ಯ ಮತ್ತು ಶಕ್ತಿ ದೊರೆಯುವುದೆ, ಎಲ್ಲ ರಾಷ್ಟ್ರಗಳಿಗೆ ಮತ್ತು ರಾಷ್ಟ್ರಗಳ ಒಳ ಪಂಗಡಗಳಿಗೆ ಸಮಾನತೆ ಮತ್ತು ಸಮಾನ ಅವಕಾಶ ದೊರೆಯುವುದೆ, ಬಡತನ, ಅಜ್ಞಾನ ಬೇಗ ನಿವಾರಣೆಮಾಡಿ ಜೀವನಮಟ್ಟ ಉತ್ತಮಗೊಳಿಸಲು ಅವಕಾಶ ದೊರೆಯುವುದೆ, ಎಂಬ ದೃಷ್ಟಿಯಿಂದ ಎಲ್ಲ ಘಟನೆಗಳನ್ನು ನೋಡುತ್ತಿದಾರೆ. ರಾಷ್ಟ್ರೀಯ ಭಾವನೆ ಅವರಲ್ಲಿದ್ದರೂ ಅದು