ವಂತೆ ಅಂತರಾತ್ಮನು ಸ್ವತಃ ಆಕಾರ ರಹಿತನಾದರೂ, ಯಾವ ವಸ್ತುವನ್ನು ಪ್ರವೇಶಿಸುತ್ತಾನೆಯೋ ಆ ವಸ್ತುವಿನ ಆಕಾರವನ್ನೆ ತಾಳುತ್ತಾನೆ. ಎಲ್ಲ ವಸ್ತುಗಳ ಮುಖ್ಯ ಸಾರವೂ ಒಂದೇ ಎಂಬ ಈ ಪರಿಜ್ಞಾನ ನಮಗೂ ಅವುಗಳಿಗೂ ಮಧ್ಯೆ ಇರುವ ಪ್ರತಿಬಂಧಕಗಳನ್ನು ನಾಶಮಾಡುತ್ತದೆ; ಪ್ರಕೃತಿಗೂ ಮನುಷ್ಯನಿಗೂ ಒಂದು ಐಕ್ಯತೆಯನ್ನು ಬಾಹ್ಯ ಪ್ರಪಂಚದ ವೈಚಿತ್ರ ಮತ್ತು ವೈವಿಧ್ಯತೆಯಲ್ಲಿ ಮೂಲತಃ ಇರುವ ಐಕ್ಯತೆಯನ್ನು ಉಂಟುಮಾಡುತ್ತದೆ. “ ಎಲ್ಲವೂ ಆತ್ಮಮಯ ಎಂದು ಅರಿತವನಿಗೆ ದುಃಖವೆಲ್ಲಿ, ಆತ್ಮನಲ್ಲಿ ನೆಟ್ಟ ದೃಷ್ಟಿಯುಳ್ಳವನಿಗೆ ಭ್ರಮೆ ಎಲ್ಲಿ ? ” “ ಸರ್ವಸ್ವವನ್ನೂ ಆತ್ಮನಲ್ಲಿ ಕಾಣುವವನು ಆತ್ಮನನ್ನು ಸರ್ವಸ್ವದಲ್ಲಿ ಕಾಣುವವನು ಆ ಆತ್ಮನಿಂದ ಅಡಗುವುದೆಲ್ಲಿ, "
ಎಲ್ಲ ಜಾತಿಮತಗಳ, ಬಾಹ್ಯ ಅಂತರ್ಭದಗಳಿಂದ ದೂರವಾಗಿರುವ ಈ ವಿಶ್ವ ವ್ಯಾಪಕ ದೃಷ್ಟಿ ಯನ್ನು ಇಂಡೋ ಆರ್ಯರ ಉಗ್ರ ವ್ಯಕ್ತಿವಾದ ಮತ್ತು ಮಡಿವಂತಿಕೆಯೊಂದಿಗೆ ಹೋಲಿಸಿ ತುಲನ ಮಾಡುವುದು ಒಳ್ಳೆಯದು. ಈ ದೃಷ್ಟಿ ಒಂದು ವಿಧವಾದ ತಾತ್ವಿಕ ಪ್ರಜಾಸತ್ತೆ. ಈ ಎಲ್ಲದರಲ್ಲೂ ಒಂದೇ ವಸ್ತುವನ್ನು ಕಾಣುವವನು, ಒಂದು ವಸ್ತುವಿನಲ್ಲಿ ಎಲ್ಲವನ್ನೂ ಕಾಣುವವನು ಯಾವ ವಸ್ತು ವನ್ನೂ ಕಡೆಗಣಿಸಲಾರ” ಇದು ಒಂದು ಸಿದ್ದಾಂತ ಮಾತ್ರವಾದರೂ ಅದು ಜೀವನದ ಮೇಲೆ ಸ್ವಲ್ಪ ಮಟ್ಟಿಗಾದರೂ ಪ್ರಭಾವ ಬೀರಿರಬೇಕು. ಚೀನಿಯರಂತೆ ಭಾರತೀಯ ಸಂಸ್ಕೃತಿಯ ಮುಖ್ಯ ವೈಶಿಷ್ಟ ಗಳಾದ ಪರಸ್ಪರ ಸಹಿಷ್ಣುತೆ, ಯುಕ್ತಾಯುಕ್ತ ವಿವೇಚನೆ, ಸ್ವತಂತ್ರ ಧರ್ಮಾಚರಣೆಯಲ್ಲಿ ಸಹನೆ, ತಾನೂ ಬದುಕಿ ತನ್ನ ನೆರೆಯೂ ಬದುಕಲೆಂಬ ಆಶೆ ಮತ್ತು ಶಕ್ತಿಗಳನ್ನು ಕೊಟ್ಟಿರಬೇಕು. ಮತ ಧರ್ಮದಲ್ಲಿಯಾಗಲಿ ಸಂಸ್ಕೃತಿಯಲ್ಲಾಗಲಿ ಸರ್ವಾಧಿಕಾರತ್ವ ಇರಲಿಲ್ಲ. ಈ ವಿವೇಕಪೂರ್ಣ ಪುರಾ ತನ ನಾಗರಿಕತೆಯ ಜ್ಞಾನಸಂಪತ್ತು ಅಪಾರವಿದ್ದುದಲ್ಲದೆ ಯಾವ ಸಂಕುಚಿತ ಮನೋಭಾವನೆಯೂ ಎಂದೂ ಇರಲಿಲ್ಲ.
ಉಪನಿಷತ್ತಿನ ಒಂದು ಪ್ರಶ್ನೆ ಗೆ ಬಹಳ ಅರ್ಥಗರ್ಭಿತವೂ, ಅತ್ಯಾಶ್ಚರ್ಯವೂ ಆದ ಉತ್ತರ ಕೊಟ್ಟಿದ್ದಾರೆ. ಪ್ರಶ್ನೆ ಈ ರೀತಿ ಇದೆ. “ ಈ ವಿಶ್ವ ಏನು, ಎಲ್ಲಿಂದ ಹುಟ್ಟಿತು ? ಎಲ್ಲಿಗೆ ಹೋಗುತ್ತದೆ ” ? ಅದಕ್ಕೆ ಉತ್ತರ “ ಸ್ವತಂತ್ರದಲ್ಲಿ ಹುಟ್ಟುತ್ತದೆ, ಸ್ವತಂತ್ರದಲ್ಲಿ ಇರುತ್ತದೆ, ಸ್ವತಂತ್ರ ದಲ್ಲಿ ಲಯವಾಗುತ್ತದೆ. ” ಇದರ ಖಚಿತವಾದ ಅರ್ಥವೇನೆಂಬುದನ್ನು ನಾನು ಹೇಳಲಾರೆ. ಆದರೆ ಇಷ್ಟು ಮಾತ್ರ ಹೇಳಬಹುದು, ಉಪನಿಷತ್ಕಾರರಿಗೆ ಸ್ವತಂತ್ರಾಭಿಲಾಷೆ ಜೀವದುಸಿರಾಗಿತ್ತು, ಎಲ್ಲವನ್ನೂ ಅದರ ಹಿನ್ನೆಲೆಯಲ್ಲಿ ನೋಡುತ್ತಿದ್ದರು. ಸ್ವಾಮಿ ವಿವೇಕಾನಂದರು ಈ ದೃಷ್ಟಿಗೆ ಬಹಳ ಮಹತ್ವ ಕೊಟಿದ್ದರು.
ಆ ಪುರಾತನ ಯುಗದ ಪ್ರಪಂಚಕ್ಕೆ ಹೋಗಿ ಅಂದಿನ ಮಾನಸಿಕ ಸನ್ನಿವೇಶವನ್ನು ಪ್ರವೇಶಿ ಸಲು ನಮ್ಮ ಊಹೆಗೂ ಸಾಧ್ಯವಿಲ್ಲ. ಆ ಬರವಣಿಗೆಯ ರೀತಿ ಸಹ ನಮಗೆ ತುಂಬ ಅಪರಿಚಿತ, ನೋಡಲು ವಿಚಿತ್ರ, ಅನುವಾದ ಮಾಡಲು ಕಷ್ಟ ತಮ, ಆ ಜೀವನದ ಹಿನ್ನೆಲೆಯೇ ತೀರ ಭಿನ್ನ, ಇಂದಿನ ಜೀವನದಲ್ಲಿ ಎಷ್ಟೋ ವಿಷಯಗಳು ವಿಚಿತ್ರವೂ ಅರ್ಥಶೂನ್ಯವೂ ಆಗಿ ಕಂಡರೂ, ಅಭ್ಯಾಸಬಲದಿಂದ ಅವೆಲ್ಲ ಸರಿ ಎಂದು ಭಾವಿಸುತ್ತೇವೆ. ಆದರೆ ನಮಗೆ ಅಭ್ಯಾಸವಿಲ್ಲದುದನ್ನು ಅರ್ಥಮಾಡಿಕೊಂಡು ಮೆಚ್ಚುವುದು ಬಹು ಕಷ್ಟ. ಈ ಎಲ್ಲ ಕಷ್ಟಗಳಿದ್ದರೂ, ಅಸಾಧ್ಯ ಪ್ರತಿಬಂಧಕಗಳಿದ್ದರೂ, ಭಾರತೀಯ ಇತಿಹಾಸದ ಆದ್ಯಂತವೂ ಉಪನಿಷತ್ಸಂದೇಶಕ್ಕೆ ಅದ್ಭುತ ಪುರಸ್ಕಾರ ದೊರೆತಿದೆ; ಅದರಿಂದ ರಾಷ್ಟಮನಸ್ಸು ಮತ್ತು ಗುಣ ಎರಡೂ ಅದ್ಭುತವಾಗಿ ರೂಪುಗೊಂಡಿವೆ. ಯಾವ ಹಿಂದೂದರ್ಶನವನ್ನೇ ತೆಗೆದುಕೊಂಡರೂ-ಅಸಂಪ್ರದಾಯ ಬೌದ್ಧ ಧರ್ಮವೂ ಸೇರಿ–ಅದರ ಮೂಲ ಉಪನಿಷತ್ತುಗಳಲ್ಲಿದೆ ? ಎಂದು ಬ್ಲೂಮ್ ಫೀಲ್ಡ್ ಹೇಳುತ್ತಾನೆ.
ಪ್ರಾಚೀನ ಹಿಂದೂದರ್ಶನ ಇರಾನದ ಮೂಲಕ ಗ್ರೀಸ್ ದೇಶದಲ್ಲಿ ಹರಡಿ ಅಲ್ಲಿನ ದಾರ್ಶನಿಕರು ಮತ್ತು ವಿದ್ವಾಂಸರ ಮೇಲೆ ಪ್ರಭಾವ ಬೀರಿತು, ಅನೇಕ ವರ್ಷಗಳ ನಂತರ ಪ್ರೋಟನಸ್ ಇರಾನಿ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಬೇಕೆಂದು ಪಾಶ್ಚಾತ್ಯ ದೇಶಗಳಿಗೆ ಬಂದನು.