ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
105


ಯಕ್ಷಗಾನ ಪದಗಳನ್ನು ಕಲಿಸಿ, ಆ ಕುರಿತ ಆಸಕ್ತಿ, ಅಭಿರುಚಿ ಬೆಳೆಯುವಂತೆ ಮಾಡಿದ ತನ್ನ ತಾಯಿ ಮತ್ತು ಅಜ್ಜಿಯನ್ನು ನೆನೆದಿದ್ದಾರೆ. ಇಂತಹ ಹಿನ್ನೆಲೆ ನಮ್ಮ ಪ್ರದೇಶದ ಬಹುಮಂದಿ ಸಾಹಿತಿಗಳಿಗಿದ್ದರೂ, ಒಂದಿಬ್ಬರನ್ನು ಬಿಟ್ಟರೆ, ಈ ಕಲೆಯ ಬಗೆಗೆ ಸಕ್ರಿಯವಾಗಿ ಪ್ರವೃತ್ತಿ ಅಥವಾ ವಿಮರ್ಶೆ ಶೋಧನೆಗಳಲ್ಲಿ ಆಸಕ್ತರಾದವರು ಕಡಿಮೆ. ಇಂತಹ ಶ್ರೀಮಂತವಾದ, ಸೃಷ್ಟಿಶೀಲವಾದ ಒಂದು ಕಲೆಯನ್ನು ಕುರಿತು ನಮ್ಮ ಪ್ರದೇಶದ ಸಾಹಿತಿ ಕಲಾವಿದರ ನಿರ್ಲಕ್ಷ್ಯ ಹಾಗೂ ಅನಾದರವು ನಮ್ಮ ಈ ಕರಾವಳಿಯ ಸಾಂಸ್ಕೃತಿಕ ಇತಿಹಾಸದ ವಿಲಕ್ಷಣ ವಿದ್ಯಮಾನಗಳಲ್ಲಿ ಒಂದಾಗಿದ್ದು, ಇದರಿಂದಾಗಿ ಉತ್ತಮ ಪ್ರತಿಭೆಯ ಲಾಭವು ಈ ರಂಗಕ್ಕೆ ತಪ್ಪಿಹೋದುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣವೇನು ಎಂಬುದರ ಬಗೆಗೂ ಮುಳಿಯರ ಗ್ರಂಥವೇ ಪರೋಕ್ಷವಾಗಿ ಉತ್ತರಿಸುತ್ತದೆ ಎನ್ನಬಹುದು. . ಅವರು ತಮ್ಮ ಮುನ್ನುಡಿಯಲ್ಲಿ ಪುಟ (v, vi) ಜನಪದ ಸಾಹಿತ್ಯದ ಪ್ರಾಚೀನತೆ, ಅದರ ಮಹತ್ವ, ದಕ್ಷಿಣ ಭಾರತದ ಜಾನಪದದ ಉಜ್ವಲ ಭವಿಷ್ಯ ಇದನ್ನು ಸೂಚಿಸಿ, ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಗ್ರಂಥದ ರಚನೆಯ ಆವಶ್ಯಕತೆಯನ್ನೂ ಹೇಳಿದ್ದಾರೆ. ಈ ಸಂದರ್ಭ ದಲ್ಲಿ ಅವರು (ಪುಟ vi) 'ಜನಾಂಗದ ಜೀವಂತವಾದ ಸಂಸ್ಕೃತಿ, ಮಾರ್ಗೀಯ ಸಾಹಿತ್ಯದೊಳಗಿನದಕ್ಕಿಂತಲೂ ಸ್ಪುಟತರವಾಗಿ ಜನಪದ ಸಾಹಿತ್ಯದೊಳಗೆ ಪ್ರತಿಬಿಂಬಿಸುವುದಿಲ್ಲವೆ ?” ಎಂದು ಹೇಳಿರುವುದು ತುಂಬ ಸೂಚಕವಾಗಿದೆ. ಮತ್ತು ಆ ಕಾಲದಲ್ಲಿ ಕನ್ನಡ ಸಾಹಿತಿಯೊಬ್ಬನು ತಳೆದಿರುವ ನಿಲುವು, ಅಂದಿನ ಹಲವರಿಗಿಂತ ಭಿನ್ನವಾಗಿದೆ, ಪುರೋಗಾಮಿಯಾಗಿದೆ. ಇದೇ ಅರ್ಥದ ಮಾತುಗಳು ಅವರ ಬೇರೆ ಗ್ರಂಥಗಳಲ್ಲಿ ಕಂಡುಬರುತ್ತವೆ. ಇಂತಹ ದೃಷ್ಟಿ ಇಲ್ಲದಿದ್ದುದರಿಂದ ಅಥವಾ ಇದಕ್ಕೆ ವಿರುದ್ಧವಾದ ದೃಷ್ಟಿ ಇದ್ದುದರಿಂದಲೇ ನಮ್ಮ ಕವಿ ಸಾಹಿತಿಗಳನೇಕರು ಈ ಕಲೆಯ ಬಗೆಗೆ ತಾಳಬೇಕಾಗಿದ್ದಷ್ಟು ಪ್ರೀತಿ ಯನ್ನು ಹೊಂದಿಲ್ಲದಿರುವುದೂ ನಿಚ್ಚಳವಾಗಿದೆ. ದೇಸಿಯ ಬಗೆಗಿನ ಮುಳಿಯರ ಒಲವು ಪ್ರೀತಿ ತುಂಬ ಗಮನಾರ್ಹವಾಗಿವೆ.
ಭೂಮಿಕೆಯ ಆರಂಭದಲ್ಲಿ (ಪುಟ 1) ಮುಳಿಯರು ಸಾಂದರ್ಭಿಕವಾಗಿ ಬಹುಮುಖ್ಯವಾದ ಒಂದು ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ರಾಷ್ಟ್ರ