ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಂಪರೆ ಮತ್ತು ಪ್ರಯೋಗ


ಒಂದು ಕಲೆಯಲ್ಲಿ, ವಿಶೇಷತಃ, ಪ್ರಾಚೀನ ಸ್ವರೂಪವನ್ನು ಹೊಂದಿರುವ ಪಾರಂಪರಿಕ ಕಲೆಯೊಂದರಲ್ಲಿ, ಪರಂಪರೆ ಎಂದರೆ ಏನು ? ಅದರಲ್ಲಿ ನವೀನ ಪ್ರಯೋಗ (experiment) ಎಂದರೆ ಅದರ ಸ್ವರೂಪ, ಸ್ವಭಾವಗಳೇನು ? ಎಂಬುದು ಗಹನವಾದ ಪ್ರಶ್ನೆ. ಆಧುನಿಕವಾದ ಕಲಾಮಾಧ್ಯಮಗಳಲ್ಲಿ, ಸಾಹಿತ್ಯರೂಪಗಳಲ್ಲಿ ಹೊಸ ಪ್ರಯೋಗವನ್ನು ಕೈಗೊಳ್ಳುವಾಗ ಕಲಾವಿದನಿಗೆ, ಸಾಹಿತಿಗೆ ಇರುವ ಸ್ವಾತಂತ್ರ್ಯವು, ಪಾರಂಪರಿಕ ರೂಪಗಳಲ್ಲಿ ಇರುವುದಿಲ್ಲ. ಇರಬೇಕಾಗಿಯೂ ಇಲ್ಲ.

ಕಲೆಯ ಪರಂಪರೆಯೆಂಬುದು ಅದರ ಒಟ್ಟು ಬೆಳವಣಿಗೆಯ ಸ್ವರೂಪ ಅದರ ಇತಿಹಾಸ. ಅದಕ್ಕೆ ವಿವಿಧ ಹಂತಗಳಿವೆ, ಮಜಲುಗಳಿವೆ. ಹಾಗೆ, ಹಂತಗಳಲ್ಲಿ ಬೆಳೆದು ಬಂದು, ಒಂದು ಕಾಲಘಟ್ಟದಲ್ಲಿ ನೋಡಿದಾಗ ಅದು ತೋರ್ಪಡಿಸುವ ಸ್ವರೂಪವೇ ಶೈಲಿ. ಶೈಲಿ ಎಂಬುದು ಪರಂಪರೆಯ ಫಲ. ಪರಂಪರೆಯಿಂದುಳಿದು, ಇಳಿದು ಬಂದ ಸಾರ ಎನ್ನಬಹುದು. ವಿಶಿಷ್ಟವಾದ ಶೈಲಿಯಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಳ್ಳುವ ಕಲಾರೂಪಕ್ಕೆ ಶೈಲಿಬದ್ದ ಅಥವಾ ಶೈಲೀಕೃತ (Stylised) ಕಲೆ ಎನ್ನುತ್ತೇವೆ. ಇಲ್ಲಿ ಆ ಶೈಲಿ, ತನ್ನದಾದ ಸಂಕೇತ, ಪದ್ಧತಿ, ಸಂಪ್ರದಾಯಗಳನ್ನು ರೂಪಿಸಿಕೊಂಡು ಬಂದಿರುತ್ತದೆ. ಆ ಕಲೆಗೆ ಅದರದ್ದಾದ ಒಂದು ತಂತ್ರ, ಭಾಷೆ-ಸಿದ್ಧ ಭಾಷೆ ಇರುತ್ತದೆ. ಹಾಗಾಗಿಯೇ ಒಬ್ಬ ಆಧುನಿಕ ಕತೆಗಾರನಿಗೆ, ಚಿತ್ರಕಾರನಿಗೆ, ಪಾಶ್ಚಾತ್ಯ ಶೈಲಿಯ ನರ್ತಕನಿಗೆ ಇರುವ ಸ್ವಾತಂತ್ರ್ಯ, ಯಕ್ಷಗಾನದಂತಹ ಕಲೆಯಲ್ಲಿ ವ್ಯವಹರಿಸು


ಹೆಜ್ಜೆ ಗುರುತು : ಬಾಳಿಲ ವಿದ್ಯಾಬೋಧಿನಿ ಹೈಸ್ಕೂಲು ಬೆಳ್ಳಿಹಬ್ಬ ಸಂಚಿಕೆ ಜನವರಿ 1988.