ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ
9


ಜಾಗರ: 1986) ಬೇರೆ ಬೇರೆ ಅಭಿಪ್ರಾಯಗಳಿವೆ. ಮೂಲವೆಂತೂ ಇರಲಿ, ಕರಾವಳಿ ಯಕ್ಷಗಾನದ ತನ್ನದಾದ ಸ್ವರೂಪಕ್ಕಂತೂ ಇಲ್ಲಿನ ಪ್ರಕೃತಿ ತನ್ನ ಬಲಿಷ್ಠವಾದ ಪ್ರಭಾವ ಸಂಸ್ಕಾರಗಳನ್ನು ನೀಡಿದ್ದು ನಿಜ. ಇದೇ ರೀತಿಯ ನೈಸರ್ಗಿಕ ಸ್ವರೂಪವುಳ್ಳ ಕೇರಳದ ಕಥಕಳಿ, ತೈಯ್ಯಂ ಮುಂತಾದ ಪ್ರಕಾರ ಗಳಿಗೂ, ಕನ್ನಡ ಕರಾವಳಿಯ ಆರಾಧನಾ ಕಲೆ, ರಂಗಕಲೆಗಳ ಸಮುದಾಯಕ್ಕೂ ಸ್ಪಷ್ಟವಾದ ಸಾಮ್ಯವಿರುವುದನ್ನು ಇಲ್ಲಿ ನೆನಪಿಸುವುದು ಬೋಧಕವಾಗಿದೆ.
ಮೊದಲಾಗಿ ಯಕ್ಷಗಾನದಲ್ಲಿ ಬಳಕೆಯಾಗುವ ಸಾಮಗ್ರಿ, ಪರಿಕರಗಳನ್ನು ನೋಡೋಣ. ಇವು ಹೆಚ್ಚು ಕಡಿಮೆ ಎಲ್ಲವೂ ಇದೇ ಪ್ರದೇಶದ ಉತ್ಪಾದನ ಗಳು, ವೇಷದ ಬಟ್ಟೆಗಳೆಲ್ಲ ಕುಂಬಳೆ, ಸಾಲಿಕೇರಿಗಳ ಕೈಮಗ್ಗದವುಗಳು. ಸಾಂಪ್ರದಾಯಕವಾದ ಬಣ್ಣಗಳು-ಇಂಗಳೇಕವೆಂಬ ಕೆಂಪು (ಕಲ್ಲಿನ ಹುಡಿ), ಅರಸಿನ, ಅರದಾಳ ಅಥವಾ ಚಾಯವೆಂಬ ಹರಿದ್ಗೌರವರ್ಣ, ಎಳ್ಳೆಣ್ಣೆಯ ಕಾಡಿಗೆ, ಬಿಳಿಬಣ್ಣಕ್ಕಾಗಿ ಅಕ್ಕಿ ಸುಣ್ಣಗಳ ಹಿಟ್ಟು ಇವೆಲ್ಲ ಸ್ಥಳೀಯವೇ ಹಸುರು ಬಣ್ಣಕ್ಕೆ ಮೊದಲು ಇದ್ದುದು ನಾರುಗಳಿಲ್ಲದ ನೆಲ್ಲಿಮರದ ಎಲೆ ಮುಂತಾದವುಗಳನ್ನು ಒಣಗಿಸಿ ಮಾಡಿದ ಪುಡಿ, ಹೊಳೆತಕ್ಕೆ ಮತ್ತು ಭೂಷಣ ಗಳ ಅಲಂಕಾರಕ್ಕೆ ಬಳಸುತ್ತಿದ್ದ ಬಿಂಗ ಅಥವಾ ಅಭೃಕ ಇಲ್ಲಿ ಬೇಕಷ್ಟು ಲಭ್ಯ.
ಭೂಷಣಗಳ ರಚನೆ ಮರಗಳಿಂದಲೇ. ಅದಕ್ಕೆ ಬಳಸುವುದು ಇಲ್ಲಿ ಬೇಕಷ್ಟಿರುವ ಕಾವಂಟೆ, ಹೊಂಗಾರಕ, ಬೆಂಡಿನ ಮರಗಳನ್ನು, ಚಂಡೆ ಮದ್ದಲೆ ಗಳ ಕಳಸೆಗಳು ಇಲ್ಲಿನ ಕಾಚು, ಕೊಂದೆ, ಖದಿರ, ಹಲಸು, ಹೆಬ್ಬಲಸು, ತೆಂಗು, ತಾಳೆ ಮರದವುಗಳು: ಚರ್ಮ ಆಡು, ಕರುಗಳದ್ದು. ಹಗ್ಗಗಳು ಊರ ಸಣಬು, ನಾರುಕೋಲು, ಕತ್ತಾಳೆ ಗಿಡ, ಭೂತಾಳೆ ಗಿಡ, ತೆಂಗಿನ ಹುರಿ. ಕಿರೀಟದ ಹಿಂಬದಿಗೆ ಇಳಿಬಿಡುವ ಕೂದಲು, ಅಂತೆಯೇ ಮೀಸೆಗಳಿಗೆಲ್ಲ ದಟ್ಟಾಳೆ ಎಂಬ ಕಳ್ಳಿಜಾತಿಯ ಗಿಡದ ಎಲೆಗಳಿಂದ ತಯಾರಿ.