ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
10
ಮಾರು ಮಾಲೆ

ಇಲ್ಲಿನ ಕಾಡುಗಳಲ್ಲಿ ಸಿಗುತ್ತಿದ್ದ, ಈಗಲೂ ವಿರಳವಾಗಿ ಸಿಗುವ, ನವಿಲಿನ ಗರಿ, ಹೀಲಿಗಳು ಕಿರೀಟ, ಭೂಷಣಗಳಿಗೆ ಬಳಕೆ, ಹಿಂದೆ ಬಣ್ಣದ ವೇಷದ ತಟ್ಟೆ ಕಿರೀಟಕ್ಕೆ ಸಾಲು ಸುತ್ತುಗಳಾಗಿ ಮಣಿಗಳಂತೆ ಪೋಣಿಸುತ್ತಿದ್ದುದು ಹಸಿರು, ನೀಲಿ ಬಣ್ಣದ ಕಾಡು ಹುಳಗಳ ಚಿಪ್ಪುಗಳನ್ನು, ಕಿರಾತನ ವೇಷಕ್ಕೆ ಕೆಂಚಣಿಲಿನ (ಅಳಿಲು) ಬಾಲ ಮತ್ತು ಕಾಡುಕೋಳಿಯ ಗರಿಗಳು, ಜಾಗಟೆ ಬಾರಿಸುವುದಕ್ಕೆ ಜಿಂಕೆ ಕೊಂಬು, ನರಸಿಂಹ, ಕಾಳಿ ವೇಷಗಳ ಕೆನ್ನಾಲಗೆ ಅಡಕೆ ಹಾಳೆಯಿಂದ ನಿರ್ಮಿತ.
ಶ್ರುತಿ ಬುರುಡೆಗೆ ಬಳಸುವ ಸೋರೆ, ಕಾಡುಸೋರೆಗಳು, ವೇಷಭೂಷಣ, ಮದ್ದಲೆ ಶೃತಿಗಳಿಗೆ ಬೇಕಾಗುವ ಮೇಣಗಳು-ಜೇನು ಮೇಣ, ಹಲಸಿನ ಮೇಣ, ಗುರುಗುಂಜಿ ಅಂಟು : ಎಲ್ಲ ಇಲ್ಲಿನವುಗಳೇ, ಪಗಡಿ ಎಂಬ ಶಿರೋ ಭೂಷಣಕ್ಕೆ ಸುತ್ತುತ್ತಿದ್ದ ಜರಿಲಾಡಿಗಳು ಹಿಂದೆ ಬಾಳೆ ಹಗ್ಗದವುಗಳು. (ಬಾಳೆ ಪಟ್ಟೆಗೆ ಬಿಂಗದ ಹುಡಿ ಅಂಟಿಸಿದ ಜರಿಲಾಡಿಗಳು), ಬಣ್ಣದ ಕಡ್ಡಿ ತೆಂಗಿನದು. ಬಣ್ಣದ ವೇಷಗಳು ಭಯಾನಕತೆ ನಿರ್ಮಿಸಲು ಬೆಂಕಿಯ ಪಂಜು ಗಳಿಗೆ ಎರಚುವ 'ರಾಳ' ಧೂಪದ ಮರದ ಮೇಣದ ಪುಡಿ, ಕೋಡಂಗಿ ಕಿರಾತರ ವೇಷಗಳಿಗೆ, ಆಭರಣಗಳಾಗಿಯೂ, ಉಳಿದ ಕೆಲವು ವೇಷಗಳಿಗೆ ಆಯುಧವಾಗಿಯೂ ಬಳಸುತ್ತಿರುವ ಮಾವಿನಸೊಪ್ಪು-ಇಷ್ಟೆಲ್ಲವೂ ಅಚ್ಚ ಇಲ್ಲಿನವೇ.
ಸಾಂಪ್ರದಾಯಿಕ ಸಾಮಗ್ರಿಯಲ್ಲಿ ಇಲ್ಲಿನದಲ್ಲವೆಂದು ಕಾಣುವಂತಹದು ಯಕ್ಷಗಾನ ಭೂಷಣಗಳ ಪ್ರಧಾನ ವರ್ಣವಾದ ಹಳದಿ ಬಣ್ಣದ ಬೇಗಡೆ ಅಥವಾ 'ಚಿನ್ನದ ತಗಡು'. ಇದರ ಸ್ಥಾನದಲ್ಲಿ ಹಿಂದೆ ಸ್ಥಳೀಯವಾದ ಸಾಮಗ್ರಿ ಯಾವುದೋ ಇದ್ದಿರಬೇಕು. ಹೀಗೆ ಸಮಗ್ರ ಸಾಮಗ್ರಿ ಪ್ರಾದೇಶಿಕ ವಾದದ್ದು. ಈಗ ಇವುಗಳಲ್ಲಿ ಹಲವು ವಸ್ತುಗಳ ಸ್ಥಾನದಲ್ಲಿ ಹೊರಗಿನ ಉತ್ಪನ್ನಗಳು ಮಾರುಕಟ್ಟೆಗಳ ಮೂಲಕ ಬಂದು ಸೇರಿವೆ.