ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ
11


ಸಾಮಗ್ರಿಯ ಆಕೃತಿಯ ದೃಷ್ಟಿಯಿಂದ ಹೇಳುವುದಾದರೆ, ಒಂದೆರಡು ಪ್ರೇರಣೆಗಳನ್ನು ಪ್ರಸ್ತಾಪಿಸಬಹುದು. ಪಗಡಿ ಅಥವಾ ಮುಂಡಾಸು ಎಂಬ ಶಿರೋಭೂಷಣದ ಆಕೃತಿಯನ್ನು ಕಂಡರೆ ಅದು, ಈ ಪ್ರದೇಶದಲ್ಲಿ ಧಾರಾಳ ವಾಗಿ ಬೆಳೆಯುವ, ಕೆಸುವಿನೆಲೆಯ ಆಕೃತಿಯನ್ನು ಹೋಲುತ್ತದೆ. ಅದರ ಮುಂಬದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿ ಜೋಡಿಸಿ ಅಲಂಕರಿಸುವ 'ಕೇದಗೆ ಎಂಬ ಆಭರಣ, ಹಿಂದೆ ಕೇದಗೆ ಹೂವಿನಿಂದಲೇ ತಯಾರಿಸುತ್ತಿದ್ದರೆಂದು ಕೇಳಿದ್ದೇನೆ.

ಇಲ್ಲಿ ಬೆಟ್ಟಗಳೂ, ಏರುತಗ್ಗುಗಳೂ ಬಹಳ. ಇದು ಯಕ್ಷಗಾನದ ನೃತ್ಯಸ್ವರೂಪದ ರೂಪಣಶಕ್ತಿಯಾಗಿ ಕೆಲಸ ಮಾಡಿರಬೇಕು. ಈ ನೃತ್ಯದಲ್ಲಿ ಏಳು ಬೀಳುಗಳು, ಹಾರಾಟ, ಲಾಗಾಟ, ಬೀಸಾಟಗಳು ಬಹಳ, ದೊಡ್ಡ ದೊಡ್ಡ ಹೆಜ್ಜೆಗಳು, ತಿರುಗಣೆಲಾಗ (ಗಿರ್ಕಿ) ಮಂಡಿಕುಣಿತಗಳು ವಿಪುಲ. ಇಂತಹದೊಂದು ಕುಣಿತ ಸಮತಟ್ಟಾದ ಭೂಪ್ರದೇಶ, ವಿಶೇಷಗಳಿಲ್ಲದ ಹದ ವಾದ ಹವಾಮಾನ ಇರುವ ಪ್ರದೇಶವೊಂದರಲ್ಲಿ ಹುಟ್ಟಲಾರದೆನಿಸುತ್ತದೆ. ಅಂತೆಯೇ ಇಲ್ಲಿನ ಹತ್ತಿ ಇಳಿಯುವ ಸಂಚಾರಕ್ರಮವು ಯಕ್ಷಗಾನ ನರ್ತಕರಿಗೆ ಶಾರೀರಿಕ ಸಿದ್ಧತೆಯನ್ನೂ, ಸಾಮರ್ಥ್ಯವನ್ನೂ ಕೊಟ್ಟಿದೆ.

ಕರಾವಳಿಯ ಯಕ್ಷಗಾನ ಪ್ರದರ್ಶನಗಳ ಸೀಸನ್ ಮೇಳಗಳ ತಿರುಗಾಟ ಎಂಬುದು ನವಂಬರಿನಿಂದ ಮೇ ತನಕ. ಸಾಂಪ್ರದಾಯಿಕ ಕ್ರಮದಂತೆ ದೀಪಾವಳಿಯಿಂದ ತೊಡಗಿ (ಅಥವಾ ವೃಶ್ಚಿಕ ಸಂಕ್ರಮಣದಿಂದ) 'ಹತ್ತನಾಜೆ' ವರೆಗೆ-ಎಂದರೆ ವೃಷಭ ಮಾಸದ ಹತ್ತನೆಯ ದಿನದವರೆಗೆ (ಇದು ಮೇ 24ನೇ ದಿನಾಂಕವಾಗುತ್ತದೆ) ಇರುತ್ತದೆ. ಇದು ಮಳೆಗಾಲದ ಕೊನೆಯಿಂದ, ಮುಂದಿನ ಮಳೆ ಆರಂಭದವರೆಗೆ ಎಂಬುದು ಸ್ಪಷ್ಟವಷ್ಟೆ ? ಪ್ರಾಯಶಃ, ದೀರ್ಘವಾದ ಮತ್ತು ಬಹಳಷ್ಟು ಮಳೆಯ, ಮಳೆಗಾಲವಲ್ಲದಿದ್ದರೆ ಈ ಪ್ರದೇಶದಲ್ಲಿ ವರ್ಷದುದ್ದಕ್ಕೂ ಯಕ್ಷಗಾನ ಪ್ರದರ್ಶನಗಳಿರುತ್ತಿದ್ದುವೇನೋ. ಇತ್ತೀಚೆಗೆ ಭವನ, ಮಂದಿರ, ಹಾಲ್‌ಗಳು ಇರುವುದರಿಂದ ಮಳೆಗಾಲದಲ್ಲೂ ಆಟಗಳಾಗುತ್ತಿವೆ. ಇದು ಪ್ರಾಕೃತಿಕ ಪ್ರತಿಬಂಧವನ್ನು ಮೀರಿದ ವಿದ್ಯಮಾನ ಅಥವಾ ಯತ್ನ,