ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳುಯಕ್ಷಗಾನ : ನಿನ್ನೆ-ಇಂದು-ನಾಳೆ
63

ತೆಂಕುತಿಟ್ಟಿನಲ್ಲಿ ತುಳು ಯಕ್ಷಗಾನ ಬಂದಮೇಲೆ, ತೆಂಕುತಿಟ್ಟು ಬಡಗುತಿಟ್ಟಿಗಿಂತ ತೀರ ಭಿನ್ನವಾಗಿ, ಬೇರೆಯೇ ದಾರಿ ಹಿಡಿದಿದೆ. ಒಂದು ಸ್ಥಾಪಿತವಾದ ಶೈಲಿ ಯೊಳಗೆ, ಕಲಾರೂಪದೊಳಗೆ, ನಾವೀನ್ಯವನ್ನು ತರುವುದಕ್ಕೆ ಬಡಗುತಿಟ್ಟು ಅನುಸರಿಸಿದ ದಾರಿ, ತೆಂಕುತಿಟ್ಟಿಗೆ ಮಾದರಿಯಾಗುವಂತಿದೆ.
ಲೋಕಧರ್ಮಿ × ನಾಟ್ಯ ಧರ್ಮಿ : ತುಳುವಿನ ಅಭಿವ್ಯಕ್ತಿ ವಿಧಾನ ಹೆಚ್ಚು 'ಜಾನಪದೀಯ' ಪ್ರಾದೇಶಿಕ. ಶಿಷ್ಟ ಸಂಸರ್ಗ ಕಡಿಮೆ ಇರುವಂತಹದು. ಅದು ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ, ಸಹಜವಾಗಿ 'ಲೋಕಧರ್ವಿ'ಗೆ ಒದಗುವಂತಹದು. ತುಳುಯಕ್ಷಗಾನ ಆಟಗಳನ್ನು ನೋಡಿದರೆ ನಮಗೆ ಇದರ ಅನುಭವ ಆಗುತ್ತದೆ. ಅಲ್ಲಿನ ಮಾತು, ರೀತಿ ಇವು ನಿತ್ಯ ಜೀವನಕ್ಕಿಂತ ಬಹಳ ಭಿನ್ನವಾಗಿ ಕಾಣುವುದಿಲ್ಲ. ಇದನ್ನೆ ಕೆಲವರು ಹೇಳುವುದು “ತುಳು ಆಟದ ರಂಗಸ್ಥಳ ನಮಗೆ ನಮ್ಮ ಸುತ್ತಲಿನ ಗುತ್ತು ಮನೆ, ಗದ್ದೆ, ಬಾಕಿಮಾರುಗಳನ್ನು ದರ್ಶಿಸುತ್ತದೆಯೇ ಹೊರತು 'ಪೌರಾಣಿಕದ ಭವ್ಯಚಿತ್ರ'ವನ್ನಲ್ಲ ಎಂದು. ಇದರ ಸಾಧಕ ಬಾಧಕ ಏನೇ ಇರಲಿ ಈ ಅನಿಸಿಕೆಯಲ್ಲಿ ಸತ್ಯಾಂಶ ಇಲ್ಲದಿಲ್ಲ. ತುಳು ಮಾತು ಸಹಜವಾಗಿ, ದಿನನಿತ್ಯದ ಬದುಕಿನ ಸಮೀಪದ್ದು. ಅಂದರೆ ತಾಂತ್ರಿಕವಾಗಿ ತುಳು ಆಟ ನಾಟಕಗಳಲ್ಲಿ 'ನಾಟ್ಯಧರ್ಮಿ' ಇಲ್ಲವೆಂದಲ್ಲ. ಯಕ್ಷಗಾನದ 'ವಿಶಿಷ್ಟ ನಾಟ್ಯಧರ್ಮಿಯನ್ನು ಲಕ್ಷಿಸಿದರೆ ಅದು ಲೋಕ ಧರ್ಮಿ, ಹಾಗಾಗಿ ತುಳುವಿನ ಲೋಕಧರ್ಮಿಗೆ, ಯಕ್ಷಗಾನದ ನಾಟ್ಯಧರ್ಮಿ ಯನ್ನು ಸಹಜವಾಗಿ ಅಳವಡಿಸುವುದು ಒಂದು ಭಾಷೆಯ ಬದಲು ಇನ್ನೊಂದು ಎಂಬಷ್ಟು ಸಲೀಸಲ್ಲ. ತುಳುವಿನ ಸಂದರ್ಭ ವಿಶಿಷ್ಟವಾದದ್ದು. ತುಳುವಿನಲ್ಲಿ ಯಕ್ಷಗಾನೀಯವೆನಿಸಬಲ್ಲ ಶೈಲಿ ಸೃಷ್ಟಿ ಆಗಬೇಕಷ್ಟು ಆಗಿಲ್ಲ. (ಇಂತಹ ಪ್ರಯತ್ನ ವ್ಯಕ್ತಿಶಃ ಕಲಾವಿದರಿಂದ ನಡೆದದ್ದುಂಟು.) ಕನ್ನಡಕ್ಕಿರುವ ಕಾವ್ಯ. ಸಾಹಿತ್ಯಗಳ ಪೋಷಕದ್ರವ್ಯ ತುಳು ಯಕ್ಷಗಾನಕ್ಕಿಲ್ಲ. ಇರುವಂತಹದು ಪಾಡ್ಡನ ಭೂತಗಳ ಮಾತುಗಾರಿಕೆ ಮೊದಲಾದುವು-ಸಾಕಷ್ಟು ರಂಗದಲ್ಲಿ ಬಳಕೆ ಗೊಂಡಿಲ್ಲ. ಅಲ್ಲದೆ ಜನರಿಗೆ ತಲಪುವುದೇ ತುಳು ಆಟಗಳ ಲಕ್ಷ್ಯವಾದುದರಿಂದ ದಿನ ಬಳಕೆಯ ಭಾಷೆಯೇ ಬಳಕೆಗೊಳ್ಳುವುದು ಸಹಜ, ಭಾಷಾಗಾಂಭೀರ್ಯಕ್ಕೆಳಸಿದರೆ, ಅದು ಕನ್ನಡದಂತೆಯೇ ಪ್ರೇಕ್ಷಕನಿಗೆ 'ದೂರ' ಆಗಲೂಬಹುದು.