ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೯

ವುವು, ಅಷ್ಟೇ ಅಲ್ಲ. ಇದರಲ್ಲಿಯೇ ಇದ್ದ ಈ ಸಂಪುಟವನ್ನು ನೋಡಬೇಕು. ಇದರಲ್ಲಿ ಇದೋ ತಮ್ಮ ಹಸ್ತಾಭರಣ ಮತ್ತು ಮುದ್ರಿಕೆಗಳಿವೆ. ಇವನ್ನು ತೆಗೆದವರಾರು? ಮಧುಕರಿಗೆ ಮುಟ್ಟಿಸಿದವರಾರು? ಎಂಬವನ್ನು ತಿಳಿಸುವ ಈ ಖಂಡ ಪತ್ರವನ್ನೂ ನೋಡಬೇಕು. ಇವಲ್ಲ ದೆ, ಇಲ್ಲಿ, ನಾಟಕಸಂಘಾಧ್ಯಕ್ಷನಿಗೆ ರವಿವರ್ಮನು ಪ್ರಾರ್ಥಿಸಿ ಬರೆದ ಪತ್ರವೂ, ರಮಾನಂದನ ಹೆಸರಿನಲ್ಲಿ ಹುಟ್ಟಿಸಿದ ಮತ್ತೊಂದು ಪತ್ರವೂ ನಾಟಕಸಂಘಾಧ್ಯಕ್ಷನು ನನಗೆ ಇವೆರಡರೊಡನೆ ಕಳಿಸಿರುವ ಇನ್ನೊ೦ದು ಪತ್ರವೂ ಇವೆ. ಇವೆಲ್ಲವನ್ನೂ ನೋಡಿದರೆ, ರಮಾನಂದನ ನಿರ್ದುಷ್ಟಶೀಲವೃತ್ತಗಳು ನಿರ್ಧರವಾಗುವುವು.
ಉಪಾ:- (ಎಲ್ಲವನ್ನೂ ನೋಡಿ ಎದ್ದು ನಿಂತು ಆಗ್ರಹದಿಂದ) * ಈಗ ಹೇಳಿರಿ; ದುರ್ಮಾರ್ಗಿಗಳೆ! ಈಗಲಾದರೂ ನಿಜವನ್ನು ಹೇಳಿ, ಕ್ಷಮೆಯನ್ನು ಕೇಳಿ, ಮಾನವನ್ನುಳಿಸಿಕೊಳ್ಳಿರಿ. ಈ ತೊಡವುಗಳನ್ನು ತೆಗೆದವರಾರು? ಅವಳಿಗೆ ಮುಟ್ಟಿಸಿದವರಾರು? ಯಾವಾಗ ತೆಗೆದಿರಿ?
ರವಿ:- (ತೊದಲು ನಾಲಿಗೆಯಿಂದ) ನಾನೇ ಕಳಿಂಗನ ಕೈಯಿ೦ದೆಯೇ ನಿನ್ನೆ ರಾತ್ರಿ ೪ನೇ ಪ್ರಹರದಲ್ಲಿ ಬೇರೆ ಬೀಗದ ಕೈಯಿಂದಲೇ ತೆಗೆಯಿಸಿ, ಅವಳಲ್ಲಿಗೆ ಕಳಿಸಿದೆನು.
ಉಪಾ:-ರಮಾನಂದನ ಕಿರುಮನೆಯಲ್ಲಿ ಇವನ್ನು ಸೇರಿಸಿದ್ದವರಾರು?
ರವಿ:- ನಾವು ಮೂವರೂ ಸೇರಿ ಮಾಡಿದುದು.
ಕ್ಷೇಮ:-ಒಳ್ಳೆಯದು, ಕುಮಾರನೆಲ್ಲಿರುವನು? ಏನುಮಾಡಿರುತ್ತೀರಿ?
ರವಿ:- ನಾವು ತಿಳಿಯೆವು.
ಕ್ಷೇಮ:-ಈಗಲೂ ಸುಳ್ಳೇ? ಇರಲಿ ತಿಳಿಯುವಂತೆ ಮಾಡುವೆನು.”
(ತೆರೆಯ ಕಡೆ ನೋಡಿ) ಎಲಾ ಚಿತ್ರಕ! ಇತ್ತ ಬಾ.