ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨

ರಾಮಚಂದ್ರಚರಿತಪುರಾಣಂ

ಚ|| ಅನರಣ್ಯ ಪ್ರಿಯನಂದನಂ ದಶರಥಂ ಸಾಕೇತನಾಥಂ ಶರಾ|
     ಸನ ವಿದ್ಯಾಗುರು ವೀರನೆಂದರಿದುದಿಲ್ಲೇಕಾಕಿ ಸಾಮಾನ್ಯನೆ೦||
     ದನಿತುಂ ರಾಜಸಮಾಜಮಾಜಿಗೆರದೆಯ್ತಂದತ್ತು ನೀರ್ಗೆತ್ತು ಬೆ|
     ಇನದಿಂ ಕತ್ತರಿವಾಣಿಯಂ ಜಡಜನಂ ಕೈಗುತ್ತಲೇಳ್ತಿರ್ಪವೋಲ್||೪೮||

     ಅ೦ತು ರಣ ಪಟಹ ಪಟು ನಿನದಮೊದವೆ ವಿಳಯ ಜಳಧಿಯಂತೆ ನೆಲೆಯಿಂ
ತಳರ್ದ ರಾಜಕುಲಮಂ ಕಂಡು ಕೈಕೆಯ ಜನಕಂ ಭಯಚಕಿತ ಚಿತ್ತನಾಗಿ---

ಚ|| ಶುಭಮತಿ ಪೂಡಿ ತಂದು ರಥಮಂ ತಡೆಯಲ್ ಪದನಲ್ತು ಸಾಮದಿಂ|
     ಶುಭಮನೊಡರ್ಚಲಾಂ ನೆರೆವೆನೇರಿಸಿ ಕೈಕೆಯನೀ ವರೂಥಮಂ||
     ಸಭೆಯನಗಲ್ದು ಪೋಪುದೆನೆ ಕೇಳ್ದಿನಿಸಂ ನಸುನಕ್ಕು ಭೂಭುಜ|
     ಪ್ರಭು ನುಡಿದಂ ಮುಖೇ೦ದುಕಿರಣ೦ ನಿಮಿರ್ವ೦ತಿರೆ ದಂತಕಾಂತಿಗಳ್||೪೯||

ಉ|| ಆನೆ ಕಲಂಕುವಂತೆ ಕೊಳನಂ ಬಿಡದಾನೆ ಕಲಂಕುವೆಂ ಕರು|
     ತ್ತೀನೆರೆದಾಂತ ರಾಜಕವನೊಂದಿನಿಸಂ ನಡೆ ನೋಳ್ಪುದೆಂದು ಪಂ|
     ಚಾನನದಂತೆ ಗರ್ಜಿಸಿ ರಘೂದ್ವಹನೇರಿ ವರೂಥಮಂ ಘನ|
     ಜ್ಯಾ ನಿನದಂ ಭಯಂಗೊಳಿಸೆ ಜೇವೊಡೆದಂ ನಿಜ ಚಾಪದಂಡಮಂ||೫೦||

ಚ|| ಅತಿಶಯಮಾಗೆ ತನ್ನ ಮುಖಚಂದ್ರಬಲಂ ಮಣಿಮೇಖಲ್ಲಾರವಂ|
     ಶ್ರುತಿಪಥನಂ ಪಳಂಚೆ ಜಯ ಡಿಂಡಿಮ ನಿಸ್ವನದಂತೆ ಮೇಲುದು||
     ದೃತ ಜಯ ಕೇತುವಂ ಮಿಗೆಮನೋರಥ ಸಾರಥಿ ಕೈಕೆ ಬಂದು ಭೂ|
     ಪತಿಯಾಡನೇರಿದಳ್ ರಥಮನಾ ರಘುವೀರನ ವೀರಲಕ್ಷ್ಮಿವೋಲ್||೫೧||

     ಆಗಳಕಾಲ ಜಲಧರಂಗಳಂತೆ ನಿಖಿಲ ನೃಪಸುತರ್‌ ಸುತ್ತಿಮುತ್ತಿ ಶರವರ್ಷ
ಮ೦ ಕರೆಯೆ--
     
     ಕಂ|| ತಾಗೆ ಸರಲ್ ಪಾವಿನ ಪಲ್
           ತಾಗಿದವೋಲ್ ಮೂರ್ಛೆವೋಗೆ ಸಾರಥಿರಥಮಂ||
           ಬೇಗಂ ಚೋದಿಸಿದಳ್ ವಧು,
           ರಾಗರಸಂ ದಶರಥಂಗೆ ನೆಲೆವರ್ಚುವ ವೋಲ್||೫೨||

           ಮೀರದೆ ಕೀರದೆ ನೇಣಂ
           ತೋರಿದದೆಸೆಗಾಕೆಗಂ ಹಯಕ್ಕಂ ಚಿತ್ತಂ||
           ಬೇರಿಲ್ಲೆನೆ ಪರಿದುದು ಜವ
           ನೇರಿದ ರಥಮಿಂತಿದನೆ ರಥಂ ದಶರಥನಾ||೫೩||