ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

22

ಪ೦ಪ ರಾಮಾಯಣದ ಕಥೆ

ಮರುದಿವಸ ಅವರು ದಂಡಕಾರಣ್ಯದಲ್ಲಿ ದಕ್ಷಿಣಾಭಿಮುಖವಾಗಿ ನಡೆಯುತ್ತ ಕ್ರೌಂಚನದಿಯನ್ನು ದಾಟಿ ದಡದಲ್ಲಿಯ ಒಂದು ಲತಾಗೃಹದಲ್ಲಿ ವಿಶ್ರಮಿಸಿ ಕೊಂಡರು. ಆ ನದಿಯ ಸಮೀಪದಲ್ಲಿರುವ ದಂಡಕ ಗಿರಿಯ ಗುಹೆಯಲ್ಲಿ ಒಂದು ಯೋಜನದೆಂಟನೆಯ ಭಾಗವು ಖಾತವಾಗಿರುವುದು. ಅಲ್ಲಿ ಪಾತಾಳಲಂಕೆಯೆಂಬ ಪುರ ವಿರುವುದು. ಅದನ್ನು ಖರನೆಂಬುವನು ಆಳುತ್ತಿರುವನು. ಅವನ ಹೆಂಡತಿಯ ರಾವಣನ ತಂಗಿಯೂ ಆದ ಚಂದ್ರನಖಿಯೆಂಬವಳಿಗೆ ಶಂಭಕ ಸುಂದರರೆಂಬ ಇಬ್ಬರು ಮಕ್ಕಳಿರುವರು. ಅವರಲ್ಲಿ ಹಿರಿಯವನಾದ ಶಂಭುಕನು ಹನ್ನೆರಡು ವರುಷ ಗಳಿ೦ದ ಸೂರಹಾಸಾಸಿಯನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಿರಲು ಅವನಿಗೆ ಆ ಕತ್ತಿಯನ್ನು ಕೊಟ್ಟು ಅನುಗ್ರಹಿಸುವುದಕ್ಕೆ ಬಂದ ಯಕ್ಷಾನರ ಸಹಸ್ರವು ಅವನು ತಪಸ್ಸು ಮಾಡುತ್ತಿದ್ದ ಬಿದಿರ ಮೆಳೆಯಲ್ಲಿ ಆ ಕತ್ತಿಯನ್ನಿಟ್ಟು ಸುರಮಂದಾರ ಪುಷ್ಪ ಗಳಿಂದ ಅರ್ಚಿಸುತ್ತಿದ್ದಿತು. ಆಗ ಲಕ್ಷಣನು ವನವಿಲಾಸವನ್ನು ನೋಡುವ ಕುತೂಹಲವುಳ್ಳವನಾಗಿ ಅಲ್ಲಿಗೆ ಬಂದು ಬಿದಿರಿನ ಮಳೆಯಲ್ಲಿದ್ದ ಅಮೋಘವಾದ ಕತ್ತಿಯನ್ನು ನೋಡಿ ಕೈಗೆ ತೆಗೆದುಕೊಂಡು ಅದರ ತೀಕ್ಷತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಅದನ್ನು ಬೀಸಿದನು. ಆ ಹೊಡೆತಕ್ಕೆ ಬಿದಿರಿನ ವನವು ನೆಯ್ಲಿ ಲ ದಂಟಿನ ಪೊದೆಯನ್ನು ಕಡಿದಂತೆ ಕತ್ತರಿಸಿ ಹೋಯಿತು. ಅದರೊಡನೆ ಒ೦ದು ತಲೆಯ ಮುಂಡದಿಂದ ಬೇರೆಯಾಗಿ ಹಾರಿತು. ಇದನ್ನು ಕಂಡು ಲಕ್ಷ್ಮಣನು ತಪಸ್ಸು ಮಾಡುತ್ತಿದ್ದ ನಿರಪರಾಧಿಯನ್ನು ಕೊಂದೆನೆಂದು ವ್ಯಸನಪಡುತ್ತಿರುವಲ್ಲಿ ಆ ಕತ್ತಿಯ ಕಾವಲುಗಾರರಾದ ಯಕ್ಷಾನರರು ತಮಗಿನ್ನು ಲಕ್ಷ್ಮಣನೇ ಪತಿ ಯೆಂದು ಹೇಳಿ ನಮಸ್ಕರಿಸಿ ಅವನನ್ನು ಪೂಜಿಸಿ ಹೊರಟು ಹೋದರು. ಲಕ್ಷ್ಮಣನು ಅಣ್ಣನ ಬಳಿಗೆ ಬಂದು ಖಡ್ಗದ ವೃತ್ತಾಂತವನ್ನು ಹೇಳಿದನು.
ಇತ್ತ, ಚ೦ದ್ರನಖಿಯು ತನ್ನ ಮಗನು ಆ ದಿನ ಸೂರಹಾಸಾಸಿಯನ್ನು ಪಡೆಯುವನೆಂಬ ಉತ್ಸಾಹದೊಡನೆ ಆಕಾಶದಿಂದ ಭೂಮಿಗಿಳಿದಳು. ಆಗ ತಲೆ ಯೊಂದೆಡೆಯಲ್ಲಿಯೂ ಮುಂಡವು ಮತ್ತೊಂದೆಡೆಯಲ್ಲಿಯೂ ಬಿದ್ದಿರುವ ತನ್ನ ಮಗನ ದೇಹವನ್ನು ನೋಡಿ ಬಹಳ ವ್ಯಸನದಿಂದ ಎದೆಯನ್ನು ಗುದ್ದಿ ಕೊಂಡು ಅಳತೊಡಗಿ ಮರ್ಧೆ ಹೋದಳು. ಸ್ವಲ್ಪ ಹೊತ್ತಿಗೆ ಎಚ್ಚತ್ತು ತನ್ನ ಮಗನನ್ನು ಕೊಂದವನನ್ನು ನಾಶ ಮಾಡುವೆನೆಂದು ಶೋಕದೊಡನೆ ಕೂಡಿದ ಕೋಪವನ್ನು ತಾಳಿ ಅಲ್ಲಿಂದ ಹೊರಟು ಅವಳು ರಾಮಲಕ್ಷ್ಮಣರಿರುವ ಸ್ಥಳಕ್ಕೆ ಬಂದು ಲಕ್ಷ್ಮಣನ ಸೊಬಗನ್ನು ನೋಡಿ, ತನ್ನ ಶೋಕವನ್ನು ಮರೆತು, ಅವನನ್ನು ಮೋಹಿಸಿದಳು. ಕೂಡಲೆ ರೂಪ ಪರಾವರ್ತನ ವಿದ್ಯೆಯಿಂದ ಅತಿ ಸುಂದರವಾದ ದೇವಕನ್ಯಕೆಯ ರೂಪವನ್ನು ಧರಿಸಿ ಕಣ್ಣೀರು ಸುರಿಸುತ್ತ ಅವಳು ಸೀತೆಯ ಬಳಿಗೆ ಬರಲು ಆಕೆಯು ಅವಳನ್ನು ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು ಅವಳ ಕಣ್ಣೀರನ್ನೊರಸಿದಳು.