ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪ ರಾಮಾಯಣದ ಕಥೆ

23

ಆಗ ರಾಘವನು ಅವಳನ್ನು ಕಾರುಣ್ಯದೊಡನೆ ನೋಡಿ ಅ೦ತಹ ಭಯಂಕರ ವಾದ ದಟ್ಟಡವಿಗೆ ನಿರ್ಭಯವಾಗಿ ಒಬ್ಬಳೇ ಹೇಗೆ ಬಂದೆ ಎಂದು ಕೇಳಲು ಆ ಮೋಸ ಗಾರ್ತಿಯು “ ನನ್ನ ತಾಯಿತಂದೆಗಳು ಮೊದಲೇ ಸತ್ತು ಹೋದುದರಿಂದಲೂ ನನಗೆ ಯಾರೂ ಸಹಾಯವಿಲ್ಲದೆ ಬದುಕುವುದು ಕಷ್ಟವಾದುದರಿಂದಲೂ ಅಡವಿಯನ್ನಾ ದರೂ ಹೊಕ್ಕು ಪ್ರಾಣವನ್ನು ಬಿಡಬೇಕೆಂದು ಬರುತ್ತಿರುವಲ್ಲಿ ನನ್ನ ಪುಣ್ಯ ದಯದಿಂದ ನಿಮ್ಮನ್ನು ಕಂಡೆನು; ನಿಮ್ಮಲ್ಲೊಬ್ಬರು ನನ್ನನ್ನು ಗಂಧರ್ವ ವಿವಾಹ ವಿಧಿಯಿಂದ ಮದುವೆಮಾಡಿಕೊಳ್ಳಬೇಕು” ಎಂದು ಕೇಳಿಕೊಳ್ಳಲು, ಸೀತೆಯು ರಾಮಲಕ್ಷ್ಮಣರ ಮುಖವನ್ನು ನೋಡಿ ಮುಗುಳ್ನಗೆ ನಕ್ಕಳು.
ಇದನ್ನು ನೋಡಿ ಚ೦ದ್ರನಖಿಯು ನಾಚಿಕೆಗೊಂಡು ಮಗನ ಸಾವಿನಿಂದುಂಟಾದ ವ್ಯಥೆಯನ್ನೂ ಬಗೆಯದೆ ಪರಪುರುಷನೊಡನೆ ಸೇರುವ ಅಭಿಲಾಷೆ ಪಟ್ಟುದು ನಿಷ್ಪಲವಾದುದರಿಂದ ಉದ್ವೇಗವು ಇಮ್ಮಡಿಸಿ, ಅವರಿಗೆ ತಕ್ಕದ್ದನ್ನು ಮಾಡುವೆನೆಂಬ ಆಗ್ರಹದಿಂದ ನಡೆದು ಅವರು ಕಣ್ಮರೆಯಾದೊಡನೆಯೇ ಆಕಾಶಕ್ಕೆ ನೆಗೆದು ತನ್ನರಮನೆ ಯನ್ನು ಹೊಕ್ಕು, ತಲೆಯನ್ನು ಬಿರಿಯಹಾಕಿಕೊಂಡು ಎದೆಯನ್ನು ಹೊಡೆದುಕೊಳ್ಳುತ್ತ ಗಟ್ಟಿಯಾಗಿ ಅಳುತ್ತಿರಲು, ಖರನು ಇದೇಕೆಂದು ಕೇಳಿದನು. ಮಗನಿಗುಂಟಾದ ವಿಪತ್ತನ್ನು ಅವನೊಡನೆ ಹೇಳಿ, ಕವಚವನ್ನು ತೊಟ್ಟಿರುವ ಇಬ್ಬರು ಮನುಷ್ಯರು ಅ೦ಬುಗಳನ್ನೂ ಬಿಲ್ಲುಗಳನ್ನೂ ಹಿಡಿದು ಬಲಶಾಲಿಗಳೆಂಬ ಗರ್ವ ದಿ೦ದ ಮಗನನ್ನು ಕೊಂದು ತನ್ನನ್ನು ಅವಮಾನ ಮಾಡಿದರೆಂದೂ ಖರನಿಗೆ ಸತಿಯಾಗಿಯೂ ತ್ರಿಭುವನ ವಿಜಯಿಯಾದ ರಾವಣನೊಡನೆ ಹುಟ್ಟಿಯೂ ತನಗೆ ಇಂತಹ ದುಃಸ್ಥಿತಿಯು ಬಂದಿತಲ್ಲಾ ಎಂದೂ ರೋದನ ಮಾಡಿದಳು. ಅದನ್ನು ಕೇಳಿ ದೈತ್ಯನು ರೋಷಾ ವೇಶವುಳ್ಳವನಾಗಿ ಅವರನ್ನು ಕೂಡಲೆ ಕೊಂದುಬರುವೆನೆಂದು ಹೇಳಲು ಅವನ ಮಂತ್ರಿಗಳು ಅವನನ್ನು ಸಮಾಧಾನವಾಡಿ ರಾಮಲಕ್ಷ್ಮಣರು ಸಾಮಾನ್ಯ ಪುರುಷ ರಲ್ಲವೆಂದು ತಿಳಿಸಿದರು. ಈ ವಿಷಯವನ್ನು ದಶಕಂಧರನಿಗೆ ಬಿನ್ನವಿಸುವಂತೆ ದೂತರನ್ನಟ್ಟಿ ಅಸಂಖ್ಯಾತ ಖಚರಸೇನೆಯೊಡನೆ ಖರದೂಷಣರು ರಾಮಲಕ್ಷ್ಮಣರ ಬಳಿಗೆ ಬಂದರು. ಅದನ್ನು ನೋಡಿ ರಾಮನು ತನ್ನ ದಿವ್ಯಚಾಸಕ್ಕೆ ಕೈ ಹಾಕಲು ಲಕ್ಷಣನು ಅಂತಹ ಸೈನ್ಯಕ್ಕೆ ತಾನೇ ಸಾಕೆ೦ದೂ ಆ ಸೈನ್ಯವನ್ನು ನಿಮಿಷದಲ್ಲಿ ಧ್ವಂಸ ಮಾಡಿಬರುವೆನೆಂದೂ ನುಡಿದು, ಸೀತಾದೇವಿಯನ್ನು ಅಂತಹ ಅಪಾಯದೆಡೆಯಲ್ಲಿ ಅಗಲದೆ ಇರಬೇಕೆಂದು ಬಿನ್ನವಿಸಿ, ಯುದ್ಧವು ಸಹಿಸಲಸಾಧ್ಯವಾದಲ್ಲಿ ತಾನು ಸಿಂಹನಾದ ಮಾಡುವೆನೆಂದೂ ಆಗ ತನ್ನ ಸಹಾಯಕ್ಕೆ ಬರಬೇಕೆಂದೂ ಹೇಳಿ ಅಪ್ಪಣೆ ಪಡೆದು ಹೊರಟನು. ಹೀಗೆ ಯುದ್ಧ ಸನ್ನದ್ದನಾಗಿ ಹೊರಟ ಕೃಷ್ಣನು ಖರನ ಸೈನ್ಯವನ್ನು ಸೂರಹಾಸಾಸಿಯಿಂದ ತರಿದೊಟ್ಟಿ ರೌದ್ರಾಕಾರವನ್ನು ತಾಳಿರಲು ಮಿಕ್ಕ ಬಲವು ದೆಸೆಗೆಟ್ಟು ಓಡಿಹೋಯಿತು.