ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪ ರಾಮಾಯಣದ ಕಥೆ

25

ವ್ಯಥೆಪಟ್ಟನು. ಸೀತೆಯು ಸಿಂಹದ ಕೈಗೆ ಸಿಕ್ಕಿದ ಜಿಂಕೆಯಂತೆ ಎದೆಗೆಟ್ಟು ಅಳುತ್ತ ಮೂರ್ಛೆಹೋಗಿ ಮರಳಿ ಎಚ್ಚತ್ತು ಹಂಬಲಿಸಿದಳು. ರಾವಣನು ಅನಂತವೀರ್ ಕೇವಲಿಗಳ ಬಳಿಯಲ್ಲಿ ಕೈಕೊಂಡಿದ್ದ ಪರಾಂಗನಾವಿರತಿ ವ್ರತದ ಭಂಗವನ್ನು ಲಕ್ಷ್ಯ ಮಾಡದೆ ಸೀತೆಯನ್ನು ಅಪಹರಿಸಿಕೊಂಡು ಹೋದನು.
ಇತ್ತ, ರಾಮನು ರಣಭೂಮಿಗೆ ಬರಲು ಲಕ್ಷಣನು ಸೀತಾದೇವಿಯನ್ನಗಲಿ ಏಕೆ ಬ೦ದಿರೆಂದು ಕೇಳಿದನು. ರಾಮನು ಅವನ ಸಿಂಹನಾದವನ್ನು ಕೇಳಿ ಬಂದೆ ನೆಂದೆನಲು ಲಕ್ಷ್ಮಣನು ಯಾವನೋ ಮಾಯಾವಿಯು ಆ ತೆರನಾಗಿ ಮಾಡಿರ ಬಹುದೆಂದು ಹೇಳಿ ತಾನು ಯುದ್ದವನ್ನು ಮುಗಿಸಿಕೊಂಡು ಕೂಡಲೆ ಬರುವೆ ನೆ೦ದೂ ರಾಮನು ಕೂಡಲೆ ಹಿಂದಕ್ಕೆ ಹೊರಡಬೇಕೆಂದೂ ಬಿನ್ನವಿಸಿದನು. ರಾಮನು ಸೀತೆಯ ವಿಷಯವಾಗಿ ಭಯಪಟ್ಟು, ತಾನಿದ್ದ ಸ್ಥಳಕ್ಕೆ ಬಂದು ನೋಡುವಲ್ಲಿ ಸೀತೆಯು ಅಲ್ಲಿಲ್ಲದಿರಲು ಧೈರ್ಯಗೆಟ್ಟು, ಹಾ ಹಾ! ಸೀತೆ! ಜನಕಜೇ! ವೈದೇಹೀ! ಎಂದು ಪ್ರಲಾಪಿಸುತ್ತ ಮೂರ್ಛೆ ಹೋಗಿ ಸ್ವಲ್ಪ ಹೊತ್ತಿಗೆ ಎಚ್ಚತ್ತು ಕಾಡಿನಲ್ಲಿ ಅಲೆಯುತ್ತ, ಪ್ರಾಣ ಬಿಡುತ್ತಿರುವ ಜಟಾಯುವನ್ನು ಕಂಡು ಸೀತೆಯ ನಿಮಿತ್ತದಿಂದ ಅದಕ್ಕೆ ಸಾವು ದೊರೆತಿ ತೆ೦ದು ವ್ಯಸನಪಟ್ಟು ಅದಕ್ಕೆ ಅಮರಗತಿಯನ್ನೊದಿಸಿ ಕಾಡಿನಲ್ಲಿ ಹುಚ್ಚನಂತೆ ಸುತ್ತುತ್ತಿದ್ದನು.
ಲಕ್ಷ್ಮಣನ ಪೆಟ್ಟನ್ನು ತಾಳಲಾರದೆ ವಿರಾಧಿತನು ಶರಣಹೊಕ್ಕು ಖರನನ್ನು ಎದುರಿಸಿದನು. ವಿರಾಧಿತನೊಡನೆ ಯುದ್ಧಕ್ಕೆ ನಿಲ್ಲದೆ ಖರನು ತನ್ನ ಮಗನನ್ನು ಕೊಂದದ್ದಕ್ಕೂ ಹೆಂಡತಿಯನ್ನು ಅಪಮಾನ ಮಾಡಿದುದಕ್ಕೂ ಲಕ್ಷ್ಮಣನ ಮೇಲೆ ಘೋರಯುದ್ಧ ಮಾಡಲು ಲಕ್ಷ್ಮಣನು ಅವನನ್ನು ಸಂಹರಿಸಿ, ತರುವಾಯ ಮೇಲೆ ಬಿದ್ದ ಅವನ ತಮ್ಮನಾದ ದೂಷಣನನ್ನೂ ಕೊಂದನು. ಇದನ್ನು ನೋಡಿ ಶರಣಾಗತರಾದ ವಿರೋಧಿ ಸೈನಿಕರನ್ನು ಲಕ್ಷ್ಮಣನು ವಿರಾಧಿತ೦ಗೊಪ್ಪಿಸಿ ರಾಮನ ಬಳಿಗೆ ಬಂದು ಸೀತೆಯಿಲ್ಲದುದನ್ನು ನೋಡಿ ವ್ಯಥೆಗೊಂಡು ರೌದ್ರಾಕಾರವನ್ನು ತಾಳಿ ಆಕೆಯನ್ನ ಸಹರಿಸಿದ ಮಾಯಾವಿಯನ್ನು ಹುಡುಕಿ ಕೊಲ್ಲುವೆನೆಂದು ಹೇಳುತ್ತಿರಲು, ಆ ಹೊತ್ತಿಗೆ ವಿರಾಧಿತನು ಸೇನೆಯೊಡನೆ ಅಲ್ಲಿಗೆ ಬಂದು ರಾಮನ ಪಾದಗಳಿಗೆರಗಿ, ಪಾತಾಳಲಂಕೆಯ ದೊರೆಯಾದ ತನ್ನ ತಂದೆಯನ್ನು ಖರನು ಕೊಂದು ರಾಜ್ಯವನ್ನಾಕ್ರಮಿಸಿಕೊಂಡದ್ದರಿಂದ ತಾನು ಅಂದಿನಿಂದಲೂ ವನಪ್ರದೇಶದಲ್ಲಿಯೇ ಇರುವೆನೆಂದೂ, ಅತಿ ಬಲರ ಸಹಾಯದಿಂದ ತನ್ನ ರಾಜ್ಯವು ಮರಳಿ ತನಗೆ ದೊರೆ ಯುವಂತೆ ದಿವ್ಯಜ್ಞಾನಿಗಳು ಹೇಳಿರುವರೆಂದೂ ತಿಳಿಸಿದನು. ಲಕ್ಷ್ಮಣನು ಅವನಿಗೆ ಸೀತಾಪಹರಣದ ವಿಷಯವನ್ನು ತಿಳಿಸಲು, ವಿರಾಧಿತನು ಸಿಟ್ಟುಗೊಂಡು ಸೀತೆಯನ್ನು ಹುಡುಕುವುದಕ್ಕಾಗಿ ಕಾರ್ಯಧುರಂಧರರಾದ ವಿದ್ಯಾಧರರನ್ನು ಅಟ್ಟಿದನು.