ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬ / ವಾಗರ್ಥ

ಮಾತ್ರ. ಪ್ರೇಕ್ಷಕನು ಪ್ರಾಯಃ ಕಥೆಗಾಗಿ ಮತ್ತು ಕತೆಯು ತಾವಾಗಿ ತೋರುವ ಆಶಯಕ್ಕಾಗಿ ಮಾತ್ರ ಪ್ರದರ್ಶನವನ್ನು ನೋಡುವುದಿಲ್ಲ. “ಯಕ್ಷಗಾನ ಪ್ರೇಕ್ಷಕನು ಸತ್ಯನಾರಾಯಣ ವ್ರತ ಕಥೆಯನ್ನು ಕೇಳುವ ಶ್ರೋತೃವಿನಂತಲ್ಲ." (ಡಾ| ವಿವೇಕ ರೈ). ಅಂದರೆ ವೈರುಧ್ಯಗಳು, ಸಂಘರ್ಷಗಳು, ನಿಶ್ಚಿತವಾದ ಕಲ್ಪನೆಗಿಂತ ಭಿನ್ನವಾದ ಚಿತ್ರಣಗಳನ್ನು ನೋಡಲು, ಸ್ವೀಕರಿಸಲು ಆತ ಸಿದ್ಧನಿದ್ದಾನೆ. ಯಕ್ಷಗಾನವು ಚಿತ್ರಿಸ ಬೇಕಾದುದು, ಶೈಲೀಕೃತವಾದುದಾದರೂ, ಸೀಮಿತವಾದ ಅರ್ಥದ ಪಡಿಯಚ್ಚು (stereotype) ಪಾತ್ರಗಳನ್ನಲ್ಲ.

ಪ್ರಸಂಗವು ಒಂದು ಕಥಾಸರಣಿ ಮತ್ತು ಅದರೊಳಗೆ ಒಂದು ಹಂದರವನ್ನು ಕಲಾವಿದನಿಗೆ ನೀಡುತ್ತದೆ. ಅದಕ್ಕೆ ಸುತ್ತ ಕಲೆಯ ನೃತ್ಯ, ಚಿತ್ರ, ಗಾನಗಳು, ಅವುಗಳ ಶೈಲಿ, ಪರಂಪರೆ, ರಂಗಸಂಪ್ರದಾಯಗಳು ಚೌಕಟ್ಟು ನೀಡುತ್ತವೆ. ಇವುಗಳನ್ನೆಲ್ಲ ಗಮನಿಸಿ ಅದರ ಸೂಕ್ಷ್ಮಗಳನ್ನು ಪಾಲಿಸುತ್ತ, ಅರ್ಥಗಾರಿಕೆಯಲ್ಲಿ ವಿಭಿನ್ನ ಆಕರಗಳ ಪ್ರೇರಣೆ ಗಳನ್ನು ಹೊಂದಿಸಬೇಕಾಗುತ್ತದೆ. ಅಂದರೆ, ಆಕರಗಳ ಸಮ್ಮಿಶ್ರಣವು ಸಾಹಿತ್ಯಾತ್ಮಕವಾಗಿ ಮಾತ್ರ ಹೊಂದಿಕೊಂಡರೆ ಸಾಲದು. ಸರಣಿ-ಹಂದರ- ಚೌಕಟ್ಟು ಈ ಮೂರಕ್ಕೂ ಬೆಸುಗೆಯಾಗಬೇಕು. ನಾವು ಕೊಡುವ ಒತ್ತುಗೆಳು ಈ ತ್ರಿವಿಧ ಬಂಧವನ್ನು ಪಾಲಿಸಬೇಕಾಗುತ್ತದೆ.

ಆಕರಗಳ ನಿರ್ವಹಣೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ವೆಂದರೆ- ಕಥೆ, ಕಥಾವಸ್ತುಗಳ ಗಾತ್ರ, ಸ್ಥಾನಗಳನ್ನು ಕುರಿತಾದದ್ದು. ಜನಪದ ಸಾಹಿತ್ಯ ವಿಶ್ಲೇಷಣಾ ಪರಿಭಾಷೆಯಲ್ಲಿ ಪ್ರಸಂಗವು (ಅದರ ಕಥಾನಕವೂ) ಹೆಚ್ಚಾಗಿ ಒಂದು ಉಪಪಠ್ಯ, ' ಅರ್ಥಾತ್, ಉಪಾಖ್ಯಾನ (subtext), ಅದರ ಹಿಂದೆ ಒಂದು ಆಖ್ಯಾನ, ಪ್ರಧಾನ ಪಠ್ಯ (text) ಇದೆ. ಉಪಪಠ್ಯವು ತಾನಾಗಿ ಅಸ್ತಿತ್ವವುಳ್ಳ ಸ್ವತಂತ್ರವೂ ಹೌದು; ಪಠ್ಯದ ಭಾಗವೂ ಹೌದು. ಉಪಪಠ್ಯವೇ ವಿಸ್ತಾರಗೊಂಡು ಪಠ್ಯವಾಗುವ ಕ್ರಿಯೆ, ಪ್ರದರ್ಶನದಲ್ಲಿ ಜರುಗುತ್ತದೆ. ಓದಿದಾಗ ಒಂದು ಗಂಟೆಯಲ್ಲಿ ಮುಗಿಯುವ ಪ್ರಸಂಗ, ಪ್ರದರ್ಶನದಲ್ಲಿ ಆರೆಂಟು ಗಂಟೆಗಳನ್ನು ಆವರಿಸುವ ಪಠ್ಯವಾಗುತ್ತದೆ.