ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮ / ವಾಗರ್ಥ ಕೂಡ ತುಳುವಿನದಾದ ಕಥಾಪರಂಪರೆಯನ್ನು ತುಳು ಪುರಾಣ ಕಥಾಲೋಕವನ್ನು ಬಳಸಿಕೊಳ್ಳಬೇಕಾಗಿದೆ. ತುಳು ಅರ್ಥಗಾರಿಕೆ ಹೀಗೆ ಅಂತರ್‌ಪಠ್ಯ ಸಂಬಂಧವನ್ನು ಹೆಚ್ಚಾಗಿ ಬಳಸಿಕೊಂಡಿಲ್ಲ. ಅಂತಹ ಮಾರ್ಗ ಇನ್ನೂ ಸಿದ್ಧವಾಗಬೇಕಷ್ಟೆ, ಕಾರಣ, ತುಳುವಿನ ಒಂದೊಂದು ಕಥಾನಕವೂ ಸ್ವತಂತ್ರವಾಗಿ ಗಣಿಸಲ್ಪಡುತ್ತದೆ. ಉದಾ: ತುಳುನಾಡಸಿರಿ, 'ಕೋಟಿಚೆನ್ನಯ' ಪ್ರದರ್ಶನಗಳಲ್ಲಿ, ಒಂದರ ಪ್ರಸ್ತಾವ, ದೃಷ್ಟಾಂತ ಇನ್ನೊಂದರಲ್ಲಿ ಹೇಳುವ ಕ್ರಮವಿಲ್ಲ. ಇದಕ್ಕೆ ಕತೆಗಳ, ಪೌರ್ವಾಪರ್ಯ ಕಾಲಾನುಕ್ರಮ ನಿರ್ಣಯ ಇಲ್ಲದಿರುವುದು ಮುಖ್ಯ ಕಾರಣವಾಗಿದೆ, ಮುಂದೆ ಈ ಸಾಧ್ಯತೆಗೆ ಬೇಕಾದ ಸಂಪ್ರದಾಯ ಸೃಷ್ಟಿಯಾಗಬಹುದು, ಸೃಷ್ಟಿಯಾಗಬೇಕು.

ಅರ್ಥಗಾರಿಕೆಯಲ್ಲಿ ಒಂದು ಮೂಲದಿಂದ ನೇರವಾಗಿ ಉದ್ಧರಿಸಿ ಮಾತಾಡುವ ಸಂದರ್ಭಗಳುಂಟು. ಇಲ್ಲಿ ಔಚಿತ್ಯವೇ ಮಾನದಂಡ. ಅದಕ್ಕೊಂದು ಪದ್ಧತಿಯುಂಟು. ಇದು ಇಂತಹವನ ಇಂತಹ ಸಂದರ್ಭದ ಮಾತು” ಎಂಬ ಕಥಾ ಸಂಪ್ರದಾಯದಲ್ಲಿ ನಿಶ್ಚಿತವಾಗಿರುವ ವಿಷಯವನ್ನು ಆ ಸಂದರ್ಭಕ್ಕಿಂತ ಮೊದಲು ತರಕೂಡದು. ಉದಾ : ಭಗವದ್ಗೀತೆಯ ಶ್ಲೋಕ. ಇದನ್ನು ಭಾರತಯುದ್ಧದ ಗೀತಾ ಸಂದರ್ಭಕ್ಕೆ ಮೊದಲು ಯಾವ ಸಂದರ್ಭದಲ್ಲೂ ಹೇಳಕೂಡದು. ಅನಂತರದ ಸಂದರ್ಭದಲ್ಲಿ ಉಚಿತ ರೀತಿಯಲ್ಲಿ ಹೇಳಬಹುದು. ಆದರೆ, ಭಗವದ್ಗೀತೆಗಿಂತ, ಅರ್ವಾಚೀನ ಕಾಲದ ಸುಭಾಷಿತಗಳನ್ನೋ, ಸರ್ವಜ್ಞ ವಚನದ ತುಣುಕುಗಳನ್ನೂ, ದಾಸರ ಸಂತಕವಿಗಳ ಹಾಡನ್ನೋ, ಅದರ ಭಾವವನ್ನೋ, ಬಸವಣ್ಣನವರ ಮಾತುಗಳನ್ನೋ ಸಾಂದರ್ಭಿಕ ಅನ್ವಯವು ಸರಿಯಾಗಿ ಆಗುವಂತಿದ್ದರೆ ಎಲ್ಲಿಯೂ ಕಾಲಬಂಧನವಿಲ್ಲದೆ ಹೇಳಬಹುದು. ಸುಭಾಷಿತ, ವಚನಗಳು ಗೀತೆಗಿಂತ ಎಷ್ಟೋ ನಂತರದವು. ಆದರೆ ಅವು ಎಲ್ಲ ಕಾಲಗಳ ತಿಳಿದವರಿಗೆ ಹೊಳೆಯುವ “ನಿತ್ಯ ಸತ್ಯ'ಗಳಾಗಿರುತ್ತವೆ. ಅವು ಸಾರ್ವಕಾಲಿಕ, ಉಕ್ತಿಗಳಾಗಿ, ಗ್ರಾಹ್ಯ. ಅಲ್ಲೂ ಕೂಡ, 'ಸರ್ವಜ್ಞ', 'ಮಂಕುತಿಮ್ಮ', ಕೂಡಲ ಸಂಗಮ', 'ಪುರಂದರ ವಿಠಲ' ಎಂಬಂತಹ ಅಂಕಿತಗಳು ಅರ್ಥಗಾರಿಕೆಯಲ್ಲಿ, ಬರಬಾರದು. ಅವನ್ನು ಲೋಪಗೊಳಿಸಬೇಕು.