ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೬೪
ಶ್ರೀ ರಾಮಕೃಷ್ಣ ಪರಮಹಂಸರ

ಕೊ೦ಡು ತನ್ನನ್ನು ಎಂದಿಗೂ ಮರೆಯಲಾರರೆಂದೂ ತನ್ನನ್ನು ಎ೦ದಿಗೂ ನಿರಾಕರಿಸಲಾರರೆಂದೂ ಸಮಯವನ್ನು ನಿರೀಕ್ಷಿಸುತ್ತಿರಬಹುದೆಂದೂ ಸರಿಯಾದ ಅವಕಾಶ ಸಿಕ್ಕಿದಾಗ ಬಂದು ಕರೆದುಕೊಂಡು ಹೋಗಬಹುದೆಂದೂ ಸಮಾಧಾನ ಹೇಳಿಕೊಂಡಳು. ಊರಿನಲ್ಲಿ ಜನರು ತನ್ನ ಗಂಡನು ಮೈಮೇಲಿನ ಬಟ್ಟೆಯನ್ನು ಕೂಡ ಬಿಟ್ಟು “ ಹರಿಹರಿ” ಎಂದು ಅಲೆಯುತ್ತಾನೆಂದು ಆಗಾಗ ಅಂದು ಕೊಳ್ಳುವುದನ್ನೂ, ಹೆಂಗಸರು “ ಹುಚ್ಚನ ಹೆಂಡತಿ ” ಎಂದು ಅಂದು ಕೊಳ್ಳುವುದನ್ನೂ ಕೇಳಿ “ ಹಾಗಾದರೆ ಕಾಮಾರ ಪುಕುರದಲ್ಲಿದ ಹಾಗೆ ಈಗ ಇಲ್ಲವೆ ? ಜನಗಳು ಹೇಳುವ ಹಾಗೆ ಅವರಿಗೆ ಈ ಅವಸ್ಥೆಯಾಗಿರುವುದೇ? ಅದೃಷ್ಟವಶಾತ್‌ ಹಾಗಾಗಿದ್ದರೆ ನಾನು ಇಲ್ಲಿರುವುದುಯುಕ್ತವಲ್ಲ. ಅವರ ಹತ್ತಿರವೇ ಇದ್ದು ಸೇವೆ ಮಾಡುವುದು ಉಚಿತ " ಎಂದು ನಿರ್ಧರಮಾಡಿಕೊಂಡು ಈ ಮಾತನ್ನು ತನ್ನ ತಂದೆಗೆ ತಿಳಿಸಿದಳು. ಆತನು ಅದಕ್ಕೆ ಸಮ್ಮತಿಸಿ ಮಗಳು ಅಸ್ವಸ್ಥಳಾಗಿದ್ದರೂ ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋದನು. (1872)

ಶಾರದಾದೇವಿಯು ರೋಗಪೀಡಿತಳಾಗಿರುವಾಗಲೇ ಹೊರಟು ಬಂದದ್ದನ್ನು ನೋಡಿ ಪರಮಹಂಸರಿಗೆ ಬಹುವ್ಯಥೆಯಾಯಿತು. ಆದ್ದರಿಂದ ತಮ್ಮ ಕೊಠಡಿಯಲ್ಲಿಯೇ ಬೇರೆಯೋಂದು ಹಾಸಿಗೆಯಲ್ಲಿ ಆಕೆಯು ಮಲಗುವಂತೆ ಏರ್ಪಾಡುಮಾಡಿ ಮೂರುನಾಲ್ಕು ದಿನ ಹಗಲು ರಾತ್ರಿ ಔಷಧಿ ಪಥಗಳನ್ನು ಕೊಟ್ಟು ತಾವೇ ಉಪಚಾರ ಮಾಡಿದರು. ಜ್ವರವು ವಾಸಿಯಾಗಲು ಆಕೆಯು ಅಲ್ಲಿಯೇ ಇರಬೇಕೆಂದು ನಿಶ್ಚಯವಾಯಿತು. ಆಕೆಯ ತಂದೆಯೂ ಸಂತೋಷದಿಂದ ಮಗಳನ್ನು ಬಿಟ್ಟು ತಮ್ಮ ಊರಿಗೆ ಹಿಂತಿರುಗಿ ಹೊರಟು ಹೋದನು.

ಇಲ್ಲಿಂದ ಮುಂದಕ್ಕೆ ಶಾರದಾದೇವಿಗೆ ದಕ್ಷಿಣೇಶ್ವರವೇ ಮನೆಯಾಯಿತು. ಆಕೆಗೂ ಪರಮಹಂಸರಿಗೂ ಇದ್ದ ಪರಸ್ಪರಸಂಬಂಧ, ಕಾಮಗಂಧ ಹೀನವಾದ ವಿಶುದ್ಧ ಪ್ರೇಮ, ಆಕೆಗೆ ಕೊಟ್ಟ ಶಿಕ್ಷಣ,