ಪುಟ:ಸಂತಾಪಕ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.

೩೯


ಕೂಗಿತು. ಒಡನೆಯೇ ಆ ವನದ ಮತ್ತೊಂದು ಪಾರ್ಶ್ವದಲ್ಲಿ " ಕುಹೂ "
ಎಂದು ಪ್ರತಿಧ್ವನಿಯಾಯಿತು ಮತ್ತೊಂದುಬಾರಿ ಹಾಗೆಯೇ ಕೂಗಿತು.
ಮತ್ತೆ ಹಾಗೆಯೇ ಪ್ರತಿಧ್ವನಿಯಾಯಿತು. ನಿಶ್ಯಬ್ದವಾಗಿದ್ದ ವನಾಂತವೆಲ್ಲ
ಕ್ಷಣಕಾಲದೊಳಗಾಗಿ ಕುಹೂ ಶಬ್ದದಿಂದ ತುಂಬಿಹೋಯಿತು. ಎಲ್ಲೆಲ್ಲಿಯೂ
ಕುಹೂಶಬ್ದ, ವಿರಹಿಕುಲವಿನಾಶಕಾರಿಯಾದ ಪಂಚಮಸ್ವರ ! ತರುಣರನ್ನು
ತತ್ತರಗೊಳಿಸುವ ತೀಕ್ಷ್ಣತರವಾದ ಧ್ವನಿ ! ಮಹೀಮಂಡಲವನ್ನೇ
ಮರುಳುಮಾಡುವ ಮನ್ಮಥನ ಮದ್ದು ! ಘೋರಮೃಗಾಕೀರ್ಣವಾದ
ವನಾ೦ತರದಲ್ಲಿ ರಸಿಕಜನಾನಂದದಾಯಕವಾದ ಈ ಸುಸ್ವರವನ್ನು ಕೇಳಿ
ಸಂತೋಷಪಡುವವರಾರು ? ಚಿಃ, ಎಲೆ ಅವಿವೇಕಿಯಾದ ಕೋಗಿಲೆಯೇ !
ಅದೇಶದಲ್ಲಿ ಅಸಮಯದಲ್ಲಿ ವ್ಯರ್ಥವಾಗಿ ಕೂಗಿ ನಿನ್ನ ಮೃದುವಾದ
ಕ೦ಠವನ್ನೇಕೆ ಒಣಗಿಸಿಕೊಳ್ಳುವೆ ? ಈ ಕಾಡಿನಲ್ಲಿ ನಿನ್ನನ್ನು ದೂಷಿಸುವ
ವರೂ ಇಲ್ಲ, ಭೂಷಿಸುವವರೂ ಇಲ್ಲ. ಆವಳಾದರೊಬ್ಬ ವಿರಹಿಣಿಯ ಇದಿ
ರಾಗಿ ಹೋಗಿ ಒಂದುಬಾರಿ ನಿನ್ನ ಪಂಚಮಸ್ವರವನ್ನೆತ್ತಿ ಕೂಗು. ನಿನ
ಗೋಸುಗ ಒಂದು ಸಹಸ್ರನಾಮವೇ ಬರೆಯಲ್ಪಟ್ಟು ವಿಧವಿಧವಾದ ಆಶೀರ್ವ
ಚನಗಳು ಲಭಿಸುವುವು. ಇಲ್ಲವಾದರೆ ಆವನಾದರೊಬ್ಬ ನಮ್ಮ ಸಮಾನ
ಧರ್ಮನ ಜೀರ್ಣವಾದ ಕುಟೀರದ ಬಳಿಯಲ್ಲಿರುವ ವೃಕ್ಷಶಾಖೆಯಲ್ಲಿ
ಕುಳಿತು ಕುಹೂ ಧ್ವನಿಯನ್ನು ಮಾಡು. ಆತನು ನಿನ್ನ ಗುಣವನ್ನು
ವೃತ್ತಿಗಳ ವೈಚಿತ್ರ್ಯದಿಂದ ಉಲ್ಲೇಖಿಸಿ ನಿನ್ನ ಶ್ರಮವನ್ನು ಸಾರ್ಥಕ
ಗೊಳಿಸುವನು.
ಪಾಠಕಮಹಾಶಯ ! ಸಮಯಾಸಮಯಗಳನ್ನೂ ಫಲಾಫಲಗಳನ್ನೂ
ಪರಿಗಣಿಸದೆ ಕೋಗಿಲೆಯೇನೋ ಕೂಗಿಬಿಟ್ಟಿತು. ನಾವದನ್ನೇಕೆ ದೂಷಿ
ಸೋಣ ? ಅದು ಹಾಗೆಯೇ ಕೂಗುತ್ತಿರಲಿ. ಇತ್ತ ನಿರುಪಮಕುಮಾರಿಯ
ಅವಸ್ಥೆಯೇನಾಗಿರುವುದೋ ನೋಡೋಣ.
ನಿರುಪಮ ಕುಮಾರಿಗೆ ಪ್ರಜ್ಞೆಯುಂಟಾಗಲು ಅವಳು ನಾಲ್ಕು ದಿಕ್ಕು
ಗಳನ್ನೂ ನೋಡಿದಳು. ಒಂದು ಪಾರ್ಶ್ವದಲ್ಲಿ ಭುಜಂಗಮನು ಓಲೆಯ
ಗರಿಯ ಬೀಸಣಿಗೆಯಿಂದ ಗಾಳಿಹಾಕುತ್ತ ಕುಳಿತಿದ್ದನು. ನಿರುಪಮ
ಕುಮಾರಿಗೆ ಎಚ್ಚರವಾದುದನ್ನು ಕಂಡು ಅವನು ಒಂದು ಚಿನ್ನದ ಹರಿವಾಣ