ಸ್ವರ್ಗ ಸುಖವನ್ನೇ ಉಂಟುಮಾಡುವೆನಲ್ಲದೆ ನಾನೂ ನಿನ್ನ
ದಾಸಾನುದಾಸನಾಗಿರುವೆನು. ನಿನಗೆಂದೆಂದಿಗೂ ಯಾವ
ಭಾಗದಲ್ಲಿಯೂ ಕೊರತೆಯಾಗದಂತೆ ನಡೆದುಕೊಳ್ಳುವೆನು.
ವಿಳಂಬಿಸಬೇಡ.............................
ಸುಶೀಲೆಗೆ ಕೋಪವು ಮಿತಿಮೀರಿತು. ಶೋಕದಿಂದ ಕಣ್ಣುಗಳಲ್ಲಿ ನೀರು ತುಂಬಿತು. ಆಗಲೇ ತಂತ್ರನಾಥನನ್ನು ಹೊರಗೆ ಓಡಿಸಬೇಕೆಂದು ತೋರಿತು. ಆದರೆ ಒಬ್ಬರೂ ಇರಲಿಲ್ಲ. ಉಪಾಯಾಂತರವಿಲ್ಲದೆ ಕಡೆಗೆ ವಿಕೃತಸ್ವರದಿಂದ - ಹುಚ್ಚ! ಹೊರಡು, ಇಲ್ಲಿ ನಿಲ್ಲಬೇಡ! ನಿನ್ನ ಭೋಗ ಭಾಗ್ಯಾದಿಗಳು ನನಗೆ ಬೇಡ. ಪಾತಿವ್ರತ್ಯಕ್ಕೆ ಮಿಗಿಲಾದ ವಸ್ತು ಈ ಜಗತ್ತಿನಲ್ಲೇ ಮತ್ತಾವುದೂ ಇಲ್ಲ. ಚೆನ್ನಾಗಿ ತಿಳಿದಿರು. ಮೂರ್ಖ! ರಾವಣನಿಗೆ ಐಶ್ವರ್ಯ-ಅಧಿಕಾರಾದಿಗಳು ಹೇರಳವಾಗಿತ್ತೆಂಬುದು ಸೀತೆಗೆ ತಿಳಿದೇ ಇದ್ದುದು; ಆದರೂ ಅವಳು ಅವುಗಳೆಲ್ಲವನ್ನೂ ಹುಲ್ಲಿಗೂ ಕಡೆಯಾಗಿ ಭಾವಿಸಿ, ತನ್ನ ನಿಶ್ಚಲಮನೋವೃತ್ತಿಗೆ ತಕ್ಕ ಮಹತ್ಫಲವನ್ನೇ ಹೊಂದಿದಳಲ್ಲವೆ? ಆ ದೇವಿಯ ದಾಸಿಯೇ ನಾನೆಂದು ತಿಳಿ. ಈ ಶರೀರ, ಮನಸ್ಸು, ಐಶ್ವರ್ಯಗಳೇ ಮೊದಲಾರ ಸರಸ್ವವನ್ನೂ ನನ್ನ ಸ್ವಾಮಿಗೆ ಸಮರ್ಪಿಸಿರುವೆನು. ಆತನ ಅನುಗ್ರಹ ಬಲದಿಂದ ಈ ಶರೀರವು ನಷ್ಟವಾದರೂ ಆತನಲ್ಲಿ ಸೇರಿರುವ ನನ್ನ ಮನಸ್ಸು ಮಾತ್ರ ಚಲಿಸಲಾರವೆಂದು ನಂಬು! ನೀನೀಪರಸ್ತಾಪಕ್ಕೆರಗುವುದು ಸರಿಯಲ್ಲ. ನಡೆ!
ತಂತ್ರ - (ಕಾತರಸ್ವರದಿಂದ) ಬೇಡ, ಸುಶೀಲೆ! ಹೀಗೆ ನಿಷ್ಟುರೆಯಾಗಬೇಡ!! ನಿನ್ನ ಸುಖವನ್ನೇ ಕೋರುತ್ತಿರುವವನಲ್ಲಿ ಈ ಬಗೆಯಾದ ಬಿರುನುಡಿ ತಕ್ಕುದಲ್ಲ. ಸುಮ್ಮನೆ ಹಟಮಾಡಬೇಡ.