ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತಿಹಿತೈಷಿಣಿ

ಸಿದ್ಧಾನ್ತಿ - ವಿಚಾರವೇನು? ಈ ವರೆಗೆ ಈ ವರ್ಷದ ಪಂಚಾಂಗಗಳು ಹನ್ನೆರಡು ಬಂದಿವೆ ಅವಾವುದರಲ್ಲಿ ಏನೇನು ವ್ಯತ್ಯಾಸವಿರುವುದೋ ನೋಡುತ್ತಿದ್ದೇನೆ. ಈಗೇನಪ್ಪ! ಎಲ್ಲರೂ ಜ್ಯೋತಿಷ್ಯರೇ ಆಗಿರುವರು.

ವಿನೋದ - ಕಿರುನಗೆಯಿಂದ, - ತಾವೇ ಒಂದು ಪಂಚಾಂಗವನ್ನು ಮಾಡಬಾರದೇಕೆ?

ಸಿದ್ಧಾನ್ತಿ - ಏಕಪ್ಪ? ಏನಾದರೂ ಅನುಮಾನಬಂದರೆ ಗುಣಿಸಿ ನೋಡಿಕೊಂಡರಾಯ್ತು! ನಾನೇಕೆ ಬೈಯಲಿ? ನೀನೇನು ಮೂರು ದಿನಗಳಿಂದ ಬರಲಿಲ್ಲ? ಊರಲ್ಲಿರಲಿಲ್ಲವೇನು?

ವಿನೋದ - ಊರಲ್ಲಿಯೇ ಇದ್ದೆನು. ಆದರೆ, ನನ್ನ ಮಿತ್ರಮಂಡಲಿಯ ಪ್ರೀತ್ಯರ್ಥವಾಗಿ ನಿನ್ನೆ ಮತ್ತು ಮೊನ್ನೆ ಊಟಉಪಚಾರಗಳನ್ನು ನಡೆಯಿಸಿದೆನು. ಆ ಕೆಲಸದಲ್ಲಿ ನಿರತನಾಗಿದ್ದುದರಿಂದ ಇತ್ತ ಬರಲಾಗಲಿಲ್ಲ.

ಸಿದ್ಧಾನ್ತಿ - ನ್ಯಾಯ, ಅಧಿಕಾರಿಗಳಾದ ಸ್ನೇಹಿತರಿಗೆ ಔತನಾದಿಗಳನ್ನು ಮಾಡಿ ಅವರನ್ನು ಮೆಚ್ಚಿಸಿಕೊಂಡರೆ, ಮುಂದೆ ದೊಡ್ಡ ಉದ್ಯೋಗವಾದರೂ ದೊರೆವುದು. ನಮ್ಮಿಂದೇನಾದೀತು?

ವಿನೋದ - ಹಾಗೆ ಹೇಳಲಾಗದು. ನಾನು ಹೊಂದಿರುವ ಅಲ್ಪಸ್ವಲ್ಪ ತಿಳಿವಿಗೂ ಕಾರಣಭೂತರಾದ ತಮ್ಮನ್ನೇ ಮರೆತರೆ ನಾನು ಕೃತಘ್ನನಲ್ಲದೆ ಮತ್ತೇನು?

ಸಿದ್ಧಾನ್ತಿ - ಹೋಗಲಿ; ನಿನ್ನ ಹೆಂಡತಿಗೇನೋ ಅನಾರೋಗ್ಯವೆಂದು ಕೇಳಿದೆನು. ನಿಜವೇ?

ವಿನೋದ - ಹೇಳಿದವರಾರು?