ಶ್ರೀಃ
ನವಮ ಪರಿಚ್ಛೇದ
—————♦—————
(ಕರ್ಮಫಲ)
ಸುಶೀಲೆಯ ತಂದೆಯ ಹೆಸರು ಸುಜ್ಞಾನಶರ್ಮ. ಮಲಯಪುರಕ್ಕೆ ಮೂರು ಹರದಾರಿ ದೂರದಲ್ಲಿರುವ ಮಹಾನಂದ ಗಾಮದಲ್ಲಿಯೇ ಈತನು ವಾಸವಿರುವುದು. ಈತನು ಆಗರ್ಭ ಶ್ರೀಮಂತನೂ, ವಿದ್ಯಾವಿನಯಾದಿ ಸುಗುಣಸಂಪನ್ನನೂ ಆದ ಗಣ್ಯಪುರುಷನು, ಅಲ್ಲದೆ ಗಾಮಕ್ಕೆ ಮುಖ್ಯಸ್ಥನಾಗಿ ಗೌರವಿಸಲ್ಪಟ್ಟು, ಎಷ್ಟೋ ಸಭೆಗಳಿಗೆ ಸಹಾಯಕ ಕಾರ್ಯದರ್ಶಿಯೂ ಆಗಿದ್ದನು.
ಸುಶೀಲೆ ದಯಾಳುಗಳಾದ ಪೋಲೀಸಿನವರ ಸಹಾಯದಿಂದ ಮಯೂರಿಯೊಡನೆ ಪಿತೃಗ್ರಹವನ್ನು ಸೇರಿದಳು. ಮಗಳ ಬಾಯಿಂದೆಯೂ ಮಯೂರಿಯ ಬಾಯಿಂದೆಯೂ ವಿಷಯವನ್ನು ತಿಳಿದ ಸುಜ್ಞಾನಶರ್ಮನು ಅಳಿಯಂದಿರ ಅವಿವೇಕಕ್ಕೂ, ಮಗಳ ಆಪತ್ತಿಗೂ ಮರುಗುತ್ತೆ ಮಗಳನ್ನು ಬಹುನಿಗದಿಂದ ಸಮಾಧಾನಪಡಿಸಲು ಪ್ರಯತ್ನಿಸಿದನು.
ಹೇಗೂ ಸುಶೀಲೆ ಪತಿಗೃಹವನ್ನು ಸೇರಿ ಇಂದಿಗಾಗಲೇ ಎರಡು ವಾರಗಳು ಕಳೆದುಹೋದುವು. ಆದರೂ ಪತಿಯ ಸಂದರ್ಶನವು ದೊರೆಯಲಿಲ್ಲ; ತೊಡೆಯ ಗಾಯವೂ ಚೆನ್ನಾಗಿ ಮಾಗಿಲ್ಲ; ಮನೋವ್ಯಾಕುಲವನ್ನೆಂತು ವಿವರಿಸುವಂತಿಲ್ಲ. ಅಹೋರಾತ್ರಿಯೂ ಹಾಸಿಗೆಯ ಮೇಲೆ ಹೊರಳಾಡುತ್ತೆ ಪತಿಯ ದುರ್ದಶೆಗಾಗಿ ಕಣ್ಣೀರು ಸುರಿಸುತಿದ್ದಳು. ಮಯೂರಿ, ಕ್ಷಣಮಾತ್ರವೂ ಸುಶೀಲೆಯನ್ನು ಬಿಟ್ಟು ಅತ್ತಿತ್ತ ಹೋಗದೆ ಕಾವಲಿದ್ದಳು.