ಸುಶೀಲೆ — ಕಣ್ಣೀರು ಸುರಿಸುತ್ತೆ ಕೈ ಕುಗ್ಗಿದ ಕಂಠದಿಂದ - ಮಯೂರಿ ನನ್ನ ಸ್ವಾಮಿ, ಈಗ ಇರುವುದೆಲ್ಲಿ? ಹದಿನೈದು ದಿನಗಳಾದರೂ ನನಗೇಕೆ ಕಾಣಿಸುತ್ತಿಲ್ಲ! ಏನಾಗಿರುವರು? ಹೇಳು | ಆ ನನ್ನ ಪ್ರಭು ಸುಖವಾಗಿರುವರೆಂದು ತಿಳಿವವರೆಗೂ, ನನ್ನೀ ರೋಗವು ಗುಣವಾಗುವಂತಿಲ್ಲ. ಅವರು ನನ್ನನ್ನು ಕ್ಷಮಿಸಿ ಶಾಂತಚಿತ್ತರಾಗಿ ವಿವೇಕವನ್ನು ಹೊಂದಿರುವರೆಂದು ಕೇಳಿದಾಗಳೇ ನಾನು ಸುಖಿಯಾಗಬೇಕು. ಮಯೂರಿ! ನಿಜವಾಗಿ ಹೇಳು | ನನಗಷ್ಟು ಭಾಗ್ಯವುಂಟಾದೀತೆ? ಎ೦ದಿಗೆ? ಹೇಗೆ?
ಮಯೂರಿ - ತಾಯೀ! ಚಿಂತಿಸಬಾರದು, ನಿಮ್ಮ ಸ್ವಾಮಿಗೆ ಏನೂ ಕೇಡಾಗದು. ನಿಮ್ಮ ಸಾಕ್ಷ್ಯಪತ್ರದ ಬಲವೇ ಅವರನ್ನು ಸುರಕ್ಷಿತರನ್ನಾಗಿ ಮಾಡಬಲ್ಲುದೆಂದು ವಿಚಾರಣಾಕರ್ತರು ದೃಢವಾಗಿ ಹೇಳುತ್ತಿರುವರು. ನಿಮ್ಮ ಶೀಲ-ಸತ್ಯ-ಶ್ರಮಸಹಿಷ್ಣುತೆ - ಇವುಗಳ ಪ್ರಭಾವವೇ ನಿಮ್ಮನ್ನು ಈ ವಿಪತ್ತಿನಿಂದ ಪಾರಾಗಿಸತಕ್ಕುದಾಗಿದೆ. ಅಂಜಬೇಡಿರಿ!?” ಎಂದು ಹೇಳಿ, ಹಾಲನ್ನು ತರುವೆನೆಂದು ಬೇರೆ ಕಡೆಗೆ ಹೋದಳು. ಸುಶೀಲೆಯೊಬ್ಬಳೇ ಮಲಗಿದ್ದಳು.
ದ್ರೋಹಿಯಾದ ತಂತ್ರನಾಥನು ಇದೇ ಸಮಯವನ್ನೇ ನೋಡುತ್ತಿದ್ದನೆಂದು ತೋರುವುದು, ಹೇಗೂ ಮಯೂರಿ ಅತ್ತ ಹೋಗಲು, ಇವನಿತ್ತ ಬಂದೇ ಬಂದನು. ಸುಶೀಲೆ ಮಲಗಿದ್ದೆಡೆಗೆ ಬಂದು, ಮೆಲ್ಲನೆ “ಸುಶೀಲೆ! ಹೇಗಿರುತ್ತೀಯೆ? ವ್ರಣವಿನ್ನೂ ಮಾಗಿಲ್ಲವೆ?
ಸುಶೀಲೆ, ಭಯ-ರೋಷಗಳಿಂದ ಕಂಪಿಸುತ್ತೆ, “ಪ್ರಾಣವುಹೋಗುವವರೆಗೂ ವ್ರಣವೂ ಮಾಸುವಂತಿಲ್ಲ.”