ಪುಟ:ಹಳ್ಳಿಯ ಚಿತ್ರಗಳು.djvu/೬೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಹಳ್ಳಿಯ ಚಿತ್ರಗಳು

ಬೇಡವೋ ಎಂದು ಯೋಚಿಸುತ್ತಾ ನಿಂತಿದ್ದಿತು. ಸಂಧ್ಯಾಕಾಲಕ್ಕೆ ಸ್ವಭಾವವಾದ ಒಂದು ವಿಧವಾದ ಮೌನವೂ ಶಾಂತತೆಯ ಪ್ರಪಂಚವನ್ನೆಲ್ಲಾ ಆವರಿಸಿದ್ದಿತು. ಆ ಸಂಧ್ಯೆಯ ಗಾಂಭೀರ್‍ಯವನ್ನು ಭೇದಿಸಬಾರದೆಂದು, ಇರುಳು ಹೆಣ್ಣು ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಬರುತ್ತಿರುವುದು ಕೇಳಿಸುವಂತಿದ್ದಿತು. ಬೆಳ್ಳಹಕ್ಕಿಗಳ ಸಾಲೊಂದು ಸಿಪಾಯಿಗಳೋಪಾದಿಯಲ್ಲಿ ನೇರವಾಗಿ ಪಶ್ಚಿಮದ ಕಡೆಗೆ ಹಾರುತ್ತಿದ್ದಿತು. ಕಾಳಿನಿಂದ ಬಗ್ಗಿದ ಪೈರಿನ ಮೇಲೆ ತಂಗಾಳಿಯು ಬೀಸಿದ ಕೂಡಲೆ, ಅದು ಆಚೆ ಈಚೆ ಬಗ್ಗಿ, ಮಧ್ಯದಲ್ಲೊಂದು ದಾರಿಯನ್ನು ಬಿಟ್ಟು, ಹೆದರಿ ಹೆದರಿ ಹೆಜ್ಜೆಯಿಕ್ಕುತ್ತಿರುವ ಇರುಳಿಗೆ, ಸುಸ್ವಾಗತವನ್ನು ಮಾಡುವಂತೆ ತಲೆಯಲ್ಲಾಡಿಸುತ್ತಿದ್ದಿತು. ಪ್ರಕೃತಿಯ ಈ ಬೆಡಗಿನ ಕಡೆಗೆ ಹುಡುಗರ ಲಕ್ಷ್ಯವಿರಲಿಲ್ಲ. ಅವರೆಲ್ಲರೂ ಒಂದು ಮರದ ಕೆಳಗೆ ಸ್ವಲ್ಪ ದೂರದಲ್ಲಿ ಬಟ್ಟೆಗಳನ್ನು ತೆಗೆದಿಟ್ಟು ಈಜುವುದಕ್ಕೆ ಪ್ರಾರಂಭಿಸಿದ್ದರು. ಒಬ್ಬರೊಂದಿಗೊಬ್ಬರು ಯಾರು ಹೆಚ್ಚು ಹೊತ್ತು ಮುಳುಗುತ್ತಾರೆಂದು ಹುರುಡು ಕಟ್ಟಿಕೊಂಡು ಈಜುತ್ತಿದ್ದರು. ಆದರೆ ಆ ಅಭಿನವ ಭಾಷ್ಯಕಾರನಿಗೆ ಆ ದಿವಸವೂ ಗ್ರಹಚಾರ ತಪ್ಪಿದುದಾಗಿರಲಿಲ್ಲ. ನಮ್ಮೂರ ಶಾನುಭೋಗ ರಾಮೋಹಳ್ಳಿಗೆ ಹೋಗಿದ್ದವನು ಆ ದಾರಿಯಲ್ಲಿ ಊರ ಕಡೆಗೆ ಬರುತ್ತಿದ್ದ. ಪುಣ್ಯಾತ್ಮ ತನ್ನ ದಾರಿ ತಾನು ಹಿಡಿದುಕೊಂಡು ಹೋಗಬಹುದಾಗಿತ್ತು. ಹಾಗೆ ಮಾಡಲಿಲ್ಲ. ಸುತ್ತಲೂ ನೋಡಿದ, ಹುಡುಗರು ಈಜುತ್ತಿರುವದು ಕಣ್ಣಿಗೆ ಬಿತ್ತು. ಮನಸ್ಸಿನಲ್ಲಿಯೇ ನಗುತ್ತಾ ಮರದ ಕೆಳಗಡೆ ಇಟ್ಟಿದ್ದ ಬಟ್ಟೆಯ ಗಂಟನ್ನು ಕಂಕುಳಲ್ಲಿ ಇರಿಕಿಕೊಂಡು ಊರ ಕಡೆಗೆ ಹೊರಟುಹೋದ. ಹುಡುಗರು ಮನದಣಿಯ ಈಜಾಡಿ ಮೈಕೈ ನೋವೆಲ್ಲಾ ಹೋಗಿಸಿಕೊಂಡು, ಮೇಲಕ್ಕೆ ಬಂದು ನೋಡುತಾರೆ! ಬಟ್ಟೆಗಳೊಂದೂ ಇಲ್ಲ. ಈ ಗೋಪಿಯರನ್ನು ಮೋಹಿಸಿದ ಕೃಷ್ಣನಾರೊ? ಎಂಬ ಸಂಶಯವುಂಟಾಯಿತವರಿಗೆ. ಸುತ್ತ ಎಲ್ಲಾದರೂ ಮರದ ಮೇಲಾದರೂ ಕೃಷ್ಣ ಕುಳಿತಿದ್ದಿದ್ದರೆ, ಹೋಗಿ ಅವನ ಕಾಲು ಹಿಡಿದು ಕೊಂಡು ಬೇಡಿ ಕಾಡಿ ದಮ್ಮಯ್ಯ ಗುಡ್ಡೆಹಾಕಿ ಬಟ್ಟೆಗಳನ್ನು ಹಿಂದಕ್ಕೆ ಪಡೆಯಬಹುದಾಗಿದ್ದಿತು. ಆದರೆ ಈಗ ಆ ಕೃಷ್ಣನ ಹೆಸರೂ ಇಲ್ಲ. ಉಸಿರೂ ಇಲ್ಲ. ಪಾಪ! ಲಂಗೋಟಿಯ ಹೊರತು ಅವರ ಮೈಮೇಲೆ