ವಿಷಯಕ್ಕೆ ಹೋಗು

ಭಾಗ್ಯದ ಲಕ್ಷ್ಮೀ ಬಾರಮ್ಮ

ವಿಕಿಸೋರ್ಸ್ದಿಂದ

ರಚನೆ: ಶ್ರೀ ಪುರಂದರದಾಸರು


ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ।
ಸೌಭಾಗ್ಯದ ಲಕ್ಷ್ಮೀ ಬಾರಮ್ಮ ॥ ಪ ॥

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ।
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥ ೧ ॥
ಭಾಗ್ಯ ದ ಲಕ್ಷ್ಮೀ ಬಾರಮ್ಮ
ಕನಕವೃಷ್ಟಿಯ ಕರೆಯುತ ಬಾರೆ
ಮನ ಕಾಮನೆಯ ಸಿದ್ಧಿಯ ತೋರೆ ।
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ ಬಾರಮ್ಮ ॥ ೨ ॥
ಭಾಗ್ಯದ ಲಕ್ಷ್ಮೀ ಬಾರಮ್ಮ
ಅತ್ತಿತ್ತಳಗದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ ।
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ॥ ೩ ॥
ಭಾಗ್ಯದ ಲಕ್ಷ್ಮೀ ಬಾರಮ್ಮ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ ।
ಕುಂಕುಮಾಂಕಿತ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ ॥ ೪ ॥
ಭಾಗ್ಯದ ಲಕ್ಷ್ಮೀ ಬಾರಮ್ಮ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ ।
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ ॥ ೫ ॥
ಭಾಗ್ಯದ ಲಕ್ಷ್ಮೀ ಬಾರಮ್ಮ