ಮಂಕುತಿಮ್ಮನ ಕಗ್ಗ - ವಿದ್ಯುಲ್ಲಹರಿಯೇ?

ವಿಕಿಸೋರ್ಸ್ದಿಂದ

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ವಿದ್ಯುಲ್ಲಹರಿಯೇ?

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಓಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು? - ಮಂಕುತಿಮ್ಮ || ೩೯

(ಕಾಣ್ಬ+ಒಲ್+ಎಸಗೆ) (ಪರಬೊಮ್ಮ+ಎನ್ನುವೊಡೆ) (ಒಸೆದು+ಏತಕೆ+ಅವನು+ಈಯನ್+ಎಮಗೆ+ಒಂದು) (ನಿಶೆಯ+ಒಳು+ಉಡುಕರದ+ಒಲು)

ಸುಳ್ಳುಗಳನ್ನೆ ಹೇಳಿಕೊಂಡು, ನಿಜವನ್ನು ಕಾಣುತ್ತೇನೆನ್ನುವಂತೆ, ಪರಮಾತ್ಮ ಮುಸುಕು ಹಾಖಿಕೊಂಡಿರುವುದಾದರೆ,
ಅವನು ನಮ್ಮ ಮೇಲೆ ಪ್ರಸನ್ನನಾಗಿ(ಒಸೆದು), ರಾತ್ರಿ ಹೊತ್ತುನಕ್ಷತ್ರದ ಕಿರಣಗಳು(ಉಡುಕರ), ನಮಗೆ ದಾರಿ ತೋರುವಂತೆ
ಒಂದು ಗುರುತನ್ನು ಅವನ ಇರುವಿಕೆಯ ಕುರುಹಾಗಿ ತೋರಿಸಬಾರದೇನು?

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||
ಮುಸುಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ || ೪೦

(ನಿಶೆಯೊಳು+ಏಂ) (ಹಗಲನು+ಒಲ್ಲದೊಡೆ) (ಶಶಿರವಿಗಳು(ಅವನ)

ಹಗಲು ಹೊತ್ತು ಅವನು ನಮಗೆ ಕಾಣಿಸಿಕೊಳ್ಳಬಾರದು ಎಂದು ಅವನ ನಿಯಮವಿದ್ದರೆ, ರಾತ್ರಿ (ನಿಶೆ)
ಹೊತ್ತದರು ಅವನು ನಮಗೆ ಕಾಣೀಸಿಕೊಳ್ಳಬೊಹುದಲ್ಲ? ಚಂದ್ರ ಮತ್ತು ಸೂರ್ಯರುಗಳು ಅವನ ಮನೆಯ ಕಿಟಕಿಗಳೋ?
ಸಯಂಕಾಲ ಮಬ್ಬು ಬೆಳಕಿನಲ್ಲಿ ಅವನು ಮಿಂಚಿನಂತೆ (ಮಿಸುಕು) ಓಡಡುತ್ತನೋ?

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟೂ |
ಓದವಿಪರು ದಿಟದರಿವ - ಮಂಕುತಿಮ್ಮ || ೪೧

(ಕದಕೆ+ಅಗಳಿಯನು)

ದೇವಸ್ತಾನದ ಬಾಗಿಲುಗಳನ್ನು ಭದ್ರವಾಗಿ ಬೀಗ ಹಾಕಿ, ಅದರ ಬೀಗದ ಕೈಗೊಂಚಲನ್ನು(ಕೀಲ್ಕುಂಚಿಕೆ) ದುರಕ್ಕೆಸೆದರೆ,
ಅವಾಗ ನಾನ ಶಸ್ತ್ರಗಳನ್ನು ಬಲ್ಲವರು (ಪದವಾಕ್ಯವಿದರ್) ಶಬ್ದಗಳ ಆಡಂಬರವನ್ನು (ಗಡಣೆ) ಬಿಟ್ಟು ಸತ್ಯದ ಜ್ಞಾನವನ್ನು (ದಿಟದ ಅರಿವು)
ಒದಗಿಸುತ್ತಾರೆ. ಇದು ಆದಿಶಂಕರರ ಭಜಗೋವಿಂದಮ್ನಲ್ಲಿ ಬರುವ "ಭಜಗೋವಿಂದಂ ಭಜಗೋವಿಂದಂ, ಗೋವಿಂದಂ ಭಜ ಮೂಡಮತೇ,
ಸಂಪ್ರಾಪ್ತೇ ಸನ್ನಿಹಿತೇ ಕಾಳೆ ನಹಿ ನಹಿ ರಕ್ಶತಿ ಡುಕೃಇಂಕರಣೇ" ಅಂದಹಾಗೆ, ಅವನನ್ನು ಭಜಿಸು, ಅವನಿಗೆ ಮೊರೆಹೋಗು. ಈ ವ್ಯಾಕರಣ,
ತರ್ಕಗಳೆಲ್ಲಾ ಕೊನೆಗಾಲದಲ್ಲಿ ನಿನಗೆ ನೆರವಾಗುವುದಿಲ್ಲ, ಎನ್ನುವುದು ಈ ಮೇಲಿನ ಪದ್ಯದ ಸಾರಂಶ.

ಆಹ | ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟೊ? - ಮಂಕುತಿಮ್ಮ || ೪೨

ಈ ಜಗತ್ತಿನಲ್ಲಿರುವವರು ಹೃದಯವಂತರೆಂದು ನಮ್ಮ ಭಾವನೆ, ಈ ಮೋಹ, ಸ್ನೇಹ (ನೇಹ)
ಮತ್ತು ದಾಹಗಳಲ್ಲಿ ಮುಳುಗಿ ನಾವು ಹೃದಯವಂತಿಕೆಯನ್ನು ಕಾಣಲು ಕಾತರಿಸುತ್ತಿರುತ್ತೇವೆ. ಆದರೆ ಅದು ಎಲ್ಲು ಕಾಣಬರುವುದಿಲ್ಲ.
ಇದೊಂದು ವ್ಯವಹಾರ, (ಹರಿಬ) ಮತ್ತು ಈ ವ್ಯವಹಾರದ ಒಳಗುಟ್ಟು 'ಹೋಹೋ ಹಾಹಾ' ಎಂದು ನಮ್ಮ ಬಾಯನ್ನು ಬಿಡಿಸುವುದೇ ಆಗಿದೆ.

ಮೇಲೆ ಕೆಳಗೊಳಗೆ ಬಿಳಿಸುತ್ತಲೆತ್ತೆತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧುಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡುಕೊಡದೆ - ಮಂಕುತಿಮ್ಮ || ೪೩

(ಕೆಳಗೆ+ಒಳಗೆ) (ಸುತ್ತಲು+ಎತ್ತೆತ್ತಲುಂ)

ನಾವಿರುವ ಈ ಪ್ರಪಂಚದ ಎಲ್ಲ ಭಾಗಗಳ ಮೇಲೆ, ಕೆಳಗೆ, ಒಳಗೆ, ಹತ್ತಿರ, ಸುತ್ತಮುತ್ತಲು ಮತ್ತು ಮೂಲೆ ಮೂಲೆಗಳಲು
ಒಂದು ಮಿಂಚಿನ ಹರಿದಾಟ(ವಿದ್ಯುಲ್ಲಹರಿ), ಆವರಿಸಿಕೊಂಡು, ಈ ಭೂಮಿಯ ಒಂದು ಕಣ, ಚಂದ್ರ ಮತ್ತು ನಕ್ಷತ್ರಗಳನು ಬಿಡುವಿಲದೆ ಚಲಿಸುವಂತೆ
(ಚಾಲಿಪುದು) ಮಾಡುತ್ತಿದೆ. ಯಾವುದು ಈ ಶಕ್ತಿ? ಇದನ್ನು ಮಾಡಿದವರು ಯಾರು?

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ