ಮಂಕುತಿಮ್ಮನ ಕಗ್ಗ - ಸಮಸ್ಯೆಗೆಲ್ಲಿ ಪೂರಣ

ವಿಕಿಸೋರ್ಸ್ ಇಂದ
Jump to navigation Jump to search

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ
ಸಮಸ್ಯೆಗೆಲ್ಲಿ ಪೂರಣ

ಎರಡುಮಿರಬೊಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡನುಮಿರೆ ಕೈ ಚಿಟಿಕೆಯಾಡುವುದು |
ಓರುವನಾಡುವುದೆಂತು? - ಮಂಕುತಿಮ್ಮ || ೨೯

(ಎರಡು+ಇರಬೊಹುದು) (ಬೆರಳುಗಳು+ಎರಡು+ಇರೆ) (ಓರುವನು+ಆಡುವುದು+ಎಂತು)

ಎರಡು ನಿಜವಿರಬೊಹುದು. ದೇವರು ಶಿವ ಮತ್ತು ರುದ್ರನೂ ಅಹುದು. ಒಂದು ಕೈಯಲ್ಲಿ ಕೊಳಲು,
ಇನ್ನೊಂದು ಕೈಯಲ್ಲಿ ಶಂಖವನ್ನಿಟ್ಟುಕೊಂಡು, ಎರಡು ಬೆರಳುಗಳ ಹೊಂದಾಣಿಕೆಇಂದ ಕೈಚಿಟಿಕೆ ಆಡಬೊಹುದಾದರೂ,
ಒಬ್ಬನೇ ಹೇಗೆ ಆಟ ಆಡುವುದು?

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿತ್ಯ ಎನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸೆಟೆ ಪೇಳುವೊಡೆ |
ನಮ್ಮುವುದದಾರನೋ? - ಮಂಕುತಿಮ್ಮ || ೩೦

(ಮಿಥ್ಯೆ+ಎನ್ನುವೊಡೆ) (ಸಂಬಂಧ+ಇಲ್ಲ+ಏನು) (ಕಣ್+ಮನಸುಗಳು) (ನೆಮ್ಮುವುದು+ಅದು+ಆರನೋ)

ಹೌದು ಬ್ರಹ್ಮವೇ ಸತ್ಯ. ನಿಜವಾದುದ್ದು. ಈ ಸೃಷ್ಟಿಯೆಲ್ಲಾ ಒಂದು ಮಾಯೆ! ಇದು ಸುಳ್ಳು(ಮಿಥ್ಯೆ)
ಎನ್ನುವುದಾದರೆ, ಈ ಎರಡಕ್ಕು(ಯುಗ) ಏನು ಸಂಬಂಧವೇ ಇಲ್ಲವೇ? ಬ್ರಹ್ಮನೇ ತಾನೆ ಈ ಸೃಷ್ಟಿ ಮಾಡಿದ್ದು.
ಹಾಗಿದ್ದರೆ, ಇವೆರಡಕ್ಕು ಸಂಬಂಧವಿಲ್ಲವೆಂದು ಹೇಗೆ ಹೇಳುವುದಕ್ಕಗುತ್ತದೆ? ನಮ್ಮ ಕಣ್ಣು ಮತ್ತು ಮನಸ್ಸುಗಳೆ ಸುಳ್ಳನ್ನು(ಸೆಟೆ)
ಹೇಳುವುದಾದರೆ, ನಾವು ಇನ್ನು ಯಾರನ್ನು ತಾನೆ ನಂಬುವುದು?

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ - ಮಂಕುತಿಮ್ಮ || ೩೧

(ಮರೆಯೊಳು+ಇಹುದನೆ)

ಸುಳ್ಳಿನ ಹಿಂದೆ, ನಿಜ ಎನ್ನುವುದು ಏನಾದರು ಅವಿತುಕೊಂಡಿದೆಯೋ? ಈ ಮರೆಯಲ್ಲಿರುವುದನ್ನೇ ನಾವು
ನಿಜವೆಂದು ನಂಬಬೊಹುದೇ? ಇದು ಆಶ್ಚರ್ಯಕರವಾದ(ಅಚ್ಚರಿಯ) ಉಪಾಯವಿದ್ದಹಾಗೆ ಕಾಣುತದಲ್ಲ?
ಈ ಬ್ರಹ್ಮನ ಸೃಷ್ಟಿ, ಸಹಜತೆಯನ್ನು ಮರೆಮಾಡಿ, ಒಂದು ಮುಸುಕನ್ನು ಹಾಕಿಕೊಂಡಂತಿದೆ.
ಈ ಮುಸುಕನ್ನು ತೆರೆದರೆ ಸಹಜತೆಯ(ಸಾಜತೆ) ಅರಿವು ನಮಗುಂಟಾಗುತ್ತದೆ.

ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೋ ನಿದ್ದೆ ಕಲವರವೋ? ||
ಮರಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ? - ಮಂಕುತಿಮ್ಮ || ೩೨

(ರಚಿಸಿದವನು+ಆದೊಡೆ+ಅದು) (ಮರುಳನು+ಅವನು+ಅಲ್ಲದೊಡೆ) (ನಿಯಮ+ಒಂದು+ಇರಬೇಕು) (ಗುರಿ+ಗೊತ್ತು+ಅದು+ಏನು+ಇಹುದೋ)

ಈ ಜಗವನ್ನು ಬ್ರಹ್ಮ ರಚಿಸಿದರು, ಇದೇನು ಬರೀ ಆಟವೋ ಅಥವ ನಾವುಗಳೆಲ್ಲ ಕನಸಿನಲ್ಲಿ ಬಡಬಡಿಸುತ್ತಿರುವೆವೋ?
(ಕಲವರ)? ಈ ಸೃಷ್ಟಿಕರ್ತ ಒಬ್ಬ ದಡ್ಡ ಅಥವಾ ಹುಚ್ಚನಲ್ಲ ನೆಂದುಕೊಂಡರೆ, ಈ ಸೃಷ್ಟಿಗೆ ಒಂದು ನಿಯಮವಿರಬೇಕು.
ಅಂತೆಯೆ ಒಂದು ಉದ್ದೇಶ ಮತ್ತು ನೆಲೆ. ಇವು ಯಾವುದು ನಮಗ ಗೋಚರವಾಗುತಿಲ್ಲವಲ್ಲ!

ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||
ಸುರಿದು ಪ್ರಷ್ನೆಗಳನ್ನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ? - ಮಂಕುತಿಮ್ಮ || ೩೩

(ಬೊಮ್ಮನ+ಆಶಯವೆ) (ಪ್ರಷ್ನೆಗಳನು+ಉತ್ತರವ)

ಈ ಮನುಷ್ಯರನ್ನು ನಾನಾ ರೀತಿಯ ಪರೀಕ್ಷೆಗಳಿಗೆ ಗುರಿಪಡಿಸಬೇಕು ಎನ್ನುವುದೆ ಬರಹ್ಮನ ಇಷ್ಟವೇ?
ನಮ್ಮ ಬಾಳೆಲ್ಲಾ, ಬರೀ ಸಮಸ್ಯೆಗಳೆ ಹೌದೆ? ಇದರ ಮುಗಿವು(ಪೂರಣ) ಎಲ್ಲಿ? ಈ ರೀತಿಯಾಗಿ
ಬಗೆ ಬಗೆಯ ಪ್ರಷ್ನೆಗಳನ್ನು ಕೇಳಿಸಿಕೊಂಡು, ಅದಕ್ಕುತ್ತರವನ್ನು ಕೊಡದಿರುವವನನ್ನು ನಾವು ಗುರುವೆಂದು ಹೇಗೆ ಕರೆಯೋಣ?


ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ