ಮಹಾಕ್ಷತ್ರಿಯ/ವಿರಜಾದೇವಿಯಂತಃಪುರ
==೨೫.ವಿರಜಾದೇವಿಯಂತಃಪುರ==
ಗಂಗಾಯಮುನಾಸಂಗಮದಲ್ಲಿ ಮೂರ್ತಿಗೊಂಡ ಭರತಖಂಡದ ಸತ್ ಕೀರ್ತಿಯೋ ಎಂಬಂತಿರುವ ಚಕ್ರವರ್ತಿನಿ ವಿರಜಾದೇವಿಯು ಸುಖಾಸನದಲ್ಲಿ ಕುಳಿತು ಪತಿದೇವನನ್ನು ಇದಿರುನೋಡುತ್ತಿದ್ದಾಳೆ. ಚಂದ್ರನು ಆಕಾಶದ ನಟ್ಟನಡುವೆ ನಿಂತು, ಚಕ್ರವರ್ತಿಯು ಬೆಳುಗೊಡೆಯ ಮೇಲಿನ ಉಂಗುರವೆಂಬಂತೆ ಇದ್ದು ಆಕಾಶವನ್ನೆಲ್ಲ ಒಂದು ಕಾಂತಿಮಯ ಧವಳಚ್ಚತ್ರವಾಗಿಸಿದ್ದಾನೆ. ಆ ಬೆಳದಿಂಗಳಲ್ಲಿಯೂ ಮಸಕಾಗದೆ ಅಲ್ಲಲ್ಲಿ ಮೆರೆಯುತ್ತಿರುವ ನಕ್ಷತ್ರಗಳೂ ಆ ಛತ್ರವನ್ನು ಕೀಲಿಸಿರುವ ವಜ್ರಮಣಿಗಳಂತೆ ಕಾಣುತ್ತವೆ. ದೂರದ ದಿಗಂತದಲ್ಲಿ ಮಿಣುಕುತ್ತಿರುವ ನಕ್ಷತ್ರಪುಂಜಗಳು ಆ ಬೆಳ್ಗೊಡೆಯ ಅಂಚಿನಲ್ಲಿ ಕಟ್ಟಿರುವ ಮುತ್ತಿನ ಗೊಂಚಲುಗಳಂತೆ ಇವೆ.
ವಿರಜಾದೇವಿಯು ತಾನು ಪಿತೃಕನ್ಯೆ, ಪರಿಶುದ್ಧಳು ಎಂಬುದನ್ನು ತೋರಿಸಿಕೊಳ್ಳಲೆಂಬಂತೆ, ನಿರ್ಮಲವಾದ ಬಿಳಿಯುಡೆಯುಟ್ಟಿದ್ದಾಳೆ. ಆಕೆಯ ಸದ್ಗುಣಗಳಂತೆ ಆ ಸೀರೆಯಲ್ಲಿ ಬೂಟಾಟಗಳ ನಡುವಿನ ರತ್ನಗಳ ಅಮಿತವಾದ ಕಾಂತಿಯನ್ನು ಎಲ್ಲೆಲ್ಲೂ ಪ್ರಸರಿಸಬೇಕೆಂದು ವಿಜಿಗೀಷುವಾದ ಕ್ಷತ್ರಿಯ ವೀರನಂತೆ ಪ್ರಕಾಶಿಸುತ್ತಿವೆ. ದಾಸಿಯರು ರತ್ನಖಚಿತವಾದ ಚಾಮರಗಳನ್ನು ಬೀಸಲು ಸಿದ್ಧರಾಗಿದ್ದಾರೆ. ಎದುರಿಗೊಬ್ಬಳು ವೀಣೆಯನ್ನು ಮೃದುವಾಗಿ ನುಡಿಸುತ್ತಾ ಕುಳಿತಿದ್ದಾಳೆ.
ಬಿಸಿಲುಮಚ್ಚಿನ ನಾಲ್ಕು ಮೂಲೆಗಳಲ್ಲು ಪಾರಿಜಾತಗಳು ಕಟ್ಟೆಗಳಲ್ಲಿ ಬೆಳೆದಿವೆ. ಮೇಲೆಲ್ಲಾ ತಂತಿಯ ಜಾಲರಿಗಳನ್ನು ಹರಡಿ, ಅದರ ಮೇಲೆ ಜಾಜಿ ಮಾಲತಿ ಇರುವಂತಿಗೆ ಬಳ್ಳಿಗಳನ್ನು ಅರಳಿಸಿದ್ದಾರೆ. ಅಲ್ಲಲ್ಲಿ ರತ್ನಮಯವಾದ ಭಿತ್ತಿಗಳನ್ನುಳ್ಳ ಕೃತ್ರಿಮ ಪುಷ್ಕರಿಣಿಗಳಲ್ಲಿ ತಾವರೆ ಕನ್ನೈದಿಲೆಗಳನ್ನು ಬೆಳೆಸಿದ್ದಾರೆ. ಚಕ್ರವರ್ತಿಯ ಸೇವೆಗೆಂದು ಪುಷ್ಟಪುಷ್ಟವೂ ಹುರುಪಿಸುತ್ತಿದೆಯೇ ಎಂಬಂತೆ, ಪಾರಿಜಾತ, ಜಾಜಿ, ಮಾಲತಿ, ಇರುವಂತಿಗೆ, ಜಲಜಗಳೂ ತಮ್ಮ ತಮ್ಮ ಸುಗಂಧವನ್ನು ಸೂರೆಗೊಡುತ್ತಿವೆ. ತಂಗಾಳಿಯು ಅದನ್ನೆಲ್ಲ ಹೊತ್ತು ತರಲಾರದೆ ಮುಕ್ಕರಿಯುವಂತೆ ಊಸ್ ಎಂದುಕೊಂಡು ನಿಧಾನವಾಗಿ ಬೀಸುತ್ತಿದೆ.
ಸಣ್ಣದಾಗಿ ಮೃದುವಾಗಿ ಶೃಂಗನಾದವಾಗಿ ಚಕ್ರವರ್ತಿಯ ಆಗಮನವನ್ನು ಸೂಚಿಸಿತ್ತು. ಮರ್ಯಾದೆಗೆಂದು ಹಿಡಿದಿರುವ ಕರ್ಪೂರದೀಪಿಕೆಯು ತನ್ನದೂ ಕಾಣಿಕೆಯಿರಲಿ ಎಂಬಂತೆ, ಆ ಬಿಸಿಲುಮಚ್ಚಿನಲ್ಲಿ ರಂಗವಲ್ಲಿಯಾಗಿ ಇಟ್ಟಿರುವ ಕೇಸರ, ಪಚ್ಚಕರ್ಪೂರ, ಕಸ್ತೂರಿಗಳ ಹುಡಿಗಳ ವಾಸನೆಯ ಜೊತೆಗೆ ತನ್ನ ಸುವಾಸನೆಯನ್ನೂ ಅಷ್ಟು ಒಪ್ಪಿಸುತ್ತಿದೆ. ಪರಾಕ್ರಮವನ್ನು ಪ್ರದರ್ಶಿಸಿ ಹಿಡಿದು ತಂದು ಸೆರೆಯಲ್ಲಿಟ್ಟಿರುವ ಶತ್ರುಗಳ ಹೃದಯದ ದ್ವೇಷದಾವಾನಲಗಳಿಂದ ಏಳುವ ಕೃಷ್ಣಧೂಮದ ನಿಷ್ಫಲ ಮೇಘಗಳಂತೆ, ಚಕ್ರವರ್ತಿಯ ಪಕ್ಕದಲ್ಲಿ ಹಿಡಿದು ತರುತ್ತಿರುವ ಧೂಪದಾನಿಯಿಂದ ಹೊರಬೀಳುವ ದಪ್ಪ ಹೊಗೆಯು ಚಾಮರಗಳ ಗಾಳಿಯಿಂದ ಆಹತವಾಗಿ ಸುತ್ತಿನ ಗಾಳಿಯಲ್ಲಿ ಸೇರಿಹೋಗಿ ಅದೃಶ್ಯವಾಗುತ್ತಿದೆ.ಚಕ್ರವರ್ತಿಯು ಬಂದನು. ಆತನು ತನ್ನ ಪಾದಗಳಲ್ಲಿ ಧರಿಸಿರುವ ಪಾದುಕೆಗಳ ಚರ್ಮಕ್ಕಿಂತ ಮೃದುವಾದ ರತ್ನಗಂಬಳಿಯ ಮೇಲೆ ನಡೆದು ಬಂದನು. ಬಾಗಿಲಲ್ಲಿದ್ದ ಪ್ರಹರಿಣಿಯು ಮಂಡಿಯೂರಿ ಮಣಿದು ದಾರಿ ತೋರಿಸಿಕೊಂಡು ಚಕ್ರವರ್ತಿನಿಯಿರುವೆಡೆಗೆ ಕರೆತಂದಳು. ಅರಸನ ಹಿಂದೆ ಬರುತ್ತಿರುವ ಮುಖ್ಯ ವೀಣಾವಾದ್ಯದ ಮೃದು ಮಂಗಳರವವು ಚಕ್ರವರ್ತಿನಿಯ ಬಳಿ ನುಡಿಯುತ್ತಿದ್ದ ವೀಣೆಯ ನಿನಾದದೊಡನೆ ಸುಖವಾಗಿ ಬೆರೆತು ಪರಸ್ಪರ ಕುಶಲಪ್ರಶ್ನಗಳ ಮಂಗಳ ಕಾರ್ಯವನ್ನು ನಿರ್ವಹಿಸಿ ಸ್ವಾಗತವನ್ನು ಆಚರಿಸಿತು. ಅರಸಿತಿಯು ಆಸನದಿಂದೆದ್ದು ಮೂರು ಹೆಜ್ಜೆ ಮುಂದೆ ಹೋಗಿ ಅರಸನನ್ನು ಎದುರುಗೊಂಡು, ಮಂಡಿಯೂರಿ ಬಗ್ಗಿ ಆತನ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಅರಸನು ಜಲಭಾರ ನಮ್ರವಾದ ಮೇಘರಾಜನು ಬಗ್ಗಿ ಶಿಖರಿಣಿಯನ್ನು ಆಲಿಂಗಿಸುವಂತೆ, ಬಗ್ಗಿ ಆಕೆಯನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಂಡು ಜೊತೆಯಲ್ಲಿ ನಡೆದುಹೋಗಿ, ಸುಖಾಸನವನ್ನು ಸಹಪತ್ನೀಕನಾಗಿ ಅಲಂಕರಿಸಿದನು. ಪರಿಜನರು ಒಬ್ಬೊಬ್ಬರಾಗಿ ಬಂದು ಮುಜುರೆ ಮಾಡಿ ಹೋಗಿ ದೂರದಲ್ಲಿ ನಿಂತರು. ತಿರಸ್ಕರಣಿಯು ನಿಶ್ಯಬ್ದವಾಗಿ ಮುಂದೆ ಸರಿದು ಅವರಿಬ್ಬರೂ ಕುಳಿತಿರುವ ಮೂಲೆಯನ್ನು ಒಂದು ಕೋಣೆಯನ್ನಾಗಿ ಮಾಡಿತು.
ವಿರಜಾದೇವಿಯು ಅಲ್ಲಿ ಸಿದ್ಧವಾಗಿದ್ದ ರಸಾಯನವನ್ನೂ, ಆಸನವನ್ನೂ ಪತಿದೇವನಿಗೊಪ್ಪಿಸಿ ಉಪಚಾರಮಾಡಿದಳು. ಅರಸನು ಸಕಾಮನಾಗಿ ಆಕೆಯನ್ನು ಬರಸೆಳೆದು ಗಾಢವಾಗಿ ಆಲಿಂಗನ ಮಾಡಿಕೊಂಡು ಸಸೀತ್ಕಾರವಾಗಿ ಚುಂಬಿಸಿ, “ನನಗೆ ನಿನ್ನಲ್ಲಿ ಎಷ್ಟೋ ಚೇಷ್ಟೆ ಮಾಡಬೇಕೆಂದು ಆಸೆ. ಆದರೆ ನೀನು ಧರ್ಮಪತ್ನಿ. ಕಾಮಪತ್ನಿಯ ಚೇಷ್ಟೆಯನ್ನು ಧರ್ಮಪತ್ನಿಯಲ್ಲಿ ಮಾಡಬಾರದು. ಏನುಮಾಡಲಿ?” ಎಂದು ನಿಟ್ಟುಸಿರುಬಿಟ್ಟನು. ದೇವಿಯು ಗಂಡನನ್ನು ಕೆರಳಿಸುವಂತೆ ಕೇಳಿದಳು : “ಪ್ರವಾಹ ಬಂದಾಗ ನದಿಯು ದಡಗಳನ್ನು ಕೇಳುವುದೇನು ?”
“ಹಾಗಾದರೆ ತತ್ವವನ್ನು ಕೇಳು : ಸ್ತ್ರೀಪೂರ್ವವಾದ ವ್ಯಾಪಾರವೆಲ್ಲ ಕಾಮವ್ಯಾಪಾರ. ಅದು ಪುಂಪೂರ್ವವಾಗಿ ನಡೆಯಬೇಕಾದಾಗ ಸ್ತ್ರೀಯು ಕಾಮಪತ್ನಿಯಾದರೆ ಸ್ವಚ್ಛಂದ. ಹಾಗಿಲ್ಲದೆ ಧರ್ಮಪತ್ನಿಯಾದರೆ ಅಲ್ಲಿ ನಿಯಮ. ಅದರಿಂದಲೇ ‘ಶಯ್ಯಾಸು ವೇಶ್ಯಾ’ ಎನ್ನುವುದು.”
“ಹಾಗಾದರೆ ನಾನು ವೇಶ್ಯೆಯಾಗಬೇಕೆ ?”
“ವೇಶ್ಯೆಯಂತಾಗಬೇಕು. ಎಂದರೆ ಗಂಡನ ಸೂಳೆಯಾಗಬೇಕು.”
“ದೇವ ಧರ್ಮಿಷ್ಠರೂ ಧರ್ಮಜ್ಞರೂ ಒಗಟಿನಲ್ಲಿಯೇ ಮಾತನಾಡ ಬೇಕೇನು?”
ನಹುಷನು ಸಣ್ಣಗೆ ನಕ್ಕು ಗಲ್ಲವನ್ನು ಮೆಲ್ಲಗೆ ಒತ್ತಿ ವಕ್ಷಸ್ಥಳದಲ್ಲಿ ತಲೆಯಿಟ್ಟು ಪತ್ನಿಯನ್ನು ಅರ್ಧಾಲಿಂಗನದಿಂದ ಆರಾಧಿಸುತ್ತಾ ಹೇಳಿದನು ; “ಧರ್ಮಪತ್ನಿಯನ್ನು ಆರಾಧಿಸುವುದು ಧರ್ಮಸಂತಾನವನ್ನು ಪಡೆದು ಪಿತೃಋಣವನ್ನು ಕಳೆದುಕೊಳ್ಳುವುದಕ್ಕೆ. ಸಂತಾನದ ಯೋಚನೆಯೇ ಇಲ್ಲದೆ ಕಾಮತೃಪ್ತಿಯನ್ನು ಪಡೆಯುವುದಕ್ಕೆ ಕಾಮಪತ್ನಿಯ ಸೇವನೆ. ಈಗ ಅರ್ಥವಾಯಿತೆ ? ಅದರಿಂದ ಹೇಳಿದೆ. ಕಾಮತೃಪ್ತಿಯೆನ್ನುವುದಾದರೆ ಅದು ನಿನ್ನ ಪ್ರಪಂಚ. ಆಗ ನಿನ್ನ ದಯೆಯಿಂದ ನಮಗೂ ಅಷ್ಟು ವಿನೋದ. ಅದರಿಂದ, ಬೇಕು ಎನ್ನುವುದು ನಿನ್ನ ಕಡೆಯಿಂದ ಬರಲಿ ಎಂದು ಧರ್ಮಪತ್ನಿ ಕಾಮಪತ್ನಿಯರ ಮಾತನ್ನು ಎತ್ತಿದೆ.”
“ದೇವಾ, ನೆನಪಿರಲಿ. ತಾವು ಇಲ್ಲಿಗೆ ಬಂದಿರುವುದು ನನ್ನ ಪ್ರಾರ್ಥನೆಯಿಂದ. ನನ್ನನ್ನು ಅನುಗ್ರಹಿಸುವುದಕ್ಕೆ.”
“ಒಂದು ನಿಜ ಇನ್ನೊಂದು ಸುಳ್ಳು.”
ದೇವಿಯು ಅದನ್ನು ಅರ್ಥಮಾಡಿಕೊಳ್ಳಲಾರದೆ ಕೈಯಲ್ಲಿದ್ದ ಲೀಲಾಕಮಲದಿಂದ ಗಂಡನ ಮುಖಪದ್ಮವನ್ನು ನೇವರಿಸುತ್ತಾ ಕೇಳಿದಳು: “ಹಾಗೆಂದರೆ ?”
ನಹುಷನು ಆ ಲೀಲಾಕಮಲದ ಸೋಂಕನ್ನು ಅನುಭವಿಸಿಯೋ ಎಂಬಂತೆ ಕಣ್ಣನ್ನು ಅರೆಮುಚ್ಚಿ ಅದನ್ನು ತಣ್ಣಗೆ ನಿವಾರಿಸುತ್ತ ಕೊಂಕುದನಿಯಲ್ಲಿ ಹೇಳಿದನು, “ನಿನ್ನ ಪ್ರಾರ್ಥನೆಯಿಂದ ಬಂದಿದ್ದೇನೆ ನಿಜ. ಅದರೆ, ಬಂದಿರುವುದು ನಿನ್ನನ್ನು ಅನುಗ್ರಹಿಸುವುದಕ್ಕಲ್ಲ, ನಿನ್ನಿಂದ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ.”
``ಕನಸುಮನಸ್ಸಿನಲ್ಲಿಯೂ ನಾವು ಅನುಗ್ರಾಹ್ಯರು ; ತಾವು ಅನುಗ್ರಾಹಕರು. ದೇವ.”
“ಕಾಮಪ್ರಪಂಚವನ್ನು ಬಿಟ್ಟು ಇತರ ಪ್ರಪಂಚಗಳಲ್ಲಿ ಇದು ನಿಜ. ಅರ್ಥ ಪ್ರಪಂಚದಲ್ಲಿ ಈ ಅನುಗ್ರಾಹ್ಯ, ಅನುಗ್ರಾಹಕ ಸಂಬಂಧವು ಯಾವಾಗಲೂ ಹೆಚ್ಚು ಕಡಿಮೆಯಾಗುತ್ತಲೇ ಇರುವುದು. ಆದರೆ ಧರ್ಮಪ್ರಪಂಚ- ಕಾಮ ಪ್ರಪಂಚಗಳಲ್ಲಿ ಅದು ನಿಯತವು. ಮೊದಲನೆಯದರಲ್ಲಿ ಪತಿಯು ಅನುಗ್ರಾಹಕ. ಪತ್ನಿಯು ಅನುಗ್ರಾಹ್ಯಳು. ಕಾಮಪ್ರಪಂಚದಲ್ಲಿ ಅದಕ್ಕೆ ಪ್ರತಿ. ಪತ್ನಿಯು ಅನುಗ್ರಾಹಕಳು. ಪತಿಯು ಅನುಗ್ರಾಹ್ಯ. ಅದರಿಂದ, ಅಂತಃಪುರಗಳಲ್ಲಿ ಅದೂ ತಿರಸ್ಕರಣಿಯು ಹೊರಗಿನ ಪ್ರಪಂಚವನ್ನು ಹೊರಗೇ ಇಟ್ಟು ನಮ್ಮನ್ನು ಏಕಾಂತದಲ್ಲಿ ಬಿಟ್ಟಿರುವಾಗ, ದೇವಿಯವರು ದೊಡ್ಡ ಮನಸ್ಸು ಮಾಡಿ ಕರ್ತೃತ್ವವನ್ನು ವಹಿಸಿ, ಕರ್ತವ್ಯ ಭಾರವನ್ನು ವಹಿಸಿಕೊಂಡು, ನಮ್ಮಲ್ಲಿ ದಾಸ್ಯಭಾವವನ್ನು ಆರೋಪಿಸಿ ನಡೆಸಿಕೊಂಡರೆ ಕೃತಾರ್ಥರಾಗುವೆವು. ಹೆಣ್ಣೊಲಿದು ಹೊನಲಂತುಬ್ಬಿ ಮೈಮೇಲೆ ಬಂದರೆ ಸ್ವರ್ಗವೇ ಕೈಗೆ ಸಿಕ್ಕಿದಂಥಲ್ಲವೆ ?”
“ದೇವಾ, ಮೂರು ಲೋಕಗಳಲ್ಲಿಯೂ ತಮ್ಮಂತಹ ಧರ್ಮಜ್ಞರೂ ಧರ್ಮಿಷ್ಠರೂ ಧಾರ್ಮಿಕರೂ ಇಲ್ಲವೆನ್ನುವರು. ಧರ್ಮಬಲದಿಂದ ಸ್ವರ್ಗವನ್ನು ಗೆದ್ದವರು ತಾವು. ಬೇಕೆಂದರೆ ಇಂದ್ರಪದವಿಯನ್ನು ನಿರ್ವಹಿಸಬಲ್ಲ ತಾವು ಕೋರಿದರೆ ಸ್ವರ್ಗವು ಇಲ್ಲಿಗೆ ಬರುವುದು ಏನತಿಶಯ ?”
``ದೇವಿ, ಮಾತಿನಲ್ಲಿ ನಮ್ಮನ್ನು ಸೋಲಿಸಿದೆ. ನಾವು ಕೋರಿದರೆ ಸ್ವರ್ಗವು ಇಲ್ಲಿಗೆ ಬರುವುದು ಎಂದರೆ ತಮಗೆ ಬೇಕಾದಷ್ಟು ಸುಖವನ್ನು ನಿರ್ವಂಚನೆಯಾಗಿ ಕೊಡುವೆನು ಎಂದು ಹೇಳಿ, ನಮ್ಮನ್ನು ಬೇಡಿಕೊಳ್ಳಿ ಎಂದು ಅಪ್ಪಣೆ ಮಾಡಿದಂತಾಯಿತು. ಇಗೋ ಮಿಕ್ಕೆಲ್ಲರಿಗೂ ಸಿಂಹಾಸನಾಧೀಶ್ವರನಾಗಿ, ಭೂಮಂಡಲದ ಏಕನಾಥನಾದ ನಹುಷನು, ತಾನು ಚಕ್ರವರ್ತಿಯೆಂಬುದನ್ನು ಮರೆತು, ಮಹಾದೇವಿಯರ ಎದುರು ನಿಂತು ಸೆರಗೊಡ್ಡಿ ಬೇಡುತ್ತಿರುವೆನು. ಕಾಮಭಿಕ್ಷೆಯನ್ನು ಸರ್ವಾಂಗತೃಪ್ತಿಯಾಗುವಂತೆ, ಅಮೃತಪೂರ್ವಕವಾಗಿ ಕೊಟ್ಟು ಕಾಪಾಡಬೇಕು.”
ವಿರಜಾದೇವಿಯು ಆ ಮಾತು ಕೇಳಿ ನಕ್ಕಳು ; ‘ದೇವಾ, ಇದು ಗಂಧರ್ವ ಪ್ರಸಾದವಲ್ಲ; ರಂಗಮಂಟಪವಲ್ಲ, ಜೊತೆಗೆ ನಾನು ಪಾದಸೇವೆಗಾಗಿ ಸಿದ್ಧಳಾಗಿರುವವಳು. ನನ್ನಲ್ಲಿ ಈ ನಾಟಕದ ಮಾತುಗಳೇಕೆ ?”
“ದೇವಿ ಹಾಗಲ್ಲ, ಇದು ಸರ್ವಥಾ ನಾಟಕದ ಭಾಷೆಯಲ್ಲ. ನಾಟಕದಲ್ಲಿ ಬೇಕೆಂದು ಇಲ್ಲದ ಭಾವವನ್ನು ಬೆಳೆಸಿಕೊಂಡು, ಇನ್ನೊಬ್ಬರು ಬರೆದ ಮಾತು ಕಲಿತು ಆಡುವುದು. ಸಂಸ್ಕೃತರಾದ ನಮಗೆ ಭಾವವು ಸಹಜವಾಗಿ ಬೆಳೆದು ಬಲಿತು ಸಮಾಧಿಯಾಗಿ, ಭಾವಾವೇಶದಿಂದ ಮಾತುಗಳೂ ಸಂಸ್ಕಾರಸಂಪನ್ನಳಾಗಿ, ನೀನು ಧರಿಸಿರುವ ಆಭರಣಗಳಲ್ಲಿರುವ ಶಾಣೋಲ್ಲೀಢ ಜೀವರತ್ನಗಳಂತೆ ತೇಜಃಪುಂಜಗಳಾಗಿ ಹೊರಬಂದರೆ ಇವು ನಾಟಕದ ಮಾತುಗಳೆನ್ನುವುದು ಯಾವ ನ್ಯಾಯ? ಸಂಗೀತದಲ್ಲಿ ಚೆನ್ನಾಗಿ ನುರಿತಿರುವ ನಿನ್ನ ಕಂಠವು ಶ್ರುತಿಗೆ ದ್ರೋಹಮಾಡದೆ ನುಡಿಯುತ್ತಿದ್ದರೆ ಅಲ್ಪಾಭರಣಗಳನ್ನು ಧರಿಸಿ, ಲಘುವಸ್ತ್ರದಿಂದ ಬಂದಿರುವೆಯೆಂದರೆ ನಿನಗೆ ವಸ್ತ್ರಾಭರಣಗಳು ಬೇಕಾದಷ್ಟು ಇಲ್ಲವೆಂದು ಅರ್ಥವೇ? ಒಂದೇ ನದಿಯು ಕಟ್ಟೆಯ ಹಿಂದೆ ನಿಂತು ಘನವಾಗಿದ್ದರೂ ಧುಮುಕುವಾಗ ಭೋರ್ಗರೆದರೆ ಅದು ನಾಟಕವೇ? ಈಗ ಈ ಸಮಯದಲ್ಲಿ ನಾನಿಷ್ಟು ಮಾತನಾಡುತ್ತಿರುವುದೂ ಭಾವಶಬಲತೆಯಿಂದಲೇ ಅಲ್ಲವೇ! ಅದರಿಂದ ನಾನಾಡುವ ಮಾತು ನಾಟಕದ್ದಲ್ಲ. ನಾಟಕದಲ್ಲಿ ಅರ್ಥಕ್ರಿಯೆಯಿಲ್ಲದೆ ಭಾವಪ್ರಚೋದಕ ಮಾತ್ರವಾದ್ದರಿಂದ ವಾಕ್ಕು ಅಲ್ಲಿ ವಿಡಂಬನವು. ಅದರಲ್ಲಿ ತೃಪ್ತಾ ಆಗಿ, ತರ್ಪಯಂತೀ ಆಗಿ, ವಶ್ಯಳಾಗಿ, ವಶೇ(ಹೆಣ್ಣಾನೆ)ಯಂತೆ ಲೋಲೆಯಾಗಿ, ಲೀಲಾಪರಳಾದ ನಿನ್ನಂತಹ ಸುರಸುಂದರಿಯ ಸಮ್ಮುಖದಲ್ಲಿ ವಿಡಂಬನವಾಕ್ಕಿಗೆ ಪ್ರಯೋಜನವೆಲ್ಲಿ? ಅದರಿಂದ ಬಾ. ಕಾರ್ಯಪರರಾಗಿ ಸಂತೋಷವನ್ನು ಅರ್ಜಿಸುವ ಕಾಲವಿದು. ಕಾಮದೇವನ ಆರಾಧನದಿಂದ ಕೃತಾರ್ಥರಾಗುವ ಕಾಲವಿದು. ಬರಿಯ ಮಾತಿನ ಬೆಡಗಿನಲ್ಲಿ ಕಾಲಹರಣವೇಕೆ?”
“ದೇವ, ತಮ್ಮ ಮಾತುಗಳು ನನ್ನ ಕಿವಿಗೆ ರಸಾಯನವಾಗಿವೆ. ತಮ್ಮೊಡನೆ ಸಿಂಹಾಸನದಲ್ಲಿ ಕುಳಿತಾಗ ಆ ವೈಭವವನ್ನು ನೋಡಿ ಮನಸ್ಸು ತಣಿಯುವಂತೆ ಧರ್ಮಾಸನದಲ್ಲಿ ಕುಳಿತಾಗ ಕ್ಲಿಷ್ಟವೂ, ಸಂದಿಗ್ಧವೂ, ದುರಾರಾಧ್ಯವೂ ಆದ ಧರ್ಮಸ್ಕಂಧಗಳನ್ನು ವಿವರಣಮಾಡಿ ನಿರ್ಣಯಕ್ಕೆ ಬರುವ ಚಾತುರ್ಯವನ್ನು ನೋಡಿ ಬುದ್ಧಿಯು ಮೆಚ್ಚಿ ತಲೆದೂಗುವಂತೆ, ಈ ಸುಖಾಸನದಲ್ಲಿ ನಮ್ಮ ಪ್ರಾಣಮನೋಬುದ್ಧಿಗಳಂತೆ ದೇಹಗಳೂ ಒಂದಾಗುವ ಅವಸರದಲ್ಲಿ, ಏಕಾಂತದಲ್ಲಿ ಕೈಗೆ ಸಿಗುವುದೇ ಅಪರೂಪವಾದ ತಾವು ನನಗೆ ಸಿಕ್ಕಿರುವಾಗ, ಇನ್ನೂ ಅಷ್ಟು ಹೊತ್ತು ತಮ್ಮ ಮಧುರಾಲಾಪವನ್ನು ಬಯಸಿ ಈ ಕಿವಿಗಳು ಒಂದಕ್ಕೆರಡಾಗಿರುವುವು. ಆದ್ದರಿಂದ, ತಾವು ಏನಾದರೂ ಹೇಳುತ್ತಿರಿ, ನಾನೂ ಯಥಾಶಕ್ತಿಯಾಗಿ ಪ್ರಣಯೋಪಚಾರವನ್ನು ಒಪ್ಪಿಸುತ್ತ ಸಂತೋಷವಾಗಿ ಕೇಳುವೆನು.
“ಭಲೇ, ದೇವಿ, ಕಿವಿಗಳು ಒಂದಕ್ಕೆರಡಾಗಿವೆಯೆಂದು ಸಂತೋಷದಿಂದ ಉಬ್ಬುತ್ತಿರುವ ನಿನ್ನ ಸ್ಥಿತಿಯನ್ನು ಸೂಚಿಸಿಕೊಂಡೆ. ನೋಡು, ಕಾಮಪ್ರಪಂಚದಲ್ಲಿ ಪೂರ್ವರಂಗಪ್ರಸಾದನವು ತಿರ್ಯಗ್ಜಂತುಗಳಲ್ಲಿ ಹೆಚ್ಚು. ಉತ್ತರರಂಗ ಪ್ರಸಾದನವು ದೇವತೆಗಳದು. ಪೂರ್ವೋತ್ತರಂಗಪ್ರಸಾದನವು ಮನುಷ್ಯ ಪ್ರಸ್ಥಾನವು. ನೀನು ಸಹಜವಾಗಿ ದೇವತೆಯಾದುದರಿಂದ ನಿನಗೆ ಉತ್ತರರಂಗ ಪ್ರಸಾದನವು ಪ್ರಿಯವೆಂದು ನಾನು ಅವಸರಿಸಿದೆ. ನೀನು ದೆವತೆಯಾದರೂ ನನಗಾಗಿ ಮಾನುಷಧರ್ಮವನ್ನು ಅನುಸರಿಸಿರುವೆಯೆಂಬುದನ್ನು ಪರ್ಯಾಯವಾಗಿ ಸೂಚಿಸಿ ಉಪಕಾರ ಮಾಡಿದೆ. ಹಾಗೂ ಆಗಲಿ.”
“ದೇವ, ಕಾಮವು ಮತ್ತೆಲ್ಲವನ್ನೂ ಮರೆಸುವ ವ್ಯಾಪಾರವು. ಅಲ್ಲಿಯೂ ತಾವು ತಿರ್ಯಗ್ದೇವಮಾನವ ಧರ್ಮಗಳನ್ನು ಮರೆಯದೆ ವ್ಯವಹರಿಸುವಿರಲ್ಲ ! ಈ ವಿಚಕ್ಷಣೆಯು ತಮ್ಮೊಬ್ಬರಿಗೇ ಸಾಧ್ಯ ! ಇದು ನಿಜವಾಗಿಯೂ ವಿಚಿತ್ರ !”
“ನೀನು ಹೇಳಿದುದು ಬಹಳ ಸರಿ. ಆದರೆ, ದೇವಿ, ಇದು ನನ್ನ ವಿಶೇಷ ಗುಣವಲ್ಲ. ಅಂದು ನಾವು ಸೇವಿಸಿದ ಚ್ಯವನಮಹರ್ಷಿಯ ವರಪ್ರಸಾದ. ಮಾನವರು ಸಹಜವಾಗಿ ರಜೋಗುಣದವರು. ರಜೋಗುಣವು ಉಬ್ಬುತಗ್ಗಿನ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಸತ್ಯವನ್ನು ಅಯಥಾ ಆಗಿ ತೋರಿಸುವುದು. ಹಾಗೆ ಅಯಥಾ ಆಗಿ ಕಂಡುಕಂಡುದನ್ನೆಲ್ಲ ಸತ್ಯವೆಂದು ಭ್ರಮಿಸಿ, ಮೋಹಗೊಂಡು, ತನ್ನನ್ನು ಕಿರಿದು ಮಾಡಿಕೊಂಡು ಒದ್ದಾಡುವುದೇ ಮಾನವ ಧರ್ಮವು. ಇದನ್ನು ಮೀರಿ ವಸ್ತುವಸ್ತುವಿಗೂ ಸ್ವಧರ್ಮವಿರುವುದೆಂದು ತಿಳಿದು, ಪರಸ್ಪರ ಅವಿರುದ್ಧವಾಗಿ, ಮೋಹವನ್ನು ತುಳಿದು ಸ್ಮೃತಿಯನ್ನು ಮೆರೆದು ವರ್ತಿಸುವುದೇ ಧರ್ಮಾರಾಧನವು. ಹಸುವಿಗೆ ಮಾಂಸವನ್ನೂ ಹುಲಿಗೆ ಹುಲ್ಲನ್ನೂ ಹಾಕಿದರೆ ಆದೀತೆ? ಸ್ತ್ರೀಯಾದರೇನು? ಪುರುಷನಾದರೇನು? ಎರಡೂ ಅಲ್ಲದ ಸಾಕ್ಷಿ ನಾನೆಂಬ ವೇದಾಂತ ಸಿದ್ಧಾಂತವು ನಿಜವಾದರೂ, ಕ್ಷೇತ್ರಧರ್ಮವಾದ ಕಾಮವಿಕಾರಕ್ಕೊಳಗಾಗಿ ವರ್ತಿಸಬೇಕಾದ ಈ ಕಾಲದಲ್ಲಿ ಆ ಸಿದ್ಧಾಂತವನ್ನು ಅವಲಂಬಿಸಲಾದೀತೆ? ಮಿಕ್ಕೆಡೆಯಲ್ಲಿ ನಾಯಕನು ನಾನು. ಇಲ್ಲಿ ನೀನು ನಾಯಕಿಯು. ನೋಡು ನವಿಲು ಕೂಡ ನಲ್ಲೆಯು ಕಾಣುವಂತೆ ನರ್ತಿಸಿ ಪ್ರಕೃತ್ಯಾರಮಣಾನುಕೂಲಳಾದ ಸಹಚರಿಯನ್ನು ಒಲಿಸಿಕೊಳ್ಳುವುದು. ಅಲ್ಲವೆ? ನಾನೂ ಹಾಗೆಯೇ ಮಾಡುವೆನು. ವೈಣಿಕನ ಉಪಧರ್ಮವನ್ನು ಸಹಿಸಿಕೊಂಡು ಮೃದು ಮಧುರವಾಗಿ ನುಡಿಯುವ ವೀಣೆಯಂತೆ ನೀನೂ ನನ್ನ ಉಪಮರ್ದದಿಂದ ಉಪಚಿತರಸಳಾಗಿ ಸುಪ್ರೀತಳಾಗಿ ನನ್ನನ್ನು ಸಂಪ್ರೀತಿಗೊಳಿಸು.”
ಹೀಗೆಯೇ ದಂಪತಿಗಳು ಮನೋವಾಕ್ಕಾಯಗಳಿಂದ ಒಬ್ಬರನ್ನೊಬ್ಬರು ಆರಾಧಿಸುವುದರಲ್ಲಿ ತತ್ಪರರಾಗಿ ತಮ್ಮ ಸುತ್ತಮುತ್ತಿನ ಪ್ರಪಂಚವನ್ನು ಸಾರ್ಥಕಗೊಳಿಸಿದರು.
* * * *