ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸತ್

ವಿಕಿಸೋರ್ಸ್ದಿಂದ

ಸತ್ ಎಂಬ ಪದಕ್ಕೆ ವಿರುದ್ಧವಾದುದು. ಸತ್ ಎಂಬ ಪದವನ್ನು ಅನೇಕ ಅರ್ಥಗಳಲ್ಲಿ ಉಪಯೋಗಿಸಿರುವಂತೆಯೇ ಅಸತ್ ಎಂಬ ಪದವನ್ನೂ ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಲಾಗಿದೆ. ಸತ್ ಎಂದರೆ ಇರುವುದು ಎಂಬುದು ಒಂದು ಅರ್ಥ. ಅಸತ್ ಎಂದರೆ ಇಲ್ಲದಿರುವುದು (ಋಗ್ವೇದ). ಸತ್ ಎಂಬ ಪದವನ್ನು ಸತ್ಯವಾದದ್ದು ಎಂಬ ಅರ್ಥದಲ್ಲೂ ಉಪಯೋಗಿಸುವುದುಂಟು. ಹಾಗೆಯೇ ಅಸತ್ ಎಂಬ ಪದ ಅಸತ್ಯವಾದದ್ದು ಎಂಬ ಅರ್ಥದಲ್ಲೂ ಉಪಯೋಗದಲ್ಲಿದೆ (ಋಗ್ವೇದ). ಸತ್ ಎಂಬ ಪದವನ್ನು ಒಳ್ಳೆಯದು, ಮಂಗಳಕರವಾದದ್ದು ಎಂಬ ಮೂರನೆಯ ಅರ್ಥದಲ್ಲಿ ಉಪಯೋಗಿಸಿರುವಂತೆಯೇ ಅಸತ್ ಪದವನ್ನು ಅನಿಷ್ಟವಾದದ್ದು, ಕೆಟ್ಟದ್ದು ಎಂಬ ಅರ್ಥದಲ್ಲೂ ಉಪಯೋಗಿಸಿದೆ (ರಘುವಂಶ). ಪಾಶ್ಚಾತ್ಯ ಆಧುನಿಕ ತಾತ್ತ್ವಿಕರು ಸಾಮಾನ್ಯವಾಗಿ ಸತ್ಯ ಮುಂತಾದುವು ವಾಸ್ತವ ವಿಷಯಗಳಲ್ಲಿ ಕೇವಲ ಧ್ಯೇಯಗಳು ಎಂದು ಭಾವಿಸುತ್ತಾರೆ. ಒಳ್ಳೆಯದೇ ಸತ್. ಅದೇ ವಾಸ್ತವವಾದದ್ದು. ಕೆಟ್ಟದ್ದು, ಅರೂಪವಾದದ್ದು ಚಿರಸ್ಥಾಯಿಯಾಗಿ ನಿಲ್ಲತಕ್ಕದಲ್ಲ; ವಿನಾಶ ಹೊಂದತಕ್ಕದ್ದು-ಎಂದು ಪ್ಲೇಟೊ ಭಾವಿಸಿರುತ್ತಾನೆ. ಸಾಮಾನ್ಯವಾಗಿ ಭಾರತೀಯತಾತ್ತ್ವಿಕರೂ ಅದೇ ರೀತಿಯಾಗಿ ಭಾವಿಸಿರುತ್ತಾರೆ. ಅಸತ್ಯವಾದ, ಅಮಂಗಳಕರ ವಾದ, ದುಃಖಕರವಾದ ಈ ಸಂಸಾರ ಅಸ್ಥಿರ ಮತ್ತು ಅಂತ್ಯಗೊಳ್ಳುವಂಥಾದ್ದು ಎಂದು ಅವರು ಭಾವಿಸಿರುವುದರಿಂದ ಯಾವ ಭಾರತೀಯ ದರ್ಶನವೂ ನಿರಾಶಾವಾದವಲ್ಲವೆಂದು ಎಂ. ಹಿರಿಯಣ್ಣನವರು ಹೇಳಿದ್ದಾರೆ.


ಅಸತ್ ಮತ್ತು ಸತ್ ಎಂಬ ವಿಷಯಗಳನ್ನು ಕುರಿತು ಭಾರತೀಯ ದಾರ್ಶನಿಕರ ಭಾವನೆಗಳು ಭಿನ್ನವಾಗಿವೆ. ಇವುಗಳಿಗೆ ಅನುಸಾರವಾಗಿ ಅದರ ಕಾರ್ಯಕಾರಣ ವಾದಗಳೂ ಭಿನ್ನವಾಗಿವೆ. ವೈಶೇಷಿಕರು ಅಸತ್ಕಾರ್ಯವಾದಿಗಳು. ಕಾರಣದಲ್ಲಿ ಇಲ್ಲದ್ದು, ಕಾರ್ಯರೂಪದಲ್ಲಿ ಹೊಸದಾಗಿ ಹುಟ್ಟುತ್ತದೆ ಎಂಬುದು ಅವರ ವಾದ. ಸಾಂಖ್ಯರು ಸತ್ಕಾರ್ಯವಾದಿಗಳು. ಕಾರಣದಲ್ಲಿ ಅವ್ಯಕ್ತವಾದ ಇರುವುದೇ ಕಾರ್ಯದಲ್ಲಿ ವ್ಯಕ್ತ ರೂಪದಲ್ಲಿ ವಿಕಾಸ ಹೊಂದುತ್ತದೆ ಎಂಬುದು ಅವರ ವಾದ (ಕಾರ್ಯಕಾರಣಭಾವ).


ಹಾಗೆಯೇ ಇರವಿನ ವಿಚಾರವಾಗಿ ಬೆಳೆದಿರುವ ಭಿನ್ನಾಭಿಪ್ರಾಯಗಳಿಗನುಗುಣವಾಗಿ ಜ್ಞಾನಮೀಮಾಂಸೆಯ ಸತ್ಯ ಮತ್ತು ಅಸತ್ಯ ವಿಚಾರಗಳಲ್ಲಿ ಭಿನ್ನವಾದಗಳಿವೆ. (ಜ್ಞಾನಮೀಮಾಂಸೆ)


ಸತ್ ಎಂಬುದನ್ನು ಜ್ಞಾನವಿಷಯಕ್ಕೆ ಸಂಬಂಧಿಸಿದಂತೆ ಪಾರಮಾರ್ಥಿಕಸತ್ತಾ, ವ್ಯಾವಹಾರಿಕಸತ್ತಾ, ಪ್ರಾತಿಭಾಸಿಕಸತ್ತಾ ಎಂದು ಅದ್ವೈತಿಗಳು ಮೂರು ವಿಧವಾಗಿ ವಿಂಗಡಿಸಿರುತ್ತಾರೆ. ಇವುಗಳಲ್ಲಿ ಪಾರಮಾರ್ಥಿಕಸತ್ತಾ ಚಿರಸ್ಥಿರವಾದ ಸತ್; ವ್ಯಾವಹಾರಿಕಸತ್ತಾ ಸದಸತ್ವಿಲಕ್ಷಣವಾದದ್ದು; ಪ್ರಾತಿಭಾಸಿಕಸತ್ತಾ ಕ್ಷಣಿಕವಾದದು. ಸಂಪುರ್ಣವಾಗಿ ವಿನಾಶಹೊಂದುವುದು ಅಸತ್ (ಅದ್ವೈತ).