ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉದ್ಧತವಾದ

ವಿಕಿಸೋರ್ಸ್ದಿಂದ

ಉದ್ಧತವಾದ: 19ನೆಯ ಶತಮಾನದ ನಾಲ್ಕನೆಯ ಪಾದದಲ್ಲಿ ಬ್ರಿಟನ್ನಿನಲ್ಲಿ ಅತಿಯಾದ ಕ್ಷಾತ್ರಾಭಿಮಾನದ ಫಲವಾಗಿ ಬೆಳೆದ ರಾಷ್ಟ್ರ ಜರ್ಬಿನ ಧೋರಣೆ (ಜಿಂಗೊಯಿಸಂ). 1877-78ರಲ್ಲಿ ರಷ್ಯ-ತುರ್ಕಿಗಳ ನಡುವೆ ಪ್ರಾರಂಭವಾದ ಯುದ್ಧದಲ್ಲಿ ರಷ್ಯನ್ನರನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಬ್ರಿಟನ್ ತನ್ನ ಮೆಡಿಟರೇನಿಯನ್ ಸೈನ್ಯ ತುಕಡಿಯನ್ನು ಕಳಿಸಿದಾಗ ಆ ರಾಷ್ಟ್ರವೂ ಯುದ್ಧಕ್ಷೋಭೆಗೆ ತುತ್ತಾಯಿತು. ಆಗ ರಷ್ಯದ ವಿರುದ್ಧ ಬ್ರಿಟನ್ನು ತಳೆದ ಧೋರಣೆಯನ್ನು ಜಿಂಗೊಯಿಸಂ ಎಂದೂ ಇದಕ್ಕೆ ಬೆಂಬಲ ನೀಡಿದವರನ್ನು ಜಿಂಗೊಗಳೆಂದೂ ಕರೆಯಲಾಯಿತು. ಆಗ ಜನರಲ್ಲಿ ಉದ್ರೇಕ ಹುಟ್ಟಿಸಲು ಕಾರಣವಾದ ಒಂದು ಹಾಡಿನ ಪಲ್ಲವಿಯಲ್ಲಿ ಜಿಂಗೊ ಎಂಬ ಪದವಿತ್ತು. ಯುದ್ಧ ಮಾಡುವುದೇನೂ ನಮ್ಮಿಚ್ಛೆಯಲ್ಲ; ಯುದ್ಧ ಸಂಭವಿಸಿದರೆ ನಮ್ಮಲ್ಲೇನೂ ಕಡಿಮೆಯಿಲ್ಲ; ನಮ್ಮಲ್ಲಿ ಹಡಗಿವೆ, ಸೈನ್ಯವಿದೆ, ಹಣವೂ ಇದೆ; ಕೆಣಕಿ ನೋಡಿ ! ಇದು ಈ ಹಾಡಿನ ಪಲ್ಲವಿಯ ಅರ್ಥ. ಇದೊಂದು ಆವೇಶಪುರಿತ ಗುಂಪುಮನೋಭಾವ. ರಾಷ್ಟ್ರಾಭಿಮಾನದ ಅತಿರೇಕ, ಸಾಮ್ರಾಜ್ಯದಾಹ ಮತ್ತು ಯುದ್ಧಪ್ರವೃತ್ತಿಯ ಮನೋಭಾವಗಳ ಸಂಮಿಳನವಾಗಿರುವ ಈ ವಾದ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಸ್ಫೋಟನಕಾರಿಯಾಗಿ ಪರಿಣಮಿಸ ಬಲ್ಲುದು. ವ್ಯಕ್ತಿಗೆ ರಾಷ್ಟ್ರೀಯತೆಯ ಉನ್ಮಾದ ಬಂದಾಗ ಆತ ಒಂದು ಮಿತಿಯ ವರೆಗೆ ಉದಾತ್ತ ಭಾವನೆಗಳಿಗೆ ಪ್ರಚೋದನೆ ನೀಡಿ ಇಡೀ ಜನತೆಯನ್ನೇ ರಾಷ್ಟ್ರ ಬೆಳೆವಣಿಗೆ-ರಕ್ಷಣೆಗಳ ಹಾದಿಯಲ್ಲಿ ಕೊಂಡೊಯ್ಯಬಲ್ಲ. ಈ ಮಿತಿ ಮೀರಿದಾಗ ಈ ಚಿತ್ತವೃತ್ತಿಯೇ ಅನ್ಯರಾಷ್ಟ್ರಗಳ ಆಕ್ರಮಣಕ್ಕೆ ಪ್ರೇರೇಪಕವಾಗಲೂಬಹುದು. ಇದು ಉದ್ಧತವಾದ.

ಬ್ರಿಟನ್ನಿಗೂ ಹಿಂದೆ ಫ್ರಾನ್ಸಿನಲ್ಲಿ ನಡೆದ ನೆಪೋಲಿಯಾನಿಕ್ ಯುದ್ಧಗಳಲ್ಲಿ ಫ್ರೆಂಚ್ ಸೈನಿಕರನ್ನು ಹುರಿದುಂಬಿಸಿದ್ದು ಇದೇ ಬಗೆಯ ಮನೋಭಾವ. ಅಲ್ಲಿ ಇದನ್ನು ಪ್ರವರ್ತಿಸಿದವನ ಹೆಸರಿನಿಂದ ಈ ಮನೋಭಾವವನ್ನು ಷೋವಿನಿಸಂ ಎಂದು ಕರೆಯಲಾಯಿತು.ನೋಡಿ-ಉಗ್ರರಾಷ್ಟ್ರಾಭಿಮಾನ; ಅಂತರರಾಷ್ಟ್ರೀಯತೆ; ರಾಷ್ಟ್ರೀಯತೆ. (ಎಂ.ಕೆ.ಎಸ್.)