ರಂಗನಾಯಕ ರಾಜೀವಲೋಚನ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ರಂಗನಾಯಕ ರಾಜೀವಲೋಚನ[ಸಂಪಾದಿಸಿ]

ರಾಗ: ಮೋಹನ ತಾಳ: ಅಟ್ಟ
ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ ||ಪಲ್ಲವಿ||

ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ ||೧||

ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕೈಮುಗಿದು ಓಲೈಪರು
ಘನ ಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ಕೊಂಡಾಡುವರೊ ಹರಿಯೆ || ೨ ||

ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದುದಯಾಚಲದಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀಹರಿಯೆ |೩ ||

ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ || ೪ ||

ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೆ || ೫ || [೧]
   --೦--
ರಚನೆ:ಪುರಂದರದಾಸರು.

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ದಾಸವಾಣಿ