ವಿಷಯಕ್ಕೆ ಹೋಗು

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಜನನ ಮತ್ತು ಬಾಲ್ಯ

ವಿಕಿಸೋರ್ಸ್ದಿಂದ


90848ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ — ಜನನ ಮತ್ತು ಬಾಲ್ಯ1919ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ

ಚಂದ್ರಾದೇವಿಗೆ ನವಮಾಸತುಂಬಿತು. ಒಂದುದಿನ ಬೆಳಿಗ್ಗೆ ದೇಹದಲ್ಲಿ ಅಶಕ್ತಿ ತೋರಿ ಪ್ರಸವವೇದನೆಯ ಚಿಹ್ನೆಗಳು ಕಂಡುಬಂದುವು. ಆಗ ಆಕೆಯು ಖುದಿರಾಮನಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿ "ಮನೆಯಲ್ಲಿ ಮತ್ತೊಬ್ಬರೂ ಇಲ್ಲ; ನೀನು ಈಗ ಹೆತ್ತರೆ ಇಂದು ರಘುವೀರನ ಪೂಜೆ ನಿಂತುಹೋಗುತ್ತದೆಯಲ್ಲ, ಏನುಮಾಡೋಣ ?" ಎಂದು ಕೇಳಿದಳು. ಖುದಿರಾಮನು ಅದಕ್ಕೆ 'ನಾವೇಕೆ ಯೋಚಿಸಬೇಕು? ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಹಾಪುರುಷನು ರಘುವೀರನ ಪೂಜೆಗೆ ನಿಪ್ಪವನ್ನು ಎಂದಿಗೂ ಉಂಟುಮಾಡುವುದಿಲ್ಲ ಈದಿನ ಎಂದಿನಂತೆ ರಘುವೀರನ ಸೇವೆಯನ್ನು ಮಾಡು. ನಾಳೆ ಇನ್ನೇನಾದರೂ ಏರ್ಪಾಡನ್ನು ಮಾಡೋಣ. ಸಾಯಂಕಾಲಕ್ಕೆ ಧನಿಯನ್ನು ಕರೆದು ಇಲ್ಲಿಯೇ ಮಲಗಿರುಹಾಗೆ ಹೇಳೋಣ' ಎಂದು ಹೇಳಿದನು. ಈ ಮಾತನ್ನು ಕೇಳಿ ಚಂದ್ರಾದೇವಿಗೆ ದೇಹದಲ್ಲಿ ಬಲಬಂದಂತಾಗಿ ಮತ್ತೆ ಮನೆ ಕೆಲಸಗಳನ್ನು ಮಾಡತೊಡಗಿದಳು. ರಘುವೀರಸಿಗೆ ಮಧ್ಯಾಹ್ನವೂ ಸಾಯಂಕಾಲವೂ ನಡೆಯಬೇಕಾದ ಪೂಜೋಪಚಾರಗಳಿಲ್ಲಾ ಕ್ರಮವಾಗಿ ನಡೆದುವು. ರಾತ್ರಿಯ ಊಟವಾದಮೇಲೆ ಖುದಿರಾಮನು ಹೋಗಿ ಧನಿ[]ಯನ್ನು ಕರೆದುಕೊಂಡು ಬಂದನು. ಮರುದಿನ ಸೂರ್ಯೋ


ದಯಕ್ಕಿಂತ ಸ್ವಲ್ಪ ಮುಂಚೆಯೇ ಶ್ರೀಮತಿ ಚಂದ್ರಾದೇವಿಯ ಒಬ್ಬ

ಪುತ್ರನನ್ನು ಹೆತ್ತಳು. ಈತನೇ ಮುಂದೆ ಪ್ರಸಿದ್ಧನಾದ ಭಗವಾನ್ ಶ್ರೀರಾಮಕೃಷ್ಣ ಪರಮಹಂಸದೇನ. ಬೆಳಗಾದ ಮೇಲೆ ಖುದಿರಾಮನು ಜೋಯಿಸರನ್ನು ಕರೆದುಕೊ೦ಡುಬ೦ದು ಜನಪತ್ರಿಕೆಯನ್ನು ಬರೆಸಿ ನೋಡಲಾಗಿ ಎಲ್ಲವೂ ಬಹು ಪ್ರಶಸ್ತವಾಗಿ ಕಂಡುಬಂದಿತು. ಜೋಯಿಸರು “ ಇಂಥವನು ಧರ್ಮವಿತ್ತಾಗಿಯೂ ಮಹನೀಯನಾಗಿಯೂ ಆಗುವನು. ಯಾವಾಗಲೂ ಪುಣ್ಯ, ಕರ್ಮಾನಷ್ಠಾನದಲ್ಲಿ ನಿರತನಾಗಿರುವನು. ಬಹುಶಿಷ್ಯ ಪರಿವೃತನಾಗಿ ದೇವಮಂದಿರದಲ್ಲಿ ವಾಸಮಾಡುವನು. ನಾರಾಯಣಾಂ ಶಸಂಭೂತನಾದ ಮಹಾಪುರುಷನೆಂದು ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಸರ್ವತ್ರ ಸರ್ವಜನರಿಂದಲೂ ಪೂಜಿತನಾಗುವನು.” ಎಂದು ಹೇಳಿದರು. ಖುದಿರಾನಸಿಗೆ ಆಶ್ಚರ್ಯವಾಯಿತು. ತಾನು ಗದಾಧಾಮದಲ್ಲಿ ನೋಡಿದ ಸಪ್ನವು ಸತ್ಯವೆಂದು ನಂಬುಗೆ ಯುಂಟಾಯಿತು. ಅನಂತರ ಜಾತಕರ್ಮವನ್ನು ನಡೆಸಿ ಗಯೆಯಲ್ಲಿ ಆದ ಸ್ವಪ್ನವನ್ನು ಮನಸ್ಸಿನಲ್ಲಿಟ್ಟುಕೊಂಡು ಶಿಶುವಿಗೆ ಗದಾಧರನೆಂದು ನಾಮಕರಣ ಮಾಡಿದನು.

ಮಗುವಿಗೆ ಐದು ತಿಂಗಳು ತುಂಬಿತು. ಆರನೆಯತಿಂಗಳಲ್ಲಿ ಖುದಿರಾಮನು ಮಗನಿಗೆ ಅನ್ನಪ್ರಾಶನ ಮಾಡಬೇಕೆಂದು ಉದ್ದೇಶ. ಪಟ್ಟು ತನಗೆ ಕೇವಲಹತ್ತಿರ ಸಂಬಂಧಿಗಳಾದ ನಾಲ್ಕು ಜನರನ್ನು ಊಟಕ್ಕೆ ಕರೆದು ಆ ಕಾರ್ಯವನ್ನು ಮುಗಿಸಿಬಿಡಬೇಕೆಂದಿದ್ದನು. ಆದರೆ ಅವನು ಯೋಚಿಸಿದ್ದೇ ಒಂದಾಯಿತು; ನಡದದ್ದೇ ಒಂದಾಯಿತು. ಆ ಗ್ರಾಮದ ಜಮೀನುದಾರನಾದ ಆತನ ಸ್ನೇಹಿತ ಧರ್ಮದಾಸ ಲಾಹಾ ಎಂಬಾತನ ಪ್ರೇರಣೆಯಿಂದಲೂ ಸಹಾಯದಿ೦ದಲೂ ಖುದಿರಾಮನ ಮನೆಯಲ್ಲಿ ಆ ವೂರಿನ ಎಲ್ಲಾ ಬ್ರಾಹ್ಮಣರಿಗೂ ಬ್ರಾಹ್ಮಣೇತರರಿಗೂ ಸಂತರ್ಪಣೆ ನಡೆದುಹೋಯಿತು. ಎಷ್ಟೋಜನ ಬಡವರೂ ಭಿಕ್ಷುಕರೂ ತೃಪ್ತಿ ಹೊಂದಿದರು. ಮಗುವು ಬಹು ಮುದ್ದಾಗಿದ್ದುಗಿದರಿಂದ ಆ ವೂರಿನ ಗಂಡಸರು ಹೆಂಗಸರೆಲ್ಲರೂ ಮಗುವನ್ನು ಎತ್ತಿಕೊಂಡು ಆಡಿಸುತ್ತಾ ಆನಂದ ಪಡುತ್ತಿದ್ದರು. ಹೀಗೆನಾದುವರ್ಷಗಳು ಕಳೆದುವು. ಇನ್ನೂ ಈ ಚಿಕ್ಕವಯಸ್ಸಿನಲ್ಲಿಯೇ ಗದಾಧರನ ಬುದ್ದಿಯೂ ಜ್ಞಾಪಕಶಕ್ತಿಯೂ ಅದ್ಭುತವಾಗಿದುವು. ಇದನ್ನು ನೋಡುತ್ತಿದ್ದ ಖುದಿರಾಮನ ವಿಸ್ಮಯವನ್ನೂ ಆನಂದವನ್ನೂ ಹೇತೀರದು. ಅವನು ಚ೦ಚಲನಾದ ಈ ಬಾಲಕನನ್ನು ತೊಡೆಯಮೇಲೆ ಕೊ೦ಡು ತಮ್ಮ ಪೂರ್ವ ಪುರುಷ ನಾಮಾವಳಿ, ದೇವದೇವಿಯರ ಸಣ್ಣ ಸಣ್ಣ ಸ್ತೋತ್ರಗಳು, ಅಥವಾ ರಾಮಾಯಣ ಮಹಾಭಾರತಗಳ ವಿಚಿತ್ರವಾದ ಕಥೆಗಳು ಇವನ್ನು ಹೇಳಿಕೊಡುತ್ತಿದನು. ಒಂದುಸಲ ಹೇಳಿದ ಮಾತ್ರದಿಂದಲೇ ಗದಾಧರನಿಗೆ ಮುಕ್ಕಾಲು ಪಾಲೆಲ್ಲ ಬಾಯಿಗೆ ಬಂದುಬಿಡುತ್ತಿತ್ತು. ಎಷ್ಟೋ ದಿನ ಬಿಟ್ಟು ಕೇಳಿದರೂ ಅವುಗಳನ್ನು ಅದೇರೀತಿಯಲ್ಲಿ ನೀರುಕುಡಿದ೦ತೆ ಹೇಳುತ್ತಿದನು. ದಲ್ಲಿಯೇ ಖುದಿರಾಮನಿಗೆ ಇನ್ನೊಂದು ವಿಶೇಷ ಸಂಗತಿಯೂ ಕಂಡುಬಂತು. ಹುಡುಗನಿಗೆ ಕೆಲವು ವಿಷಯಗಳಲ್ಲಿ ಶ್ರದ್ಧೆಯೂ, ಆಸಕ್ತಿಯೂ ವಿಶೇಷವಾಗಿರುವ, ಮತ್ತೆ ಕೆಲವು ವಿಚಾರಗಳಲ್ಲಿ ಅವನು ಕೇವಲ ಉದಾಸೀನನಾಗಿರುತ್ತಿದ್ದನು. ನೂರಾರಸಲ ಹೇಳಿದರೂ ಅವುಗಳಲ್ಲಿ ಸ್ವಲ್ಪವೂ ಮನಸ್ಸೇ ಇಡುತ್ತಿರಲಿಲ್ಲ. ಇಂಥ ವಿಚಾರಗಳಲ್ಲಿ ಗಣಿತಒಂದು. ಇದನ್ನು ಕಂಡು ಖುದಿರಾ ಮನು “ ಹುಡುಗನು ಇನ್ನೂ ಚಿಕ್ಕವನು. ಇನ್ನೂ ಕೇವಲ ಆಟಪಾಟದ ಮೇಲೆಯೇ ಗಮನ. ಈಗಾಗಲೇ ಅನನಿಗೆ ಇದೆಲ್ಲವನ್ನೂ ಹೇಳಿ ಕೊಟ್ಟು ಏಕೆ ಗೋಳಾಡಿಸಬೇಕು" ಎಂದು ಯೋಚಿಸಿ ಐದನೆಯ ವರ್ಷದಲ್ಲಿ ಶಾಸ್ತ್ರೀಯವಾಗಿ ವಿದ್ಯಾರ೦ಭಮಾಡಿಸಿ, ಹತ್ತಿರದಲ್ಲಿದ ಪಾಠಶಾಲೆಗೆ ಕಳುಹಿಸಿದನು. ಅಲ್ಲಿದೆ ಹುಡುಗರನ್ನು ಬೇಗ ಪರಿಚಯಮಾಡಿಕೊ೦ಡು ಗದಾಧರನು ಸಂತೋಷವಾಗಿ ಓಡಾಡಿಕೊಂಡಿರುತ್ತಿದನಲ್ಲದೆ ಬೇಗ ಉಸಾಧ್ಯಾಯರಿಗೂ ಅಚ್ಚು ಮೆಚ್ಚಾದನು. ಮನೆಯಲ್ಲಿ ಹೇಗೆಯೋ ಪಾಠಶಾಲೆಯಲ್ಲಿಯೂ ಹಾಗೆಯೇ ತನಗೆ ಬೇಕಾದ ಕೆಲವು ವಿಷಯಗಳಲ್ಲಿ ಕೇವಲ ಶ್ರದ್ಧೆ, ತನಗೆ ಬೇಡದವುಗಳಲ್ಲಿ ಅಶ್ರದ್ದೆ, ತನಗೆ ಇಷ್ಟವಿಲ್ಲದ್ದನ್ನು ಯಾರು ಏನು ರ್ಹೆದರೂ ಮಾಡುತ್ತಿರಲಿಲ್ಲ. ಒಹುಹಟ: ಆದರೆ ಯಾವುದಾ ದರೂ ಒಂದು ವಿಷಯವನ್ನು ಯುಕ್ತಿಯುಕ್ತವಾಗಿ ಸಕಾರಣವಾಗಿ ಅವನ ಮನಸ್ಸಿಗೆ ಹಿಡಿಯುವಂತೆ ತಿಳಿಸಿದ್ದೇ ಆದರೆ, ಅದಕ್ಕೆ ಎಂದಿಗೂ ವಿರೋಧವಾಗಿ ಹೋಗುತ್ತಿರಲಿಲ್ಲ. ಈ ಕಾಲದಲ್ಲಿ ಒಂದು ಸಂಗತಿಯನ್ನು ಇದಕ್ಕೆ ಉದಾಹರಣೆಯಾಗಿ ಬಹುದು. ಖುದಿರಾಮನ ಮನೆಯಹತ್ತಿರ ಒಂದು ಕೆರೆಯಿತ್ತು. ಊರಿನವರೆಲ್ಲರೂ ಅಲ್ಲಿ ಸ್ವಾನಪಾನಾದಿಗಳನ್ನು ಮಾಡುತ್ತಿದ್ದರು. ಹೆಂಗಸರಿಗೂ ಗಂಡಸರಿಗೂ ಬೇರೆಬೇರೆ ಸ್ನಾನಘಟ್ಟಗಳಿದ್ದುವು. ಆದರೆ ಗದಾಧರನಂಥ ಸಣ್ಣ ಹುಡುಗರು ಹೆಂಗಸರ ಘಟ್ಟಕ್ಕೆ ಹೋದರೆ ಆಕ್ಷೇಪಣೆ ಇರುತ್ತಿರಲಿಲ್ಲ. ಗದಾಧರನು ಒಂದುದಿನ ಒಬ್ಬಿಬ್ಬರು ಜೊತೆಯಹುಡುಗರನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ನೀರಿನಲ್ಲಿ ಕುಣಿದಾಡುತ್ತ ಅಲ್ಲಿದ ಹೆಂಗಸರಿಗೆಲ್ಲಿ ನೀರನ್ನು ಸಿಡಿಸಿ ಬಹಳ ಗಲಭೆ ಮಾಡಿದನು. ಅವರು ಎಷ್ಟು ಬೇಡವೆಂದರೂ ಕೇಳ ಲಿಲ್ಲ. ಕೊನೆಗೆ ಅವರಲ್ಲೊಬ್ಬ ಮುದುಕಿಯು ಬಲುಬೇಸರಪಟ್ಟು ಕೊಂಡು “ ನಿಮಗೆ ಈ ಘಟ್ಟದಲ್ಲಿ ಏನು ಕೆಲಸ? ಗಂಡಸರ ಘಟ್ಟಕ್ಕೆ ಹೋಗಬಾರದೇ? ಹೆಂಗಸರು ಸ್ನಾನಮಾಡುತ್ತಿದ್ದಾಗ ನೋಡ ಬಾರದೆಂಬುದು ನಿಮಗೆ ಗೊತ್ತಿಲ್ಲವೇ ?” ಎಂದು ಗದರಿಸಿದಳು. ಅದಕ್ಕೆ ಗದಾಧರನು “ ನೋಡಿದರೇನು ? " ಎಂದು ಕೇಳಿದನು. ಪಾಪ ! ಆ ಚಿಕ್ಕ ಹುಡುಗನಿಗೆ ಹೆಂಗಸರು ಸ್ನಾನಮಾಡುವುದನ್ನು ನೋಡಿದರೆ ಏನುತಪ್ಪು ಎಂಬುದು ಗೊತ್ತಾಗಿರಲಿಲ್ಲ. ಅವನ ಪ್ರಶ್ನೆಗೆ ಉತ್ತರವನ್ನು ಆ ಮುದುಕಿಯು ಹೇಳಲಾರದೆ ಇನ್ನಷ್ಟು ಕೂಗಾಡಿಬಿಟ್ಟಳು. ಅಲ್ಲಿದ್ದ ಹೆಂಗಸರೆಲ್ಲರಿಗೂ ಸಿಟ್ಟು ಬಂತು. ಮಿಕ್ಕಹುಡುಗರು ತನ್ನ ತಾಯಿ ತಂದೆಗಳಿಗೆ ಈ ವಿಷಯ ತಿಳಿದೀ. ತೆಂದ ಓಡಿಹೋದರು. ಗದಾಧರಮಾತ್ರ ಮನಸ್ಸಿನಲ್ಲಿ ಏನೇನೋ ಯೋಚಿಸುತ್ತ ನಿಂತಿದ್ದನು. ಆಮೇಲೆ ಎರಡುಮೂರುದಿನ ಒಂದು ಮರದ ಹಿಂದಿನಿಂದ ಹೆಂಗಸರು ಸ್ನಾನಮಾಡುತ್ತಿದ್ದದ್ದನ್ನು ನೋಡಿದನು. ತನಗೆ ಏನೂ ಆಗಲಿಲ್ಲ. ಆಗ ತನ್ನನ್ನು ಹಿಂದೆ ಬೈದಿದ್ದ ಮುದುಕಿ ಬರುವದನ್ನು ಕಾದಿದ್ದು ಆಕೆಯನ್ನು ಕಂಡೊಡನೆಯೇ "ಮೊನ್ನೆ ದಿನ ನಾಲ್ಕು ಜನ ಸ್ನಾನಮಾಡುತ್ತಿದ್ದ ಹೆಂಗಸರನ್ನು ನೋಡಿದೆ. ನಿನ್ನೆ ದಿನ ಆರು ಜನರನ್ನು ನೋಡಿದೆ. ಈದಿನ ಎಂಟು ಜನರನ್ನು ನೋಡಿದೆ. ನನಗೇನೂ ಆಗಲೇ ಇಲ್ಲವಲ್ಲ !" ಎ೦ದ ಕೇಳಿದನು. ಆ ಮುದುಕಿಯು ಇದನ್ನು ಕೇಳಿ ನಕ್ಕು ಚ೦ದ್ರಾದೇವಿಗೆ ಈ ವರ್ತಮಾನವನ್ನು ತಿಳಿಸಿದಳು. ದೇವಿಯು ಗದಾಧರನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು ಮಗು, ನೀನುಹೀಗೆಲ್ಲ ಮಾಡಿದರೆ ನಿನಗೇನೂ ಆಗುವುದಿಲ್ಲ, ಆದರೆ ಹೆಂಗಸರಿಗೆ ತುಂಬ ಅವಮಾನವಾಗುತ್ತೆ. ಅವರೆಲ್ಲರೂ ನನ್ನ ಹಾಗೆ. ಅವರಿಗೆ ಅವಮಾನಮಾಡಿದರೆ ನನಗೆ ಅವಮಾನ ಮಾಡಿದಂತೆಯೇ ಆಗುತ್ತದೆ. ಆದ್ದರಿಂದ ಇನ್ನು ಮೇಲೆ ಯಾವಾಗಲೂ ಹೀಗೆಮಾಡಬೇಡ. ಅವರ ಮನಸ್ಸನ್ನೂ ನನ್ನ ಮನಸ್ಸನ್ನೂ ನೋಯಿಸಿದ್ದರಿಂದ ನಿನಗಾಗವುದೇನು? ” ಎಂದು ತಿಳಿಯ ಹೇಳಿದಳು. ಗದಾಧರನು ಅದನ್ನು ಗ್ರಹಿಸಿ ಪುನಃ ಹಾಗೆ ಮಾಡುವುದನ್ನು ಬಿಟ್ಟು ಬಿಟ್ಟನು.

ಪಾಠಶಾಲೆಗೆ ಹೋಗಿಬರುತ್ತ ಓದುವದನ್ನೂ ಬರೆಯುವುದನ್ನೂ ತಕ್ಕಮಟ್ಟಿಗೆ ಕಲಿತುಕೊಂಡನು. ಗಣಿತದಮೇಲೆ ಮಾತ್ರ ಸ್ವಲ್ಪವೂ ಗಮನ ಕೊಡಲಿಲ್ಲ. ಕೊನೆಯವರೆಗೂ ಇದರಲ್ಲಿ ಅಭಿರುಚಿ ಹುಟ್ಟಲೇ ಇಲ್ಲ. ಪಾಠಶಾಲೆಗೆ ಸರಿಯಾಗಿ ಹೋಗುತ್ತಲೂ ಇರಲಿಲ್ಲ. ದೇವ ದೇವಿಯರ ಮೂರ್ತಿಗಳನ್ನು ಮಾಡುವುದರಲ್ಲಿ ಅವನಿಗೆ ತುಂಬ ಇಷ್ಟವಿತ್ತು. ಒಂದೊಂದು ದಿನ ಕುಂಬಾರರ ಮನೆಗೆ ಹೋಗಿ ಅಲ್ಲಿ ವಿಗ್ರಹಗಳನ್ನು ಮಾಡುತ್ತ ಕುಳಿತುಬಿಡು ತಿದ್ದನು. ಹೀಗೆ ರಾಮಾಯಣ ಮಹಾಭಾರತ ಮುಂತಾದ ಪುಣ್ಯ ಕಥೆಗಳನ್ನು ಕಲಿತಿದದಲ್ಲದೆ, ಅವಗಳನ್ನು ಯಾವರೀತಿಯಲ್ಲಿ ಹೇಳಿದರೆ ಕೇಳುವವರ ಮನಸ್ಸಿಗೆ ಹಿಡಿಯುವುದೆಂಬುದನ್ನು ಲಕ್ಷ್ಯವಿಟ್ಟು ತಿಳಿದುಕೊಳ್ಳುತ್ತಿದ್ದನು. ಅವನ ಅಪೂರ್ವವಾದ ಜ್ಞಾಪಕಶಕ್ತಿಯೂ ಸೂಕ್ಷ, ಬುದ್ದಿ ಯೂ ಇದರಲ್ಲಿ ಬಹಳ ಸಹಕಾರಿಗಳಾದುವು. ಪಾಠಶಾಲೆಗೆ ಹೋದಾಗಲೂ ಅನೇಕವೇಳೆ ಪಾಠಗಳಿಗೆ ಗಮನವನ್ನೆ ಕೊಡುತ್ತಿರಲಿಲ್ಲ. ಮತ್ತೊಬ್ಬರು ಆಡಿದಹಾಗೆ ಆಡುವುದು, ಮಾಡಿದ ಹಾಗೆ ಮಾಡುವುದು, ಎಂಥವರನ್ನೆ ಬೇಕಾದರೂ ಅನುಕರಣ ಮಾಡಿ ಹಾಸ್ಯ ಮಾಡುವುದು ಇವುಗಳಲ್ಲಿ ಅದ್ಭುತ ಶಕ್ತಿ ಇತ್ತು. ಹೀಗೆ ತಾನು ಸದಾ ಸಂತೋಷಚಿತ್ತನಾಗಿರುತ್ತಿದನಲ್ಲದೆ ಮಿಕ್ಕ ಹುಡುಗರು ಇವನ ಜೊತೆಯಲ್ಲಿದ್ದಾಗ ಬೇರೊಂದು ಚಿಂತೆಯಿಲ್ಲದೆ ಸುಖವಾಗಿರುತ್ತಿದ್ದರು.

ಹೀಗಿರಲು ಗದಾಧರನ ವಿಚಾರದಲ್ಲಿ ಅವನ ತಾಯಿತಂದೆಗಳಿಗೆ ಚಿಂತೆಗೆ ಕಾರಣವಾಯಿತು. ಅವನು ಹುಟ್ಟಿದಂದಿನಿಂದ ಇಂದಿನವರೆಗೆ ಎಂದೂ ಅಸ್ವಸ್ಥನಾಗಿದದ್ದೇ ಇಲ್ಲ. ಇಂಥ ಆರೋಗ್ಯ ಭಾಗ್ಯವಿದ್ದದ್ದರಿಂದ ಗಗನಚಾರಿಯಾದ ಪಕ್ಷಿಯಂತೆ ಸಂತೋಷವಾಗಿ ಆಡಿ ಕೊಂಡಿದ್ದನು. ದೇಹದ ಮೇಲೆ ಗಮನ ಹೋಗದಿರುವಿಕೆಯ ಸ೦ಪೂರ್ಣ ಆರೋಗ್ಯ ಸ್ಥಿತಿಯ ಲಕ್ಷಣವೆಂದು ಸಮರ್ಥರಾದ ವೈದ್ಯರ ಹೇಳಿದ್ದಾರೆ. ಗದಾಧರನಿಗೆ ಇಂಥ ಆರೋಗ್ಯ ಸ್ಥಿತಿ ಇತ್ತು. ಅದರಲ್ಲಿಯೂ ಅವನಿಗೆ ಸ್ವಾಭಾವಿಕವಾಗಿ ಬಂದ ಏಕಾಗ್ರಚಿತ್ತವು ಯಾವುದಾದರೂ ಒಂದು ಪದಾರ್ಥದಲ್ಲಿ ನಟ್ಟು ಹೋದರೆ, ಆಗ ದೇಹದ ಮೇಲಣ ಪ್ರಜ್ಞೆಯು ಸಂಪೂರ್ಣವಾಗಿ ಲೋಪ ಹೊಂದಿ ಕೇವಲ "ಭಾವನಯ" ನಾಗುತ್ತಿದನು. ಮಂದಮಾರುತನಿ೦ದ ಆಂದೋಳಿತವಾಗಿ ಆನಂದದಲ್ಲಿ ತಲೆ ತೂಗುತ್ತಿರುವ ಪೈರುಸಜ್ಜೆಗಳಿಂದ ಕೂಡಿದ, ಹಸುರಾದ, ವಿಸ್ತಾರವಾದ ಮೈದಾನ, ನದಿಯ ಅವಿರಳವಾದ ಅನಂತವಾದ ಪ್ರವಾಹ, ಪಕ್ಷಗಳ ಅವ್ಯಕ್ತ ಮಧುರ ವಾದ ಕಲಗಾನ, ಎಲ್ಲದರ ಮೇಲೂ ಇರುವ ಸುನೀಲವಾದ ಅ೦ತರಿಕ್ಷ, ಮತ್ತು ಅದರ ಮಧ್ಯದಲ್ಲಿ ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ಮೇಘರಾಶಿಯ ಮಾಯಾರಾಜ್ಯ ಮುಂತಾದ ಸೃಷ್ಟಿ ನೌಂ ದರ್ಯ ವಿಶೇಷಗಳು ಅವನನ್ನು ಭಾವರಾಜ್ಯದಲ್ಲಿ ಎಲ್ಲಿಗೋ ತೆಗೆದು ಕೊಂಡು ಹೋಗಿ ಬಿಡುತ್ತಿದ್ದವು. ಮುಂದೆ ಹೇಳುವ ವೃತ್ತಾಂತವೂ ಅವನ ಇಂಥ “ಭಾವಸೃಸನತ್ತೆ" ಯಿಂದಲೇ ನಡೆದದ್ದು. ಒಂದು ದಿನ ಮೈದಾನದಲ್ಲಿ ಓಡಾಡುತ್ತಿರುವಾಗ ಗದಾಧರನು ಶುಭ್ರನಾದ ರೆಕ್ಕೆಗಳನ್ನು ಬಿಚ್ಚಿ ನಿರಾತಂಕವಾಗಿ ಅಂತರಿಕ್ಷದಲ್ಲಿ ಹಾರಾಡುತ್ತಿದ ಕೆಲವು ಸುಂದರವಾದ ಒಲಾಕಾ ಪಕ್ಷಿಗಳನ್ನು ನೋಡಿ ಆನಂದಲ್ಲಿ ತನ್ಮಯನಾಗಿಹೋದನು. ದೇಹದ ಮೇಲಣ ಪ್ರಜ್ಞೆಯೇ ತಪ್ಪಿ ಕೆಳಗೆ ಬೀಳಲು ಜೊತೆಯಲ್ಲಿದ್ದ ಹುಡುಗರು ಅವನನ್ನು ಹೊತ್ತು ಕೊಂಡು ಹೋಗಿ ಅವನ ತಾಯಿತಂದೆಗಳಿಗೆ ಈ ವರ್ತಮಾನವನ್ನು ತಿಳಿಸಿದರು. ಖುದಿರಾಮನೂ ಚಂದ್ರಾದೇವಿಯೂ ಇದನ್ನು ಕೇಳಿ ವಿಧವಿಧವಾಗಿ ಚಿಂತಿಸಿ ಕೊನೆಗೆ ನೂರ್ಭೆಹೋಗಿರಬೇಕೆಂದು ನಿಶ್ಚಯಮಾಡಿ ಅದಕ್ಕೆ ತಕ್ಕ ಔಷಧವನ್ನು ಕೊಡಿಸಿದ್ದಲ್ಲದೆ ಶಾ೦ತಿ ಜಸ ಮುಂತಾದ್ದನ್ನು ಮಾಡಿಸಿದರು. ಗದಾಧರನು ಮಾತ್ರ ಈ ವಿಷಯ ವನ್ನು ಆಗಾಗ್ಗೆ ನೆನೆಸಿಕೊಂಡು ತನ್ನ ಮನಸ್ಸು ಆಗ ಒಂದು ವಿಚಿತ್ರವಾದ ಭಾವದಲ್ಲಿ ಲೀನವಾಗಿಹೋಗಿತ್ತೆಂದೂ ತಾನು ಹೊರಗಿನ ನದಾರ್ಥಗಳನ್ನು ನೋಡುತ್ತಿರಲಿಲ್ಲದಿದ್ದರೂ ಒಳಗೆ ಪ್ರಜ್ಞೆ ಇತ್ತೆಂದೂ ಒಂದು ವಿಧವಾದ ಅಪೂರ್ವವಾದ ಆನಂದಉಂಟಾಗಿತ್ತೆಂದೂ ಹೇಳುತ್ತಿದ್ದನು.

ಇಷ್ಟು ಹೊತ್ತಿಗೆ ಗದಾಧರಸಿಗೆ ಆರುವರ್ಷತುಂಬಿ ಏಳನೆಯ ವರ್ಷ ನಡೆಯುತ್ತಿತ್ತು. ರಾಮಚ೦ದ್ರನು ಸೋದರಮಾವನಾದ ಖುದಿರಾಮನನ್ನು ದುರ್ಗೋತ್ಸವಕ್ಕೆ (ನವರಾತ್ರಿಯಪೂಜೆ) ಬರ ಬೇಕೆಂದು ಹೇಳಿಕಳುಹಿಸಿದನು. ಪ್ರತಿವರ್ಷವೂ ಖುದಿರಾಮನು ಅಲ್ಲಿಗೆ ಹೋಗಿಬರುವ ಸದ್ಧತಿಯತ್ತು. ಈಸಾರಿ ಆತನಿಗೆ ದೇಹ ದಲ್ಲಿ ಆರೋಗ್ಯ ವಿರಲಿಲ್ಲ. ಆದರೂ “ಶರೀರವ್ರ ದಿನದಿನಕ್ಕೆ ದುರ್ಬಲವಾಗುತ್ತಿದೆ. ನಾನು ಈ ವರ್ಷ ಹೋಗದೆಹೋದರೆ ಮತ್ತೆ ಹೋಗಿ ನೋಡುವೆನೆ೦ಬ ನಂಬುಗೆ ಏನು? " ಎಂದಂದು, ಕೊಂಡು ರಾಮಕುಮಾರನು ಚಿಂತೆಯಲ್ಲಿ ಹೊರಟನು. ಅಲ್ಲಿ ಹೋದಕೂಡಲೆ ರೋಗವುಹೆಚ್ಚಿ ದಶಮಿಯದಿನದ ಹೊತ್ತಿಗೆ ನಿಶ್ಯಕ್ತಿ ಯಾಗಿ ಮಾತಾಡುವುದು ಕಷ್ಟವಾಯಿತು. ಮಧ್ಯಾಹ್ನದ ಹೊತ್ತಿಗೆ ರಾಮಚ೦ದ್ರನು ಬೇಗಬೇಗ ಪೂಜೆಯನ್ನು ಮುಗಿಸಿಕೊಂಡು ಪ್ರತಿಮೆ ಯನ್ನು ವಿಸರ್ಜನೆಮಾಡಿ ಬಂದನು. ಅಷ್ಟುಹೊತ್ತಿಗಾಗಲೆ ಖುದಿ ರಾಮನಿಗೆ ಅಂತ್ಯಕಾಲವು ಪ್ರಾಪ್ತವಾಗಿತ್ತು. ಬಹಳ ಹೊತ್ತಿ ನಿಂದಲೂ ಒಂದುಮಾತನ್ನೂ ಆಡದೆ ಜ್ಞಾನವಿಲ್ಲದೆ ಬಿದ್ದಿದ್ದ ಮಾವ ನನ್ನು ನೋಡಿ ರಾಮಚಂದ್ರನು ಕಣ್ಣೀರ ಸುರಿಸುತ್ತಾ " ಮಾವ! ನೀನು ಯಾವಾಗಲೂ ಮಾತುಮಾತಿಗೂ ರಘುವೀರ ರಘುವೀರ ಎನ್ನುತ್ತಿದ್ದೆ. ಈಗಲೇಕೆ ಅವನನ್ನು ಸ್ಮರಿಸಿಕೊಳ್ಳುವುದಿಲ್ಲ?” ಎಂದನು. ರಘುವೀರನಮಾತು ಕಿವಿಗೆ ಬಿದ್ದಕೂಡಲೆ ಖುದಿರಾಮನಿಗೆ ಚೈತನ್ಯ ಬಂದು ಮೆಲ್ಲಗೆ ಕಂಪಿತವಾದ ಸ್ವರದಿಂದ “ ಯಾರು, ರಾಮಚಂದ್ರನೆ?' ಪ್ರತಿಮೆಯ ವಿಸರ್ಜನೆ ಮಾಡಿಯಾಯಿತೆ ? ಸ್ವಲ್ಪ ಎಬ್ಬಿಸಿ ಕೂರಿಸು" ಎಂದನು. ಅದರಂತೆ ಉಪಾಯವಾಗಿ ಎಬ್ಬಿಸಿ ಕೂರಿ ಸಲು ಮೂರುಸಾರಿ ಗಂಭೀರ ಸ್ವರದಿಂದ ರಘುವೀರನ ನಾಮೋ ಚ್ಚಾರಣೆಮಾಡಿ ಖುದಿರಾಮನು ದೇಹತ್ಯಾಗ ಮಾಡಿದನು. ಸಿಂಧು. ಬಿಂದು ಸಿಂಧುವಿನೊಡನೆ ಮಿಳಿತವಾಗಿ ಹೋಯಿತು. ಮರುದಿನವೇ ಈ ವರ್ತಮಾನವು ಕಾಮಾರಪುಕರಕ್ಕೆ ತಲಪಿ ಆ ಆನಂದಧಾಮವನ್ನು ನಿರಾನಂದದಿಂದ ತುಂಬಿತು.

ಚ೦ದ್ರಾದೇವಿಯ ದುಃಖಕ್ಕೆಪಾರವಿರಲಿಲ್ಲ. ಅವಳಭಾಗಕ್ಕೆ ಪ್ರಸಂಚವೆಲ್ಲಾ ಶೂನ್ಯವಾಗಿ ಕಂಡಿತು. ಆದ್ದರಿಂದ ಶ್ರೀ ಶ್ರೀ ರಘು ವೀರನನ್ನು ಶರಣುಹೊಕ್ಕು ಸಂಸಾರದ ಚಿಂತೆಯನ್ನು ಬಿಟ್ಟುಬಿಡ ಬೇಕೆಂದು ಮನಸ್ಸನ್ನುಮಾಡಿದಳು. ಆದರೆ ಆಕೆಯು ಸಂಸಾರ . ವನ್ನು ಬಿಡಬೇಕೆಂದರೂ ಸಂಸಾರವು ಆಕೆಯನ್ನು ಹೇಗೆ ಬಿಟ್ಟಿತು ? ಗದಾಧರನಿಗೆ ಆಗ ಏಳುವರ್ಷ. ಈಚಿಗೆ ಹುಟ್ಟಿದ ಸರ್ವಮಂಗಳೆ ಎಂಬ ಹುಡುಗಿಗೆ ನಾಲ್ಕು ವರ್ಷ. ಇವರ ಯೋಚನೆ ಹೀಗೆ ತಪ್ಪಿತು ? ಆದರಿ೦ದ ಚ೦ಪ್ರಾದೇವಿಯು ರಘುವೀರನ ಧ್ಯಾನದಲ್ಲಿಯೇ ಹೇಗೊ ಸಂಸಾರದ ಯೋಗಕ್ಷೇಮವನ್ನೆಲ್ಲಾ ನೋಡಿಕೊಳ್ಳುತ್ತಾ ಕಾಲಕಳೆಯ ಬೇಕಾಯಿತು. ಗದಾಧರನು ಈಗಲೂ ಎಂದಿನಂತೆ ಸಂತೋಷಚಿತ್ತನಾಗಿದ್ದಂತೆ ಕಂಡುಬಂದರೂ ಕ್ರಮೇಣ ಚಿಂತಾ ಶೀಲನಾದನು. ಈ ಸಮಯದಲ್ಲಿಯೇ ಎಷ್ಟೋ ಜನರು ಆ ಗ್ರಾಮದ ಹರಣದ ಸ್ಮಶಾನ, ಮಾಣಿಕರಾಜನ ಮಾಸಿನತೋಟ ಮುಂತಾದ ನಿರ್ಜನ ಪ್ರದೇಶದಲ್ಲಿ ಏನೋ ಯೋಚನೆಮಾಡುತ್ತಾ ಅವನು ತಿರುಗುತ್ತಿದ್ದದ್ದನ್ನು ನೋಡುತ್ತಿದ್ದರು. ತಾಯಿಯ ದುಃಖವನ್ನು ನೋಡಿ ಆಕೆಯಲ್ಲಿ ಪ್ರೀತಿಯು ಇನ್ನೂ ಹೆಚ್ಚಾಯಿತು. ಮನೆ ಗೆಲಸ ಗಳಲ್ಲಿಯೂ ಪೂಜೆ ಪುರಸ್ಕಾರಗಳಲ್ಲಿಯೂ ಆಕೆಗೆ ಸಹಾಯಕ ನಾಗಿದ್ದು ಯಾವಾಗಲೂ ಆಕೆಗೆ ಸಮಾಧಾನವಾಗುವಂತೆ ವರ್ತಿಸು ಆದನು. ಯಾವುದರಲ್ಲಿಯ ಮೊದಲಿನಂತೆ ಹಟ ಮಾಡುತ್ತಿರ ಲಿಲ್ಲ. ಏಕೆಂದರೆ ತನಗೆ ಬೇಕಾದದನ್ನು ಚಂದ್ರಾದೇವಿಯು ಮಾಡಿ ಕೊಡಲಾರದೆ ಹೋದರೆ ಹಿಂದಿನ ಸ್ಥಿತಿಯನ್ನು ನೆನಸಿಕೊಂಡು ಆಳುತ್ತಿದಳು. ಇದನ್ನು ಕಂಡರೆ ಅವನಿಗೆ ಬಹಳವಾಗಿ ದುಃಖ ವಾಗುತ್ತಿತ್ತು. ಮುಖ್ಯವಾಗಿ ಪಿತೃವಿಯೋಗದಿಂದ ತಾಯಿಯನ್ನು ಎಂದಿಗೂ ಕೈಬಿಡಬಾರದೆಂದೂ ಸರ್ವವಿಧದಲ್ಲಿಯೂ ಅವಳ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕೆಂದೂ ಮನಸ್ಸಿನಲ್ಲಿ ವೃಢಸಂಕಲ್ಪ ವುಂಟಾಯಿತು.

ಮನಸ್ಸು ಸ್ವಲ್ಪ ಸಮಾಧಾನಕ್ಕೆ ಬಂದ ಮೇಲೆ ಮತ್ತೆ ಪಾಠ ಶಾಲೆಗೆ ಹೋಗಲು ಮೊದಲು ಮಾಡಿದನು. ಆದರೆ ಪುರಾಣ ಪುಣ್ಯ ಕಥೆಗಳನ್ನೂ ಭಜನೆಕೀರ್ತನೆಗಳನ್ನೂ ಕೇಳುವುದು ದೇವದೇವಿಯರ ವಿಗ್ರಹಗಳನ್ನೂ ಮಾಡುವುದು ಇವುಗಳ ಮೇಲೆ ಅವನಿಗಿದ್ದ ಅಭಿಲಾಷೆಯು ಹೆಚ್ಚಾಯಿತು. ಈ ಕೆಲಸದಲ್ಲಿದ್ದಾಗ ತಂದೆಸತ್ತ ದುಃಖವೂ ಬಹಳಮಟ್ಟಿಗೆ ಕಡಿಮೆ ಯಾಗುತ್ತಿದ್ದದರಿಂದಲೇ ಅವುಗಳಲ್ಲಿ ಹೆಚ್ಚು ಅಭ್ಯಾಸಕ್ಕೂ ಆಸಕ್ತಿಗೂ ಅವಕಾಶ ನಾಯಿತೆಂದು ತೋರುತ್ತದೆ.

ಗದಾಧರನ ವಿಚಿತ್ರವಾದ ಸ್ವಭಾವವು ಈ ಸಮಯದಲ್ಲಿ ಇನ್ನೊಂದು ವಿಧವಾಗಿ ಪ್ರಕಟವಾಯಿತು. ಕಾಮಾರಪು ಕುರದ ಹತ್ತಿರ ಜಗನ್ನಾಥಕ್ಕೆ ಹೋಗುವ ದಾರಿಯಿತ್ತು. ಇಲ್ಲಿ ಜಮೀನ್‌ದಾರನಾದ ಧರ್ಮದಾಸ ಲಾಹಾಬಾಬುವು ಒಂದುಛತ್ರವನ್ನು ಕಟ್ಟಿಸಿದ್ದನಾದ ಕಾರಣ ಅನೇಕ ಯಾತ್ರಿಕರೂ ಸಾಧುಸನ್ಯಾಸಿಗಳೂ ಇಲ್ಲಿ ಇಳಿದುಕೊಳ್ಳುತ್ತಿದ್ದರು. ಗದಾಧರನಿಗೆ ಸಂಸಾರವು ಅನಿತ್ಯವೆಂದು ಆಗಲೇ ಕಿವಿಗೆ ಬಿದ್ದಿತ್ತು. ತಂದೆಯ ಸಾವನ್ನು ನೋಡಿ ಅದು ಇನ್ನಷ್ಟು ಮುಂದಾಯಿತು. ಸಾಧು ಸಂಗದಿಂದಲೇ ಮನುಷ್ಯನು ಕೃತಾರ್ಥನಾಗಿ ರಾಂತಿಯನ್ನು ಪಡೆಯುವನೆಂದು ಪುರಾಣಗಳಲ್ಲಿ ಕೇಳಿದರಿಂದ ಈ ಸಾಧುಗಳನ್ನು ನೋಡುವ ಉದ್ದೇಶವಾಗಿ ಛತ್ರಕ್ಕೆ ಹೋಗಿ ಬರುತ್ತ ಅವರ ವೈರಾಗ್ಯ ಭಕ್ತಿ ಇವೆಲ್ಲವನ್ನು ಮೆಚ್ಚುತ್ತ ಬಂದನು. ಮೆಲ್ಲಗೆ ಅವರ ಸಹವಾಸವಾಯಿತು. ಅವರೂ ಇವನನ್ನು ಕಂಡು ಪ್ರೀತಿಸುತ್ತಾ ಅವನಿಗೆ ತಾವು ಮಾಡಿದ ತಿಂಡಿತೀರ್ಥಗಳನ್ನೂ ಕೊಡುತ್ತಾ ಇದ್ದರು. ಒಂದೊಂದು ದಿನ ಅವನು ಮೈಗೆಲ್ಲಾ ವಿಭೂತಿಯನ್ನು ಬಳಿದುಕೊಂಡು ಇಲ್ಲವೇ ನಾಮಗಳನ್ನಿಟ್ಟುಕೊಂಡು ಮನೆಗೆ ಬರುವನು, ಅಥವಾ ಉಟ್ಟ ಪಂಚೆಯನ್ನು ಹರಿದು ಕೊಪೀನವನ್ನು ಹಾಕಿಕೊಂಡು ಬಂದು “ ಅಮ್ಮಾ ಆ ಸಾಧು ನನಗೆ ಹೇಗೆಪಂಚೆ ಉಡಿಸಿದ್ದಾನೆ ನೋಡಿದೆಯಾ? " ಎಂದು ಕೇಳುವನು. ಇದನ್ನು ನೋಡಿ ಚಂದ್ರಾದೇವಿಗೆ ತನ್ನ ಮುದ್ದು ಮಗುವನ್ನು ಯಾವ ಬೈರಾಗಿಯು ಎಳೆದುಕೊಂಡು ಹೋಗಿ ಬಿಡುವನೋ ಎಂಬ ಚಿಂತೆಹತ್ತಿತು. ಈ ಸಮಯದಲ್ಲಿಯೇ ಒಂದುದಿನ ಆ ಊರಿನ ಹತ್ತಿರವಿದ್ದ ವಿಶಾಲಾಕ್ಷೆಯಗುಡಿಗೆ ಕೆಲವರು ಹೆಂಗಸರು ಹೊಗುತ್ತಿರಲು ಗದಾಧರನೂ ಹೊರಟನು. ದಾರಿಯಲ್ಲಿ ಅವರು ಹೇಳುತ್ತಿದ್ದ ದೇವಿಯಮೇಲಣ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಅವನ ಅ೦ಗಾ೦ಗಗಳೆಲ್ಲವೂ ನಿಶ್ಚಲವಾದುವು. ಕಣ್ಯಗಳಲ್ಲಿ ದಳದಳನೆ ನೀರುಸುರಿಯುವುದಕ್ಕೆ ಆರಂಭವಾಯಿತು. ಜೊತೆಯಲ್ಲಿದ್ದವರಿಗೆ ಗಾಬರಿಯಾದರೂ ಅವನುಮಾತ್ರ " ದೇವಿಯಧ್ಯಾನ ಮಾಡುತ್ತ ಮಾಡುತ್ತ ಅವಳ ಪಾದ ಪದ್ಯಗಳಲ್ಲಿ ಮನಸ್ಸು ಲಯವಾಗಿ ಹಾಗಾಯಿತು" ಎಂದು ಹೇಳಿದನು.

ಗದಾಧರನಿಗೆ ಆಗಲೇ ಒಂಬತ್ತು ವರ್ಷ ತುಂಬಿಹೋದದನ್ನು ನೋಡಿ ರಾಮಕುಮಾರನು ಅವನಿಗೆ ಉಪನಯನ ಮಾಡಬೇಕೆಂದು ನಿಶ್ಚಯಿಸಿ ಅದಕ್ಕೆ ಬೇಕಾದ ಏರ್ಪಾಡು ಮಾಡುತಿದ್ದನು. ಇವರ ಮನೆಯ ಹತ್ತಿರ ಧನಿ ಎಂಬ ಹೆಂಗಸು ಇದಳೆಂದು ಹಿಂದೆಯೇ ಹೇಳಿದ್ದೇವೆ. ಆಕೆಯು ಕಮ್ಮಾರ ಜಾತಿಯವಳು. ಆದರೆ ಗದಾಧರನು ಹುಟ್ಟಿದಂದಿನಿಂದ ಅವನನ್ನು ಎತ್ತಿ ಆಡಿಸಿ ಅವನಿಗೆ ಬಹು ಬೇಕಾದವಳಾಗಿದ್ದಳು. ಒಂದುದಿವಸ ತಾನು ಗದಾಧರನ ಉಪನಯನ ಕಾಲದಲ್ಲಿ ಅವನಿಗೆ ಭಿಕ್ಷಾ ಮಾತೆಯಾಗಿ ತಾನು ಮೊದಲು ಭಿಕ್ಷವನ್ನು ಹಾಕಬೇಕೆಂದು ಕೇಳಿಕೊ೦ಡಿದಳು. ಗದಾಧರನು ಅವಳ ಅಕೃತ್ರಿಮವಾದ ವಿಶ್ವಾಸಮೆಚ್ಚಿ ಒಪ್ಪಿಕೊಂಡಿದ್ದನು. ಧನಿಯೂ ಅವನ ಮಾತಿನಲ್ಲಿ ನಂಬುಗೆಯಿಟ್ಟು ಕಾಸಿಗೆಕಾಸು ಗಂಟು ಹಾಕಿ ಈ ಸಮಯವನ್ನೆ ಎದುರುನೋಡುತ್ತಿದಳು. ಉಪನಯನ ನಿಶ್ಚಯವಾದದ್ದನ್ನು ನೋಡಿ ಗದಾಧರನೂ ರಾಮಕುಮಾರನೊಡನೆ ಈ ಪ್ರಸ್ತಾಪವನ್ನೆತ್ತಿದನು. ಇದು ವೈದಿಕಾಚಾರಕ್ಕೂ ಸತ್ಸಂಪ್ರದಾಯಕ್ಕೂ ವಿರೋಧವಾಗಿದ್ದದ್ದರಿಂದ ರಾಮಕುಮಾರನು ಒಪ್ಪಲಿಲ್ಲ. ಗದಾಧರನು ಬಿಡಲಿಲ್ಲ. ಅವನು "ನಾನು ಮಿಥ್ಯಾವಾದಿಯಾಗುವೆನಲ್ಲವೆ? ಸುಳ್ಳು ಹೇಳುವವನು ಉಪನಯನ ಮಾಡಿಕೊಳ್ಳುವುದಕ್ಕೆ ಎಂದಿಗೂ ಯೋಗ್ಯ ನಲ್ಲ" ಎಂದು ಹೇಳಿ ಹಟಹಿಡಿದನು. ಕೊನೆಗೆ ಅವರ ತಂದೆಗೆ ಸ್ನೇಹಿತನಾಗಿದ್ದ ಧರ್ಮದಾಸ ಲಾಹಾಬಾಬುವಿನ ಹೇಳಿಕೆಯಂತೆ ರಾಮಕುಮಾರನೇ ಸೋಲಬೇಕಾಯಿತು. ಯಥಾಕಾಲದಲ್ಲಿ ಉಪನಯನವು ನಡೆದುಹೋಯಿತು. ಧನಿಯು ಭಿಕ್ಷಾಮಾತೆಯಾಗಿ ಕೃತಕೃತ್ಯಳಾದಳು.

ಉಪನಯನವಾದ ಸ್ವಲ್ಪ ಕಾಲದಲ್ಲಿಯೇ ಗದಾಧರನ ಅಸಾಧಾರಣ ಬುದ್ಧಿ ಶಕ್ತಿಯನ್ನು ತೋರಿಸುವ ಒಂದು ಘಟನೆಯ ನಡೆಯಿತು. ಮೇಲೆ ಹೇಳಿದ ಧರ್ಮದಾಸ ಬಾಬುವಿನ ಮನೆಯಲ್ಲಿ ಯಾವುದೋ ಒಂದು ವಿಶೇಷದಿವಸ ಅನೇಕ ಪಂಡಿತರು ಬಂದು ಸೇರಿದ್ದರು. ಶಾಸ್ತ್ರವಿಷಯವಾದ ಚರ್ಚೆಗೆ ಆರಂಭವಾಯಿತು. ಎಷ್ಟು ಚರ್ಚೆಮಾಡಿದರೂ ಯಾವವಿಧದಲ್ಲಿಯೂ ವ್ಯವಸ್ಥೆಯಾಗಲಿಲ್ಲ. ಗದಾಧರನಂತೆ ಅಲ್ಲಿ ಅನೇಕ ಹುಡುಗರು ಬಂದು ನೆರೆದಿದ್ದರು. ಅವರು ಆಟಪಾಟಗಳನ್ನು ಆಡುತ್ತಲೋ ಪಂಡಿತರನ್ನು ಅಣಕಿಸುತ್ತಲೋ ಇಲ್ಲವೇ ಪಿಳಪಿಳನೆ ಕಣ್ಣು ಬಿಟ್ಟು ಕೊಂಡೋ ಕುಳಿತಿದ್ದರು. ಆದರೆ ಗದಾಧರನುಮಾತ್ರ ಶಾಸ್ತ್ರವಿಚಾರಕ್ಕೆ ಗಮನಕೊಟ್ಟು ಕೇಳುತ್ತಿದ್ದು ಎಲ್ಲವನ್ನೂ ಗ್ರಹಿಸಿ ಅವರ ವಾದಾನುವಾದವು ಕೊನೆಮುಟ್ಟದಿರಲು, ತನಗೆ ತೋರಿದ ಒಂದು ತೀರ್ಮಾನವನ್ನು ಹೇಳಿದನು. ಇದು ಕೇವಲ ತೃಪ್ತಿಕರವಾಗಿದ್ದದ್ದರಿಂದ ಪಂಡಿತರೆಲ್ಲರೂ ಆಶ್ಚರ್ಯಪಟ್ಟು ಖಂಡಿತವಾಗಿಯೂ ಅವನು ದೇವಾಂಶಸಂಭೂತನಾಗಿರಬೇಕೆಂದು ಹೊಗಳಿ ಆಶೀರ್ವಾದಮಾಡಿ ಕಳುಹಿಸಿದರು.

ಪಾಠಕರಿಗೆ ಇದು ಶುದ್ಧಾಂಗವಾಗಿ ಅಸಂಭವವೆಂದು ತೋರಬಹುದು. ಆದರೆ ಇಂಥ ಘಟನೆಗಳು ಇತರ ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿಯೂ ಕಂಡುಬರುವುದು. ಏಸು ಕ್ರಿಸ್ತನು ಹನ್ನೆರಡುವರ್ಷದ ಹುಡುಗನಾಗಿದ್ದಾಗ ಜೆರುಸಲೇಮಿನಲ್ಲಿ ಇದರಂತೆಯೇ ಪಂಡಿತರು ಚರ್ಚೆಮಾಡುತ್ತಿದ್ದ ಯಾವುದೋ ಒಂದು ವಿಷಯದಲ್ಲಿ ಸಮಾಧಾನ ಹೇಳಿದಂತೆ ಬೈಬಲಿನಲ್ಲಿ ಹೇಳಿದೆ. ಹೀಗೆಯೇ ಇತರ ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿಯೂ ಈ ವಿಧವಾದ ಘಟನೆಗಳು ಕಂಡುಬರುತ್ತವೆ. ಹಾಗಾದರೆ ಅವತಾರಪುರುಷರ ಜೀವನಚರಿತ್ರೆಗಳನ್ನು ಬರೆದ ಮಹನೀಯರೆಲ್ಲರೂ ಮಸಲತ್ತು ಮಾಡಿಕೊಂಡು ಒಂದೇವಿಧವಾದ ಸುಳ್ಳನ್ನು ಎಲ್ಲರೂ ಬರೆದಿದ್ದಾರೆಯೆ ?

ಅದೇವರ್ಷ ಶಿವರಾತ್ರಿಯದಿವಸ ಗದಾಧರನ ಜೊತೆಗಾರರಾದ ಕೆಲವು ಹುಡುಗರು ಆ ಗ್ರಾಮದ ಒಬ್ಬ ದೊಡ್ಡ ಮನುಷ್ಯನಾದ ಸೀಥಾನಾಥಪಾಯಿನ್ ಎಂಬಾತನ ಮನೆಯಲ್ಲಿ ಒಂದು ಶಿವಕಥೆಯನ್ನು ಆಟವಾಡಬೇಕೆಂದು ನಿಶ್ಚಯಿಸಿ ಶಿವನವೇಷ ಹಾಕುವುದಕ್ಕೆ ಗದಾಧರನನ್ನು ಕರೆದುಕೊಂಡು ಹೋದರು. ಗದಾಧರನು ಮೊದಲು ತಾನುಮನೆಯಲ್ಲಿ ಮಾಡುತ್ತಿದ್ದ ಪೂಜೆಯನ್ನು ಬಿಟ್ಟು ಬರುವುದಕ್ಕೆ ಒಪ್ಪಲಿಲ್ಲ. ಹುಡುಗರು ಶಿವನವೇಷವನ್ನು ಹಾಕಿಕೊಂಡರೆ ಯಾವಾಗಲೂ ಶಿವನ ಧ್ಯಾನದಲ್ಲಿಯೇ ಇರಬೇಕಾಗುವುದು, ಅದು ಪೂಜೆಂತಲೂ ಯಾವವಿಧದಲ್ಲಿಯೂ ಕಡಮೆಯಾದುದಲ್ಲ ಎಂದು ಹೇಳಿ ಒಪ್ಪಿಸಿದರು. ಆದರೆ ಶಿವನ ವೇಷವನ್ನು ಹಾಕಿಕೊಂಡ ಕೂಡಲೆ ಗದಾಧರನು ಶಿವನಧ್ಯಾನದಲ್ಲಿ ತನ್ಮಯನಾಗಿ ಹೋಗಲು ಬಾಹ್ಯಸಂಜ್ಞೆಯು ಲೋಪವಾಗಿ ಹೋಯಿತ.. ಎಷ್ಟು ಹೊತ್ತಾದರೂ ಪ್ರಜ್ಞೆ ಬರಲೇಯಿಲ್ಲ. ಅ೦ದಿನ ಆಟ ನಿಂತುಹೋಯಿತು.

ಇಲ್ಲಿಂದಮುಂದಕ್ಕೆ ಈ ವಿಧವಾದ "ಭಾವಸಮಾಧಿ” ಯು ಆಗಾಗ್ಗೆ ಆಗುತ್ತಿತ್ತು. ದೇವರನ್ನು ಧ್ಯಾನ ಅಥವಾ ಭಜನೆ ಮಾಡುತ್ತಿರುವಾಗ ಮನಸ್ಸು ಅದರಲ್ಲೇ ಪೂರ್ಣವಾಗಿ ನಿಂತು ಹೋಗಲು, ಬಾಹ್ಯ ಜಗತ್ತೆ ಮರೆತು ಹೋಗುತ್ತಿತ್ತು. ಒಂದೊಂದುಸಾರಿ ಒಂದೆರಡು ದಿವಸಗಳವರೆಗೂ ಪ್ರಜ್ಞೆ ಬರುತ್ತಲೇಇರಲಿಲ್ಲ. ಬಂದ ಮೇಲೆ ಅವನಿಗೆ ಏನಾಗುತ್ತಿತ್ತೆಂದು ಕೇಳಿದರೆ ಯಾವದೇವತೆಯ ವಿಚಾರವಾಗಿ ಧ್ಯಾನಮಾಡುತ್ತಿದ್ದನೋ ಆ ದೇವತೆಯ ವಿಷಯಕವಾದ ಒಂದು ವಿಧವಾದ ದಿವ್ಯ ದರ್ಶನವಾಗುತ್ತಿತ್ತೆಂದು ಹೇಳುವನು. ಚಂದ್ರಾದೇವಿ ಮುಂತಾದವರು ಮೊದಲು ಮೊದಲು ಇದನ್ನು ಕಂಡು ಹೆದರುತ್ತಿದ್ದರೂ, ಗದಾಧರನ ದೇಹಾರೋಗ್ಯವು ಯಾವರೀತಿಯಲ್ಲಿಯೂ ಕೆಡದಿದದನ್ನ ನೋಡಿ ಆಮೇಲೆ ಅಷ್ಟು ಲಕ್ಷ್ಯಮಾಡುತ್ತಿರಲಿಲ್ಲ. ಕ್ರಮೇಣ ಈ ವಿಧವಾದ ಭಾವಸಮಾಧಿಯ. ಅವನಿಗೆ ಅಭಾಸವಾಗಿ ಇಷ್ಟ ಪಟ್ಟಾಗ ಬರುವಂತಾಯಿತು.

ಇವನ ಧರ್ಮಪ್ರವೃತ್ತಿಯು ಅಭಿವೃದ್ಧಿಯಾದಂತೆ ವಿದ್ಯಾಭ್ಯಾಸ ಮಾತ್ರ ವೃದ್ಧಿ ಹೊಂದಲಿಲ್ಲ. ಪಂಡಿತ ಭಟ್ಟಾಚಾರಮುಂತಾದ ಬಿರುದುಗಳನ್ನು ಪಡೆಯುವುದು ಕೇವಲ ಧನದಾಸೆಯಿಂದಾಗಲೀ ಅಥವಾ ಐಹಿಕ ಭೋಗಸುಖಗಳನ್ನು ಪಡೆಯುವುದಕ್ಕಾಗಲೀ ಸಾಧನಗಳೆಂದು ತಿಳಿದು ಲೌಕಿಕ ಸಿದ್ಯಾಭ್ಯಾಸ ವಿಚಾರದಲ್ಲಿ ಅವನು ಉದಾಸೀನನಾದನು. ಅದಕ್ಕೆ ಬದಲಾಗಿ ತನ್ನ ತಂದೆಯ ವೈರಾಗ್ಯ, ದೇವಭಕ್ತಿ, ಸತ್ಯ, ಸದಾಚಾರ, ಧರ್ಮ ಪಾರಾಯಣತೆ ಇನೇ ಅವನಿಗೆ ಅಭ್ಯಾಸಕ್ಕೆ ಯೋಗ್ಯವಾಗಿ ಕಂಡುಬಂದುವು. ಪ್ರಪಂಚದಲ್ಲಿ ಎಲ್ಲರೂ ಅನಿತ್ಯವಾದ ಸಂಸಾರವನ್ನು ನಿತ್ಯವೆಂದು ಭ್ರಮೆಗೊಂಡು, ಸರ್ವದಾ ದುಃಖಸಾಗರದಲ್ಲಿ ಮುಳುಗಿರುವರೆಂದು ತಿಳಿದು ಅವನನನಸ್ಸಿಗೆ ತುಂಬ ಕೊರತೆಯಾಯಿತು. ಪಾಠಕರು ಇದನ್ನು ಓದಿ “ ಹನ್ನೆರಡು ವರ್ಷದ ಹುಡುಗನಿಗೆ ಇಷ್ಟು ಸೂಕ್ಷ್ಮ ಬುದ್ದಿಯೂ, ವಿಚಾರಶಕ್ತಿಯೂ ಎಲ್ಲಿಯಾದರೂ ಇರಬಹುದೇ? ” ಎಂದು ಆಕ್ಷೇಪಿಸಬಹುದು. ಸಾಧಾರಣವಾದ ಹುಡುಗರಿಗೆ ಎಂದಿಗೂ ಇರುವುದಿಲ್ಲ. ನಿಜ. ಆದರೆ ಗದಾಧರನು ಸಾಮಾನ್ಯ ಹುಡುಗನೇ? ಅವನು ಅಸಾಧಾರಣ ಬುದ್ದಿ ಮತ್ತು ಮಾನಸಿಕ ಸಂಸ್ಕಾರಗಳೊಡನೆಯೇ ಜನ್ಮಗ್ರಹಣ ಮಾಡಿದನು. ವಯಸ್ಸು ಚಿಕ್ಕದಾದರೂ ಆ ಶಕ್ತಿ ಎಲ್ಲಿಹೋದೀತು ? ಅಂತೂ ಪಾಠಶಾಲೆಗೆ ಆಗ್ಗಾಗ್ಗೆ ಹೋಗಿಬರುತ್ತಿದ್ದು ತನ್ನ ಮಾತೃಭಾಷೆಯಲ್ಲಿ ಬರೆದ ಅಥವಾ ಅಚ್ಚು ಹಾಕಿದ ಯಾವ ಪುಸ್ತಕವನ್ನು ಕೊಟ್ಟರೂ ಚೆನ್ನಾಗಿ ಓದುವ ಮಟ್ಟಿಗೆ ಕಲಿತು ಕೊಂಡನು. ಅದರಲ್ಲಿಯೂ ರಾಮಾಯಣ ಮಹಾಭಾರತಾದಿ ಗ್ರಂಥಗಳನ್ನು ಭಕ್ತಿ ಪೂರ್ವಕವಾಗಿಯೂ ಬಲುಸೊಗಸಾಗಿಯೂ ಓದಬಲ್ಲವನಾಗಿದ್ದನು. ಇದನ್ನು ಕೇಳಿ, ಆ ಗ್ರಾಮದ ಜನರು ಆನಂದದಲ್ಲಿ ಮುಳುಗಿ ಹೋಗುತ್ತಿದ್ದರು. ಆಗ್ಗಾಗ್ಗೆ ಅನೇಕರು ಅವನನ್ನು ತಮ್ಮಮನೆಗೆ ಕರೆಸಿಕೊಂಡು ಪ್ರಹ್ಲಾದ ಚರಿತ್ರೆ, ಧ್ರುವೋಪಾಖ್ಯಾನ ಮುಂತಾದ ಕಥೆಗಳನ್ನು ಓದಿಸಿ, ಕೇಳಿ, ಆನಂದಪಡುತ್ತಿದ್ದರು.

ಮತ್ತೆರಡು ವರ್ಷಗಳು ಕಳೆದುವು. ಆಗ ಗದಾಧರನ ಅಣ್ಣನಾದ ರಾಮೇಶ್ವರ, ತಂಗಿಯಾದ ಸರ್ವಮಂಗಳೆ ಇವರ ಮದುವೆಯಾಯಿತು. ಈಮಧ್ಯೆ ರಾಮಕುಮಾರನ ಹೆಂಡತಿಯು ಅಕ್ಷಯನೆಂಬ ಗಂಡುಮಗುವನ್ನು ಹೆತ್ತು ಸ್ವರ್ಗಸ್ಥಳಾದಳು. ರಾಮ ಕುಮಾರನ ದರಿದ್ರ ಸಂಸಾರದಲ್ಲಿ ಮತ್ತೆ ಶೋಕ ಬಂದು ತುಂಬಿಕೊ೦ಡಿತು. ಅದರ ಜೊತೆಯಲ್ಲಿಯೇ ಏನುಕಾರಣದಿಂದಲೋ ಅವನ ಆದಾಯವು ಬಹಳಮಟ್ಟಿಗೆ ಕಡಿಮೆಯಾಗಿ ಕಡಿಮೆಯಾಗಿ ಹೋಗಿ ಸಂಸಾರ ನಡೆಸುವುದೇ ಕಷ್ಟವಾಯಿತು. ಸಾಲ ಸೂಲಗಳಾದುವು. ಅದನ್ನು ತೀರಿಸುವುದಕ್ಕೆ ಯಾವಮಾರ್ಗವೂ ತೋರದೆ ರಾಮ ಕುಮಾರನು ಊರುಬಿಟ್ಟು ಹೊರಗಡೆ ಎಲ್ಲಿಯಾದರೂ ಹೋದರೆ ಸಂಪಾದನೆಯಾಗಬಹುದೆಂದು ಯೋಚಿಸಿದನು. ಬೇರೆ ಎಲ್ಲಿಯಾದರೂ ಹೋದರೆ ಪವಿಯೋಗದಿಂದ ಉಂಟಾದ ದುಃಖವೂ ಸ್ವಲ್ಪ ಕಡಿಮೆಯಾಗುವ ಸಂಭವವಿತ್ತು. ಆದ್ದರಿಂದ ಅವನು ತನ್ನ ಹೆಂಡತಿ ಸತ್ತ ಸ್ವಲ್ಪ ದಿನಗಳಲ್ಲಿಯೇ ರಾಮೇಶ್ವರನಿಗೆ ಸಂಸಾರವನ್ನು ಒಪ್ಪಿಸಿ ಕಲಕತ್ತೆಗೆ ಹೋಗಿ ಅಲ್ಲಿ ಒಂದು ಸಣ್ಣ ಪಾಠಶಾಲೆಯನ್ನು ಹಾಕಿಕೊಂಡನು.

ಇತ್ತ ಶ್ರೀಮತಿ ಚಂದ್ರಾದೇವಿಯಮೇಲೆ ಮನೆಗೆಲಸಗಳೆಲ್ಲವೂ ಬಿದ್ದುವು. ಹಾಲ ಹಸುಳೆಯಾದ ಅಕ್ಷಯನ ಯೋಗಕ್ಷೇಮವೂ ಅವಳ ತಲೆಗೇ ಕಟ್ಟಿತು. ರಾಮೇಶ್ವರನ ಹೆಂಡತಿ ಮನೆಗೆ ಬಂದಿದ್ದರೂ ಅವಳಿನ್ನೂ ಹುಡುಗಿಯಾಗಿದ್ದದ್ದರಿಂದ ಅವಳಿಂದ ಹೆಚ್ಚಿನ ಸಹಾಯನಾಗುತ್ತಿರಲಿಲ್ಲ. ಆದರೂ ಆಕೆಯು ಇವೆಲ್ಲವೂ ರಘುವೀರನ ಇಚ್ಛೆಯೆಂದು ಅಂದುಕೊಳ್ಳುತ್ತ ಕಾಲವನ್ನು ಕಳೆಯುತ್ತಿದ್ದಳು. ರಾಮೇಶ್ವರನು ಅಲ್ಪ ಸ್ವಲ್ಪಮಟ್ಟಿಗೆ ವಿದ್ಯೆಯನ್ನು ಕಲಿತಿದ್ದರೂ ಅವನಿಗೆ ಯಾವವಿಧವಾದ ಸಂಪಾದನೆಯೂ ಇರಲಿಲ್ಲ. ಸಾಲದ್ದಕ್ಕೆ ಯಾರಾದರೂ ಸಾಧುಸನ್ಯಾಸಿಗಳನ್ನು ಕಂಡರೆ ಅವರೊಡನೆ ಕಾಲಕಳೆದು, ಬಿಡುತ್ತಿದ್ದನಲ್ಲದೆ ಅವರಿಗೆ ಏನು ಬೇಕಾದರೂ ಅದನ್ನು ಮನೆಯಿಂದ ತೆಗೆದುಕೊಂಡು ಹೋಗಿ ಕೊಟ್ಟು ಬಿಡುತ್ತಿದ್ದನು. ಯಾರಾದರೂ ಕೇಳಿದರೆ ರಘುವೀರನು ಹೇಗೋ ನಡೆಸುತ್ತಾನೆ ಎಂದು ಹೇಳಿ ಬಿಡುತ್ತಿದ್ದನು. ಅವನಿಗೆ ಗದಾಧರನನ್ನು ಕಂಡರೆ ಬಹು ಪ್ರೇಮವಾದರೂ ಅವನು ಪಾಠಶಾಲೆಗೆ ಹೋದನೋ, ಬಿಟ್ಟನೋ, ಓದುತ್ತಿದ್ದನೋ ಇಲ್ಲವೋ ಎಂಬ ವಿಚಾರಕ್ಕೆ ಗಮನವನ್ನೇ ಕೊಡುತ್ತಿರಲಿಲ್ಲ. ಕೆಲವ ದಿನಗಳಲ್ಲಿಯೇ ಪಾಠಶಾಲೆಯಲ್ಲಿ ಓದುವುದು ನಿಷ್ಪಲವೆಂದು ಗದಾಧರನ ಮನಸ್ಸಿಗೆ ನಿರ್ಧರವಾಗಿ ಅವನು ಪಾಠಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟನು. ಈ ವಿಷಯದಲ್ಲಿಯೂ ರಾಮೇಶ್ವರನು ಆಕ್ಷೇಪಣೆಯನ್ನು ಮಾಡಲಿಲ್ಲ.

ಈಗ ರಾಮಕುಮಾರನು ಕಲ್ಕತ್ತೆಯಲ್ಲಿ ಪಾಠಶಾಲೆಯನ್ನು ಹೂಡಿ ಮೂರು ವರ್ಷಗಳಾಗಿದ್ದುವು. ಹುಡುಗರ ಸಂಖ್ಯೆಯು ಹೆಚ್ಚಿದ್ದರಿಂದ ಸಹಾಯಕ್ಕೆ ಮತ್ತಾರಾದರೂ ಒಬ್ಬರು ಬೇಕಾಗಿ ಬಂತು. ಅಲ್ಲದೆ ಗದಾಧರನಿಗೆ ಹದಿನಾರು ವರ್ಷತುಂಬಿದ್ದರೂ ಅವನಿಗೆ ಸಾಕಾದಷ್ಟು ವಿದ್ಯೆ ಬಾರದಿರುವುದನ್ನೂ ಅವನು ಪಾಠಶಾಲೆಯನ್ನು ಬಿಟ್ಟು ಪುರಾಣ ಪುಣ್ಯ ಕಥೆಗಳನ್ನು ಓದುವುದರಲ್ಲಿಯೂ ಕೀರ್ಥನೆ ಭಜನೆಗಳಲ್ಲಿಯೂ ಕಾಲ ಕಳೆಯುತ್ತಿದ್ದದ್ದನ್ನೂ ನೋಡಿ ಅವನು ತನ್ನ ಜೊತೆಯಲ್ಲಿದ್ದರೆ ಸ್ವಲ್ಪ ಬುದ್ದಿವಂತನಾಗಬಹುದೆಂದೂ ತನಗೂ ಸಹಾಯ ದೊರೆತಂತಾಗುವದೆಂದೂ ಯೋಚಿಸಿ, ರಾಮಕುಮಾರನು
ಗದಾಧರನನ್ನು ಕಲ್ಕತ್ತೆಗೆ ಕರೆದುಕೊಂಡು ಹೋದನು.


  1. ಅವರ ನೆರೆಯಲ್ಲಿ ಪರಿಚಿತಳಾಗಿದ್ದ ಒಬ್ಬ ಕಮ್ಮಾರ ಜಾತಿಯ ಹೆಂಗಸು.