ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

 

 

ಶ್ರೀ ರಾಮಕೃಷ್ಣಾಶ್ರಮ ಗ್ರಂಥಮಾಲಾ ೩ಶ್ರೀ

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ


ಟಿ. ಎಸ್. ವೆಂಕಣ್ಣಯ್ಯ, ಎಂ. ಎ.

ಮತ್ತು

ಎ. ಆರ್. ಕೃಷ್ಣಶಾಸ್ತ್ರೀ, ಬಿ. ಎ.

ಇವರಿಂದ ರಚಿಸಲ್ಪಟ್ಟಿದೆ.

ಪ್ರಥಮ ಮುದ್ರಣ ೧,೦೦೦ ಪ್ರತಿಗಳು

ಬೆಂಗಳೂರು

೧೯೧೯

ರಿಜಸ್ಟರ್ಡ ಕಾಪಿರೈಟ್]
[ಕ್ರಯ ೮ ಆಣೆ
 
 

 

ವಿಜ್ಞಾಪನೆ.

_________

ಶ್ರೀ ಶ್ರೀರಾಮಕೃಷ್ಣ ಪರಮಹಂಸರವರು, "ಬ್ರಹ್ಮಸಾಕ್ಷಾತ್ಕಾರವಾಗದೆ ವೇದಾಂತ ವಿಚಾರವನ್ನು ಗ್ರಂಥಗಳಲ್ಲಿ ಓದಿಕೊಂಡು ಪರಮಾತ್ಮನ ಸ್ವರೂಪವನ್ನು ಕುರಿತು ವಿಚಾರಮಾಡುವುದು, ಭೂಪಠದಲ್ಲಿ ಕಾಶೀಪಟ್ಟಣವನ್ನು ನೋಡಿ ಅದನ್ನು ವರ್ಣನೆ ಮಾಡುವಹಾಗೆ” ಎಂದು ಹೇಳುತ್ತಿದ್ದರು. ನಾವು ಅವರ ಜೀವನ ಚರಿತ್ರೆಯನ್ನು ಬರೆಯುವುದಕ್ಕೆ ಹೊರಟಿರುವುದೂ ಸ್ವಲ್ಪ ಮಟ್ಟಿಗೆ ಹಾಗೆಯೇ ಆಗಿದೆ. ನಮಗೆ ಆ ಮಹಾನುಭಾವರ ಸಾನ್ನಿಧ್ಯದಲ್ಲಿಯೇ ಇದ್ದುಕೊಂಡು ಅವರ ಸಂಗತಿಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ಪುಣ್ಯವು ಲಭಿಸಲಿಲ್ಲ. ಅವರು ಹೇಳಿರುವ ವಿಚಾರಗಳನ್ನು ಪೂರ್ಣವಾಗಿ ಗ್ರಹಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಆದರೂ ಬೆಂಗಳೂರಿನ ಶ್ರೀರಾಮ ಕೃಷ್ಣ ಮಠದಲ್ಲಿರುವ ಶ್ರೀನಿರ್ಮಲಾನಂದ ಸ್ವಾಮಿಗಳ ಆಜ್ಞೆಯಂತೆ ಈ ಕೆಲಸವನ್ನು ಕೈಗೊಂಡು ಪರಮಹಂಸರ ಶಿಷ್ಯಮಂಡಲಿಗೆ ಸೇರಿದ ಶಾರದಾನಂದ ಸ್ವಾಮಿಗಳಿ೦ದ ಬ೦ಗಾಳೀ ಭಾಷೆಯಲ್ಲಿ ರಚಿತವಾದ "ಶ್ರೀರಾಮಕೃಷ್ಣ ಲೀಲಾಪ್ರಸಂಗ” ಎಂಬ ಗ್ರಂಥದ ಆಧಾರದ ಮೇಲೆ ಈ ಸಣ್ಣ ಪುಸ್ತಕವನ್ನು ಬರೆದಿದ್ದೇವೆ. "ಶ್ರೀರಾಮಕೃಷ್ಣ ಲೀಲಾಪ್ರಸಂಗವು" ಬಹು ದೊಡ್ಡ ಗ್ರಂಥ; ಇದುವರಿಗೆ ಪ್ರಕಟವಾಗಿರುವ ಆ ಗ್ರಂಥವು ಸುಮಾರು ೧,೫೦೦ ಪುಟಗಳವರೆಗೆ ಬಂದಿದೆ. ಆದರೂ ಅದು ಅಷ್ಟಕ್ಕೇ ಮುಗಿಯುವಂತಿಲ್ಲ. ಇದೇ ಬೆಂಗಳೂರು ಮಠದಲ್ಲಿಯೇ ಇದ್ದು ಈಗ ಮದರಾಸಿಗೆ ದಯಮಾಡಿರುವ ವಿದೇಹಾ ನಂದ ಸ್ವಾಮಿಗಳು ಅದಷ್ಟನ್ನೂ ನಮಗೆ ಓದಿತಿಳಿಸಿದರು. ಆದ್ದರಿಂದ ಈ ಗ್ರಂಥರಚನೆಗೆ ಅವರಿಂದಾದ ಸಹಾಯವು ಇಷ್ಟೆಂದು ಹೇಳುವ ಹಾಗಿಲ್ಲ. ಇದಕ್ಕಾಗಿ ನಾವು ಅವರಿಗೆ ಬಹಳವಾಗಿ ಕೃತಜ್ಞರಾಗಿರುವೆವು.

ಜ್ಞಾನಸಂಪಾದನೆಗೆ ಸತ್ಸಂಗವೇ ಮುಖ್ಯ ಸಾಧನವೆಂದು ಕೇಳಿದ್ದೇವೆ. ರಾಮಕೃಷ್ಣ ಪರಮಹಂಸರಂಥ ಮಹಾನುಭಾವರ ಸಂಗವು ಲಭಿಸದಿದ್ದ ಪಕ್ಷದಲ್ಲಿ ಅವರ ಚರಿತಾಮೃತ ಶ್ರವಣ ಉಪದೇಶ ಮನನ ಇವುಗಳಿಂದ ಬಹುಮಟ್ಟಿಗೆ ಅವರ ಸಂಗಫಲವನ್ನು ಪಡೆಯಬಹುದು. ಆದರೆ ನಮ್ಮಂಥ ಅಲ್ಪಮತಿಗಳಿ೦ದ ರಚಿತವಾದ ಈ ಸಣ್ಣ ಪುಸ್ತಕವನ್ನು ಓದಿ ಪಾಠಕರು ಪರಮಹಂಸರ ವಿಚಾರಗಳೆಲ್ಲವೂ ತಿಳಿದುವೆಂದೂ ಅವರ ಮಾಹಾತ್ಮವು ಇಷ್ಟೇಯೆಂದೂ ನಿರ್ಧರಿಸಲಾಗದು. ಏಕೆಂದರೆ ಅವರ ವಿಚಾರವಾಗಿ ಸುಮಾರು ೧೨೦೦ ಪುಟಗಳುಳ್ಳ ಗ್ರಂಥವನ್ನು ಓದಿದ್ದರೂ ಅವರ ಜೀವನದಸಂಗತಿಗಳನ್ನೆಲ್ಲ ತಿಳಿದುಕೊಂಡಿದೇವೆಂಬ ನಂಬುಗೆಯು ನಮಗೇ ಹುಟ್ಟಲೊಲ್ಲದು. ಆದ್ದರಿಂದ 'ಶ್ರೀರಾಮಕೃಷ್ಣ ಲೀಲಾಪ್ರಸಂಗ','ಶ್ರೀರಾಮಕೃಷ್ಣ ಕಥಾಮೃತ' ಮುಂತಾದ ಗ್ರಂಥಗಳನ್ನು ಕನ್ನಡಿಗರು ಓದಬೇಕೆಂದು ಪ್ರಾರ್ಥಿಸುವೆವು. ಈ ಗ್ರಂಥಗಳಲ್ಲಿ ಶ್ರೀ ರಾಮಕೃಷ್ಣ ಕಥಾಮೃತದ ಸ್ವಲ್ಪ ಭಾಗವು ಇಂಗ್ಲೀಷಿಗೆ ತರ್ಜಮೆಯಾಗಿ “The Gospel of Sri Ramakrishna"ಎಂಬ ಹೆಸರಿನಿಂದ ಪ್ರಕಟವಾಗಿದೆ. ಶ್ರೀರಾಮಕೃಷ್ಣ ಲೀಲಾಪ್ರಸಂಗವು ಇನ್ನೂಇಂಗ್ಲಿಷಿಗೆ ತರ್ಜಮೆಯಾಗಿಲ್ಲ. ಸದ್ಯಕ್ಕೆ ಆಗುವ ಸಂಭವವೂಇಲ್ಲ. ಆದರೆ ನಾವು ಅದನ್ನೇಕೆ ಕಾದುಕೊಂಡಿರಬೇಕು? "ಸುಲಿದಬಾಳೆಯ ಹಣ್ಣಿನಂದದಿ……" ಇರುವ ನಮ್ಮ ಕನ್ನಡನುಡಿಯಲ್ಲಿಯೇ ಅವನ್ನು ಏಕೆ ಓದಬಾರದು? ಭಕ್ತಶಿರೋಮಣಿಗಳಉದಾರಾಶ್ರಯವು ದೊರೆತರೆ ಈ ಗ್ರಂಥಗಳನ್ನೂ ವಿವೇಕಾನಂದಸ್ವಾಮಿಗಳು ಶಿಷ್ಯರೊಡನೆ ಮಾಡಿದ ಸಂಭಾಷಣೆಗಳನ್ನೂ, ಧರ್ಮವೀರರಾದ ಆಚಾರ್ ಪುರುಷರ ಚರಿತ್ರೆಗಳನ್ನೂ ಧಾರಾವಾಹಕವಾಗಿ ಮಾಸಪತ್ರಿಕೆಯ ರೂಪದಲ್ಲಿ ಕನ್ನಡಿಸಿ ಸಮರ್ಪಿಸಬೇಕೆಂಬ ಉದ್ದೇಶ ವಿದೆ. ಶ್ರೀ ಶ್ರೀಪರಮಹಂಸರವರ ವರಪ್ರಸಾದಬಲದಿಂದಲೂ, ಭಕ್ತರಾದ ಕನ್ನಡಿಗರ ಉತ್ಸಾಹಾಶ್ರಯಗಳಿಂದಲೂ ಆ ಉದ್ದೇಶವು ಸದ್ಯದಲ್ಲಿಯೇ ನೆರವೇರಿತೆಂದು ನಂಬಿದ್ದೇವೆ.

ಕ್ರಯವು ಸುಲಭವಾಗಿ ಪುಸ್ತಕವು ಎಲ್ಲರಿಗೂ ಕೊಳ್ಳುವುದಕ್ಕೆ ಸಾಧ್ಯವಾಗಿರಬೇಕೆಂಬ ಉದ್ದೇಶದಿಂದ ಮುಖ್ಯ ಮುಖ್ಯವಾದ ವಿಷಯಗಳನ್ನೇ ಸಂಗ್ರಹಿಸಿ ಗ್ರಂಥವನ್ನು ಸಣ್ಣದಾಗಿ ಬರೆದಿದ್ದೇವೆ. ಆದ್ದರಿಂದ ಪರಮಹಂಸರ ಉಪದೇಶಗಳನ್ನೆಲ್ಲ ಇಲ್ಲಿ ತರಲು ಅವಕಾಶವಾಗಲಿಲ್ಲ. ಪಾಠಕರೆಲ್ಲರೂ ಮ।। ರಾ।। ಎನ್.ವೆಂಕಟೇಶಯ್ಯಂಗಾರ್ಯರಿಂದ ರಚಿತವಾದ “ ಶ್ರೀರಾಮಕೃಷ್ಣ ಪರಮಹಂಸರ ಉಪದೇಶವಾಕ್ಯಾವಳಿ” ಯನ್ನು ಓದಿ ಈ ಕೊರತೆಯನ್ನು ಪರಿಹಾರಮಾಡಿಕೊಳ್ಳಬೇಕೆಂದು ಪ್ರಾರ್ಥಿಸುವೆವು.

ಈ ಗ್ರಂಥದ ಸಮಸ್ತ ಹಕ್ಕು ಬಾಧ್ಯತೆಗಳೂ ಶ್ರೀ ಶ್ರೀರಾಮಕೃಷ್ಣ ಮಠದವುಗಳಾಗಿರುತ್ತವೆ.


ಬೆಂಗಳೂರು,
ಜನವರಿ 1919.
ಗ್ರಂಥಕರ್ತರು.
 
 

 
 

 
 

 

ಶ್ರೀ:

ಓಂನಮೋ ಭಗವತೇ ರಾಮಕೃಷ್ಣಾಯ.

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ

.
——————


ಅವತರಣಿಕೆ.


ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂಸೃ ಜಾಮ್ಯಹಂ |

· · · · · · · ·
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ||ಧರ್ಮವೇ ಭಾರತೇಯರ ಸರ್ವಸ್ವ. ಹಿಂದೂಸಮಾಜ ನಿಲಯಕ್ಕೆ ಧರ್ಮವೇ ತಳಹದಿ. ಈ ಸುದೃಢವಾದ ತಳಹದಿಯ ಮೇಲೆ ಆರ್ಯ ಮಹನೀಯರು ಸಾವಿರಾರು ವರ್ಷಗಳಿಂದ ಸುಂದರವಾದ ಕಟ್ಟಡವನ್ನು ಕಟ್ಟಿ ಕೊಂಡು ಬಂದಿದ್ದಾರೆ. ನಮ್ಮ ಜನಾಂಗವನ್ನು ಒಂದು ದೊಡ್ಡ 'ಧರ್ಮಸಂಸಾರ' ವೆಂದು ಹೇಳಬಹುದು. ನಮ್ಮಲ್ಲಿ ನಿಂತರೆ ಧರ್ಮ, ಕುಳಿತರೆ ಧರ್ಮ; ಬೆಳಗೆದ್ದರೆ ರಾತ್ರಿ ಮಲಗುವವರೆಗೂ ನಾವು ಮಾಡಬೇಕಾದ ಪ್ರತಿಯೊಂದು ಕರ್ಮವೂ ಧರ್ಮಮಯ. ಒಂದೊಂದು ವಿಧಿಯೂ, ಒಂದೊಂದು ನಿಯಮವೂ, ಒಂದೊಂದು ಪದ್ದತಿಯೂ, ಒಂದೊಂದು ಆಚಾರವೂ ಧರ್ಮ ಮೂಲವಾಗಿದೆ.

'ಧರ್ಮ' ವೆಂದರೇನು? ಯಾವುದು ಈಶ್ವರಸಾಕ್ಷಾತ್ಕಾರಕ್ಕೆ ಸಹಕಾರಿಯಾಗುವುದೋ ಅದೇ ಧರ್ಮ, ಈ ಈಶ್ವರಸಾಕ್ಷಾತ್ಕಾರವು ಇಂದ್ರಿಯಗಳ ಮೂಲಕ ಆಗತಕ್ಕದ್ದಲ್ಲ ಎಂದು ವೇದಗಳಿಂದ ಗೊತ್ತಾಗುತ್ತದೆ. ಇಂದ್ರಿಯಾತೀತವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದು ಬಹುಕಠಿಣ. ಮೇಲಿನಿಂದ ಕೆಳಕ್ಕೆ ಉರುಳುವುದು ಹೇಗೆ ಸುಲಭವೋ ಹಾಗೆ ಇಂದ್ರಿಯಪರವಶರಾಗಿ ಆ ಮೂಲಕ ಸುಖ ವನ್ನು ಪಡೆಯುವದು ಅತಿಸುಲಭ. ಆದರೆ ಇಂದ್ರಿಯ ನಿಗ್ರಹವನ್ನು ಮಾಡಿ ತನ್ಮೂಲಕ ಈಶ್ವರ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಕಡಿದಾದ ಬೆಟ್ಟವನ್ನು ಏರುವಂತೆ ಬಹುಕಷ್ಟ ಸಾಧ್ಯವಾದ ಕೆಲಸ. ಆದರೆ ಇದು ಅಸಾಧ್ಯವಲ್ಲ ವೆಂದೂ ಪ್ರಯತ್ನ ಮಾಡಿದರೆ ಸಾಧ್ಯ ವೆಂದೂ ಅನಾದಿಕಾಲದಿಂದ ಈಗಿನ ವರೆಗೂ ಅವತಾರಮಾಡಿದ ಮಹಾ ಪುರುಷರು ತಮ್ಮ ಜೀವನ ಚರಿತ್ರೆಯಿಂದ ಬೋಧಿಸಿದ್ದಾರೆ. ವೇದಕಾಲದಲ್ಲಿ ಹೀಗೆ ಈಶ್ವರ ಸಾಕ್ಷಾತ್ಕಾರ ಮಾಡಿ ಕೊಂಡವರನ್ನು ಋಷಿಗಳೆಂದು ಕರೆಯುತ್ತಿದ್ದರು. ಅವರ ಮಾತೇ ವೇದಗಳು; ಅವರ ಅನುಭವವೇ ಉಪನಿಷತ್ತು ; ಅವರು ವಿಧಿಸಿದ ವಿಧಿಗಳೇ ಶಾಸ್ತ್ರ. ಇವರಿಗೆ 'ಆಪ್ತ' ರೆಂದು ಹೆಸರು. ಇಂಥ ('ಆಪ್ತವಾಕ್ಯ' ವೇ ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣ, 'ಆಪ್ತ'ರೆಂದರೆ ಪಡೆದವರೆಂದರ್ಥ. ಇಂಥವರೇ ಪ್ರಪಂಚದ ತತ್ವವನ್ನು ಸ್ವಾನುಭವದಿಂದ ತಿಳಿದುಕೊಂಡವರಾದ್ದರಿಂದ ಆಧ್ಯಾತ್ಮಿಕ ಧರ್ಮಕ್ಕೆ ಮೂಲಾಧಾರ. ಅಂಥವರನ್ನೇ ಷಡ್ಡರ್ಶನ ಕಾಲದಲ್ಲಿ ಅಧಿಕಾರಿಕ ಪುರುಷರು, ಪ್ರಕೃತಿಲೀನರು, ಈಶ್ವರಕೋಟಿಗಳೆಂದು ಮುಂತಾಗಿ ಕರೆಯುತಿದ್ದರು. ಅದಾದ ಮೇಲೆ ಪುರಾಣಗಳ ಕಾಲದಲ್ಲಿ ಅಂಥವರನ್ನು ಅವತಾರ ಪುರುಷರೆಂದು ಕರೆಯುತ್ತಿದ್ದರು. ಇಂಥ ಮಹಾಪುರುಷರು ಧರ್ಮಕ್ಷೇತ್ರವಾದ ಈ ಭರತ ಖಂಡದಲ್ಲಿ ಪುನಃ ಪುನಃ ಜನ್ಮ ಗ್ರಹಣಮಾಡಿ ಈಶ್ವರ ಸಾಕ್ಷಾತ್ಕಾರವೇ ಮನುಷ್ಯನಿಗೆ ಮುಖ್ಯಲಕ್ಷ್ಯವಾಗಿರಬೇಕೆಂದೂ ಇದು ಪ್ರತಿಯೊಬ್ಬನಿಗೂ ಸಾಧ್ಯವೆಂದೂ ತೋರಿಸಿ ಈ ಲಕ್ಷ್ಯವೂ ತಪ್ಪದಂತೆ ಕಾಪಾಡಿಕೊ೦ಡು ಬ೦ದಿದ್ದಾರೆ.

ಎ೦ಥ ಸರ್ವೋತ್ತಮವಾದ ವಸ್ತುವಾದರೂ ಕಾಲಕ್ರಮದಲ್ಲಿ ಬದಲಾವಣೆಯನ್ನು ಹೊಂದಿ ಕೆಟ್ಟುಹೋಗುವದು. ತಳತಳನೆ ಹೊಳೆಯುವ ಬೆಳ್ಳಿ, ಬಂಗಾರಗಳಾದರೂ ಬಹಳಕಾಲ ಹಾಗೇಬಿಟ್ಟರೆ ಮಲಿನವಾಗುವುವು. ಅಂಥದರಲ್ಲಿ ಕೊಳಕಾಗುವುದಕ್ಕೆ ಪ್ರಬಲವಾದ ಇತರ ಕಾರಣಗಳಿದ್ದರಂತೂ ಹೇಳಬೇಕಾಗಿಯೇ ಇಲ್ಲ. ಧರ್ಮದ ಸ್ಥಿತಿಯೂ ಹೀಗೆಯೇ, ಮಾಲಿನ್ಯಕ್ಕೆ ಇತರ ಯಾವ ಕಾರಣವಿಲ್ಲದಿದ್ದರೂ ಕಾಲಕ್ರಮದಲ್ಲಿ ಜನರು ಧರ್ಮದ ಸಾರವನ್ನು ಮರೆತು ಮುಖ್ಯವಾದದ್ದನ್ನು ತಾತ್ಕಾರಮಾಡಿ ಗೌಣವಾದದನ್ನೇ ಮುಖ್ಯವಾಗಿ ಮಾಡಿಕೊಂಡು, ಮೌಢ್ಯದಲ್ಲಿ ಮುಳುಗಿ ಹೋಗುವರು. ಅದರಿಂದ ಧರ್ಮಗ್ಲಾನಿಯೂ ಅಧರ್ಮದ ಅಭ್ಯುತ್ಥಾನವೂ ಉಂಟಾಗುವುವು. ಜನರಿಗೆ ನಾನಾವಿಧದಲ್ಲಿ ಮೊಗಸುತ್ತಾಗಿ ಎಲ್ಲೆಲ್ಲಿಯೂ ಅಶಾಂತಿಯೂ ಹಾಕಾಕಾರವೂ ಹುಟ್ಟುವುವು. ಆಗ ಈಶ್ವರನು ಅವತಾರಮಾಡಿ ಧರ್ಮಸಂಸ್ಥಾಪನೆ ಮಾಡಿ ಶಾಂತಿಯನ್ನು ನೆಲೆಗೊಳಿಸುವನು. ಆದರೆ ಕಾರಣವಿಲ್ಲದೆ ಕಾರ್ಯವಿರುವುದಿಲ್ಲ. ಅವತಾರಕ್ಕೆ ಆವಶ್ಯಕತೆ ಇಲ್ಲ ದಿದ್ದರೆ ಪರಮಾತ್ಮನೆಂದಿಗೂ ಅವತಾರಮಾಡುವುದಿಲ್ಲ. ಆವಶ್ಯಕತೆ ಇದ್ದರೆ ಎಂದಿಗೂ ಕಣ್ಣು ಮುಚ್ಚಿಕೊಂಡು ಸುಮ್ಮನೆ ಇರುವುದಿಲ್ಲ. ಶ್ರೀಕೃಷ್ಣ, ಬುದ್ಧ, ಶಂಕರಾಚಾರ್ಯ ಮುಂತಾದವರು ಜನಿಸಿದ ಸಂದರ್ಭಗಳನ್ನೂ ಅವರ ಚರಿತ್ರೆಯನ್ನೂ ನೋಡಿದರೆ ಇದು ವಿಶದವಾಗುವುದು.

ಮೇಲೆ ಹೇಳಿದ ಮೌಡ್ಯಕ್ಕೆ ನಮ್ಮ ಈಗಿನ ಸ್ಥಿತಿಯಿಂದ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ನಮಗೆ ಈಗ ಸಂಧ್ಯಾವಂದನೆಯು ನಿರರ್ಥಕವಾದ, ಉಚ್ಚಾರವನ್ನು ಮಾಡಲಾರದ, ಹಿರಿಯರು ಹೊರೆಸಿದ ಒಂದು ಭಾರವಾಗಿದೆ. ಅದರ ಅರ್ಥವಾಗಲಿ ಉದ್ದೇಶವಾಗಲಿ ಏನು ಎಂಬುದೇ ಮರೆತು ಹೋಗಿದೆ. ಪ್ರಾಣಾಯಾಮವು ಮೂರು ಬೆಟ್ಟುಗಳಿ೦ದ ಮೂಗಿನ ತುದಿಯನ್ನು ಹಿಡಿಯುವುದರಲ್ಲಿ ಪರಿಣಮಿಸಿದೆ. ದೇವರ ಪೂಜೆಯು ಮನೆ ತುಂಬ ಮೂರ್ತಿಗಳನ್ನು ಇಟ್ಟುಕೊಂಡು ಅವುಗಳ ಮೇಲೆ ಕಾಟಾಚಾರಕ್ಕೆ ಹೂವು ತಂದು ಹಾಕುವುದರಲ್ಲಿ ಪರಿಣಮಿಸಿದೆ. ಇತ್ಯಾದಿ. ಹೀಗಿರಲು, ಕಾಲಕ್ರಮೇಣ ಸೇರಿದ ಕೊಳೆಯ ಮೇಲೆ ಮಳೆ ಸುರಿಯಿತು. ಆಗಲೋ ಈಗಲೋ ಬಿದ್ದುಹೋಗುವಂತಿರುವ ಮನೆಯ ಮೇಲೆ ಬಿರುಗಾಳಿ ಬೀಸಿದಂತೆ ನಮ್ಮ ಪುರಾತನ ಧರ್ಮ ಗೃಹದ ಮೇಲೆ ಇಂಗ್ಲಿಷರ ಜೊತೆಯಲ್ಲಿ ಪಾಶ್ಚಿಮಾತ್ಯ ನಾಗರಿಕತೆಯೆಂಬ ಬಿರುಗಾಳಿ ಬೀಸಿ ಅದನ್ನು ಬುಡಮುಟ್ಟ ಅಲ್ಲಾಡಿಸಿ ಬಿಟ್ಟಿತು.

ಇದಕ್ಕೆ ಕಾರಣವೇನು ? ಬೇರೆ ಬೇರೆ ಸ್ವಭಾವವೂ ಲಕ್ಷ್ಯವೂ ಉಳ್ಳ ಎರಡು ಜನರು ಸೇರಿದರೆ ಆಗುವುದು ಹೀಗೆತಾನೆ. ಹಾಲಿಗೆಹುಳಿ ಬಿದ್ದರೆ ಅದು ಒಡೆಯುವುದು ಏನಾಶ್ಚರ್ಯ ? ನಮ್ಮವರಿಗೆ ಧರ್ಮವೂ ಪರಲೋಕವೂ ಮುಖ್ಯಲಕ್ಷ್ಯ. ಪಾಶ್ಚಿಮಾತ್ಯರಿಗೆ ಐಹಿಕ ಸುಖವೇ ಮುಖ್ಯ ಲಕ್ಷ್ಯ. ಇದಕ್ಕೆ ಅವರ ಸ್ಥಿತಿಸ್ವಭಾವಗಳೂ ಭೌತಿಕ ಮುಂತಾದ ಶಾಸ್ತ್ರಗಳೂ ಸಹಕಾರಿಗಳಾದುವು. ಇದರಿಂದ ಅವರು ಸ್ಥಲಜಲಾ೦ತರಿಕ್ಷಗಳಲ್ಲಿ ನಿರಾಯಾಸವಾಗಿ ಸಂಚಾರ ಮಾಡಬಲ್ಲವರಾದರು. ಅಗ್ನಿಪರ್ವತಗಳೂ ಸೂರ್ಯ ಚಂದ್ರರೂ ಗ್ರಹನಕ್ಷತ್ರಗಳೂ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟುವು. ಅವರು ತಮ್ಮ ವಾಸಕ್ಕಾಗಿ ಇಹಲೋಕದಲ್ಲಿಯೇ ಇಂದ್ರಭವನಗಳನ್ನು ಕಲ್ಪಿಸಿಕೊಂಡರು. ವಿಸ್ತಾರವಾದ ರಾಜ್ಯವನ್ನು ಕಟ್ಟಿದರು. ಅಪಾರವಾದ ಸಂಪತ್ತನ್ನು ಪಡೆದರು. ಆದರೆ ಈ ಸುಖಸಾಧನಗಳಿಂದಲೇ ಅತೃಪ್ತಿಯೂ ಅಶಾಂತತೆಯೂ ಹೆಚ್ಚಿದುವು. ಆತ್ಮ, ಈಶ್ವರ, ಮುಕ್ತಿ ಮುಂತಾದ ವಿಷಯಗಳು ಭ್ರಮೆಯೆನ್ನುವ ಹಾಗಾಯಿತು. ಪಾಶ್ಚಿಮಾತ್ಯನು ಬಹಿರ್ಮುಖನಾಗಿ ನಾಸ್ತಿಕನೂ ಜಡವಾದಿಯೂ ಆದನು. ಅವನಿಗೆ ಇಹಲೋಕ ಭೋಗವೇ ಭೋಗವಾಯಿತು. ಬಾಹ್ಯಜ್ಞಾನಕ್ಕೆಲ್ಲಾ ಇದೊಂದೇ ಉಪಯೋಗವಾಯಿತು. ದಾಂಭಿಕತನ, ಸ್ವಾರ್ಥ, ದುರಾಶೆ ಇವೇ ಇದರ ಫಲವಾದುವು. ನಾವು ಪಾಶ್ಚಿಮಾತ್ಯರೊಡನೆ ಬೆರೆತಂದಿನಿಂದ ಅವರ ಐಶ್ವರ್ಯವನ್ನೂ ಐಹಿಕ ಭೋಗಸಾಧನಗಳನ್ನೂ ಮೆಚ್ಚುತ್ತ ಬಂದೆವು. ಇಂದ್ರಿಯಾತೀತವಾದ ಆಧ್ಯಾತ್ಮಿಕ ವಿಚಾರವನ್ನು ಆಗಲೇ ಮರೆಯುತ್ತ ಬಂದಿದ್ದರಿಂದ ವಿಜ್ಞಾನ ಶಾಸ್ತ್ರವೇ ಶಾಸ್ತ್ರವೆಂದೂ, ಇಂದ್ರಿಯ ಸುಖವೇ ಸುಖ ವೆಂದೂ ಭ್ರಮೆಯುಂಟಾಯಿತು. ಯಾವಾಗಲೂ ಪಾಶ್ಚಿಮಾತ್ಯರನ್ನು ನೋಡಿ ಬೆರಗಾಗುತ್ತಿದದರಿಂದ ಅವರ ಭೌತಿಕ ಶಾಸ್ತ್ರವು ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣವಾಗಲಾರದೆಂಬುದನ್ನೂ, ಸಾವಿರಾರು ವರ್ಷಗಳ ಕೆಳಗೆ ಸಂಸಾರತ್ಯಾಗಮಾಡಿ ಪರಮಾತ್ಮ ಧ್ಯಾನದಲ್ಲಿ ನಿರತರಾಗಿದ್ದು ಜ್ಞಾನಸಂಪಾದನೆ ಮಾಡಿದ ಋಷಿಗಳೇ ಪ್ರಮಾಣವೆಂಬುದನ್ನೂ ನಾವು ನಂಬಲಾರದೇ ಹೋದೆವು. ವಿಜ್ಞಾನಬಲದಿಂದ ಪಂಚ ಭೂತಗಳನ್ನು ವಶಮಾಡಿಕೊಂಡು ಇಷ್ಟು ಸಾಮರ್ಥ್ಯವನ್ನೂ ಸಂಪತ್ತನ್ನೂ ಪಡೆದಿರುವ ಪಾಶ್ಚಿಮಾತ್ಯರು "ಧರ್ಮವೆಂದು ವೈದಿಕರೂ ಪುರೋಹಿತರೂ ತಮ್ಮ ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಮಾಡಿದ ಒಂದು ಕಟ್ಟು. ಪರಲೋಕ, ಪರಬ್ರಹ್ಮ, ಪರಮಾತ್ಮ ಇವೆಲ್ಲಾ ಒಂದು ದೊಡ್ಡ ಕವಿಕಲ್ಪನೆ. ಎಷ್ಟು ಐಶ್ವರ್ಯವನ್ನು ಸಂಪಾದಿಸಿದರೂ ಹುಟ್ಟಿದಂದಿನಿಂದ ಸಾಯುವವರೆಗೂ ಕೀಳುಜಾತಿಯವರು ಕೀಳುಜಾತಿ ಯಲ್ಲಿಯೇ ಇರುವುದೆಂದರೆ ಯಾವ ನ್ಯಾಯ ?" ಎಂದು ಮುಂತಾಗಿ, ಹೇಳಿದರಿಂದ ಅದೇ ವೇದವಾಕ್ಯವಾಯಿತು. ನಾವು ಅವರ ಉಪದೇಶವನ್ನು ಸ್ವೀಕರಿಸಿ ಅವರು ಹೇಳಿಕೊಟ್ಟ ಮಂತ್ರವನ್ನೇ ಜಪಿಸುತ್ತಾ, ಅವರು ತೋರಿಸಿದ ದಾರಿಯನ್ನೇ ಹಿಡಿದೆವು. ಅದಕ್ಕೆ ಫಲವಾಗಿ ಅವರಂತೆ ನಾವೂ ಸ್ವಲ್ಪ ಐಹಿಕ ಭೋಗದ ರುಚಿಯನ್ನು ನೋಡಿದೆವು. ಜೊತೆಯಲ್ಲಿಯೇ ಅವರಂತೆ ಸ್ವಾರ್ಥ ಪರತೆ ಧರ್ಮದಲ್ಲಿ ಅಪನಂಬುಗೆ, ಅತೃಪ್ತಿ, ಅಶಾಂತತೆ ಇವುಗಳನ್ನು ಯಥೇಚ್ಛವಾಗಿ ಸಂಪಾದನೆ ಮಾಡಿಕೊಂಡೆವು. ಪ್ರಾಚೀನಕಾಲದಲ್ಲಿ ನಮ್ಮ ಜೀವನವು ಧರ್ಮದ ಆಧಾರದ ಮೇಲೆ ಬೆಳೆದಿದ್ದದರಿ೦ದ ಆಗಿನ ನಾಗರಿಕತೆಯು ಈಗಿನ ನವನಾಗರಿಕತೆಗೆ ಪೂರ್ತಿಯಾಗಿ ವಿರೋಧವಾಗಿತ್ತು. ಸಂಯಮವೇ ಮೂಲಮಂತ್ರ, ವೈರಾಗ್ಯಕ್ಕೋಸ್ಕರ ಸುಖ, ತ್ಯಾಗಕ್ಕೋಸ್ಕರ ಭೋಗ, ಪರಕ್ಕೋಸ್ಕರ ಇಹ, ಈಶ್ವರ ಸಾಕ್ಷಾತ್ಕಾರವೇ ಮುಖ್ಯೋದ್ದೇಶ್ಯ, ಹೀಗಿದ್ದದ್ದರಿಂದ ನಮ್ಮವರು ಉನ್ನತೋನ್ನತವಾದ ಲಕ್ಷ್ಯ ವನ್ನು ಸಾಧಿಸುತ್ತಿದ್ದರು. ವರ್ಣಜಾತಿ ವಿಭಾಗಗಳಿದ್ದರೂರೂ ಯಾವ ವಿಧವಾದ ಅಸಮಾಧಾನವೂ ಇರಲಿಲ್ಲ. ಸಮಾಜದ ಯಾವ ಶ್ರೇಣಿಯಲ್ಲಿದ್ದರೂ, ಯಾವ ಜಾತಿಯಲ್ಲಿ ಹುಟ್ಟಿದ್ದರೂ ನಿಷ್ಕಾಮಕರ್ಮವನ್ನು ಮಾಡಿದರೆ ಮೋಕ್ಷವನ್ನು ಪಡೆಯುವನೆಂದೂ ಅದೇ ಮುಖ್ಯವೆಂದೂ ಐಹಿಕ ಭೋಗವು ತುಚ್ಚವೆಂದೂ ಎಲ್ಲರೂ ನಂಬಿದ್ದರು. ಹೀಗಿದ್ದರೆ ಅಸಮಾಧಾನ ಹೇಗೆ ಬಂದೀತು? ಅಲ್ಲದೆ, ಹಿಂದಿನ ಕಾಲದಲ್ಲಿ ಹಿಮಾಚಲದಿಂದ ರಾಮೇಶ್ವರದವರೆಗೂ ಭರತ ಖಂಡವೆಲ್ಲವೂ ಒಂದೇ ಧರ್ಮಸೂತ್ರದಿಂದ ಕಟ್ಟಲ್ಪಟ್ಟಿತ್ತು. ಎಲ್ಲರಲ್ಲಿಯೂ ದೈವಭಕ್ತಿ, ವೇದ, ರಾಮಾಯಣ ಮಹಾಭಾರತ ಮುಂತಾದ ಧರ್ಮಗ್ರಂಥಗಳಲ್ಲಿ ಪೂರ್ಣವಾದ ನಂಬುಗೆ, ಗೀತಾ, ಗಂಗಾ, ಗಾಯತ್ರಿ ಇವುಗಳಲ್ಲಿ ಶ್ರದ್ಧಾ ಭಕ್ತಿ, ತೀರ್ಥಯಾತ್ರೆಗಳಲ್ಲಿ ವಿಶ್ವಾಸ ಇವುಗಳೆಲ್ಲವೂ ಒಂದೇಯಾಗಿದ್ದುವು. ಆದರಿಂದ ಜನಗಳಲ್ಲಿ ಒಂದು ವಿಧವಾದ ಐಕಮತ್ಯವೂ ಪರಸ್ಪರ ವಾತ್ಸಲ್ಯವೂ ಇದ್ದುವು, ಧರ್ಮವೇ ಅವರ ಜೀವನವಾಗಿತ್ತು.

ಪಾಶ್ಚಿಮಾತ್ಯರ ಪ್ರಾಬಲ್ಯದಿ೦ದ ಐಹಿಕ ಸುಖಕ್ಕೆ ಪ್ರಾಶಸ್ತ್ಯ ಉಂಟಾಯಿತು. ಐಶ್ವರ್ಯವಂತನನ್ನು ಬಡವನು ನೋಡಿ ಅಸೂಯೆ ಪಡುವಂತಾಯಿತು. ವರ್ಣ ಜಾತಿ ಭೇದಗಳಿಂದ ಅತೃಪ್ತಿಯು ಹೆಚ್ಚಿತು. ಇಂದ್ರಿಯ ಸುಖವು ತಾನೇ ತಾನಾಗಿ ಸಂಯಮವನ್ನು ಓಡಿಸಿ ಬಿಟ್ಟಿತು. ಹಿಂದಿನ ಶಿಕ್ಷಾಫಲವೆಲ್ಲಾ ಹೋಗಿ ನಾಸ್ತಿಕ್ಯವುಂಟಾಯಿತು. ಆವಶ್ಯಕತೆ ಇರಲಿ, ಇಲ್ಲದಿರಲಿ, ನಾವು ಮೂಗ ಜಂತುಗಳಂತೆ ಪಾಶ್ಚಿಮಾತ್ಯರನ್ನು ಅನುಸರಿಸುತ್ತ ಬಂದೆವು. ಇದರಿಂದ ಪ್ರತಿಯೊಂದಕ್ಕೂ ಅವರನ್ನೇ ನೆಚ್ಚಿಕೊಳ್ಳಬೇಕಾಯಿತು. ಭಾರತೀಯರು ಯೋಗಭೋಗಭ್ರಷ್ಟರಾಗಿ ನಾವಿಕನಿಲ್ಲದ ನಾವೆಯಂತೆ ಐಹಿಕಾಮುಷ್ಮಿಕಗಳೆರಡರಲ್ಲಿಯೂ ಕೇವಲ ಅಸಹಾಯರಾದರು.

ಈ ಸಮಯದಲ್ಲಿಯೇ ಪಾದ್ರಿಗಳು ಬಂದು ನಮ್ಮ ಕೋಟ್ಯನುಕೋಟಿ ದೇವತೆಗಳೂ ವಿಗ್ರಹಾರಾಧನೆಯೂ ಅಸಂಖ್ಯಾತವಾದ ಜಾತಿ ಭೇದಗಳೂ ಅನರ್ಥಕಾರಿಗಳೆಂದೂ ಇವೆಲ್ಲಾ ಹಾಳಾದರೆ ಈ ಅರ್ಧಬರ್ಬರ (half-barbarous) ಭಾರತ ದೇಶವು ನಾಗರಿಕತೆಯನ್ನು ಪಡೆದು ಉದ್ಧಾರವಾದೀತೆಂದೂ ಉದ್ಘೊಷಿಸುತ್ತಾ ಬಂದರು. ಅಲ್ಲಲ್ಲೇ ಸಮಾಜಗಳನ್ನೂ ಸಭೆಗಳನ್ನೂ ಏರ್ಪಾಡುಮಾಡಿ ಸ್ತ್ರೀ ಸ್ವಾತ೦ತ್ರ್ಯ : ವಿಧವಾವಿವಾಹ ಮುಂತಾದ ಸಮಾಜಸಂಸ್ಕಾರಗಳನ್ನು ಪ್ರಚಾರಕ್ಕೆ ತಂದು ನಿರ್ಜೀವವಾದ ಭರತಖಂಡಕ್ಕೆ ಜೀವವನ್ನು ತುಂಬುತ್ತೇವೆಂದು ತಿಳಿದುಕೊಂಡರು. ಆದರೆ ರೋಗಿಯ ರೋಗವನ್ನು ಪರೀಕ್ಷೆ ಮಾಡದೆ ಔಷಧಿಯನ್ನು ಕೊಟ್ಟರೆ ರೋಗ ಗುಣವಾಗುವುದು ಹೇಗೆ ? ಹೋಗುತ್ತಿದ್ದ ಜೀವವು ಪುನಃ ಬರುವುದು ಹೇಗೆ ? ಜಡವಾದಿಗಳಾದ ಪಾಶ್ಚಿಮಾತ್ಯರು ಈ ರೋಗವನ್ನು ಹೇಗೆ ತಾನೇ ಗುರುತಿಸಬಲ್ಲರು ? ಧರ್ಮವೇ ಭಾರತದ ಜೀವ. ಆ ಜೀವವನ್ನು ಪೋಷಿಸದಿದ್ದರೆ ಅದು ಹೇಗೆ ಉದ್ಧಾರವಾದೀತು ? ನಾಸ್ತಿಕ ಪಾಶ್ಚಾತ್ಯರಿಂದ ಧರ್ಮಗ್ಲಾನಿ ಹೇಗೆ ಗುಣವಾದೀತು ? ಧರ್ಮಗ್ಲಾನಿಯು ಪಶ್ಚಿಮದಿಂದ ಪ್ರವಹಿಸಿ ಎಲ್ಲೆಲ್ಲಿಯೂ ಹರಡಿ ಹೋಯಿತು. ಜನರು ಐಹಿಕ ಸುಖವೆಂಬ ಬಿಸಿಲುಗುದುರೆಯನ್ನು ಬೆನ್ನು ಹತ್ತಿ ಬಳಲಿ ಬೇಸತ್ತು ಹೋದರು. ಈ ನಮ್ಮ ವೇದನೆಯನ್ನೂ ಅಶಾಂತಿಯನ್ನೂ ನಮ್ಮ ಸಮಕ್ಕೆ ಅನುಭವಿಸಿ ಮರುಕಪಟ್ಟು ಸರಿಯಾದ ಧರ್ಮವನ್ನು ಬೋಧಿಸಬಲ್ಲ ಮಹಾನುಭಾವನಾವನು? ಪಾಶ್ಚಿಮಾತ್ಯರ ಸಂಯೋಗ ದಿ೦ದ ಬ೦ದ ಭಯಂಕರವಾದ ಧರ್ಮಗ್ಲಾನಿಯನ್ನು ನಿಗ್ರಹಮಾಡಿ ಶಾಂತಿಯನ್ನು ನೆಲೆಗೊಳಿಸುವರಾರು ? ಈ ದುಸ್ಥಿತಿಯು ಆ ಕರುಣಾಸಾಗರನಾದ ಭಗವಂತನ ಕಣ್ಣಿಗೆ ಬೀಳಲಾರದೇ? ಅವನನ್ನು ಬಿಟ್ಟರೆ ಇದು ಮತ್ತಾರಿಂದ ತಾನೇ ಸಾಧ್ಯ? ಆಯಾ ಕಾಲಕ್ಕೆ ತಕ್ಕಂತೆ ಮನುಷ್ಯ ರೂಪದಿಂದ ಅವತಾರಮಾಡಿ ಗೋಳಾಡುತ್ತಿರುವ ಪ್ರಾಣಿಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಉದ್ದಾರ ಮಾಡುವನು ಭಗವಂತನಲ್ಲವೇ! ಇಲ್ಲದಿದ್ದರೆ ಶ್ರೀ ಕೃಷ್ಣನು "ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ : ಅಭ್ಯುತ್ಥಾನವು ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ" ಎಂದು ಹೇಳಿರುವ ಮಾತು ಸುಳ್ಳೇ? ಭಗವಾಕ್ಯವೂ ಎಂದಿಗೂ ಸುಳ್ಳಾಗದು. ಅದರಂತೆ ಈಗಲೂ ಭಾರತೇಯಧರ್ಮವು ಸಂಪೂರ್ಣವಾಗಿ ಗ್ಲಾನಿ ಹೊಂದಲು ಮೊದಲು ಮಾಡಿದೊಡನೆಯೇ ಈಶ್ವರನು ಧರ್ಮೋದ್ಧಾರಕ್ಕಾಗಿ ಯಾವಪುಣ್ಯ ಪುರುಷನಾಗಿ ಅವತರಿಸಿದನೋ ಆ ಮಹಾತ್ಮನ ಪವಿತ್ರ ಚರಿತ್ರೆಯನ್ನು ಭಕ್ತಿಯಿಂದ ಓದೋಣ.