ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (1919)  by ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ
ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ

ಹನ್ನೊಂದನೆಯ ಅಧ್ಯಾಯ.

ಶ್ರೀ ಶ್ರೀರಾಮಕೃಷ್ಣ ಪರಮಹಂಸರ
ಗುರುಭಾವ.

ಅವಜಾನ೦ತಿಮಾಂ ಮೂಢಾ ಮಾನುಷೀಂತನು ಮಾಶ್ರಿತಂ |
ಪರ೦ಭಾವ ಮಜಾನ೦ತೋ ಮನಭೂತ ಮಹೇಶ್ವರಂ ||
ಗೀತಾ ೯-೧೧.

ಹೂ ಅರಳಿತು. ಅರಳಿ ಮಕರಂದದಿಂದ ತುಂಬಿ ತುಳುಕಾಡುತ್ತದುಂಬಿಗಳ ಆಗಮನವನ್ನು ಎದುರುನೋಡುತ್ತ ಕಾದುಕೊಂಡುಕುಳಿತಿದು ಅವು ಬಂದಹಾಗೆಲ್ಲ ವಿಶ್ವಾಸದಿಂದ ಬರಮಾಡಿಕೊಂಡು,ತಾಯಿಯ ಮಕ್ಕಳನ್ನು ಆದರಿಸುವಂತೆ ಅವುಗಳಿಗೆ ಮಕರಂದವನ್ನು ಊಡಿ ತೃಪ್ತಿಗೊಳಿಸಿತು. ಅವೂ ಮಕರಂದಪಾನಮಾಡಿಆನ೦ದದಿ೦ದ ಝೇಂಕರಿಸುತ್ತ ನಾನಾ ಕಡೆಗೆ ಹಾರಿಹೋಗಿ ಆಮಧುಮಾಹಾತ್ಮೆಯನ್ನು ವಿವರಿಸಿದುವು.

ಹೂ ಎಷ್ಟು ದೊಡ್ಡದಾದರೆ ಅರಳುವುದಕ್ಕೆ ಅಷ್ಟು ಹೆಚ್ಚುಕಾಲಬೇಕು. ಆದ್ದರಿಂದ ರಾಮಕೃಷ್ಣ ಮಹಾಕುಸುಮವು ಚೆನ್ನಾಗಿಅರಳುವುದಕ್ಕೆ ಹನ್ನೆರಡು ವರ್ಷಕಾಲ ಹಿಡಿಯಿತು. ಈಗ ಅರಳಿ,ಕಳಿತ ಆ ಕುಸುಮವು ಹೊರಲಾರದಷ್ಟು, ಹಿಡಿಸಲಾರದಷ್ಟು ಜ್ಞಾನಮಕರಂದವು, ಅದರಲ್ಲಿ ಶೇಖರಿಸಲ್ಪಟ್ಟಿದ್ದಿತು. ಶಿಷ್ಯ ಭೃಂಗಗಳೂವಾಸನೆಯನ್ನು ಹಿಡಿದು ಒಂದೊಂದಾಗಿ, ನಾಲ್ಕುನಾಲ್ಕಾಗಿ ಗುಂಪುಗುಂಪಾಗಿ ಬರಲು ಮೊದಲುಮಾಡಿದುವು. ಸ್ತನ್ಯವುಸೇರಿ ಅದನ್ನುಇನ್ನೂ ಶಿಶುವು ಕುಡಿಯದೇ ಇದ್ದದ್ದರಿಂದ ಉತ್ಪನ್ನವಾಗುವ ಒಂದು ವಿಧವಾದ ವ್ಯಥೆಯನ್ನು ಸಹಿಸಿಕೊಂಡಿದ್ದು, ಶಿಶುವು ಎದ್ದು ಬರುವುದನ್ನೇ ನಿರೀಕ್ಷಿಸಿಕೊಂಡಿರುತ್ತಾ, ಎದ್ದುಬಂದ ಕೂಡಲೆ ಆನಂದದಿಂದ ಆಲಿಂಗಿಸಿಕೊಂಡು ಅದಕ್ಕೆ ಸ್ತನವನ್ನು ಊಡಿ ಸುಖಿಯ ಸ್ವಪ್ನ ಚಿತ್ರ ಆಗುವ ತಾಯಿಯಂತೆ ಈ ಗುರುಕುಸುಮವು ಶಿಷ್ಟಭೃಂಗಗಳು ತಡಮಾಡಿದ್ದಕ್ಕಾಗಿ ಒದ್ದಾಡುತ್ತಿದ್ದ ಬಂದಕೂಡಲೆ ಲೇಖರಿಸಿಕೊಂಡಿದ್ದ ಅಮೃತವನ್ನು ಪಾನಮಾಡಿಸಿ ಕೃತಕೃತ್ಯ ಬುದ್ದಿಯನ್ನು ಪಡೆಯಿತು. ಮಧುಪಗಳೂ ಅದೇ ಬುದ್ಧಿಯಿಂದ ತಾವು ಪಡೆದುಕೊಂಡ ಅಮೃತವನ್ನು ಜೀವರಾಶಿಗಳ ಉಪಯೋಗಕ್ಕಾಗಿ ನಾನಾ ದಿಕ್ಕುಗಳಿಗೂ ತೆಗೆದುಕೊಂಡು ಹೋದುವು. ಎಂಥ ಪುಷ್ಪವೋ ಅಂಥ ಮಕರಂದ! ಎಂಥ ಮಕರಂದವೋ ಅಂಥ ದುಂಬಿಗಳು !!

ಶ್ರೀ ವಿವೇಕಾನಂದ ಸ್ವಾಮಿಗಳು ಪರಮಹಂಸರನ್ನು ಮೊದಲು ಸಾರಿ ನೋಡಿದು ಒಂದಪೂರ್ವದ ಘಟನೆ. ಅವರ ವರ್ಣನೆ ಯನ್ನು ಪಾಠಕರು ಅನ್ಯತ್ರ ನೋಡಬಹುದು. ಸ್ವಲ್ಪ ಹೆಚ್ಚು ಕಡಿಮೆ ಅವರು ಬಂದ ಕಾಲದಲ್ಲಿಯೇ ಪ್ರಮುಖರಾದ ಇತರ ಶಿಷ್ಯರೆಲ್ಲರೂ ಬಂದು ಸೇರಿದರು. ಅಲ್ಲಿಂದ ಮುಂದಕ್ಕೆ ಪರಮಹಂಸರ ಗುರುಭಾವವೂ ಜನಗಳಲ್ಲಿ ವಿಶೇಷವಾಗಿ ಪ್ರಕಟವಾಯಿತು. ಆದರೆ ಅವರ ಗುರುಭಾವವು ಆಗಲೇ ಆರಂಭವಾಯಿತೆಂದು ತಿಳಿಯಬಾರದು. ಏಕೆಂದರೆ ನಾಧನಕಾಲ ಮುಗಿದ ಮೇಲೆ ಅದರ ಪೂರ್ಣ ವಿಕಾಸವಾದರೂ, ಸರಮಹಂಸರ ಬಾಲ್ಯದಿಂದಲೂ ಆ ಗುರುಭಾವವು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು. ಇನ್ನೂ ಚಿಕ್ಕವಯಸ್ಸಿನಲ್ಲಿಯೇ ಲಾಹಾಬಾಬುವಿನ ಮನೆಯಲ್ಲಿ ನಡೆದ ಸಂಗತಿಯೂ ಯೌವನಕಾಲದಲ್ಲಿ ರಾಣಿರಾಣಿಗೆ ಆದ ಶಿಕ್ಷೆಯೂ [೧] ಪಾಠಕರ ನೆನಪಿನಲ್ಲಿರಬಹುದು. ಅಲ್ಲಿಂದೀಚೆಗೆ, ಕಲ್ಕತ್ತೆಗೆ ಬಂದ ಮೇಲೆ, ವಿವೇಕಾನಂದ ಸ್ವಾಮಿಗಳು ಬರುವುದಕ್ಕೆ ಬಹಳ ಮುಂಚೆಯೇ, ಪರಮಹಂಸರ


ಹತ್ತಿರಕ್ಕೆ, ಕರ್ತಾಭಜಾ, ರಾಮಾಯಿತ, ವೈಷ್ಣವ, ತಾಂತ್ರಿಕ ಮುಂತಾದ ಸಕಲ ಸಂಪ್ರದಾಯಗಳ ಸಾಧುಗಳೂ, ಸಾಧಕರೂ, ವೈಷ್ಣವಚರಣ ಗೌರೀಪಂಡಿತ ಮುಂತಾದ ಶಾಸ್ತ್ರಜ್ಞರೂ, ಪಂಡಿತರೂ ಬಂದು ಅವರ ಸಹಾಯದಿಂದ ಧರ್ಮ ಲಾಭವನ್ನು ಹೊಂದಿ ಹೊರಟು ಹೋಗಿದ್ದರು. ಇದನ್ನು ಕಲ್ಕತ್ತೆಯ ನಿವಾಸಿಗಳೇ ಅನೇಕರು ಅರಿಯರು.

ಗುರುಭಾವವು ಪೂರ್ಣವಾಗಿ ವಿಕಾಸವಾದ ಮೇಲೆ ಅದೆ? ಸಹಜವಾದ ಭಾವವಾಗಿ ನಿಂತುಕೊಂಡಿತು. ಆಗ ಪರಮಹಂಸರು ಜಗನ್ಮಾತೆಯಿಂದ ನಿರ್ದಿಷ್ಟರಾದ ಭಕ್ತರ ಆಗಮನವನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದರು. ಜಾಗ್ರತೆಯಲ್ಲಿಯೇ ಇವರೂ ಇತರರೂ ಬರಲು ಮೊದಲು ಮಾಡಿದರು. ಅಲ್ಲಿಂದ ದೇಹತ್ಯಾಗ ಮಾಡುವವರೆಗೂ ಮಿಕ್ಕಿದ್ದ ಐದಾರು ವರ್ಷಗಳೂ ಶಿಕ್ಷಣ, ಉಪದೇಶ ಇವುಗಳಲ್ಲಿಯೇ ವಿಶೇಷವಾಗಿ ಕಳೆದು ಹೋದುವು.

ನಿಜವಾದ ಗುರುಗಳ ಚರಿತ್ರೆಗಳೆಲ್ಲಾ ಹೀಗೆಯೇ ! ಅ೦ಥವರು ಗುರುಭಾವವನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟುವರು. ಕುಂಬಳಕಾಯಿ ಪಡವಲಕಾಯಿ ಮುಂತಾದ ಗಿಡಗಳಲ್ಲಿ ಕಾಯಿ ಬಿಡುವ ಹೂಗಳನ್ನು ಹೂ ಅರಳುವುದಕ್ಕೆ ಮುಂಚೆಯೇ ಹೇಳಿ ಬಿಡಬಹುದು. ಏಕೆಂದರೆ ಅಂಥ ಮೊಗ್ಗಿನ ಹಿಂದೆ ಒಂದು ಸಣ್ಣ ಹೀಚು ಅಂಟಿಕೊಂಡಿರುವುದು. ನಿಜವಾದ ಗುರುವಿನಲ್ಲಿಯೂ ಹೀಗೆಯೇ; ಮೊದಲು ಗುರುಭಾವ; ಆಮೇಲೆ ಮಾನುಷಭಾವ. ಅದಕ್ಕೆ ತಕ್ಕಂತೆ ಹುಟ್ಟಿದ್ದು ಮೊದಲ್ಗೊಂಡು ಆ ಗುರುಭಾವವು ಬಲಿತು ರಸತುಂಬಿ ಪ್ರಕಾಶಕ್ಕೆ ಬರಲು ಅನುಕೂಲವಾದ ಸಂದರ್ಭಗಳು ತಾವಾಗಿಯೇ ಒದಗಿ ಬರುತ್ತವೆ. ಇವೆಲ್ಲಾ ಗುರುಭಾವವನ್ನು ಸಂಪಾದಿಸಿಕೊಡುತ್ತವೆ ಎಂದರ್ಥವಲ್ಲ. ಆ ಗುರುಭಾವವಿರುವುದರಿಂದ ಅದರ ಪ್ರಕಾಶಕ್ಕೋಸ್ಕರ ಇವೆಲ್ಲಾ ಸಂಘಟಿಸುತ್ತವೆ.

ಅದಕ್ಕೆ ಉದಾಹರಣೆಯಾಗಿ ಪರಮಹಂಸರ ಬಾಲ್ಯ ಚರಿತ್ರೆ ಯನ್ನು ನೋಡಿ ! ಅವರು ಓದುವುದು ಬರೆಯುವುದನ್ನೇನೋ ಕಲಿತುಕೊಂಡರು. ಆದರೆ ಲೌಕಿಕವಿದ್ಯೆ ಯಾವುದನ್ನೂ ಕಲಿಯಲು ಅವಕಾಶವಾಗಲಿಲ್ಲ. ಕೊನೆಯವರೆಗೂ “ ಈ ಅಕ್ಕಿ ಬಾಳೆ ಹಣ್ಣು (ಬೇಳೆ ?) ಸಂಪಾದನೆ ಮಾಡುವ ವಿದ್ಯೆ ಏಕೆ ?” ಎಂದು ಹೇಳುತ್ತಿದ್ದರು. ಪುರಾಣ ಪುಣ್ಯಕಥೆಗಳೆಂದರೆ ಕೇವಲ ಆಸಕ್ತಿ; ಅವ್ರಗಳನ್ನು ಹೇಳುತ್ತಿರುವ ಕಡೆಗೆ ಹೋಗಿ ಆದರದಿಂದ ಕೇಳುತ್ತಿದ ರಲ್ಲದೆ ಅವುಗಳನ್ನು ಹೇಗೆ ಹೇಳಿದರೆ ಸ್ವಾರಸ್ಯವಾಗಿರಬಹುದು, ಹೇಗೆ ಹೇಳಿದರೆ ಮನಸ್ಸಿಗೆ ಅ೦ಟಬಹುದು ಎಂಬುದನ್ನು ಚೆನ್ನಾಗಿ ಗಮನಿಸುತ್ತಿದರು. ಅಸಾಧಾರಣವಾದ ಜ್ಞಾಪಕಶಕ್ತಿ ಇದ್ದರಿಂದ ಇವುಗಳ ಬ್ಲೊಂದನ್ನೂ ಮರೆಯದೆ ಮುಂದೆ ಸಮಯೋಚಿತವಾಗಿ, ಶಿಷ್ಟರಿಗೂ ಭಕ್ತರಿಗೂ ಹೇಳುತ್ತಿದ್ದರು. ದೇವರೆಂದರೆ ಮೊದಲಿಂದಲೂ ಕೇವಲ ಭಕ್ತಿ. ದೇವಮೂರ್ತಿಗಳನ್ನು ಮಾಡುವುದೂ ಬರೆಯುವುದೂ ಬಹು ಚೆನ್ನಾಗಿ ಬರುತ್ತಿತ್ತು. ದೇವತೆಗಳ ವೇಷವನ್ನು ಧರಿಸಿ ಬಹು ಚೆನ್ನಾಗಿ ಅಭಿನಯಿಸುವುದಕ್ಕೆ ಬರುತ್ತಿತ್ತು. ಹೇಗೋ ಗೋಸಾಯಿಗಳೂ ಬೈರಾಗಿಗಳೂ ಸನ್ಯಾಸಿಗಳ ಗಂಟು ಬಿದ್ದು ಅವರ ನಡತೆ, ಭಕ್ತಿ, ವೈರಾಗ್ಯ ನಿತ್ಯಾನಿತ್ಯವಸ್ತು ವಿಚಾರ ಮುಂತಾದುವುಗಳೇ ಮಂದಟ್ಟಾಗುತ್ತ ಬಂದುವು. ಜನರ ಒಂದೊಂದು ಮಾತನ್ನೂ ಒಂದೊಂದು ಕಾರವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಒಳ್ಳೆ ಯದು ಕೆಟ್ಟದ್ದು ಎಲ್ಲವನ್ನೂ ಗ್ರಹಿಸುತ್ತಿದ್ದರು. ಇದರಿಂದ ಮುಂದೆ ಭಕ್ತರ ಮನಸ್ಸಿಗೆ ಹಿಡಿಯುವಂತೆ ಬೋಧಿಸುವುದು ಮಾತ್ರವಲ್ಲದೆ, ಹೆಂಗಸರು ಗಂಡಸರನ್ನು ಮೋಹಗೊಳಿಸುವ ರೀತಿ, ಗಂಡಸರು ಹೆಂಗಸರನ್ನು ಮೋಹಗೊಳಿಸುವ ರೀತಿ ಮುಂತಾದುವುಗಳನ್ನು ಸಹಜವಾಗಿರುವಂತೆ ಅಭಿನಯಿಸಿಕೂಡ ತೋರಿಸುತ್ತಿದ್ದರಂತೆ! ಬಾಲ್ಯ ಕಳೆದಮೇಲೆ, ತಂದೆ ತೀರಿಹೋದನು. ಅಣ್ಣನು ಕಲ್ಕತ್ತೆಗೆ ಏರಬೇಕಾಯಿತು. ಅಣ್ಣನ ಹಿಂದೆ ತಮ್ಮನೂ ಬರಬೇಕಾಯಿತು. ಹೊಸದಾಗಿ ಕಟ್ಟಿದ ರಾಣಿರಾಣಿಯ ದೇವಸ್ಥಾನದಲ್ಲಿ ಮೊದಲು ಅಣ್ಣನೂ ಆಮೇಲೆ ತಮ್ಮನಾದ ರಾಮಕೃಷ್ಣ ಪರಮಹಂಸರೂ ಪೂಜಾರಿಯ ಕೆಲಸವನ್ನು ವಹಿಸಬೇಕಾಯ್ತು. ಇಲ್ಲಿ ಪೂಜೆಮಾಡುತ್ತ ಅನನ್ಯವಾದ ಭಕ್ತಿಯಿಂದ ಜಗನ್ಮಾತೆಯ ರೂಪವಾಗಿ ಅಲ್ಲಿ ನೆಲೆಸಿದ್ದ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಇದಾದ ಮೇಲೆ ಕ್ರಮವಾಗಿ ವೈಷ್ಣವ, ವೇದಾಂತ, ಯೋಗ, ತಾಂತ್ರಿಕ, ಮಹಮ್ಮದೀಯ, ಕ್ರೈಸ್ತ ಮುಂತಾದ ನಾನಾ ಮಾರ್ಗಗಳನ್ನು ಅನುಸರಿಸಿ ಅದೇ ಅನುಭವವನ್ನು ಪಡೆದು “ಏಕ೦ಸದ್ವಿಪ್ರಾ ಬಹುಧಾ ವದಂತಿ" ಎಂಬುದನ್ನು ತಿಳಿದುಕೊಂಡರು. ಈ ಹನ್ನೆರಡುವರ್ಷ ಸಾಧನಕಾಲದಲ್ಲಿ ಅವರೊಡನೆ ಹುಟ್ಟಿದ ಗುರುಭಾವವು ಕ್ರಮೇಣ ವಿಕಸಿತವಾಗಿ ಪ್ರಫುಲ್ಲವಾಯಿತು. ಇದರಲ್ಲಿ ವಿಶೇಷವಾದ ಸಂಗತಿ ಏನೆಂದರೆ ಅವರಿಗೆ ಯಾವ ಕಾಲದಲ್ಲಿ ಯಾವ ಮಾರ್ಗವನ್ನು ಅಭ್ಯಾಸಮಾಡಬೇಕೆಂದು ಮನಸ್ಸಿಗೆ ಬರುತ್ತಿತ್ತೋ ಆ ಕಾಲಕ್ಕೆ ತಕ್ಕಹಾಗೆ ವೇದಾಂತ ಪಂಡಿತನಾಗಲಿ, ಯೋಗಿಯಾಗಲಿ, ವಿಷ್ಣು ಭಕ್ತನಾಗಲಿ, ಖಾಜಿಯಾಗಲಿ ಬಂದುಬಿಡುತ್ತಿದ್ದರು. ಬಂದವರೆಲ್ಲರೂ ಇವರು ಮಹಾತ್ಮರೆಂದೂ ಅವತಾರಪುರುಷರೆಂದೂ ಹೊಗಳಿ ತಮಗೆ ತಿಳಿದಿದ್ದನ್ನು ಸ್ವಲ್ಪ ಸೂಚಿಸುತ್ತಲೇ ಪರಮಹಂಸರು ಎಲ್ಲಿವನ್ನೂ ಗ್ರಹಿಸಿಬಿಡುತ್ತಿದ್ದರು. ಕೊನೆಗೆ ಗುರುಗಳೇ ಶಿಷ್ಯನಿಂದ ಎಷ್ಟೋ ವಿಷಯಗಳನ್ನು ಕಲಿತುಕೊಂಡು ತಾವು ಧನ್ಯರಾಗಿ ಹೊರಟುಹೋದರು.

ಗುರುವೆಂದರೇನು? ಸಂಸಾರಸಾಗರದಿಂದ ಪಾರುಮಾಡಿ. ಮಾಯಾಪಾಶವನ್ನು ಕಡಿದುಹಾಕಿ, ನಮಗೆ ಮೋಕ್ಷಮಾರ್ಗವನ್ನು ತೋರಿಸತಕ್ಕವನೇ ಗುರು. ಇಂಥವನು ಈಶ್ವರನೊಬ್ಬನೇ ಹೊರತು ಮಾಯಾಪಾಶದಲ್ಲಿ ಸಿಕ್ಕಿ ನರಳುತ್ತಿರುವ ಮನುಷ್ಯನೆಂದಿಗೂ ಆಗಲಾರನು. ಮನುಷ್ಯನು ಮನುಷ್ಯನಿಗೆ ಈ ವಿಚಾರದಲ್ಲಿ ಸಹಾಯ ಮಾಡುವುದೆಂದರೆ "ಅಂಧೇನೈವನೀಯಮಾನಾಯಥಾಂಧಾಃ" (ಕುರುಡನು ಕುರುಡನಿಗೆ ದಾರಿತೋರಿಸಿದ ಹಾಗೆ) ಎಂಬಂತಾಗುವುದು. ಜ್ಞಾನದಾಯಕವಾದ ಗುರುಭಾವವು ಎಂದಿಗೂ ಮಾನುಷಿಕವಲ್ಲ. ಅದು ದೈವಿಕ. ಆದ್ದರಿಂದ ಗುರುವು ಒಬ್ಬನೇ. ಆದರೆ ಆ ಗುರು ಭಾವವು ಮಾತ್ರ ಬೇರೆ ಬೇರೆ ದೇಹಗಳ ಮೂಲಕವಾಗಿ ಪ್ರಕಾಶಿತವಾಗಬಹುದು. ಆ ಗುರುಭಾವವು ಯಾವ ದೇಹದ ಮೂಲಕ ವ್ಯಕ್ತವಾಗುವುದೋ ಅದನ್ನು ಗುರುವೆಂದು ಕರೆಯುವುದು ವಾಡಿಕೆ. ಶರೀರವನ್ನು ಅವಲಂಬಿಸಿಕೊಂಡ ಗುರುಪೂಜೆಯನ್ನು ಮಾಡಬೇಕು. ಅದೇ ನಮಗೆ ಶ್ರೇಯಸ್ಕರ.

ರಾಮಕೃಷ್ಣ ಪರಮಹಂಸರು ಗುರುಗಳು ಬೋಧಿಸಿದುದರಲ್ಲಿ ಹೊಸವಿಷಯವೇನು? ಯಾರೂ ಹೇಳಿಲ್ಲದ ವಿಷಯವನ್ನು ಅವರೇನು ಹೇಳಿದರು ? ಎಂದು ಕೇಳಬಹುದು. ಧರ್ಮವಿಚಾರದಲ್ಲಿ ಹೊಸದಾಗಿ ಹೇಳುವುದೇನಿದೆ ? ಎಲ್ಲವೂ ಹಿಂದೆ ರಾಷ್ಟ್ರದಲ್ಲಿ ಉಕ್ತವಾಗಿರುವುದೇ : ಎಲ್ಲವೂ ಹಿಂದೆ ಅವತಾರ ಪುರುಷರು ಬೋಧಿಸಿರುವುದೇ ; “ನರಿಗಳು ಕೂಗುವುದೆಲ್ಲ ಒಂದೇ ವಿಧ” ವೆಂದು ಪರಮಹಂಸರು ಹೇಳುತ್ತಿದ್ದರು. ಮಹಾಪುರುಷರಾದವರು ಎಂದಿಗೂ ರಾಷ್ಟ್ರಕ್ಕೆ ವಿರುದ್ಧವಾದ ಅಥವಾ ಹೊರಗಾದ ವಿಷಯಗಳನ್ನು ಬೋಧಿಸುವದಿಲ್ಲ. ಶಾಸ್ತ್ರಸಂಪ್ರದಾಯವನ್ನು ರಕ್ಷಿಸುವುದು ಅವರ ಮುಖ್ಯ ಕರ್ತವ್ಯ. ಅದೇ ಅವರ ಲಕ್ಷಣ. [೨] ಮಹಾತ್ಮರು, ಅವತಾರಮಾಡುವುದು ಶಾಸ್ತ್ರದಲ್ಲಿಲ್ಲದ ಹೊಸ ವಿಷಯವನ್ನು ಹೇಳುವುದಕ್ಕಲ್ಲ. ಕಾಲಗುಣದಿಂದ ಧರ್ಮದ ಮೇಲೆ ಬಿದ್ದಿರುವ ದೂಳನ್ನು ತೊಡೆದು, ದೇಶಕಾಲ ಮುಂತಾದುವುಗಳಿ೦ದ ಬದಲಾಯಿಸಿರುವ ನಮ್ಮ ಮನೋಭಾವಗಳಿಗೆ ತಕ್ಕಂತೆ ಆ ಹಳೆಯ ವಿಷಯವನ್ನೇ ವಿವರಿಸಿ ಅದೇ ಸತ್ಯವೆಂದು ಸ್ಥಾಪಿಸುವುದಕ್ಕೆ; ಆ ಕಾಲದಲ್ಲಿ ಉಂಟಾದ ಧರ್ಮಗ್ಲಾನಿಯ ಮೂಲಕಾರಣವನ್ನು ಕಿತ್ತುಹಾಕಿ ಎಲ್ಲರಿಗೂ ದಾರಿಯನ್ನು ತೋರಿಸಿ ಮೇಲ್ಪಂಕ್ತಿಯಾಗಿರುವಂತೆ ತಾವು ಜೀವಿಸಿಕೊಂಡಿದ್ದು ತತ್ಕಾಲಕ್ಕೆ ಅನುಕೂಲವಾದ ರೀತಿಯಲ್ಲಿ ಬೋಧಿಸಿ ಹೋಗುವುದಕ್ಕೆ.


ಎಲ್ಲಾ ಮಹಾ ಪುರುಷರೂ ಹೀಗೆಯೇ : ಅವರು ಎಷ್ಟೇ ಕಠಿನವಾದ ವಿಷಯಗಳನ್ನು ತೆಗೆದುಕೊಂಡರೂ ಸುಲಭವಾದ ಮಾತುಗಳಿಂದ ಮನಸ್ಸಿಗೆ ಅಂಟುವಂತೆಯೂ ಮರೆಯದಂತೆಯೂ ಅವುಗಳನ್ನು ವಿವರಿಸಿ ಹೇಳುವರು. ಸಂದರ್ಭಕ್ಕೆ ಅನುಕೂಲವಾದ ಕಥೆಗಳನ್ನೂ ಉಪಮಾನಗಳನ್ನೂ ಹೇಳುವುದೂ ಇವರಲ್ಲಿ ಒಂದು ಸಾಮಾನ್ಯವಾದ ಗುಣ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಟ್ಟರೆ ವ್ಯಕ್ತವಾಗಬಹುದು. ಒ೦ದುಸಾರಿ ಸಾಂಖ್ಯ ದರ್ಶನದ ಪ್ರಸ್ತಾಪ ಬಂದಾಗ ರಾಮಕೃಷ್ಣ ವರಮಹಂಸರು ಹೇಳಿದ್ದು ಏನೆಂದರೆ "ಪುರುಷ ಅಕರ್ತಾ, ಏನೂ ಮಾಡುವುದಿಲ್ಲ; ಪ್ರಕೃತಿಯೇ ಎಲ್ಲಾ ಕಾರ್ಯವನ್ನೂ ಮಾಡುವುದು. ಪುರುಷನು ಪ್ರಕೃತಿಯ ಈ ಸಕಲ ಕಾರ್ಯಗಳನ್ನೂ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ. ಪ್ರಕೃತಿಯೂ ಪುರುಷನನ್ನು ಬಿಟ್ಟು ತಾನಾಗಿ ತಾನು ಯಾವ ಕೆಲಸವನ್ನೂ ಮಾಡುವುದಕ್ಕೆ ಆಗುವುದಿಲ್ಲ”. ಇದು ಕೇಳಿದವರೆಲ್ಲರಿಗೂ ಅರ್ಥವಾಗಲಿಲ್ಲ. ಅದನ್ನು ನೋಡಿ “ಮನೆಗಳಲ್ಲಿ ನೋಡಿಲ್ಲವೇನಪ್ಪ! ಯಜಮಾನನಾದವನು ಸುಖವಾಗಿ ಒ೦ದು ದಿ೦ಬು ಒರಗಿಕೊ೦ಡು ಕೂತು, ಮಾಡಬೇಕಾದ ಕೆಲಸವನ್ನು ಹೇಳುತ್ತಾನೆ. ಯಜಮಾನಿ ಮಾತ್ರ ನೆರಿಯನ್ನೂ ಸೆರಗನ್ನೂ ಸೆಕ್ಕಿಕೊಂಡು, ಒಂದುಸಲ ಅತ್ತಲಾಗಿ ಒಂದುಸಲ ಇತ್ತಲಾಗಿ ಹೋಗುತ್ತ ಆ ಕೆಲಸವಾಯಿತೇ ಇಲ್ಲವೇ, ಈ ಕೆಲಸವನ್ನು ಮಾಡಿದರೇ ಇಲ್ಲವೇ ಎಂದು ನೋಡುತ್ತಾಳೆ; ಕೇಳುತ್ತಾಳೆ; ಮನೆಯಲ್ಲಿರುವ ಮಕ್ಕಳು ಮರಿಗಳ ಯೋಗಕ್ಷೇಮಗಳನ್ನು ನೋಡುತ್ತಾಳೆ. ಮಧ್ಯೆ ಮಧ್ಯೆ ಬಂದು ಗಂಡನಿಗೆ “ಅದು ಹಾಗಾಯಿತು; ಇದು ಹೀಗಾಯಿತು. ಅದು ಮಾಡುವುದಕ್ಕೆ ಆಗುತ್ತದೆ. ಇದು ಮಾಡುವುದಕ್ಕೆ ಆಗುವುದಿಲ್ಲ” ಎಂದು ಹೇಳುತ್ತಾಳೆ. ಯಜಮಾನನು ಮಾತ್ರ ತಂಬಾಕನ್ನು ತೀಡುತ್ತಲೋ ನಶ್ಯವನ್ನು ಮಾಡುತ್ತಲೋ 'ಹು ಹು' ಎನ್ನುತ್ತಲೂ ತಲೆಯನ್ನೂ ಕೈಯನ್ನೂ ಅಲ್ಲಾಡಿಸುತ್ತಲೂ ಇರುತ್ತಾನೆ. ಹೀಗೆತಾನೆ ಸಾಂಖ್ಯ ಎಂದರೆ? ಇನ್ನೇನು?” ಎಂದು ಹೇಳಿದರು. ಆಮೇಲೆ ವೇದಾಂತಪ್ರಸ್ತಾಪ ಬಂತು. "ವೇದಾಂತದಲ್ಲಿ ಬಹ್ಮ, ಬ್ರಹ್ಮಶಕ್ತಿ, ಪುರುಷ, ಪ್ರಕೃತಿ ಇವೆಲ್ಲ ಬೇರೆಯಲ್ಲ; ಒಂದೇ ಪದಾರ್ಥ; ಕೆಲವು ವೇಳೆ ಪುರುಷಭಾವದಲ್ಲಿ, ಮತ್ತೆ ಕೆಲವು ವೇಳೆ ಪ್ರಕೃತಿ ಭಾವದಲ್ಲಿ ಇರುತ್ತದೆ.” ಎಂದು ಹೇಳಿವರು. ಅದು ಎಲ್ಲರಿಗೂ ಗೊತ್ತಾಗಲಿಲ್ಲ. ಆಗ "ಅದು ಹೇಗೆ ಅ೦ತ ಮಾಡಿಕೊಂಡಿದ್ದೀರಿ? ಈಗ, ಹಾವು ಇದೆ. ಅದು ಹರಿದು ಹೋಗುತ್ತಿರುವುದೂ ಉಂಟು; ಸುಮ್ಮನೆ ಬಿದ್ದಿರುವುದೂ ಉಂಟು. ಅದು ಸುಮ್ಮನೆ ಬಿದ್ದಿರುವಾಗ ಪುರುಷಸ್ಥಿತಿಯ ಹಾಗಾಯಿತು. ಆಗ ಪ್ರಕೃತಿಯು ಪುರುಷನೊಡನೆ ಸೇರಿ ಐಕ್ಯವಾಗಿರುವುದು. ಅದು ಯಾವಾಗ ಹರಿದು ಹೋಗುತ್ತದೆಯೋ ಆಗ ಪ್ರಕೃತಿ ಇದ್ದಹಾಗೆ. ಅದು ಆಗ ಪುರುಷನಿಂದ ಬೇರೆಯಾಗಿ ಕಾರ್ಯಗಳನ್ನು ಮಾಡುತ್ತಿರುವ ಹಾಗೆ” ಎಂದು ಹೇಳಿದರು. ಇದರಿಂದ ಪುರುಷ ಪ್ರಕೃತಿಗಳಿಗೆ ನಿರ್ದೋಷವಾದ ಲಕ್ಷಣವನ್ನು ಹೇಳಿದ ಹಾಗಾಗಲಿಲ್ಲ. ನಿಜ. ಆದರೆ ಇದಕ್ಕಿಂತಲೂ ಸುಲಭವಾದ ಮಾತಿನಲ್ಲಿ, ಸುಲಭವಾದ ರೀತಿಯಲ್ಲಿ, ಇಂಥ ವಿಚಾರಗಳನ್ನು ಸಾಮಾನ್ಯ ಜನರಿಗೆ ತಿಳಿಸುವುದು ಅಸಾಧ್ಯ.[೩]

ಆದರೆ ಅವರು ಆಡುವಮಾತು ಸುಲಭವಾಗಿ ಕಂಡರೂ ಎಷ್ಟು ಭಾವ, ಅರ್ಥಗಳಿಂದ ಗರ್ಭಿತವಾಗಿರುತ್ತದೆ ಎಂಬುದು ಮೊದಲುಸಾರಿ ಕೇಳಿದಾಗ ಅಥವಾ ಓದಿದಾಗ ಗೊತ್ತಾಗುವುದಿಲ್ಲ. ಎಲ್ಲರಿಗೂ ಹೆಚ್ಚು ಅರ್ಥವನ್ನು ಗ್ರಹಿಸುವುದೂ ಸಾಧ್ಯವಲ್ಲ. ಅದು ಅವರವರ ಸಾಮರ್ಥ್ಯದ ಮೇಲೆ ಹೋಗುತ್ತದೆ. ವಿವೇಕಾನಂದ ಸ್ವಾಮಿಗಳು ಒಂದುದಿನ ತಮ್ಮ ಸ್ನೇಹಿತರೊಬ್ಬರೊಡನೆ, ರಾಮ


ಕೃಷ್ಣ ಪರಮಹಂಸರು ಹೇಳಿದ ಒಂದೊಂದು ವಿಷಯವನ್ನು ತೆಗೆದುಕೊ೦ಡೂ ಒಂದೊಂದು ದೊಡ್ಡ ಗ್ರಂಥವನ್ನು ಬರೆಯಬಹುದೆಂದರಂತೆ. ಆಗ ಅವರು “ಹಾಗೆ! ಎಲ್ಲಿ ನೋಡೋಣ; ಯಾವುದಾದರೂ ಒ೦ದು ವಿಷಯವನ್ನು ಪ್ರಸ್ತಾಪಿಸಿ!” ಎಂದರಂತೆ. ಆಗ ಸ್ವಾಮಿಗಳು. ಅದನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ತಕ್ಕ ಸಾಮರ್ಥ್ಯವಿರಬೇಕಷ್ಟೆ!” ಎಂದುಹೇಳಿ, ನಾರಾಯಣನು ಎಲ್ಲೆಲ್ಲಿಯೂ ಇದ್ದಾ ನೆ ಎಂದು ಬೋಧಿಸುವ “ಆನೆಯೂ ನಾರಾಯಣ, ಮಾಹುತನೂ ನಾರಾಯಣ" ಎಂಬ ಕಥೆಯನ್ನು ಕುರಿತು ಹೇಳುವುದಕ್ಕೆ ಮೊದಲು ಮಾಡಿ, ದೈವಾಯತ್ತ ಪುರುಷಕಾರಗಳ ಪ್ರಸ್ತಾಪವನ್ನೆತ್ತಿ, ಈ ವಿಚಾರವಾಗಿ ನಮ್ಮವರು ಮತ್ತು ಪರದೇಶದವರು ಬಹುಕಾಲದಿಂದಲೂ ಮಾಡುತ್ತಿರುವ ತರ್ಕ ವಿತರ್ಕ, ಆದರೂ ಯಾವಸಿದ್ಧಾಂತವೂ ಸರಿಯಾಗಿಲ್ಲದೆ ಶ್ರೀ ಶ್ರೀ ಪರಮಹಂಸರವರು ಹೇಳಿರುವ ಒಂದು ಅಪೂರ್ವವಾದ ಸಮಾಧಾನ ಮುಂತಾದ ವಿಷಯಗಳನ್ನು ಕುರಿತು ಮರುದಿವಸ ಒಂದೇ ಸಮನಾಗಿ ತಿಳಿಯಹೇಳಿದರಂತೆ. ಹೀಗೆ ಅವರ ವಾಕ್ಕುಗಳು ಅಷ್ಟು ಅರ್ಥಗರ್ಭಿತವಾಗಿರುತ್ತವೆ.

ಪ್ರಾಯಶಃ ಪರಮಹಂಸರು ಹೊನ್ನು ಮಣ್ಣಗಳೆರಡೂ ಒಂದೇ ಎಂಬ ಬುದ್ಧಿ ಹುಟ್ಟುವುದಕ್ಕೆ ಮಾಡಿದ ಸಾಧನೆಯನ್ನು ಕೇಳದವರೇ ಇರಲಾರರು. ಹೀಗೆಯೇ ಪ್ರತಿಯೊಬ್ಬ ಸ್ತ್ರೀಯೂ ಜಗನ್ಮಾತೆಯ ರೂಪವೆಂಬ ಬುದ್ದಿ ಹುಟ್ಟುವಂತೆ ಸಾಧನೆಮಾಡಿ ಇವೆರಡರಲ್ಲಿಯೂ ತಾವು ಸಿದ್ಧರಾದ ಬಳಿಕ ಕೊನೆಯವರೆಗೂ ಕಾಮಿನೀಕಾಂಚನ'ಗಳನ್ನು ತ್ಯಾಗಮಾಡಬೇಕೆಂದು ಸಾರಿಸಾರಿ ಹೇಳುತ್ತಿದ್ದರು. ಇದು ಎಷ್ಟು ಸಾಮಾನ್ಯವಾಗಿ ಕಾಣುತ್ತದೆ! ಆದರೆ ಇವುಗಳನ್ನು ಬಿಡ ಬೇಕೆಂದರೆ ಎಷ್ಟು ಕಷ್ಟ ! ಒಂದುವೇಳೆ ನಾವು ಅವುಗಳನ್ನು ಬಿಟ್ಟರೂ ಅವು ನಮ್ಮನ್ನು ಬಿಡವು. ಬಾಯಲ್ಲಿ ಇವು ಬೇಡವೆಂದು ಹೇಳುವವರೇ ಅಪರೂಪ. ಆ೦ತರದಲ್ಲಿಯೂ ಇವುಗಳ ಮೇಲೆ ಆಶೆಯನ್ನು ಪೂರ್ತಿಯಾಗಿ ಬಿಡಬೇಕಾದರೆ ಎಲ್ಲರೂ ರಾಮಕೃಷ್ಣ ಪರಮಹಂಸರೇ ಆಗಬೇಕು. ಇದರ ಮೇಲೆ ವಿವಾಹದ ಉದಾರನಾದ ಉದ್ದೇಶವನ್ನು ಮರೆತು, ಇಂದ್ರಿಯ ಸುಖವೊಂದೇ ಅದರ ಉಪಯೋಗವೆಂದು ತಿಳಿದುಕೊಂಡು "ಋಣಂಕೃತ್ವಾ೯ತಂಘೃತಂಪಿಬೇತ್" ಎಂದು ಹೇಳುತ್ತ ಸರ್ವ ಪ್ರಯತ್ನದಿಂದಲೂ ಧನಸಂಪಾದನೆ ಮಾಡಿ ಅದರಿಂದ ಐಹಿಕ ಭೋಗವನ್ನು ಹೆಚ್ಚಿಸಿಕೊಳುವುದು ಹೇಗೆ ಎಂದೇ ' ಸದಾಧ್ಯಾನಮಾಡುತ್ತ, ಅದನ್ನು ಬಿಟ್ಟು ಮತ್ತೆ ಯಾವುದನ್ನೂ ಯೋಚಿಸಲೇ ಆರದ ನಮ್ಮಗಳಿಗೆ ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಒತ್ತಿ ಹೇಳಿದರೆ ತಾನೇ ಸಾಕಾದೀತು ? ಬ್ರಹ್ಮಚಾರವನ್ನು ಸರಿಯಾಗಿ ಕಾಪಾಡಿಕೊಳ್ಳದೆ ಕೇವಲ ಅಶಕ್ತರಾಗಿ ನಾನಾ ವಿಧದಲ್ಲಿಯೂ ದೇಶದ ಅವನತಿಗೆ ಕಾರಣರಾದ ನಮಗೆ, ಆಮುಸ್ಮಿಕ ಸಾಧನದಲ್ಲಿ ಪತಿ ಪತ್ನಿಯರು ಸರಸ್ಪರ ಸಹಾಯಕರಾಗದೆ ದೇವರೆಂಬುದನ್ನೇ ಮರೆತು ವಿಲಾಸ ವೈಭವಗಳಲ್ಲಿ ಮೆರೆಯುತ್ತಿರುವ ನಮಗೆ, ಇದನ್ನು ಎಷ್ಟು ಬಾರಿ ಹೇಳಿದರೆ ತಾನೇ ಸಾಕಾದೀತು? ಇದರಿಂದ ಎಲ್ಲರೂ ರಾಮಕೃಷ್ಣರ೦ತಾಗಬೇಕೆಂದಲ್ಲ.--ಅದು ಸಾಧ್ಯವೂ ಅಲ್ಲ, ಈ ಸಂದರ್ಭದಲ್ಲಿ ಅವರು, "ಎಲಾ ನಾನು ಹದಿನಾರಾಣೆಯ ಪಾಲುಮಾಡಿದರೆ ನೀವು ಒಂದು ಪಾಲನಾದರೂ ಮಾಡಿರೊ!” ಎಂದು ಹೇಳುತ್ತಿದ್ದರು. ಅದರಂತೆ ಅವರನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಎಷ್ಟು ಸಾಧನೆ ಮಾಡುತ್ತ ಒ೦ದರೆ ಅಷ್ಟು ಶ್ರೇಯಸ್ಕರ ವೆಂಬುದರಲ್ಲಿ ಸಂದೇಹವಿಲ್ಲ.

ಕಾಮಿನೀಕಾಂಚನಗಳನ್ನು ತ್ಯಾಗಮಾಡುವ ವಿಚಾರ ಬ೦ದಾಗ “ಹಾಗಾದರೆ ಶ್ರೀ ರಾಮಕೃಷ್ಣ ಪರಮಹಂಸರವರು ಮದುವೆಯನ್ನೇಕೆ ಮಾಡಿಕೊಂಡರು?” ಎಂದು ಕೇಳಬಹುದು. ಪರಮಹಂಸರ ಇತರ ಕಾರ್ಯಗಳಂತೆ ಅವರ ವಿವಾಹವೂ ಲೋಕಕಲ್ಯಾಣಾರ್ಥವಾಗಿಯೇ ಕೈಕೊಂಡದ್ದೆಂದು ತೋರುತ್ತದೆ. ಈಗಿನ ಕಾಲದಲ್ಲಿ ನಮ್ಮಗಳಿಗೆ ವಿವಾಹವಿಚಾರದಲ್ಲಿರತಕ್ಕ ಒಂದು ವಿಧವಾದ ಪಶು ಭಾವವನ್ನು ಹೋಗಲಾಡಿಸಿ ಉಚ್ಚಾದರ್ಶವನ್ನು ತೋರಿಸುವುದೇ ಅದರ ಉದ್ದೇಶವೆಂದು ಹೇಳಬಹುದು... ಅವರು ಆಗಾಗ್ಗೆ "ಈ ದೇಹವು ಮಾಡುವುದೆಲ್ಲ ನಿನಗೋಸ್ಕರ; ಎಲೋ ನಾನು ಹದಿನಾರಾಣೆಯ ಪಾಲನ್ನು ಮಾಡಿದರೆ ನೀವು ಒಂದಾಣೆಯ ವಾಲಾ ದರೂ ಮಾಡುತ್ತೀರಿ." ಎಂದು ಹೇಳುತ್ತಿದ್ದರು. [೪] ಇಷ್ಟು ಹೊರತು ನನ್ನ ಕೀಳುಬುದ್ಧಿಯಿಂದ ಅವರ ಮಾಹಾತ್ಮಯನ ಅಳೆದು ಎಂದಿಗೂ ಅವರಲ್ಲಿ ಇಲ್ಲದ್ದನ್ನು ಆರೋಪಿಸಬಾರದು. ಏಕೆಂದರೆ ಸ್ತ್ರೀಸಾಮಾನ್ಯದಲ್ಲಿಯೂ ಜಗನ್ಮಾತೆಯೆಂದು ಬುದ್ಧಿಯನ್ನಿಟ್ಟು ಕೊ೦ಡಿದ್ದ ಪರಮಹಂಸರಿಗೆ, ನಿರ್ವಿಕಲ್ಪ ಸಮಾಧಿಯನ್ನು ಪಡೆದು ದೇಹಬುದ್ದಿಯನ್ನೂ ಇಂದ್ರಿಯಸುಖವನ್ನೂ ಪೂರ್ತಿಯಾಗಿ ಮರೆತು ಬಿಟ್ಟವರಿಗೆ, ಸ್ತ್ರೀಯಲ್ಲಿ ಅನ್ಯಥಾ ಬುದ್ಧಿ ಹೇಗೆ ಹುಟ್ಟಬೇಕು? ಕೆಲವರು “ನಾವು ಆ ಕಾಲದಲ್ಲಿ ವಿದ್ದರೆ ಪರಮಹಂಸರ ಕೈರ್ಯವನ್ನು ಪರೀಕ್ಷೆಮಾಡಿ ಬಿಡುತ್ತಿದ್ದೆವು. ಅಸಿಧಾರಾವತವು ಯಾರಿಂದ ಸಾಧ್ಯ?" ಎಂದು ಹೇಳಬಹುದು. ಆಗಿನಕಾಲದಲ್ಲಿ ಪರಮಹಂಸರ ಶಿಷ್ಯ ಮಂಡಲಿಯಲ್ಲಿಯೇ ಇಂಥ ಸಂದೇಹ ಶೀಲರಾದ ಜನರಿಗೆ ಏನೂ ಅಭಾವವಿರಲಿಲ್ಲ. ನಮಗೆ ಒಂದು ಕಾಳಿನಷ್ಟು ಸಂದೇಹವಾದರೆ ಅವರಿಗೆ ಒಂದು ಬೆಟ್ಟದಷ್ಟು ಸಂದೇಹವಿರುತ್ತಿತ್ತು. ಅದ ಕೋಸ್ಕರ ಅವರ ಶಿಷ್ಯರಲ್ಲೊಬ್ಬರು ರಾತ್ರೆ ವರಮಹಂಸರು ತಮ್ಮ ಪತ್ನಿಯೊಡನೆ ಮಲಗಿರುವ ಮನೆಗೆ ಹೋಗಿ ಬಗ್ಗಿ ಕೂಡನೋಡಿದರ೦ತೆ. ಭಕ್ತರ ಹೃದಯದಲ್ಲಿ ನಡೆಯುವ ವ್ಯಾಪಾರಗಳನ್ನೆಲ್ಲಾ ಚೆನ್ನಾಗಿ ತಿಳಿದ ಗುರುಮಹಾರಾಜರು ಆಗಾಗ್ಗೆ “ ಯಾವುದನ್ನೂ ಚೆನ್ನಾಗಿ ಪರೀಕ್ಷೆ ಮಾಡ ಬೇಕಪ್ಪ! ನಿಮ್ಮ ಗುರುಗಳನ್ನೂ ಚೆನ್ನಾಗಿ ಪರೀಕ್ಷೆ ಮಾಡಬೇಕು: ತಾಗೆ ಮಾಡಿದರೆ ತಾನೆ ಆಮೇಲೆ ದೃಢವಾದ ನಂಬುಗೆ ಯುಂಟಾಗುವುದು.” ಎಂದು ಹೇಳುತ್ತಿದ್ದರು. ಇದು


ಪರಮಹಂಸರಲ್ಲಿದ್ದ ಅನನ್ಯ ಸಾಮಾನ್ಯವಾದಗುಣ. ಪೂರ್ವದಲೂ ದೇವರನ್ನೂ ಸತ್ಯವನ್ನೂ ಪರೀಕ್ಷೆ ಮಾಡಬಾರದೆಂದು ಹೇಳುತ್ತಿರುವುದು ಸರಿಯಷ್ಟೆ. ಆದರೆ ಅವರುಮಾತ್ರ ನನ್ನು ಸಂದೇಹ ನಿವೃತ್ತಿಯಾಗುವುದಕ್ಕೆ ಎಷ್ಟು ಬೇಕೋ ಅಷ್ಟನ್ನೂ ಮಾಡುತ್ತಿದ್ದರು. ಬಂಗಾಳಿಯಲ್ಲಿ ಶ್ರೀ ಶ್ರೀ ಪರಮಹಂಸರವರ ಜೀವನ ಚರಿತ್ರೆಯನ್ನು ಬರೆದ ಶಾರದಾನಂದ ಸ್ವಾಮಿಗಳವರು ಶಿಷ್ಯರಲ್ಲನೇಕರು ಎಷ್ಟೆಷ್ಟೋ ಬುದ್ದಿವಂತಿಕೆಯಿಂದ ಪರೀಕ್ಷೆ ಮಾಡುತ್ತಿದ್ದರೆಂದೂ ಆದರೆ ಎಲ್ಲಾ ವೇಳೆಯಲ್ಲಿಯೂ ಗುರುಮಹಾರಾಜರೇ ಜಯಶೀಲರಾಗುತ್ತಿದ್ದರೆಂದೂ ಬರೆದಿದ್ದಾರೆ. ವಿವೇಕಾನಂದ ಸ್ವಾಮಿಗಳು ಪರಮಹಂಸರು ಕಾಣದಂತೆ ಅವರ ಹಾಸಿಗೆಯ ಕೆಳಗೆ ಒಂದು ರೂಪಾಯಿ ಹಾಕಿ ಅವರನ್ನು ಪರೀಕ್ಷೆ ಮಾಡಿದ ವಿಚಾರವು ಎಲ್ಲಿರಿಗೂ ಗೊತ್ತೇ ಇರಬಹುದು. ಅಲ್ಲದೆ ಅವರು ಆಗ್ಗಾಗ್ಗೆ *ಯಾರು ರಾಮನಾಗಿದ್ದನೋ ಯಾರು ಕೃಷ್ಣನಾಗಿದ್ದನೋ ಅವನೇ ಈಗ ಇಲ್ಲಿ ರಾಮಕೃಷ್ಣನಾಗಿದ್ದಾನೆ ” ಎಂದು ಹೇಳುತ್ತಿದ್ದರು. ವಿವೇಕಾನಂದರಿಗೆ ಇದರಲ್ಲಿ ನಂಬುಗೆ ಹುಟ್ಟಿಯೇ ಇರಲಿಲ್ಲ. ಕೊನೆಗೆ ಪರಮಹಂಸರು ಗಂಟಲೆಲ್ಲ ಹುಣ್ಣಾಗಿ ಮಾತನಾಡಲಾರದೆ ದೇಹ ತ್ಯಾಗಮಾಡಲು ಇನ್ನೆರಡುಗಳಿಗೆ ಇದೆ ಎನ್ನುವಾಗ ವಿವೇಕಾನಂದರು “ಗುರುಮಹಾರಾಜರು ನಿಜವಾಗಿ ಅವತಾರ ಪುರುಷರಾಗಿದ್ದರೆ ಈಗ ಇನ್ನೊಂದುಸಾರಿ ಆ ಮಾತು ಹೇಳಲಿ.” ಎಂದಂದುಕೊಂಡರಂತೆ. ಆ ಯೋಚನೆ ಹೊಳೆಯಿತೋ ಇಲ್ಲವೋ ಆ ಕೂಡಲೆ, "ಏನಪ್ಪಾ! ಇನ್ನೂ ನಂಬಿಕೆ ಬೇಡವೆ? ಯಾರು ರಾಮನಾಗಿದ್ದನೋ, ಯಾರು ಕೃಷ್ಣನಾಗಿದ್ದನೋ ಅವನೇ ಈಗ ಇಲ್ಲಿ ರಾಮಕೃಷ್ಣನಾಗಿದ್ದಾನೆ." ಎಂದು ಹೇಳಿದರಂತೆ.

ಬುದ್ಧ, ಶಂಕರಾಚಾರ, ರಾಮಾನುಜಾಚಾರ, ಕ್ರಿಸ್ತ ಮುಂತಾದ ಅವತಾರ ಪುರುಷರ ಚರಿತ್ರೆಯನ್ನು ವಿಚಾರಮಾಡಿ ನೋಡಿದರೆ ಅವರು ತಮ್ಮ ತಮ್ಮ ಕಾಲಗಳಲ್ಲಿ ಧರ್ಮಗ್ಲಾನಿಯುಂ ಟಾಗುವುದಕ್ಕೆ ಮೂಲಕಾರಣವನ್ನು ತಿಳಿದು ಮುಖ್ಯವಾಗಿ ಅದನ್ನು ಬೇರುಸಹಿತ ಕಿತ್ತು ಹಾಕಿ ಧರ್ಮವನ್ನು ಪುನಃ ಉದ್ಘಾರಮಾಡುವುದಕ್ಕೆ ಪ್ರಯತ್ನಪಟ್ಟು ಅದರಲ್ಲಿ ಕೃತಕೃತ್ಯರಾದ ಬಳಿಕ ದೇಹವನ್ನು ತ್ಯಜಿಸಿದಂತೆ ತೋರುತ್ತದೆ. ಪಾಶ್ಚಿಮಾತ್ಯನಾಗರಿಕತೆಯೆಂಬ ಪ್ರವಾಹಕ್ಕೆ ಸಿಕ್ಕಿ, ಇಂದ್ರಿಯಾತೀತವಾದ ಆಧ್ಯಾತ್ಮಿಕ ವಿಚಾರಗಳಲ್ಲಿ ನಂಬುಗೆಯಿಲ್ಲದೆ, ಸಂದೇಹದಲ್ಲಿಯೂ ನಾಸ್ತಿಕವಾದದಲ್ಲಿಯೂ ದೇಶವೇ ತೇಲಿಹೋಗುತ್ತಿರುವಾಗ ಶ್ರೀ ಶ್ರೀರಾಮಕೃಷ್ಣ ಪರಮಹಂಸರು ಅವತಾರ ಮಾಡಿದ್ದನ್ನು ನೋಡಿದರೆ ವಿಜ್ಞಾನಶಾಸ್ತ್ರದ ಪ್ರಾಬಲ್ಯ ಮುಂತಾದ ಕಾರಣಗಳಿಂದುಂಟಾದ ಸಂಶಯವೇ ನನ್ನ ಕಾಲದ ಧರ್ಮಗ್ಲಾನಿಗೆ ಮುಖ್ಯ ಕಾರಣವೆಂದೂ ಅದರ ಮೂಲೋತ್ಪಾಟನೆಯ ಮೂಲಕ ಧರ್ಮವನ್ನು ಜೀರ್ಣೋದ್ದಾರ ಮಾಡುವುದೇ ಅವರು ಅವತಾರ ಮಾಡಿದ್ದರ ಮುಖ್ಯ ಉದ್ದೇಶವೆಂದೂ ಹೇಳಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಅವರು ನಾನಾ ಮಾರ್ಗಗಳಿ೦ದ ದೇವರು ಪರಲೋಕ ಮುಂತಾದುವುಗಳಲ್ಲಿ ಸಂದೇಹವನ್ನು ದೂರಮಾಡಿ ನಂಬುಗೆಯನ್ನು ಹುಟ್ಟಿಸಿ ಭಕ್ತರನ್ನು ದಾರಿಹತ್ತಿಸುತಿದ್ದರು. ಸಂಶಯ ದೂರವಾಗದೇ ಶ್ರದ್ಧೆಹುಟ್ಟದೇ ಯಾವುದೂ ಆಗದು. ಯೋಗಶಾಸ್ತ್ರಕಾರರೂ ಸಂಶಯವು ದೊಡ್ಡ ಅಡಚಣೆಯೆಂದು ಹೇಳಿದ್ದಾರೆ. “ಸಂಶಯಾತ್ಮಾ ವಿನಶ್ಯತಿ” ಎಂಬುದು ಎಲ್ಲರೂ ಕೇಳಿದ ವಿಷಯವೇ ಆಗಿವೆ. ಅದರಂತೆ "ಶ್ರದ್ಧಾವಾನ್ ಲಭತೆಜ್ಞಾನಂ” ಎಂಬುದನ್ನು ಓದಿದ್ದೇವೆ. ಈ ಶ್ರದ್ಧೆಯಿದ್ದು ದೇವರನ್ನು ಕಾಣಬೇಕೆಂದು ನಿಜವಾದ ವ್ಯಾಕುಲತೆ ಇದ್ದರೆ ಮತ್ತಾವ ಸಲಕರಣಗಳೂ ಬೇಕಾಗಿಲ್ಲ. ಅದನ್ನು ಪರಮಹಂಸರು ತಮ್ಮ ಉದಾಹರಣೆಯಿಂದಲೇ ತೋರ್ಪಡಿಸಿದ್ದಾರೆ. ಅವರು ಯಾವ ವೇದಾಂತ ಜ್ಞಾನವೂ ಯೋಗಾಭ್ಯಾಸವೂ ಇಲ್ಲದೆಯೇ, ತಮ್ಮ ಶ್ರದ್ಧಾ ಭಕ್ತಿಗಳಿಂದಲೇ ಮೊದಲು ದೇವರನ್ನು ಒಲಿಸಿಕೊಳ್ಳಲಿಲ್ಲವೇ?

ಹೀಗೆಂದು ಹೇಳಿದ ಕೂಡಲೆ ಅನೇಕರು “ನಮಗೆ ದೇವರನ್ನು ನೋಡಬೇಕೆಂಬ ಕುತೂಹಲವಿಲ್ಲವೇ? ದೇವರೇಕೆ ನಮಗೆ ಪ್ರತ್ಯಕ್ಷವಾಗುವುದಿಲ್ಲ? ” ಎಂದು ಕೇಳಬಹುದು. ಇಂಥವರಿಗೆ ರಾಮಕೃಷ್ಣ ಪರಮಹಂಸರು “ ಇ೦ಥ ಬೀಳುಭಕ್ತಿಯಿಂದ ಆಗುವುದೇನು? ಏನಾದರೂ ಆಗಲಿ ದೇವರನ್ನು ನೋಡಿಯೇ ಬಿಡುತ್ತೇನೆ, ಇಂದೇ ನೋಡಿಯೇ ಬಿಡಬೇಕು. ಎಂದು ಹೇಳುವಂಥವರಾಗಬೇಕು.[೫] ಅಷ್ಟು ಉತ್ಸಾಹವೂ ಶ್ರದ್ಧೆಯೂ ಇರಬೇಕು" ಎಂದು ಹೇಳಿ ತಾವು ಪಟ್ಟ ಶ್ರಮಗಳನ್ನೆಲ್ಲಾ ವಿವರಿಸುತ್ತಿದ್ದರು. ಕೆಲವರು “ ಇದರಿಂದೆಲ್ಲಾ ಏನಾದೀತು? ದೇವರೇ, ದೇವರೇ ಎಂದು ಕೂಗುತ್ತಾ ಕುಳಿತಿದ್ದರೆ ಬಂದದ್ದೇನು? ಎಷ್ಟೆಷ್ಟೋ ಯೋಗಾಭ್ಯಾಸಮಾಡಿ, ನಾಲ್ಕೈದು ಮೊಳ ನೆಲದಿಂದ ಮೇಲಕ್ಕೆದ್ದು, ಎಂಥೆಂಥ ಅದ್ಭುತ ಕಾರ್ಯಗಳನ್ನು ಮಾಡಲು ಶಕ್ತಿಯಿದ್ದವರ ಪಾಡೇ ಏನೇನೋ ಆಗಿಹೋಯಿತು. " ಎಂದು ಆಕ್ಷೇಪಿಸಬಹುದು. ಏಕೆಂದರೆ ಈಗಿನ ಕಾಲದಲ್ಲಿ ಯಾರು ಹಠಯೋಗವನ್ನೂ, ಪ್ರಾಣಾಯಾಮಾದಿಗಳನ್ನೂ ಅಭ್ಯಾಸಮಾಡಿ ಸಿದ್ಧಿಗಳನ್ನು ಪಡೆಯುತ್ತಾರೋ ಅವರೇ ದೇವರನ್ನು ಪ್ರತ್ಯಕ್ಷಮಾಡಿಕೊಳ್ಳತಕ್ಕವರೆಂದೂ ಆ ಮಾರ್ಗವನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದೂ ಅನೇಕರು ತಿಳಿದುಕೊಂಡಿದ್ದಾರೆ. ಶ್ರೀ ಶ್ರೀ ಪರಮಹಂಸರವರು ಈಗಿನ ಕಾಲದಲ್ಲಿ ಹಠಯೋಗ ಮುಂತಾದವುಗಳನ್ನು ಅಭ್ಯಾಸಮಾಡುವುದಕ್ಕೆ ಅವಕಾಶವೆಲ್ಲಿದೆಯೋ? ಭಗವಂತನು ಈಗಿನ ಕಾಲಕ್ಕೆ ಸುಲಭವಾಗಿರುವಂತೆ ಭಕ್ತಿಮಾರ್ಗವನ್ನು ವಿಧಿಸಿದ್ದಾನೆ”[೬] ಎಂದು ಹೇಳುತ್ತಿದ್ದರು. ಅಣಿಮಾದ್ಯಷ್ಟಸಿದ್ಧಿಗಳನ್ನೂ ಅದ್ಭುತ ಶಕ್ತಿಯನ್ನೂ ಪಡೆಯುವ ವಿಚಾರದಲ್ಲಿ ಅವರ ಉಪದೇಶವು ಮಂದಟ್ಟು ಮಾಡಿಕೊಳ್ಳತಕ್ಕದು. ಇವುಗಳಿಂದ ಅಹಂಕಾರ ವೃದ್ಧಿಯಾಗಿ, ದೇಹಬುದ್ದಿ ಬಲವಾಗಿ, ಮನಸ್ಸು ಹೆಚ್ಚು ಆಸೆಗೊಳಗಾಗಿ, ಸ್ವಾರ್ಥ ಹೆಚ್ಚಿ, ಕಾಮಿನೀಕಾಂಚನಗಳಲ್ಲಿ ಆಸಕ್ತಿ ಹುಟ್ಟುವುದು. ಪರಲೋಕಸಾಧನೆಗೆ ಅಡಚಣೆಯಾಗುವದಷ್ಟೇ ಅಲ್ಲ. ಅದರಿಂದ ಕೇವಲ ಅವನತಿಯೇ ಉಂಟಾಗುವುದು. ಕ್ರಮೇಣ ಅವನಲ್ಲಿದ್ದ ಶಕ್ತಿ ಯೂ ವೆಚ್ಚವಾಗಿ ಹೋಗಿ “ ಇತೋಭ್ರಷ್ಟ ಸ್ತತೋ ಭ್ರಷ್ಟ: ” ಎ೦ಬಂತಾಗುವುದು.[೭] ಆದ್ದರಿಂದ ಈ ಸಿದ್ಧಿಗಳಿಗೆ ಗಮನಕೊಡದಂತೆಯೂ ಶ್ರದ್ಧೆ ಭಕ್ತಿ ಪವಿತ್ರತೆ ವೈರಾಗ್ಯ ಚಿತ್ತಸಂಯಮ ಇವು ಗಳನ್ನು ಪಡೆದುಕೊಳ್ಳುವಂತೆಯೂ ಎಲ್ಲರಿಗೂ ಹೇಳುತ್ತಿದ್ದರು. ಅವರ ಹತ್ತಿರಕ್ಕೆ ಇಂಥ ಶಕ್ತಿಯುಳ್ಳವರಾರಾದರೂ ಬಂದರೆ ಅವರ ಕ್ಷೇಮ ಲಾಭಕ್ಕಾಗಿ ಆಶಕ್ತಿಯನ್ನು ಕಿತ್ತುಕೊಂಡು ಬಿಡುತ್ತಿದ್ದರು. ಅಲ್ಲದೆ ನೀರಿನಮೇಲೆ ನಡೆಯುವುದು, ಬೆಂಕಿಯಮೇಲೆ ನಡೆಯುವುದು, ಒಂದು ಪ್ರಾಣಿಯನ್ನು ಸಾಯಿಸುವುದು, ಬದುಕಿಸುವುದು ಮುಂತಾದ ದೊಂಬರಾಟವನ್ನು ಆಡಬಹುದಾದ ಶಕ್ತಿಯಿಂದ ಬಂದ ಫಲ ವೇನು? ನೋಡತಕ್ಕವರಿಗೆ ಆಶ್ಚರ್ಯವೂ ಹೊಸವೂ ಹೊರತು ಮಾಡತಕ್ಕವನಿಗೆ ಏನೂ ಲಾಭವಿಲ್ಲ. ಯೋಗಶಕ್ತಿಯನ್ನು ಇದರಲ್ಲೆಲ್ಲಾ ವೆಚ್ಚ ಮಾಡತಕ್ಕವನು ಮೇರುಪರ್ವತವನ್ನೇ ಹೊತ್ತು ತರುವುದಕ್ಕೆ ಹೋಗಿ ಒಂದು ಕಬ್ಬಿಣದ ಮೊಳೆಯನ್ನು ಹಿಡಿದು ತಂದಂತಾಗುವುದು.

ವಿಚಾರಶೀಲವಾದ ಈಗಿನ ಕಾಲದಲ್ಲಿ ಶ್ರದ್ಧಾ ಭಕ್ತಿಗಳು ಬೇಕೆಂದು ಹೇಳಿದೊಡನೆಯೇ ಅನೇಕರು ಇದಕ್ಕೆ ಒಡಂಬಡುವುದಿಲ್ಲ. “ ಇದೆಲ್ಲಾ (Blind belief) ಕುರುಡುನಂಬಿಕೆ, ಮೂಢಭಕ್ತಿ; ಯಾರುಯಾರು ಏನು ಏನು ಹೇಳಿದರೆ ಅದನ್ನು ಶುದ್ದಗಗ್ಗರಹಾಗೆ ನಂಬುವುದಕ್ಕಾದೀತೆ ??” ಎನ್ನುವರು. ಅದನ್ನು ಸ್ವಲ್ಪ ವಿಚಾರ ಮಾಡಬೇಕು. ಮೊದಲು ಗಗ್ಗರಹಾಗೆ ನಂಬಬೇಕೆಂದು ಹೇಳಿದವ


ರಾರು ? ವಿಚಾರಮಾಡಿಯೇ ನಂಬಬಹುದು. ಸ್ವಲ್ಪವಿಚಾರ

ಬುದ್ಧಿಯೂ ಬೇಕು. ಅದಕ್ಕಾಗಿಯೇ ವಿವೇಕಾನಂದಸ್ವಾಮಿಗಳು ಜ್ಞಾನಮಿಶ್ರವಾದ ಭಕ್ತಿಯೇ ಉತ್ತಮವೆಂದು ಬೋಧಿಸುತ್ತಿದ್ದರು. ರಾಮಕೃಷ್ಣಪರಮಹಂಸರೂ ಒಂದುದಿನ ತಮ್ಮ ಶಿಷ್ಯರಲ್ಲೊಬ್ಬರು ಅಜಾಗರೂಕತೆಯಿಂದ ಏನೋ ಒಂದು ತಪ್ಪು ಮಾಡಿದ್ದನ್ನು ಕಂಡು “ ಭಕ್ತನಾಗಿರು ಎಂದರೆ ಗಗ್ಗನೇಕೆ ಆದೆಯೊ? ” ಎಂದು, ತಾವು ಹೇಗೆ ಮೂರುಹೊತ್ತೂ ದೇವರಮೇಲೆ ಮನಸ್ಸಿದ್ದರೂ ಸರ್ವಕಾರ್ಯಗಳಲ್ಲಿಯೂ ಜಾಗರೂಕರಾಗಿರುತ್ತಿದ್ದರೆಂದು ಬೋಧಿಸಿದರಂತೆ. ಈ ಸಂದರ್ಭದಲ್ಲಿಯೇ “ ಯಾವಾಗಲೂ ವಿಚಾರಮಾಡುತ್ತಿರಬೇಕು. ಯಾವುದು ಸತ್ಪದಾರ್ಥ, ಯಾವುದು ಅಸತ್ಪದಾರ್ಥ, ಯಾವುದು ನಿತ್ಯ, ಯಾವುದು ಅನಿತ್ಯ ಎಂದು ವಿಚಾರಮಾಡುತ್ತಾ,ಅನಿತ್ಯವಾದುವುಗಳನ್ನು ತ್ಯಜಿಸುತ್ತ, ನಿತ್ಯವಾದುವುಗಳಮೇಲೆ ಮನಸ್ಸಿಡುತ್ತಾ ಬರಬೇಕು” ಎಂದು ಹೇಳುತ್ತಿದ್ದರು. ಆದ್ದರಿಂದ ವಿಚಾರ ಬುದ್ದಿಯೇನೋ ಆವಶ್ಯಕ. ಆದರೆ ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ವಿಚಾರಮಾಡುತ್ತ ಹೋದರೆ ಕೊನೆಮೊದಲಿಲ್ಲದೇ ಹೋಗುತ್ತದೆ. ಅನೇಕ ಸಂಶಯಗಳು ಹುಟ್ಟಿ ಅವು ಪರಿಹಾರವಾಗುವುದೇ ಇಲ್ಲ. “ ಮದುವೆಯಾದಹೊರತು ಹುಚ್ಚು ಬಿಡದು ಹುಚ್ಚುಬಿಟ್ಟ ಹೊರತು ಮದುವೆಯಾಗದು' ಎಂಬುದೊಂದು ಗಾದೆಯುಂಟು. ಹಾಗೆ ಈ ಸಂಶಯ ನಿವಾರಣೆಯಾದ ಹೊರತು ನಮಗೆ ಶ್ರದ್ಧಾ ಭಕ್ತಿಗಳು ಹುಟ್ಟುವಹಾಗಿಲ್ಲ. ಶ್ರದ್ಧಾಭಕ್ತಿಗಳು ಹುಟ್ಟಿದಹೊರತು ಜ್ಞಾನ ಸಂಪಾದನೆಯಾಗುವಹಾಗಿಲ್ಲ. ಜ್ಞಾನವುಂಟಾಗಿ ಇಂದ್ರಿಯಾತೀತವಾದ ಪರಬ್ರಹ್ಮವಸ್ತುವಿನ ಅನುಭವವಾದ ಹೊರತು ಸಂಶಯಗಳು ದೂರವಾಗುವುದಿಲ್ಲ. [೮] ಇದರ ಮೇಲೆ “ಕುರುಡುನಂಬಿಕೆ” "ಕುರುಡುಭಕ್ತಿ" ಎಂದರೇನು ? ಕಣ್ಣಿರುವನಂಬಿಕೆ ಯಾವುದು? ಇಲ್ಲದುಯಾವುದು ? ನಂಬಿಕೆಯೆಲ್ಲಾ ಕುರುಡೆ ! ನಂಬಿದರೆ ನಂಬಿಕೆಯಾಯ್ತು, ಇಲ್ಲದಿದ್ದರೆ ಜ್ಞಾನ ಅಥವಾ ಅನುಭವವಾಯ್ತು. ವಿಜ್ಞಾನಶಾಸ್ತ್ರಕಾರರು ತಮ್ಮ ಗ್ರಂಥಗಳಲ್ಲಿ ಹೇಳಿರುವ ವಿಷಯಗಳೆಲ್ಲವನ್ನೂ ನಮ್ಮ ಅನುಭವಕ್ಕೆ ತಂದುಕೊಂಡೇ ನಂಬುತ್ತೇವೇನು? ಅವರು ಹೇಳುವುದೆಲ್ಲವನ್ನೂ ಮೂಢರಂತೆ, ಕುರುಡರಂತೆಯೇ ನಂಬುವುದಿಲ್ಲವೋ ? ' ತಕ್ಕ ಯಂತ್ರಗಳೂ ಸಾಧನ ಸಾಮಗ್ರಿಗಳೂ ಅನುಭವವೂ ಇದ್ದರೆ, ನಾವೇ ಅವೆಲ್ಲವನ್ನೂ ಅನುಭವಕ್ಕೆ ತಂದುಕೊಳ್ಳಬಹುದು. ಇಲ್ಲವೇ, ಅವರ ಅಥವಾ ಅಂಥವರ ಹತ್ತಿರಕ್ಕೆ ಹೋದರೆ ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸುವರು.” ಎಂದು ಅದಕ್ಕೆ ಉತ್ತರಕೊಡಬಹುದು. ಹಾಗಾದರೆ ದೇವರವಿಚಾರದಲ್ಲಿ ಬೇಕಾದ ಶ್ರದ್ಧಾಭಕ್ತಿಗಳಿಗೂ ಅದೇ ಉತ್ತರವನ್ನೇ ಹೇಳಿಬಿಟ್ಟರೆ ಸಾಕಾಗಿದೆ.

ಶ್ರೀ ಶ್ರೀ ರಾಮಕೃಷ್ಣ ಪರಮಹಂಸರವರ ಉಪದೇಶವೆಲ್ಲವನ್ನೂ ಇಲ್ಲಿ ಹೇಳುವುದು ಸಾಧ್ಯವಲ್ಲ. ಆದರೆ ಅವರ ಉಪದೇಶದಲ್ಲಿರತಕ್ಕ ಒಂದು ಅನನ್ಯ ಸಾಮಾನ್ಯವಾದ ವಿಶೇಷವು ಮಾತ್ರ ಅವಶ್ಯಕವಾಗಿ ತಿಳಿಯತಕ್ಕದಾಗಿದೆ. ಬಹಳ ಕಾಲದಿಂದಲೂ ದೇವರೊಬ್ಬನೇಯೆಂದು ಹೇಳುತ್ತಿದ್ದರೂ “ ಏಕ೦ಸದ್ವಿಪ್ರಾಬಹುಧಾವದಂತಿ ” ಎಂದು ಹೇಳುತ್ತಿದ್ದರೂ, “ ಸರ್ವದೇವನಮಸ್ಕಾರ: ಕೇಶನಂಪ್ರತಿ ಗಚ್ಛತಿ ” ಎಂದು ಹೇಳುತ್ತಿದ್ದರೂ, ಇದುವರೆಗೆ ಹುಟ್ಟಿದ ಆಚಾರ: ಪುರುಷರು ಯಾರೂ ಎಲ್ಲಾ ಧರ್ಮಗಳ ಅಥವಾ ಮತಗಳ ಉದ್ದೇಶ್ಯವೂ ಒಂದೇ ಎಂಬುದನ್ನು ತಾವು ಕಾರ್ಯತಃ ಅನುಭವಕ್ಕೆ ತಂದುಕೊಂಡು ಪ್ರಪಂಚಕ್ಕೆ ಅದನ್ನು ಇಷ್ಟು ಘಂಟಾಘೋಷವಾಗಿ ಬೋಧಿಸಿರಲಿಲ್ಲ. ಈ ಸರ್ವಧರ್ಮಸಮನ್ವಯವೇ ಅವರಲ್ಲಿ ವಿಶೇಷ. ಜ್ಞಾನ, ಭಕ್ತಿ, ಯೋಗ, ಕರ್ಮ, ಹಿಂದಿನ ಮತ್ತು ಈಚಿನ ಸಮಸ್ತ ಧರ್ಮಗಳು ಇವೆಲ್ಲವುಗಳ ಒಂದು ಅದೃಷ್ಟ ಪೂರ್ವವಾದ ಸಾಮಂಜ ಸ್ಯವೇ ಇವರಲ್ಲಿ ವಿಶೇಷ. ಅವರು ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಸಾರಿ ಸಾರಿ ಹೇಳುತ್ತಿದ್ದರೋ ಹಾಗೆಯೇ ಸಾರಿಸಾರಿ “ ಎಲ್ಲಾ ಧರ್ಮವೂ ಸತ್ಯ ; ಎಷ್ಟು ಮತವೋ ಅಷ್ಟು ಪಥ ; ನಮ್ಮ ದೇವರು ಹೆಚ್ಚು ನಿಮ್ಮ ದೇವರು ಕಡಿಮೆ ಎಂದು ಕೀಳುಬುದ್ಧಿಯಿಂದ ಜಗಳವಾಡಬಾರದು[೯] ಯಾರು ಯಾವ ಮಾರ್ಗವನ್ನು ಅನುಸರಿಸಿದ್ದರೆ ಆ ಮಾರ್ಗವನ್ನೇ ಅನುಸರಿಸಲಿ, ಅವರ ಮಾರ್ಗವನ್ನು ಕೆಡಿಸಬೇಡಿ. ಹಿಂದೂ ಮತದಲ್ಲಿಯೂ ದ್ವೈತಾ ದ್ವೈತ ವಿಶಿಷ್ಟಾದ್ವೈತ ಮತಗಳು ಬೇರೆ ಬೇರೆಯಲ್ಲ.ಅವೆಲ್ಲವೂಒಬ್ಬೊಬ್ಬ ಸಾಧಕನ ಜೀವಮಾನದಲ್ಲಿಯೂ ಒಂದಾದ ಮೇಲೆ ಒ೦ದರಂತೆ ಬರತಕ್ಕ ಅವಸ್ಥಾಭೇಧಗಳು[೧೦] ” ಎಂದು ಮುಂತಾಗಿ ಹೇಳುತ್ತಿದ್ದರು. ಅವರ ಆಚರಣೆಯೂ ಎಷ್ಟು ಮತವೋ ಅಷ್ಟು ಪಥ”ಎಂಬುದಕ್ಕೆ ತಕ್ಕಂತೆಯೇ ಇತ್ತು. ತಲೆಗೆಲ್ಲ ಒಂದೇ ಸೂತ್ರವನ್ನುಅವರು ಎಂದಿಗೂ ವಿಧಿಸಿದವರಲ್ಲ. ಒ೦ದು ಜನರಿಗೂ ಮತ್ತೊಂದುಜನರಿಗೂ ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಸ್ವಭಾವಗುಣ, ಮುಂತಾದುವ್ರಗಳಲ್ಲಿ ವ್ಯತ್ಯಾಸವಿರುವತನಕ ಅವರ ಮಾರ್ಗವೂ ಬೇರೆಯಾಗಬೇಕು. ಆದ್ದರಿಂದ ಪರಮಹಂಸರು ಶಿಷ್ಯರಯೋಗ್ಯತೆಯನ್ನು ನೋಡಿ ಅವರವರಿಗೆ ತಕ್ಕ ಶಿಕ್ಷಣವನ್ನು ಕೊಡುತ್ತಿದ್ದರು ಸಮರ್ಥನಾದ ವೈದ್ಯನಂತೆ ಬೇಕಾದ ಸಾಧನಸಾಮಗ್ರಿಗಳನ್ನೂ ಅನುಭವವನ್ನೂ ಸಂಪಾದಿಸಿಟ್ಟುಕೊಂಡು ಯಾರು ಬಂದರೂ, ಅವನು ಅದುವರೆಗೂ ಅನುಸರಿಸಿದ ಮಾರ್ಗ ಅವನ ಪ್ರಕೃತ ಸ್ಥಿತಿ, ಅವನು ಮುಂದೆ ಮಾಡಬೇಕಾದ ಕಾರ್ಯ, ಎಲ್ಲವನ್ನೂ ಗ್ರಹಿಸಿ ತಕ್ಕ ಚಿಕಿತ್ಸೆಯನ್ನು ಹೇಳುತ್ತಿದ್ದರು. ಇದರಿಂದ ಅನೇಕ ಸಂಪ್ರದಾಯದ ಸಾಧಕರು ಅವರಲ್ಲಿಗೆ ಬಂದು ಸಕಾಲದಲ್ಲಿ ಅವರ ಅಮೋಘವಾದ ಸಹಾಯವನ್ನು ಪಡೆದು ಕೃತಾರ್ಥರಾದರು. ತಮ್ಮ ಶಿಷ್ಯ ಮಂಡಲಿಯಲ್ಲಿಯೇ ಸ್ವಾಮಿ ವಿವೇಕಾನಂದರಿಗೆ ಬಲವಂತಪಡಿಸಿಯಾದರೂ ಜ್ಞಾನಮಾರ್ಗವನ್ನೂ ಮತ್ತೆ ಕೆಲವರಿಗೆ ಭಕ್ತಿ ಮಾರ್ಗವನ್ನೂ ಬೋಧಿಸುತ್ತಿದರು. ಸ್ವಾಮಿ ಅಭೇದಾನಂದರವರು ಭಕ್ತಿ ಮಾರ್ಗವನ್ನು ಅನುಸರಿಸುತ್ತಿದ್ದಾಗ ಮಧ್ಯೆ, ವಿವೇಕಾನಂದರವರು ಅವರನ್ನು ಜ್ಞಾನಮಾರ್ಗಕ್ಕೆ ತಿರುಗಿಸಲು, ಪರಮಹಂಸರು ಬಹಳ ಬೇಸರಪಟ್ಟುಕೊಂಡು ದಾರಿತಪ್ಪಿ ಹೋದ ಸಾಧಕನಿಗೆ ದಾರಿ ತೋರಿಸಿದರು. ಗಿರೀಶ ಚಂದ್ರಘೋಷರಿಗೆ ಇದಾವುದನ್ನೂ ಹೇಳದೇ “ ನನಗೆ ವಕಾಲತ್ತುನಾಮೆ ಕೊಟ್ಟುಬಿಡು. ನೀನು ಮಾಡಬೇಕಾದ ದೇವರ ಪೂಜೆ, ಪುರಸ್ಕಾರ, ಧ್ಯಾನ, ಜಪ ಮುಂತಾದ್ದನ್ನೆಲ್ಲಾ ನಾನು ಮಾಡಿಬಿಡುತ್ತೇನೆ, ನೀನು ಮಾಡುವ ಒಳ್ಳೆಯದು ಕೆಟ್ಟದ್ದೆಲ್ಲಾ ನನಗಿರಲಿ” ಎಂದು ಹೇಳಿ ಅವರ ಭಾರವನ್ನೆಲ್ಲ ತಾವು ಹೊತ್ತುಕೊಂಡರು. ಅಘೋರಮಣಿ ಅಥವಾ “ ಗೋಪಾಲಲೇರಮಾ” ( ಗೋಪಾಲನತಾಯಿ) ಎಂಬಾಕೆಗೆ ಭಕ್ತಿ ಮಾರ್ಗದಲ್ಲಿಯೇ ಕೊನೆಯವರೆಗೂ ಶಿಕ್ಷಣವನ್ನು ಕೊಟ್ಟರು. ಯೋಗಾನಂದ ಸ್ವಾಮಿಗಳು ಒಬ್ಬ ಹಠಯೋಗಿಯ ಹತ್ತಿರಕ್ಕೆ ಹೋಗಿಬರುತ್ತಿದ್ದದ್ದನ್ನು ಕಂಡುಹಿಡಿದು ಬಲವಂತವಾಗಿ ಅದನ್ನು ಬಿಡಿಸಿ “ ನೀನು ಅಲ್ಲಿಗೆ ಏಕೆ ಹೋದದ್ದು ? ಅಲ್ಲಿಗೆ ಹೋಗಬೇಡ ; ಅದೆಲ್ಲಾ ಕಲಿತು ಕೊಂಡರೆ ಶರೀರದ ಮೇಲೆಯೇ ಮನಸ್ಸು ಹೋಗುತ್ತದೆ; ದೇವರ ಕಡೆಗೆ ತಿರುಗುವುದೇ ಇಲ್ಲ” ಎಂದು ಹೇಳಿ ಹರಿಧ್ಯಾನ ಮಾಡುವ ಹಾಗೆ ಏರ್ಪಾಡುಮಾಡಿದರು. ಒಬ್ಬ ಹೆಂಗಸು ಬಂದು, ಧ್ಯಾನ ಜಪಮಾಡುವುದಕ್ಕೆ ಕುಳಿತುಕೊಂಡಾಗಲೆಲ್ಲಾ ಸಂಸಾರದ ಕಡೆಯೇ ಮನಸ್ಸು ಹೋಗುವುದೆಂದೂ, ಅವರ ಯೋಚನೆ, ಇವರ ಮುಖ ಇವೇ ಜ್ಞಾಪಕಕ್ಕೆ ಬರುತ್ತಿದನೆಂದೂ ಮನಸ್ಸಿಗೆ ಸಮಾಧಾನವೇ ಇರುತ್ತಿರಲಿಲ್ಲವೆಂದೂ ಹೇಳಲು, ಆಕೆಗೆ ಯಾರಮೇಲೋ ವಿಶೇಷವಾದ ಮಮತೆಯಿದ್ದದರಿಂದ ಹೀಗಾಗುತ್ತಿತ್ತೆಂದು ತಿಳಿದು, ಆಕೆಯನ್ನು ಕುರಿತು “ ಯಾರಮುಖ ಜ್ಞಾಪಕಕ್ಕೆ ಬರುತ್ತದಮ್ಮ? ಸಂಸಾರದಲ್ಲಿ ಯಾರ ಮೇಲೆ ನಿಮಗೆ ವಿಶೇಷ ಅಂತಃಕರಣ, ಹೇಳಿ” ಎಂದು ಕೇಳಿದರು. ಆಕೆಯು ತನ್ನ ಅಣ್ಣನಮಗು ಒ೦ದು ಇತ್ತೆಂದೂ, ಅದನ್ನು ಸಾಕುತ್ತಿದ್ದಳೆಂದೂ ಅದರಮೇಲೆ ಆಕೆಗೆ ವಿಶೇಷ ಮಮತೆಯೆಂದೂ ಹೇಳಿದಳು. ಅದನ್ನು ಕೇಳಿ ಪರಮಹಂಸರು “ ಒಳ್ಳೆಯದು; ಹಾಗಾದರೆ ಇನ್ನು ಮೇಲೆ ಆ ಹುಡುಗನಿಗೆ ನೀವು ಏನೇನು ಮಾಡುತ್ತೀರಿ---ಊಟ ಮಾಡಿಸುವುದು ಬಟ್ಟೆ ಹಾಕುವುದು---ಅದೆಲ್ಲಾ ಸಾಕ್ಷಾತ್ ಗೋಪಾಲನಿಗೆ ಮಾಡುವಹಾಗೆ ಭಾವಿಸಿ ಮಾಡಿ ; ಗೋಪಾಲರೂಪಿಯಾದ ಭಗವಂತನೇ ಆ ಹುಡುಗನೊಳಗಿರುವ ಹಾಗೂ, ಅವನಿಗೇ ಊಟ ಮಾಡಿಸುವುದು, ಬಟ್ಟೆ ಹಾಕುವುದು, ಸೇವೆಮಾಡುವುದು ಇವನ್ನೆಲ್ಲಾ ಮಾಡುವಹಾಗೂ ಭಾವಿಸಿಕೊಂಡು ಮಾಡಿ ; ಮನುಷ್ಯನಿಗೆ ಮಾಡುತ್ತೇನೆಂದು ಯಾಕಮ್ಮ ಭಾವಿಸಿ ಕೊಳ್ಳಬೇಕು ? ಎಂಥ ಭಾವವೋ ಅಂಥ ಲಾಭ! ” ಎಂದು ಹೇಳಿದರು. ಆ ಕ್ರಮವನ್ನು ಅನುಸರಿಸುತ್ತ ಬರಲು ಆಕೆಗೆ ಶೀಘ್ರದಲ್ಲಿಯೇ ವಿಶೇಷವಾದ ಮಾನಸಿಕ ಉನ್ನತಿ ಯುಂಟಾಯಿತಂತೆ. ಮತ್ತೊಬ್ಬಾಕೆಯು ಬಂದು " ಸ್ವಾಮಿ ನನಗೆ ಬಹಳವಾಗಿ ದೇವರ ಧ್ಯಾನ ಮಾಡಬೇಕೆಂದಾಶೆಯಿದೆ. ಮನಸ್ಸನ್ನೆಲ್ಲಾ ಅವನಮೇಲೆ ಇಟ್ಟುಬಿಡಬೇಕೆನ್ನುತ್ತೇನೆ; ಆದರೆ ಏನೇನು ಮಾಡಿದರೂ ಮನಸ್ಸೇ ಬಗ್ಗುವುದಿಲ್ಲವಲ್ಲ! ಏನುಮಾಡಲಿ ?” ಎಂದು ಕೇಳಿದಳು. ಅದಕ್ಕೆ ಪರಮಹಂಸರು “ ಅವನಮೇಲೆ (ದೇವರಮೇಲೆ) ಭಾರಹಾಕಿ ಬಿಡಬೇಕಮ್ಮ! ಗಾಳಿಗೆ ಸಿಕ್ಕಿದ ಎಂಜಲೆಲೆಯ ಹಾಗಿದ್ದು ಬಿಡಬೇಕು. ಅದು ಹ್ಯಾಗೆ ಅಂತೀರಿ ? ಎಲೆ ಬಿದ್ದಿದೆ. ಅದನ್ನು ಗಾಳಿ ಎಲ್ಲೆಲ್ಲಿಗೆ ಎತ್ತಿಕೊಂಡುಹೋದರೆ ಅಲ್ಲಲ್ಲಿಗೆ ಹೊರಟುಹೋಗುತ್ತದೆ.ಅದರ ಹಾಗೆ. ಅವನ ಮೇಲೆ ಭಾರಹಾಕಿದ್ದು ಬಿಡಬೇಕು. ಚೈತನ್ಯವಾಯುವು ಹ್ಯಾಗೆ ಹ್ಯಾಗೆ ಮನಸ್ಸನ್ನು ತಿರುಗಿಸುತ್ತೋ ಹಾಗೆ ಹಾಗೆತಿರುಗಬೇಕು---ಇಷ್ಟೆ! ಇನ್ನೇನು? ” ಎಂದರು. ಹೀಗೆ ಹೆಂಗಸರು,ಗಂಡಸರು, ಯುವಕರು, ಯುವತಿಯರು, ವೈದ ರು, ವಿಧವೆಯರು,ಸಧವೆಯರು ಯಾರು ಬಂದರೂ ಅವರವರಿಗೆ ತಕ್ಕ ಮಾರ್ಗವನ್ನುಅವರವರಿಗೆ ತಕ್ಕ ರೀತಿಯಲ್ಲಿ ಬೋಧಿಸುತ್ತಿದ್ದರು. ಮೇಲೆ ಕೊಟ್ಟರುವ ಕೆಲವು ಉದಾಹರಣೆಗಳಿಂದ ಒಬ್ಬರಿಗೆ ಹೇಳಿದ ಮಾರ್ಗವುಮಿಕ್ಕವರಿಗೆ ಎಂದಿಗೂ ಸರಿಹೋಗಲಾರದೆಂದು ಪಾಠಕರೇ ತಿಳಿದುಕೊಳ್ಳಬಹುದು.

ಆದರೆ ಕೆಲವು ಅಸಹ್ಯಕರಗಳಾದ ಕೈಶಕರಗಳಾದ ತಾಂತ್ರಿಕ,ಕಾಪಾಲಿಕ ಮುಂತಾದ ಮಾರ್ಗಗಳನ್ನು ಮಾತ್ರ ಯಾರಿಗೂಅನುಸರಿಸುವ ಹಾಗೆ ಹೇಳುತ್ತಿರಲಿಲ್ಲ. ಅವೆಲ್ಲ ನಿರುಪಯೋಗವೆಂದಾಗಲಿ ಸುಳ್ಳೆಂದಾಗಲಿ ಅವರ ಅಭಿಪ್ರಾಯವಲ್ಲ. ಆ ವಿಚಾರವಾಗಿ “ಎಲೋ ದ್ವೇಷಬುದ್ದಿ ಯಾಕೋ ? ಅದೂ (ಕಾಪಾಲಿಕಅಥವಾ ತಾಂತ್ರಿಕಮಾರ್ಗ) ಒಂದುಮಾರ್ಗ. ಆದರೆ ಕೊಳಕುಮಾರ್ಗ. ಒಂದು ಮನೆಯೊಳಗೆ ಹೋಗುವುದಕ್ಕೆ ಎಷ್ಟೋ ಬಾಗಿಲುಗಳಿವೆ. ದೊಡ್ಡ ಬೀದಿಯ ಬಾಗಿಲಿದೆ, ಕಿಟಕಿಯ ಬಾಗಿಲಿದೆ.ಗುಡಿಸುವವನು ಬರುವುದಕ್ಕೆ ಹಿತ್ತಿಲುಕಡೆ ಒಂದು ಬಾಗಿಲೂಇದೆ. ಎಲ್ಲವನ್ನೂ ಬಿಟ್ಟು ಈ ಹಿತ್ತಿಲಿನ ಕೊಳಕು ಬಾಗಿಲಿಂದಏಕೆ ಬರಬೇಕು ? ” ಎಂದು ಹೇಳುತ್ತಿದರು. ಇದಕ್ಕೆ ಕಾರಣವೇನೆಂದರೆ ಅವರು ನಮ್ಮಂತೆ ಸ್ಕೂಲವಾದ ದೇಹವನ್ನು ನೋಡದೆಪ್ರತಿಯೊಬ್ಬರ ಮನಸ್ಸನ್ನೂ ಹೃದಯವನ್ನೂ ನೋಡಬಲ್ಲವರಾಗಿದರು. ರೋಗಿಯ ಸ್ಥಿತಿಯನ್ನು ತಿಳಿದುಕೊಂಡ ವೈದ್ಯನಂತೆ ಅವರವರ ಮನಸ್ಸು, ಸ್ವಭಾವ, ಸಂಸ್ಕಾರ, ಮುಂತಾದುವುಗಳಿಗೆ ಸರಿಯಾದ ಮಾರ್ಗವನ್ನು ವಿಧಿಸಿ ಅವಶ್ಯವಿದ್ದರೆ ಅವುಗಳನ್ನು ಹೇಗೆಬೇಕೋ ಹಾಗೆ ತಿರುಗಿಸುತ್ತಿದ್ದರು!
ಪಾಶ್ಚಿಮಾತ್ಯರೂ, ಅವರ ರೀತಿ ನೀತಿಗಳನ್ನು ಮೆಚ್ಚತಕ್ಕ ನಮ್ಮ ದೇಶಿಯರೂ “ ನಮ್ಮದೇಶದ ಸ್ವಾಮಿಗಳೂ, ಸನ್ಯಾಸಿಗಳೂ, ಮಠಾಧಿಪತಿಗಳೂ, ಎಲ್ಲರೂ ಶುದ್ಧ Selfish (ಸ್ವಾರ್ಥಪರರು) : ತಮ್ಮ ಗತಿಯನ್ನು ತಾವು ನೋಡಿಕೊಂಡರೆ ಸರಿ; ಅವರು ನಿಜವಾಗಿಯೂ ಅಂಥ ಮೋಕ್ಷಸಾಧಕವಾದ ವಿಷಯಗಳನ್ನು ತಿಳಿದುಕೊಂಡಿದ್ದರೆ ಊರೂರಿಗೂ ಹೋಗಿ ಲೆಕ್ಟರುಗಳನ್ನು ಕೊಡಲಿ. ” ಎಂದು ಹೇಳಿರುವುದನ್ನು ಕೇಳಿರಬಹುದು. ಉಪನ್ಯಾಸಗಳನ್ನು ಕೊಡುವುದರಿಂದಲೇ ಪ್ರಪಂಚ ಉದ್ಧಾರವಾಗುವಂತೆ ಈಗಿನ ಕಾಲದಲ್ಲಿ ಜನರು ತಿಳಿದುಕೊಂಡಿರುವ ಹಾಗಿದೆ. ನಿಜವಾದ ಗುರುವು ಉಪನ್ಯಾಸಗಳನ್ನೇ ಕೊಡಬೇಕೆ ? ಅವನ ದರ್ಶನ ಮಾತ್ರದಿಂದ ಜನರು ಕೃತಾರ್ಥರಾಗರೆ? ಗುರುವಿನ ಮನಸ್ಸಿನಲ್ಲಿ ಭಕ್ತನಿಗೆ ಜ್ಞಾನೋದಯವಾಗಲಿ ಎಂಬ ಕೋರಿಕೆ ಅಂಕುರಿಸಿದರೆ ಸಾಲದೆ ? ಅವರು ಊರಿಂದೂರಿಗೆ ಅಲೆಯುತ್ತಾ ಹೋಗಬೇಕೆ? ಅವರಲ್ಲಿ ಮಹಿಮೆ ಇದ್ದರೆ ಶಿಷ್ಯರೇ ಹುಡುಕಿಕೊಂಡು ಬರುವುದಿಲ್ಲವೇ? ಪರಮಹಂಸರು “ ಹೂ ಅರಳಿ ಮಕರಂದದಿಂದ ತುಂಬಿದರೆ ದುಂಬಿಗಳು ತಾವಾಗಿಯೇ ಹುಡುಕಿಕೊಂಡು ಬರುವುವು. ಅವುಗಳಿಗೆ ಯಾರೂ ಮಂತ್ರಾಕ್ಷತೆ ಕೊಟ್ಟು ಕರೆಸಬೇಕಾಗಿಲ್ಲ.” ಎಂದು ಹೇಳುತ್ತಿದರು. ಹಾಗಲ್ಲದೆ ನಿಸ್ಸಾರವಾದ, ಒಣಗಿಹೋದ ನಿರ್ಗಂಧ ಕುಸುಮವು ದುಂಬಿಗಳ ಮೇಲೆ ಹೋಗಿಬಿದ್ದರೆ ತಾನೇ ಆ ದುಂಬಿಗಳಿಗೆ ಆನಂದವುಂಟಾಗುವುದೇ? ಮಧುವಿನಿಂದ ತುಂಬಿ ತುಳುಕುತ್ತಿರುವ ಹೂವಿನಿಂದ ಅದನ್ನು ಆಸ್ವಾದನೆ ಮಾಡಲು ಶಕ್ತಿಯಿಲ್ಲದ ಹುಳು ಹುಬಟೆಗಳಿಗೆ ತಾನೇ ಪ್ರಯೋಜನವಾಗುವುದೋ ? ಆದ್ದರಿಂದ ಒಂದುಕಡೆ ಗುರುವು ಜ್ಞಾನವನ್ನು ಪಡೆದು ಅದನ್ನು ಶೇಖರಿಸಿ ಇತರರಲ್ಲಿ ಧರ್ಮಶಕ್ತಿಯನ್ನು ಎಬ್ಬಿಸಲು ಸಮರ್ಥನಾಗಿರಬೇಕು. ಮತ್ತೊಂದು ಕಡೆ ಶಿಷ್ಯನು ನಿಜವಾದ ಶ್ರದ್ದೆ, ವೈರಾಗ್ಯ, ಪವಿತ್ರತೆ, ಮೋಕ್ಷ ಪಡೆಯುವುದಕ್ಕೆ ಆಶೆ, ಇವೆಲ್ಲವನ್ನೂ ಉಳ್ಳವನಾಗಿರಬೇಕು. ಹೀಗೆ ಮುಮುಕ್ಷುತ್ವವಿದ್ದರೆ ಮಹಾಪುರುಷ ಸಂಶಯವೂ ಉಂಟಾಗಿಯೇ ಆಗುವುದು-ಆಗಲೇಬೇಕು. ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ಇಂದಿಗೂ ನಾಳೆಗೂ, ಹಸಿದು ಬಾಯಾರಿ ಬೇಸತ್ತು ಬಂದು “ ದೇಹಿ” ಎಂದರೆ [೧೧] ಧರ್ಮಭೂಮಿಯಾದ ನಮ್ಮದೇಶದಲ್ಲಿ “ ನಾಸ್ತಿ" ಎನ್ನುವಹಾಗಿಲ್ಲ. ನಾವೇ ಸಂಶಯಾತ್ಮರು. ನಮ್ಮಲ್ಲಿಯೇ ನಮಗೆ ನಂಬುಗೆಯಿಲ್ಲ. ದೇವರಲ್ಲಿ ಕೇಳಬೇಕೆ ? ಅಲ್ಲದೆ ನಮ್ಮಲ್ಲಿ ತೀವ್ರ ವೈರಾಗ್ಯವು ಹುಟ್ಟಿ ಬಿಟ್ಟ೦ತೆ ಕಾಣುತ್ತದೆ. ಆ ವೈರಾಗ್ಯವು ಅಭಾವ ವೈರಾಗ್ಯವೋ ಸ್ಮಶಾನ ವೈರಾಗ್ಯವೋ ಅಥವಾ ನಮ್ಮ ನಮ್ಮ ಕರ್ತವ್ಯವನ್ನು ಮಾಡುವುದಕ್ಕೆ ಕೈಯಲ್ಲಿ ಹರಿಯದೆ ಹುಟ್ಟಿದ ಸುಳ್ಳು ವೈರಾಗ್ಯವೋ ಹೊರತು ನಿಜವಾದ ವೈರಾಗ್ಯವಲ್ಲ. ಈ ವಿಚಾರದಲ್ಲಿ ನಮ್ಮ ಕಳ್ಳಮನಸ್ಸೇ ನಮ್ಮನ್ನು ಮೋಸ ಪಡಿಸುವುದು. ಏಕೆಂದರೆ ಉತ್ತರ ಕ್ಷಣದಲ್ಲಿಯೇ ಪರಮಹಂಸರು ಆಜೀವನವೂ ಮಾತುಮಾತಿಗೂ ಒತ್ತಿಒತ್ತಿ ಪ್ರಸ್ತಾಪಿಸುತ್ತಿದ್ದ ಕಾಮಿನೀಕಾಂಚನಗಳು ಬಾಧಿಸ ತೊಡಗುವುವು. ನಿಜವಾದ ವೈರಾಗ್ಯಕ್ಕೆ ಕಾಮಿನೀಕಾಂಚನಗಳ ಮೇಲಣ ಆಶೆಯು ಪೂರ್ತಿಯಾಗಿ ಹೋಗುವುದೇ ಲಕ್ಷಣ. ನಿಜವಾದ ವೈರಾಗ್ಯ, ಶ್ರದ್ಧೆ, ಅಭ್ಯಾಸಗಳಿದ್ದು ಕಾಮಿನೀಕಾಂಚನಗಳನ್ನು ತ್ಯಜಿಸಿ' ಮೋಕ್ಷವನ್ನು ಸಾಧಿಸಬೇಕೆಂದು ಆಸಕ್ತಿ ಇರುವವನಿಗೆ ಸಕಾಲದಲ್ಲಿ ಗುರುವು ದೊರೆತೇ ದೊರೆಯುವನು. ಅವಶ್ಯನಿದ್ದರೆ ಗುರುವೇ ಶಿಷ್ಯನನ್ನು ಹುಡುಕಿಕೊಂಡು ಹೋಗುವನು. ಪರಮಹಂಸರ ಜೀವನ ಚರಿತ್ರೆಯಿಂದಲೇ ಇದಕ್ಕೆ ಉದಾಹರಣೆಗಳನ್ನು ಕೊಡಬಹುದು.

ಈಗಿನ ಕಾಲದಲ್ಲಿ ಹಿಂದೂಧರ್ಮವು ನಮ್ಮದೇಶದ ಅವ ನತಿಗೆ ಮುಖ್ಯ ಕಾರಣವೆಂದೂ, ದೇಶೋನ್ನತಿಗೆ ದೊಡ್ಡ ಅಡಚಣೆ ಯೆಂದೂ ಕೂಗಿಕೊಳ್ಳುವುದು ರೂಢಿಯಾಗಿದೆ. ಧರ್ಮವು ಎಂದೂ ನಮ್ಮದೇಶದ ಅವನತಿಗೆ ಕಾರಣವಲ್ಲವೇ ಅಲ್ಲ. ಅದಕ್ಕೆ ಕಾರಣವನ್ನು ಬೇರೆಕಡೆ ಹುಡುಕಬೇಕು. ಧರ್ಮವೆಂಬ ತಳಹದಿಯ ಮೇಲೆಯೇ ಸಾವಿರಾರು ವರ್ಷಗಳಿಂದ ಭಾರತೀಯರ ಸಮಾಜ ರೀತಿನೀತಿಗಳು ನಿಂತುಕೊಂಡಿವೆ. ಇಷ್ಟು ದಿನಗಳಾದರೂ ಸ್ವಲ್ಪವೂ ಅಲ್ಲಾಡದಿರುವ ಆ ತಳಹದಿಯ ಮೇಲೆಯೇ ಮುಂದಕ್ಕೂ ಕಟ್ಟಡವನ್ನು ಕಟ್ಟಿಕೊಂಡು ಹೋಗುವುದೇ ನನಗೆ ಸುಖಕರ, ಶ್ರೇಯಸ್ಕರ, ಕ್ಷೇಮಕರ. ಇದಕ್ಕೆ ದೇಶವಾತ್ಸಲ್ಯವ ತುಂಬಿತುಳುಕುತ್ತಿದ್ದ ಸ್ವಾಮಿ ವಿವೇಕಾನಂದರೇ ಉದಾಹರಣೆ. ನಮ್ಮ ಈ ಧರ್ಮದ ಸಹಾಯದಿಂದ ಎಲ್ಲರೂ ಸ್ವಾಮಿ ವಿವೇಕಾನಂದರಂತಾದರೆ ಭಾರತ ಭೂಮಿಯ ಪುಣ್ಯಕ್ಕೆ ಎಣೆಯೇನು ?

ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ |
ನಚಾಶುಶ್ರೂಷವೇ ವಾಚ್ಯಂ ನಚಮಾಂ ಯೋಭ್ಯಸೂಯತಿ

 1. ೩೦ ಮತ್ತು ೫೪ ನೇ ಪುಟಗಳನ್ನು ನೋಡಿ
 2. Cf. I have come to fulfil and not to destroy.-Christ.
 3. ಈಗ ಕನ್ನಡದಲ್ಲಿ ಪ್ರಕಟವಾಗಿರುವ ಉಪದೇಶವಾಕ್ಯಾವಳಿಯನ್ನು ನೋಡಿದರೆ ಇ೦ಥ ಸಾಮತಿಗಳು ಮತ್ತೂ ಕಥೆಗಳು ಎಷ್ಟೋ ಸಿಕ್ಕುವುವು.
 4. ಈ ವಿಷಯವನ್ನು ಶಾರದಾನಂದ ಸ್ವಾಮಿಗಳು ತಮ್ಮ ಗ್ರಂಥದಲ್ಲಿ ವಿಸ್ತಾರವಾಗಿ ವಿಚಾರಮಾಡಿದ್ದಾರೆ.
 5. ತೀವ್ರ ಸ೦ವೇಗಾನಾಮಾಸನ್ನಃ. ಯೋ. ಸೂ.
 6. ಯೋಗಿನಾಮಪಿ ಸರ್ವೆಷಾ೦ ಮದ್ಗತೇನಾ೦ತರಾತ್ಮನಾ | ಶ್ರದ್ಧಾವಾನ್ ಭಜತೆಯೋಮಾ೦ ಸಮೇಯುಕ್ತ ತಮೋಮತಃ || ಗೀತಾ ೬-೪೭
  ಮಯ್ಯಾವೇಶ್ಯಮನೋಯೇಮಾ೦. ನಿತ್ಯಯುಕ್ತಾ ಉಪಾಸತೆ | ಶ್ರದ್ಧಯಾಪರಯೋಪೇತಾ ಸ್ತೇಮೇಯುಕ್ತ ತಮಾಮತಾಃ || ಗೀತಾ ೧೨-೨.
 7. ತೇ ಸಮಾಧಾವು ಪಸರ್ಗಾವು ತಾನೇ ಸಿದ್ಧಯಃ--ಯೋ. ಸೂ.
 8. ಜ್ಞಾನಸ೦ಛಿನ್ನ ಸ೦ಶಯಂ-ಗೀತಾ. ಭಿದ್ಯತೆಹೃದಯಗ್ರ೦ಥಿಶ್ಫಿದ್ಯಂತೆ ಸರ್ವಸ೦ಶಯಾಃ |.... ತಸ್ಮಿನ್ ದೃಷ್ಟೆ ಪರಾವರೆ.---ಮುಂಡಕೋಪನಿಷತ್ತು.
 9. ಯಾರಾದರೂ ಕಾಳಿ ಹೆಚ್ಚು- ಕೃಷ್ಣ ಹೆಚ್ಚು ಎ೦ದು ಜಗಳವಾಡುತ್ತಿದ್ದದ್ದನ್ನು ಕಂಡರೆ ಪರಮಹ೦ಸ ರು " ಇದೇನೋ ನಿನ್ನ ಹೀನ ಬುದ್ದಿ ! ನಿನ್ನ ಇಷ್ಟದೇವತೆಯೇ ಕಾಳಿ ಕೃಷ್ಣ ಎಲ್ಲ ಆಗಿದ್ದಾನೆಂದು ತಿಳಿದುಕೊ೦ಡಿರು. ಹಾಗೆ೦ದರೆ ನಿನ್ನ ಇಷ್ಟದೇವತೆಯನ್ನು ಬಿಟ್ಟು ಮತ್ತೊಂದನ್ನು ಪೂಜಿಸಬೇಕೆಂದು ಹೇಳಿದ್ದಲ್ಲ. ದ್ವೇಷ ಬುದ್ದಿಯನ್ನು ಬಿಟ್ಟು ಬಿಡಬೇಕೆ೦ದರ್ಥ, ನಿನ್ನ ಇಷ್ಟದೇವತೆಯ ಕೃಷ್ಣನೂ, ಗೌರಾಂಗನೂ ಆಗಿದ್ದಾನೆ--ಈ ಜ್ಞಾನವನ್ನು ಒಳಗೆ ನಿಶ್ಚಯಬುದ್ದಿಯಿ೦ದ ಇಟ್ಟುಕೊಳ್ಳಬೇಕು. ನೋಡು ! ಹೆ೦ಗಸು ಗಂಡನಮನೆಗೆ ಹೋದರೆ, ಮಾನ, ಅತ್ತೆ, ಅತ್ತಿಗೆ, ಮೈದನ ಮು೦ತಾದವರೆಲ್ಲರಲ್ಲಿಯೂ ಮರ್ಯಾದೆಯಿ೦ದಲೂ, ಭಕ್ತಿಯಿಂದಲೂ ಯಥಾಯೋಗ್ಯವಾಗಿ ನಡೆದುಕೊಳ್ಳುತ್ತಾಳೆ. ಆದರೆ ತನ್ನ ಮನಸ್ಸಿನಲ್ಲಿದ್ದದ್ದನ್ನೆಲ್ಲಾ ನಿಸ್ಸಂಕೋಚವಾಗಿ ಹೇಳುವುದು ಮಲಗುವುದು ಕೂರುವುದು ಇದೆಲ್ಲ ಕೇವಲ ತನ್ನ ಗ೦ಡನಸ೦ಗಡ ಮಾತ್ರ. ತನ್ನ ಗ೦ಡನಿ೦ದ ಅತ್ತೆ ಮಾವ ಮು೦ತಾದವರೆಲ್ಲರೂ ತನ್ನವರಾಗಿದ್ದಾರೆ೦ದು ಅವಳಿಗೆ ಗೊತ್ತಿರುತ್ತದೆ. ಅದರ ಹಾಗೆ ನಿನ್ನ ಇಷ್ಟ ದೇವತೆ ಯನ್ನು ಗ೦ಡನ ಹಾಗೆ ಸೇವಿಸು. ನಿನ್ನ ಇಷ್ಟದೇವತೆಯೊಡನೆ ಸಂಬಂಧವಿರುವದ್ದರಿಂದಲೇ ಅದರ ಇತರ ರೂಪಗಳೊಡನೆ ಸ೦ಬ೦ಧ ; ಅವುಗಳಲ್ಲೆಲ್ಲಾ ಏಕರೀತಿಯಾಗಿ ಶ್ರದ್ಧಾ ಭಕ್ತಿಯನ್ನು ಇಟ್ಟುಕೊಂಡಿರಬೇಕು.---ಹೀಗೆ೦ದು ತಿಳಿದುಕೊ. ಹೀಗೆ ತಿಳಿದುಕೊ೦ಡು ದ್ವೇಷಬುದ್ದಿಯನ್ನು ದೂರಮಾಡು : ಗೌರೀಪ೦ಡಿತನು ಹೇಳುತ್ತಿದ್ದದ್ದೇನೆಂದರೆ " ಕಾಳೀ ಮತ್ತು ಗೌರಾ೦ಗ ಇಬ್ಬರೂ ಒಂದೇ ಎಂದು ತಿಳಿದು ಬಿಟ್ಟರೆ ಆಗ ನಿಜವಾದ ಜ್ಞಾನವು ಉತ್ಪನ್ನವಾಯಿತೆಂದು ಹೇಳಬಹುದು "--ಎ೦ದು ಹೇಳುತ್ತಿದ್ದರು.
 10. ಈ ಸ೦ದರ್ಭದಲ್ಲಿ ಮಹಾಜ್ಞಾನಿಯಾದ ಹನುಮ೦ತನ ಕಥೆಯನ್ನು ಹೇಳುತ್ತಿದ್ದರು. ಒಂದು ಸಲ ಶ್ರೀರಾಮಚಂದ್ರನು, ಹನುಮ೦ತನನ್ನು ' ನೀನು ನನ್ನನ್ನು ಯಾವಭಾವದಲ್ಲಿ ಕಾಣುವೆ ? ನನ್ನನ್ನುಯಾವಭಾವದಿಂದ ಕಂಡುಕೊಂಡು ಪೂಜೆ ಮಾಡುವೆ ? ' ಎ೦ದು ಕೇಳಿದನ೦ತೆ. ಆಗ ಆ೦ಜನೇಯನು, " ಹೇ ರಾಮ ! ಯಾವಾಗ ನನಗೆ ಈದೇಹ ಬುದ್ದಿ ಇರುತ್ತದೆಯೋ, ಅ೦ದರೆ ನಾನು ದೇಹವೆ೦ದು ತಿಳಿದುಕೊಂಡಿರುತ್ತೇನೆಯೋ, ಆಗ ನೀನು ಪ್ರಭು, ನಾನು ದಾಸ, ನೀನುಸೇವ್ಯ ನಾನು ಸೇವಕ, ನೀನು ಪೂಜ್ಯ, ನಾನು ಪೂಜಕ ಎಂದು ತಿಳಿದುಕೊ೦ಡಿರುತ್ತೇನೆ. ಯಾವಾಗ ನಾನು ಮನಸ್ಸು ಬುದ್ದಿ ಗಳಿ೦ದ ಕೂಡಿದಜೀವಾತ್ಮನೆಂಬ ಭಾವವಿರುತ್ತದೆಯೋ ಆಗ ನೀನು ಪೂರ್ಣ, ನಾನುಅ೦ಶ ಎ೦ದು ತಿಳಿದುಕೊಂಡಿರುತ್ತೇನೆ. ಮತ್ತು ಯಾವಾಗ ನಾನುಉಪಾಧಿರಹಿತವಾದ ಶುದ್ಧವಾದ ಆತ್ಮವೆಂದು ಸಮಾಧಿಯಲ್ಲಿ ಅನುಭವಕ್ಕೆ ತಂದುಕೊಳ್ಳುತ್ತೇನೆಯೋ ಆಗ ನೀನು ಯಾರೋ ನಾನು ಅವನೇ.ನೀನೂ ನಾನೂ ಒ೦ದೇ, ಏನೂ ಭೇದವಿಲ್ಲ, ಎಂದು ತಿಳಿದುಕೊಳ್ಳುತ್ತೇನೆ ” ಎ೦ದು ಉತ್ತರಕೊಟ್ಟನಂತೆ.
 11. "Ask, and it shall be given".—Christ.