ವಿಷಯಕ್ಕೆ ಹೋಗು

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಸಾಧಕಭಾವ ಸಮಾಲೋಚನೆ

ವಿಕಿಸೋರ್ಸ್ದಿಂದ

90845ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ — ಸಾಧಕಭಾವ ಸಮಾಲೋಚನೆ1919ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ

ಸ್ವಾಮಿವಿವೇಕಾನಂದರೇ ಮುಂತಾದ ಶಿಷ್ಯರು ಪರಮಹಂಸರ ಸೇವೆಗೆ ಬಂದು ನಿಂತಾಗ ಅವರ ಸಾಧನೆಗಳೆಲ್ಲವೂ ಮುಗಿದುಹೋಗಿದ್ದುವು. ತೋತಾಪುರಿ, ಭೈರವಿ ಬ್ರಾಹ್ಮಣಿ ಮುಂತಾದ ಗುರುಸಾಧಕರೆಲ್ಲರೂ ದಕ್ಷಿಣೇಶ್ವರನನ್ನು ಬಿಟ್ಟು ಹೊರಟುಹೋಗಿದ್ದರು. ಮಧುರಾನಾಥ, ರಾಣಿ ರಾಸಮಣಿ, ರಾಮೇಶ್ವರ ಮುಂತಾದವರೆಲ್ಲರೂ ಸ್ವರ್ಗಸ್ಥರಾಗಿದ್ದರು. ಈ ಸಾಧನೆಗಳನ್ನೆಲ್ಲ ಕಣ್ಣಾರೆ ನೋಡಿ, ಅವುಗಳಲ್ಲಿ ಆಸಕ್ತಿಯಿಟ್ಟು ತತ್ವಾವಧಾನ ಮಾಡಿನೋಡಿದ ಜನರು ಆಗ ಯಾರೂ ಇರಲೇ ಇಲ್ಲವೆಂದು ಹೇಳಬಹುದು. ಆದ್ದರಿಂದ ಪರಮಹಂಸರು ತಮ್ಮ ಸಾಧನಗಳನ್ನು ಕುರಿತು ಪ್ರಸ್ತಾಪಿಸಿ ಶಿಷ್ಯ ಮಂಡಲಿಗೆ ವಿಸ್ತಾರವಾಗಿ ಅವೆಲ್ಲವನ್ನೂ ತಿಳಿಯಪಡಿಸದಿದರೆ ಅವರು ಮಾಡಿದ ಸಾಧನಗಳು ಜನಗಳಿಗೆ ತಿಳಿಯಬರುತ್ತಲೇ ಇರಲಿಲ್ಲ ವೆಂದು ತೋರುತ್ತದೆ. ಈ ಭಾಗವೆಲ್ಲ ಬಹುಮಟ್ಟಿಗೆ ಅವರು ಸ್ವಂತವಾಗಿ ಆಡಿದ ಮಾತುಗಳಿಂದಲೇ ಗ್ರಥಿತವಾಗಿದೆ. ಅಲ್ಲಲ್ಲಿ ಅವರ ಮಾತುಗಳನ್ನೆ ವಾಕ್ಯವೇಷ್ಟನದಲ್ಲಿ ಬರೆದಿರುವುದನ್ನು ನೋಡಿ ಪಾಠಕರು ಆಗಲೇ ಈ ವಿಷಯವನ್ನು ಸ್ವಲ್ಪ ಮಟ್ಟಿಗಾದರೂ ಊಹಿಸಿರಬಹುದು.

ನಮ್ಮ ಕಡೆಯಲ್ಲಿ ಅನೇಕರು ಈ ಸಾಧನೆಗಳ ಹೆಸರನ್ನೇ ಕೇಳಿಲ್ಲ. ಪ್ರಾಣಾಯಾಮ ಮಾಡುವುದು ಬಟ್ಟೆಯನ್ನು ನುಂಗಿ ತೆಗೆದು ಅಥವಾ ದೇಹದೊಳಕ್ಕೆ ನೀರನ್ನು ಸೆಳೆದುಕೊಂಡು ಶುದ್ದಿ ಮಾಡಿಕೊಳ್ಳುವುದು ಮುಂತಾದುವುಗಳನ್ನು ಕೆಲವರು ನೋಡಿರ ಬಹುದು. ಮತ್ತೆ ಕೆಲವರು ಕಾಪಾಲಿಕ ಮುಂತಾದವರ ಪೂಜೆಪುರಸ್ಕಾರಗಳ ವಿಚಾರವಾಗಿ ಗ್ರಂಥಗಳಲ್ಲಿ ಓದಿರಬಹುದು. 'ದೇವಿಯ ಉಪಾಸಕರು', 'ನರಸಿಂಹದೇವರ ಉಪಾಸಕರು' ಎಂದು ಮುಂತಾಗಿ ಜನಗಳು ಹೇಳುತ್ತಿರುವುದನ್ನು ಕೇಳಿರಬಹುದು. ಇವೆಲ್ಲವೂ ಉದ್ದೇಶ್ಯಹೀನವಾಗಿ, ಮಾಡುವವರಿಗೆ ಅಹಂಕಾರ ಜನಕವಾಗಿ, ನೋಡುವವರಿಗೆ ಕುತೂಹಲ ಜನಕವಾಗಿ, ಕ್ಷುದ್ರವಾದ ಫಲಜನಕವಾಗಿ ಪರಿಣಮಿಸಿವೆಯೆಂದು ಹೇಳಿದರೆ ಸುಳ್ಳಾಗಲಾರದು. ಹರಣೆಗಾಗಿ ಶ್ರೀಚಕ್ರ ಮುಂತಾದುವುಗಳನ್ನು ಪೂಜೆಮಾಡ ತಕ್ಕವರು ಅದರ ವಿಸ್ತಾರವಾದ ಪೂಜಾ ಕಲಾಪಗಳಲ್ಲಿ ಮುಳುಗಿಹೋಗಿ ಹೊರಗಿನ ಆಡಂಬರಗಳನ್ನೇ ಮೆಚ್ಚುತ್ತಿರುವರು. ಸಂಚಿತನಾದ ಅಲ್ಪ ಸ್ವಲ್ಪ ಯೋಗಶಕ್ತಿಯನ್ನು ಮತ್ತೊಬ್ಬರಿಗೆ ಕೇಡುಮಾಡುವುದರಲ್ಲಿಯೋ, ರೋಗ ರುಜಿನಗಳನ್ನು ನಾಶಮಾಡುವದರಲ್ಲಿಯೋ ಪ್ರಯಮಾಡಿಬಿಡುವರು. ಜನಗಳು ಇವರನ್ನು ಹೊಗಳಿದರೆಂದರೆ ಅಹಂಕಾರವು ಹೆಚ್ಚುವುದು.( ಕಾಮಕ್ರೋಧಾದಿಗಳನ್ನು ತಡೆದು, ಸಂಯವನ್ನು ಬಲಪಡಿಸಿಕೊಂಡು, ಅಭ್ಯಾಸ ವೈರಾಗ್ಯಗಳ ಮೂಲಕ ಚಿತ್ತೈಕಾಗ್ರತೆಯನ್ನೂ ಚಿತ್ರಶುದ್ಧಿಯನ್ನೂ ಪಡೆದು ಈಶ್ವರಸಾಕ್ಷಾತ್ಯಾರಮಾಡಿಕೊಳ್ಳುವುದೇ ಈ ಸಾಧನಗಳ ಉದ್ದೇಶ.) ಅದಕ್ಕೆ ಗಮನಕೊಡದೆ ಇನ್ನೂ ಕಾಮಕ್ರೋಧಗಳಿಗೆ ಅವಕಾಶಕೊಡುತ್ತ ಅಹಂಕಾರ ಮಮಕಾರಗಳ ಪಾಶಕ್ಕೆ ಸಿಕ್ಕಿ ತಾವೂ ಮರುಳಾಗಿ ಜನಗಳನ್ನೂ ಮರುಳುಗೊಳಿಸುತ್ತ ಹೋದರೆ ಸಾಧನಗಳ ಉದಾರ ವಾದ ಉದ್ದೇಶವೇ ಮರೆತು ಹೋಗಿ, ಇಂಥ ತಾಂತ್ರಿಕ ಮುಂತಾದ ಸಾಧಕರಲ್ಲಿ ಒಂದು ವಿಧವಾದ ಭಯವೂ ಅಸಹ್ಯತೆಯೂ ಹುಟ್ಟಿದರೆ ಆಶ್ಚರ್ಯವೇನು?

ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧಕಭಾವವನ್ನು ಆಲೋಚನೆ ಮಾಡಿದರೆ ಈ ಕೆಳಗೆ ಬರೆದಿರುವ ಅಂಶಗಳು ವಿಶದವಾಗಿ ತಿಳಿಯಬರುವುವು.

(1) ಎಷ್ಟು ಕ್ಲಶಕರಗಳಾಗಲಿ ಅಸಹಕರಗಳಾಗಲಿ ಶಾಸ್ತ್ರೋಕ್ತವಾದ ಸಾಧನಗಳೆಲ್ಲವೂ ಸತ್ಯ.
(2) ಎಲ್ಲಾ ಮತಗಳೂ ಸತ್ಯ.
(3) ಈಶ್ವರನಾಕ್ಷಾತ್ಕಾರವೇ ಅವೆಲ್ಲವುಗಳ ಉದ್ದೇಶ್ಯವೂ ಆಗಿದೆ: ಸಿದ್ದಿಗಳನ್ನು ಪಡೆಯುವುದಲ್ಲ.
(4) ವಿಷಯಸುಖದಲ್ಲಿ ವೈರಾಗ್ಯ ಹುಟ್ಟಿದ ಹೊರತು ಸಿದ್ಧಿಯಾಗುವುದಿಲ್ಲ.[]
(5) ನಿಜವಾದ ವ್ಯಾಕುಲತೆಯಿದ್ದರೆ ಯಾವ ಸಾಧನೆಯ ಸಹಾಯವೂ ಇಲ್ಲದೆ ಈಶ್ವರಸಾಕ್ಷಾತ್ಕಾರವಾಗುವುದು. ಬೇಕಾದ ಅನುಕೂಲಗಳೆಲ್ಲವೂ ತಾವಾಗಿಯೇ ಒದಗಿಬರುವುವು.
(6) ವ್ಯಾಕುಲತೆಯ, ವೈರಾಗ್ಯವೂ ಎಷ್ಟು ಪ್ರಬಲವಾಗಿದ್ದರೆ ಅಷ್ಟು ಬೇಗ ಸಿದ್ಧಿಯಾಗುವುದು (ಎಷ್ಟೋ ಸಾಧನೆಗಳಲ್ಲಿ ಪರಮಹಂಸರು ಮೂರುದಿನಗಳೊಳಗಾಗಿ ಸಿದ್ಧರಾದರೆಂಬುದನ್ನು ಇಲ್ಲಿ ಪಾಠಕರು ಜ್ಞಾಪಿಸಿಕೊಳ್ಳಬೇಕು.)
(7) ಎಂಥ ಉತ್ತಮನಾದ ಸಾಧಕನಿಗೂ ಗುರುಸಹಾಯ ಬೇಕು. ಇತ್ಯಾದಿ...

ವೇದಕಾಲದಿಂದ ಇಂದಿನವರೆಗೆ ಪ್ರಚಾರದಲ್ಲಿದ್ದ ಮುಖ್ಯ ಮುಖ್ಯವಾದ ನಕಲ ಸಾಧನಗಳನ್ನೂ, ಮಾರ್ಗಗಳನ್ನೂ, ಮತ ಗಳನ್ನೂ ಅನುಷ್ಠಾನಮಾಡಿ ಅವುಗಳೆಲ್ಲ ವೂ ಸತ್ಯವೆಂದೂ ಅವುಗಳ ಉದ್ದೇಶವೆಲ್ಲವೂ ಒಂದೇಯೆಂದೂ ತೋರಿಸಿಕೊಟ್ಟ ಪರಮಹಂಸರ ಮಹಿಮೆಯನ್ನು ಎಷ್ಟೆಂದು ಹೇಳೋಣ ! ಇಂಥವರನ್ನು ಅವತಾರ ಪುರುಷರೆಂದೆನ್ನದೆ ಮತ್ತೇನೆನ್ನ ಬೇಕು? ಸಂಸಾರವನ್ನು ತ್ಯಾಗಮಾಡಿ ಆಜೀವನವೂ ಶ್ರಮಪಟ್ಟರೂ ಒಂದೊಂದು ಮಾರ್ಗದಲ್ಲಿಯಾದರೂ ಸಿದ್ಧರಾಗುವುದು ಕಷ್ಟ. ಅಂಥದರಲ್ಲಿ ಒಂದಾದಮೇಲೆ ಒಂದರಂತೆ ಅವರು ಎಷ್ಟು ಸಾಧನೆಗಳನ್ನು ಮಾಡಿ ಮುಗಿಸಿ ಸಿದ್ಧರಾದರು!


ಎಷ್ಟು ಮತಗಳನ್ನು ಅಭ್ಯಾಸಮಾಡಿದರು! ಅವುಗಳಿಗೆ ತಕ್ಕಂತೆ ಅನುಕೂಲಗಳು ಸರಿಯಾಗಿ ಹೇಗೆ ಒದಗಿ ಬಂದುವು!

ಇದಕ್ಕೆ ಅವರು ಎಂಥ ಉತ್ತಮವಾದ ಅಧಿಕಾರಿಗಳಾಗಿದ್ದರೆ೦ಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಮೊದಲಿನಿಂದಲೂ "ಅಕ್ಕಿ ಬೇಳೆ ಸ೦ಪಾದನೆಮಾಡುವ ವಿದ್ಯೆ" ಯ ಮೇಲೆ ಅಭಿಲಾಷೆಯಿರದೆ, ಪುರಾಣ ಪುಣ್ಯ ಕಥೆಗಳನ್ನು ಹೇಳುವುದು ಕೇಳುವುದು,ದೇವಮೂರ್ತಿಗಳನ್ನು ಮಾಡುವುದು, ಕೀರ್ತನೆಗಳನ್ನು ಹೇಳುವುದು,ದೇವತೆಗಳ ವೇಷವನ್ನು ಹಾಕಿಕೊಳ್ಳುವುದು ಇವುಗಳಲ್ಲಿ ಅಪಾರವಾದ ಆಸಕ್ತಿಯೂ, ಸೃಷ್ಟಿ ಸೌಂದರ್ಯ ದೇವತಾಮಹಿಮೆ ಮುಂತಾದ್ದರಲ್ಲಿ ತನ್ಮಯರಾಗಿ ಹೋಗುವಿಕೆಯ, ಬುದ್ಧಿಶಕ್ತಿ, ನಿಷ್ಟೆ,ವಿಚಾರಬುದ್ದಿ, ಹಿಡಿದದ್ದನ್ನು ಸಾಧಿಸತಕ್ಕೆ ಕೆಚ್ಚು, ಪವಿತ್ರತೆ,ಸ್ವಾರ್ಥಹೀನತೆ, ಇವೇ ಮುಂತಾದ ಅಲೌಕಿಕ ಗುಣಗಳೂ ಅವರಲ್ಲಿಸ್ವಭಾವ ಸಿದ್ದವಾಗಿದ್ದುವು.

ಇನ್ನಿಷ್ಟು ಈ ವಿಚಾರವಾಗಿ ಬರೆಯುತ್ತ ಹೋದರೂ ಪಾಠಕರಿಗೆ ಇವೆಲ್ಲವೂ ನಿಜವೆಂದು ನಂಬುಗೆ ಹುಟ್ಟುವುದೇ ಕಷ್ಟ.ಆದರೂ ಈ ಭಾಗವೆಲ್ಲ ಪರಮಹಂಸರ ಮಾತುಗಳನ್ನೇ ಅನುಸರಿಸಿಬರೆದಿರುವುದರಿಂದ ವಿಚಾರಾರ್ಹವಾಗಿದೆಯೆಂದು ಹೇಳುವೆವು. ವಿಚಾರಮಾಡಿದ ಹೊರತು ಸತ್ಯವು ಹೊರಪಡದು.


  1. Cf. You cannot serve both God and Mammon.